ಬೆಂಗಳೂರು: ಅ.17: ಹಾಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕ
ಸರ್ಕಾರದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಏಕವಚನದಲ್ಲಿ "ನಿಮ್ಮಪ್ಪನ ಸರ್ಕಾರ" ಎಂದು ಬಳಸಿರುವ ಪದಪ್ರಯೋಗ ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ಈ ಹೇಳಿಕೆಯು ಸಾಂಸ್ಕೃತಿಕ ಹಾಗೂ ಜಾತಿವಾದಿ ಮನಸ್ಥಿತಿಯ ಪ್ರತೀಕವಾಗಿದ್ದು, ದಲಿತ ಸಮುದಾಯದ ದಲಿತ ಸಮುದಾಯದ ರಾಜ್ಯದ ಪ್ರಭಾವಿ ಉನ್ನತ ಹುದ್ದೆಯಲ್ಲಿ ಇರುವುದನ್ನು ಸಹಿಸದೆ ದರ್ಪ ತೋರಲಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಅಂಬೇಡ್ಕರ್ ಸೇನೆ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ನೀಡಿರುವ ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ ಅವರು ಕುಮಾರಸ್ವಾಮಿ ಅವರ ನಡೆಯನ್ನು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. "ಒಬ್ಬ ದಲಿತ ನಾಯಕ ಅತ್ಯಂತ ಜವಾಬ್ದಾರಿಯುತ ಹಾಗೂ ಉನ್ನತ ಸಚಿವ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಸಹಿಸಿಕೊಳ್ಳಲಾಗದೆ, ತಮ್ಮ ದಬ್ಬಾಳಿಕೆ ಮತ್ತು ಕೀಳುಮಟ್ಟದ ಭಾಷೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾರೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಏಕವಚನ ಬಳಸಿರುವ ಮಾತುಗಳು ಕೇವಲ ವ್ಯಕ್ತಿಗತ ನಿಂದನೆಯಲ್ಲ, ಬದಲಿಗೆ ಇಡೀ ದಲಿತ ಸಮುದಾಯಕ್ಕೆ ಎಸಗಿದ ಅಪಮಾನ," ಎಂದು ಅರ್ಜುನ್ ಗೋಪಾಲಯ್ಯ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇಷರತ್ ಕ್ಷಮೆಗೆ ಒತ್ತಾಯ, ಪ್ರತಿಭಟನೆಯ ಎಚ್ಚರಿಕೆ:ಕರ್ನಾಟಕದ ಹಾಗೂ ದೇಶದ ದಲಿತ ಸಮುದಾಯ ಮತ್ತು ಪ್ರಜ್ಞಾವಂತ ನಾಗರಿಕರು ಇಂತಹ ದರ್ಪ ಹಾಗೂ ಜಾತಿವಾದಿ ಧೋರಣೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅರ್ಜುನ್ ಗೋಪಾಲಯ್ಯ ಅವರು, ಎಚ್.ಡಿ. ಕುಮಾರಸ್ವಾಮಿ ಅವರು ತಕ್ಷಣವೇ ತಮ್ಮ ಹೇಳಿಕೆಯನ್ನು ಹಿಂಪಡೆದು, ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಕ್ಷಮೆಯಾಚಿಸದಿದ್ದರೆ ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ವತಿಯಿಂದ ರಾಜ್ಯಾದ್ಯಂತ ಬೃಹತ್ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ವಿವಾದದ ಹಿನ್ನೆಲೆ: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಆರೋಪ-ಪ್ರತ್ಯಾರೋಪಗಳ ವಾಕ್ಸಮರದ ವೇಳೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ ಕುಮಾರಸ್ವಾಮಿ ಅವರು ಆಡಿದ ಮಾತುಗಳು ಇದೀಗ ದಲಿತ ಪರ ಸಂಘಟನೆಗಳ ತೀವ್ರ ಪ್ರತಿರೋಧಕ್ಕೆ ಕಾರಣವಾಗಿದ್ದು, ಈ ಪ್ರಕರಣ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮತ್ತಷ್ಟು ಕಾವೇರುವ ಲಕ್ಷಣಗಳು ಗೋಚರಿಸುತ್ತಿವೆ.