LIVE TV StateNationalPoliticsInternationalCrimeEntertainmentSportsEducationFINANCE & TAXATION

ಆಡುಗಳನ್ನು ಚಿರತೆ ತಿನ್ನುವಾಗಿನ ಸಂಕಟವೇ ಹಾವು ಹಿಡಿದು ರಕ್ಷಿಸಲು ಪ್ರೇರಣೆ - ವಸಂತ್ ಸಿಳ್ಳೆಕ್ಯಾತರ್

 

·         ಎಂ.ವಿ.ಜೋಷಿ

ಕೊಪ್ಪಳ: ಬಾಲ್ಯದಲ್ಲಿದ್ದಾಗ ಆಡುಗಳನ್ನು ಮೇಯಿಸುವ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿ ಅವುಗಳನ್ನು ತಿನ್ನುವಾಗಿನ ಸಂಕಟ ನೋಡುತ್ತಿದ್ದೆ. ಪ್ರಾಣ ರಕ್ಷಣೆಗಾಗಿ ಆಡುಗಳು ಅರಚಾಡಿದರೆ, ಚಿರತೆ ಅವುಗಳ ರಕ್ತವನ್ನು ಭೂಮಿಗೆ ಚೆಲ್ಲದೇ ಬಗಿದು ತಿನ್ನುತ್ತಿತ್ತು. ಬಾಲಕನಾಗಿದ್ದಾಗ ದೃಶ್ಯ ನೋಡಿ ನನಗೆ ತುಂಬಾ ನೋವಾಗುತ್ತಿತ್ತು. ಜೀವ ಎಷ್ಟು ಅಮೂಲ್ಯ ಎನ್ನುವುದು ನಾನು ಸಾಕಿದ ಆಡುಗಳ ಆರ್ತನಾದದಿಂದ ತಿಳಿದಿತ್ತು. ನಂತರವೇ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಡುವ ಕಾಯಕಕ್ಕೆ ಕೈ ಹಾಕಿದೆ.

 

ಹೀಗೆಂದು ಕೆರೆಹಳ್ಳಿಯ ವಸಂತ್ ಸಿಳ್ಳೆಕ್ಯಾತರ್ ತಾವು ಬಾಲ್ಯದಲ್ಲಿದ್ದಾಗಿನ ಆಡು ಕಾಯುವ ಮತ್ತು ಬಡತನದ ಸ್ಥಿತಿ ಗತಿಗಳನ್ನು ನೆನೆದು ಕಣ್ಣೀರು ಹಾಕುತ್ತಾರೆ. ತಳಸಮುದಾಯದಿಂದ ಬಂದ ವಸಂತ್ ಸಿಳ್ಳೆಕ್ಯಾತರ್ ಕೊಪ್ಪಳ ಜಿಲ್ಲೆಯ ಗುಡದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಹಳ್ಳಿ ಗ್ರಾಮದವರು. ಇವರ ತಂದೆ ಹುಚ್ಚಪ್ಪ, ತಾಯಿ ಪಕ್ಕೀರಮ್ಮ. ಇವರಿಗೆ ಒಟ್ಟು ೧೦ ಜನ ಮಕ್ಕಳು. ಇವರಲ್ಲಿ ವಸಂತ್ ಕೊನೆಯ ಪುತ್ರ. ಜನ ಅಕ್ಕಂದಿರು ಮತ್ತು ಮೂವರು ಅಣ್ಣಂದಿರು. ಇವರ ಪೈಕಿ ಓರ್ವ ಅಣ್ಣ ನಿಧನರಾಗಿದ್ದಾರೆ. ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನ. ಅಪ್ಪ ಕೃಷಿಕ, ಅಮ್ಮನಿಗೆ ಮನೆಯಲ್ಲಿ ಎಲ್ಲ ಮಕ್ಕಳನ್ನು ಲಾಲನೆ, ಪಾಲನೆ ಮಾಡುವ ಹೊಣೆಗಾರಿಕೆ. ವಸಂತ್ ಕೊನೆಯ ಮಗನಾಗಿದ್ದರಿಂದ ಆಡುಗಳನ್ನು ಮೇಯಿಸಿಕೊಂಡು ಬರುವ ಜವಾಬ್ದಾರಿ ವಹಿಸಲಾಗಿತ್ತು.

news_1784174706_3_991.webp

 

ಹಸಿವು ಕಲಿಸಿದ ಪಾಠ:

 

ಕೆರೆಹಳ್ಳಿ ಗ್ರಾಮಕ್ಕೆ ಹೊಂದಿಕೊAAತೆ ಇರುವ ಗುಡ್ಡದಲ್ಲಿ ವಸಂತ್ ಆಡುಗಳನ್ನು ಮೇಯಿಸಿಕೊಂಡು ಸಂಜೆ ಮನೆಗೆ ಬರುತ್ತಿದ್ದರು. ಮನೆಯಲ್ಲಿ ಉಣ್ಣುವ ಬುತ್ತಿ ಕಟ್ಟುತ್ತಿದ್ದರೂ ಸಾಕಾಗುತ್ತಿರಲಿಲ್ಲ. ಹಸಿವಾದಾಗ ಆಡು ಮತ್ತು ಕುರಿಯ ಹಾಲೇ ಇವರಿಗೆ ಮೇವು. ಕುರಿ ಕಾಯುವ ಭರದಲ್ಲಿ ಇವರ ಪೋಷಕರು ವಸಂತ್ ಅವರಿಗೆ ಶಿಕ್ಷಣವೇ ಕೊಡಿಸಿಲ್ಲ. ಕಾರಣ, ಬಡತನ. ತಂದೆ ವಹಿಸಿದ ಆಡು ಕಾಯುವ ಕಾಯಕಕ್ಕೆ ಇಳಿದ ವಸಂತ್ ಬೆಣಕಲ್ ಗುಡ್ಡ, ಯಡ್ಡಳ್ಳಿ ಗುಡ್ಡ, ಹಳೇ ಕುಮುಟ, ಮುಸಲಾಪುರ, ಚಂದ್ರಗೇರಿ, ಗಂಡುಗಲಿ ಕುಮಾರರಾಮನ ಜಬ್ಬಲಗುಡ್ಡ, ಹೊಸೂರು ಗುಡ್ಡ, ಬಿಳೇಬಾವಿ, ಸುಲ್ತಾನಪುರ ಮತ್ತು ಕೆರೆಹಳ್ಳಿ ಗುಡ್ಡದಲ್ಲಿ ಆಡುಗಳನ್ನು ಮೇಯಿಸುವಲ್ಲಿ ದಿನಗಳೇ ಉರುಳುತ್ತಿದ್ದವು. `ಹಸಿವು' ಇವರಿಗೆ ಕಾಡಿನಲ್ಲಿ ಸಾಕಷ್ಟು ಪಾಠ ಕಲಿಸಿದೆ.

 

ಏಳು ಗುಡ್ಡಗಳು:

 

ಬಾಲ್ಯದಿಂದ ತಮ್ಮ ಪ್ರೌಢಾವಸ್ಥೆವರೆಗೆ ಐತಿಹಾಸಿಕ ಪ್ರದೇಶವಾದ ಕೆರೆಹಳ್ಳಿ ಪರಿಸರದ ತಿರುಗಲ್ ತಿಮ್ಮಪ್ಪ ಗುಡ್ಡ, ಗಂಡುಗಲಿ ಕುಮಾರರಾಮನ ಗುಡ್ಡ, ಬೆಣಕಲ್ ಗುಡ್ಡ, ಅಚಲಾಪುರ ಗುಡ್ಡ, ಹುಸೇನ್ ಪುರ ಗುಡ್ಡ, ಶಿವಪುರ ಗುಡ್ಡ ಮತ್ತು ಅಂದಿಗಾಲೀಶ ಗುಡ್ಡಗಳೇ ಇವರ ಆಡುಂಬೊಲವಾಗಿತ್ತು. ಆಡುಗಳನ್ನು ಮೇಯಿಸುವ ಸಂದರ್ಭದಲ್ಲಿ ಚಿರತೆ ಮತ್ತು ವನಗ್ಯಾ ಗಳು ಇವರ ಆಡುಗಳನ್ನು ಬೇಟೆಯಾಡಿ ತಿನ್ನುತ್ತಿದ್ದವು. ಸಂಜೆ ಮನೆಗೆ ಬಂದ ಬಳಿಕ ಅವುಗಳನ್ನು ಎಣಿಸಿ, ಹಟ್ಟಿಯೊಳಗೆ ಬಿಡಲಾಗುತ್ತಿತ್ತು. ಆಡಿನ ಸಂಖ್ಯೆ ಕಡಿಮೆ ಆದರೆ, ಪೋಷಕರು ವಿವರಣೆ ಕೇಳಿ ವಸಂತ್ ನನ್ನು ಬಡಿಯುತ್ತಿದ್ದರು ಅಂದರೆ ಇವರ ಬಡತನ ಎಷ್ಟಿತ್ತು ಎನ್ನುವುದನ್ನು ಊಹಿಸಬಹುದು.

news_1784174707_4_109.webp

 

ಅಡವಿ ಹಣ್ಣುಗಳೇ ಆಹಾರ:

 

ಗುಡಿಸಲು ವಾಸಿಗಳಾಗಿದ್ದ ವಸಂತ್ ಪೋಷಕರದ್ದು ಬಡತನದ ಜೀವನ. ಒಂದು ಹೊತ್ತಿನ ಊಟಕ್ಕೂ ಪಡಿಪಾಟಲು ಇತ್ತು. ಶಿಕ್ಷಣ ಕಲಿಯುವುದಂತೂ ದೂರದ ಮಾತು. ೨೦೦ ಆಡು ಇದ್ದರೂ ಕಷ್ಟದ ಜೀವನ ಬಿಡಲಿಲ್ಲ. ಬೆಳಿಗ್ಗೆ ಗಂಟೆಗೆ ಅಡವಿ ಸೇರಿದರೆ ಸಂಜೆ ಗಂಟೆಗೆ ಮನೆ ಸೇರುವುದು ಇವರ ನಿತ್ಯದ ಕಾಯಕ. ಗುಡ್ಡಗಳನ್ನು ಹತ್ತಿ, ಇಳಿದು ಆಡು ಸಾಕುವಾಗ ದೇಹ ದಣಿಯುತ್ತಿತ್ತು. ಅಡವಿಯಲ್ಲಿನ ಗಿಡ, ಮರ, ಪಕ್ಷಿ, ಪ್ರಾಣಿಗಳನ್ನು ನೋಡುತ್ತಲೇ ಆಡುಗಳನ್ನು ಕಾಯುವ ದಿನಗಳು ಸುಂದರವಾಗಿದ್ದವು ಎನ್ನುತ್ತಾರೆ ವಸಂತ್. ಕಲ್ಲು, ಬಂಡೆಗಳನ್ನು ಹತ್ತಿ, ಇಳಿದು ಆಡುಗಳನ್ನು ಕಾಯುವ ಭರದಲ್ಲಿ ಹಸಿವು ಹೆಚ್ಚಾಗುತ್ತಿತ್ತು. ಗುಡ್ಡದಲ್ಲಿ ಸಿಗುವ ಕವಳೆ ಹಣ್ಣು, ಕಾರೆ ಹಣ್ಣು, ಸಕ್ಕರೆ ಹಣ್ಣು, ಉಲುಪಿ ಹಣ್ಣು, ಬುರಗಿ ಹಣ್ಣು, ಹುಲಿಹಣ್ಣು ಇನ್ನಿತರೆ ಗಿಡಗಳ ಹಣ್ಣುಗಳೇ ಇವರಿಗೆ ಆಹಾರ.

 

ವನ್ಯಜೀವಿಗಳ ಸಹವಾಸ:

 

ಕೆರೆಹಳ್ಳಿ ಬಳಿಯ ಸುಲ್ತಾನ ಪುರ, ಕೊಳ್ಳಿನಕೇರಿ ಹಳ್ಳ, ಸೋಮಪ್ಪನ ಕೇರಿ ಹಳ್ಳ, ಊಟಿ ಬಂಡಿ, ನಾಯಿ ಬಡಕು ತಗ್ಗು, ಕೊರಚೆರುವು, ಹುಲಿಗೆಮ್ಮನ ಕೊಳ್ಳ, ಹುಸೇನಪುರ ಹಳ್ಳಗಳ ಬಯಲಿನಲ್ಲಿ ಮತ್ತು ಗುಡ್ಡಗಳಲ್ಲಿಯೂ ಆಡುಗಳನ್ನು ಮೇಯಿಸಲು ತೊಡಗುತ್ತಿದ್ದ ವಸಂತ್ ಕರಡಿ, ಚಿರತೆ, ವನಗ್ಯಾ, ಕತ್ತೆ ಕಿರುಬ, ತೋಳ, ನರಿ, ನವಿಲುಗಳನ್ನು ನೋಡುತ್ತಿದ್ದರು. ಹಗಲಿನಲ್ಲಿ ಕಾಣುವ ವನ್ಯಜೀವಿಗಳು ನಮಗೆ ಒಂದು ರೀತಿಯ ಖುಷಿ ಕೊಡುತ್ತಿದ್ದವು. ಕಾಡಿನಲ್ಲಿ ಅವುಗಳ ದೈನಂದಿನ ಜೀವನ ನಮಗೆ ಸ್ಫೂರ್ತಿ ತುಂಬುತ್ತಿದ್ದವು. ಮಳೆ ಬಂದಾಗ ಗುಡ್ಡದ ಗುಂಡಿನ ಆಸರೆ ಪಡೆಯುತ್ತಿದ್ದೆವು. ಹೊಲದಲ್ಲಿ ಹಟ್ಟಿ ಹಾಕಿದಾಗ ಚಳಿಗಾಲದಲ್ಲಿ ಮಾಗಿ ಮಾಡಿದ ನೇಗಿಲಿನ ಜಾಡಿನಲ್ಲಿ ಕಂಬಳಿ ಹಾಸಿ, ಹೊದ್ದುಕೊಂಡು ಬೆಚ್ಚೆಗೆ ಮಲಗುತ್ತಿದ್ದೆವು. ಮಣ್ಣಿನ ಕಾವು ದಣಿದ ದೇಹಕ್ಕೆ ಸುಖ ನಿದ್ರೆ ನೀಡುತ್ತಿತ್ತು. ಮಳೆಗಾಲದಲ್ಲಿ `ಎರಗು' ಕಟ್ಟಿ ಅದರ ಮೇಲೆ ಗೋಣಿ ಚೀಲ ಜೋಡಿಸಿ ಮಲಗಬೇಕಾಗುತ್ತಿತ್ತು. ಎಷ್ಟೇ ಮಳೆ ಬಂದರೂ ನಮ್ಮ ದೇಹ ಮತ್ತು ಮನಸ್ಸು ಎಲ್ಲ ಋತು ಮಾನಗಳಿಗೂ ಒಗ್ಗಿಕೊಂಡು ಹೋಗಿತ್ತು ಎನ್ನುತ್ತಾರೆ ವಸಂತ್.

news_1784174706_2_604.webp

 

ರೋಗಗಳಿಂದ ನಾಶ:

 

ಮಳೆಗಾಲದ ಅವಧಿಯಲ್ಲಿ ಆಡುಗಳಿಗೆ ಕಾಲು ನೋವು ಕಾಣಿಸಿಕೊಂಡು ಆಡುಗಳು ರೋಗಪೀಡಿತವಾಗುತ್ತಿದ್ದವು. ಬಹಳ ಸೂಕ್ಷ್ಮ  ಜೀವಿಗಳಾಗಿದ್ದ ಆಡುಗಳ ಆರೈಕೆ ಕಷ್ಟವಾಗುತ್ತಿತ್ತು. ಸಿಡಿ ಬ್ಯಾನಿ, ಬಾಯಿ ಬ್ಯಾನಿ, ಕಾಲು ಬ್ಯಾನಿ ಬರುತ್ತಿದ್ದುದರಿಂದ ಸಕಾಲಕ್ಕೆ ಔಷಧ ನೀಡಿದ್ದರೂ ಬದುಕಿ ಉಳಿಯುತ್ತಿರಲಿಲ್ಲ. ಸುಗ್ಗಿಯ ವೇಳೆ ಗುಡ್ಡದ ಬದಿಯಲ್ಲಿ ಹಟ್ಟಿ ಹಾಕಿದರೆ, ಬೇಸಿಗೆಯಲ್ಲಿ ಹೊಲ, ಗದ್ದೆಗಳಲ್ಲಿ ಹಟ್ಟಿ ಹಾಕುತ್ತಿದ್ದೆವು. ರೋಗ ಉಲ್ಬಣಿಸಿದಾಗ ಅವುಗಳ ಆರೈಕೆ ಬಹಳ ಕಷ್ಟಸಾಧ್ಯವಾಗುತ್ತಿತ್ತು. ಹೀಗಾಗಿ ನಶಿಸಿ ಹೋದವು. ಮುಂದೆ ದಾರಿ ತೋಚದೇ ಹೊಟ್ಟೆಪಾಡಿಗಾಗಿ ಕಟ್ಟಡ ನಿರ್ಮಾಣ ಕೆಲಸದ ಸಹಾಯಕನಾಗಿ ಊರೂರು ಅಲೆಯಬೇಕಾಯಿತು ಎಂದು ವಸಂತ್ ತಮ್ಮ ನೋವಿನ ದಿನಗಳನ್ನು ನೆನೆದು ಗದ್ಗದಿತರಾಗುತ್ತಾರೆ.

 

15 ವರ್ಷಕ್ಕೇ ಬೆಂಗಳೂರಿಗೆ:

 

ಹೀಗೆ ಆಡುಗಳನ್ನು ಕಳೆದುಕೊಂಡು ದುಡಿಯಲು ತಮ್ಮ 15ನೇ ವರ್ಷಕ್ಕೆ ಬೆಂಗಳೂರಿನ ಮಾಯಾ ನಗರಿಗೆ ತೆರಳಿದ ವಸಂತ್ ಹಲವು ವರ್ಷಗಳ ಕಾಲ ಕಟ್ಟಡ ಕಾಮಗಾರಿಯಲ್ಲಿ ದುಡಿದರು. ಹಳ್ಳಿ ಜೀವನ, ಕಾಡಿನ ಬದುಕು ಇವರಿಗೆ ಸಹ್ಯವಾಗಿತ್ತಾದರೂ ಜೀವನಕ್ಕೆ ಅನ್ಯ ಮಾರ್ಗ ಇಲ್ಲದ್ದರಿಂದ ಬೆಂಗಳೂರಿನಲ್ಲಿ ಹಗಲೂ ರಾತ್ರಿ ಕಷ್ಟಪಟ್ಟರು. ಮೇಸ್ತ್ರಿಯಾಗಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಡುಗಳೊಂದಿಗೆ ಗುಡ್ಡ, ಬೆಟ್ಟ ಏರಿ ಪ್ರಕೃತಿಯಲ್ಲಿ ಒಡನಾಟ ಇರಿಸಿಕೊಂಡಿದ್ದ ವಸಂತ್ ಗೆ ಗಾರೆ ಕೆಲಸದ ಕಷ್ಟದ ಜೀವನ ಬೇಡವಾಯಿತು. ಮರಳಿ ಹುಟ್ಟೂರಿಗೆ ಬಂದರು.

news_1784174707_4_109.webp

 

ಹಾವುಗಳ ರಕ್ಷಣೆ:

 

ಬೆಂಗಳೂರಿನಿಂದ ಊರಿಗೆ ಬಂದಾಗ ಹಾವು ಕಂಡಲ್ಲಿ ಜನರು ಹೊಡಿ, ಬಡಿ, ಕಡಿ ಎಂದು ಚೀರಾಡಿ ಅವುಗಳನ್ನು ಬಡಿದು ತಿಪ್ಪೆಗುಂಡಿಗೆ ಎಸೆಯುತ್ತಿದ್ದನ್ನು ಗಮನಿಸಿ ಕಂಬನಿ ಮಿಡಿದಿದ್ದಾರೆ. ಅಂದೇ ಹಾವು ಕಂಡಲ್ಲಿ ಹಿಡಿದು ಅವುಗಳನ್ನು ಕಾಡಿಗೆ ಬಿಡುವ ನಿರ್ಧಾರ ಮಾಡಿದರು. ಹಾವು ಕಂಡಲ್ಲಿ ಮುಂಚೂಣಿಯಲ್ಲಿ ನಿಂತು ಅವುಗಳನ್ನು ಹಿಡಿದು ಅಡವಿಗೆ ಬಿಡುತ್ತಿದ್ದರು. ಅವುಗಳ ಬಗೆಗಿನ ಕಾಳಜಿ ನೋಡಿದ ನಾಗರಿಕರು ಸರೀಸೃಪ ಸ್ನೇಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಳೆದ ಎಂಟು ವರ್ಷಗಳಿಂದ ಸುಮಾರು 5  ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ವಸಂತ್ ಕಾಡಿಗೆ ಬಿಟ್ಟಿದ್ದಾರೆ. ನಾಗರಹಾವು, ಕೇರೆ ಹಾವು, ಮಂಡಲ ಹಾವು, ಮಣ್ಣುಮುಕ್ಕ ಹಾವು, ನೀರಗೋಳಿ, ಮಿಡನಾಗರ, ಆಭರಣ ಹಾವು, ಮರಿ ನುಲಗ್ಯಾ, ಹಸಿರು ಹಾವು, ಕೊಳಕ ಮಂಡಲ, ರಕ್ತ ಮಂಡಲ ಹೀಗೆ ಹತ್ತಾರು ಜಾತಿಯ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದಾರೆ. ಹಾವು ಸಾಧಾರಣವಾಗಿ ಬಿಲವಾಸಿ. ಇತರ ಪ್ರಾಣಿಗಳು ಕೊರೆದ ಬಿಲ, ನೈಸರ್ಗಿಕ ಪೊಟರೆ, ಸಂದುಗಳಲ್ಲಿ ವಾಸಿಸುತ್ತವೆ. ಕೆಲವು ಹಾವುಗಳು ಒಡೊನಂಟೋರ್ಮಿಸ್ ವಲ್ಲೊನೆನ್ನಸಿಸ್ ಪ್ರಭೇದದ ಗೆದ್ದಲಿನ ಹುತ್ತವನ್ನು ಆಕ್ರಮಿಸಿ, ಹುತ್ತದೊಳಗಿರುವ ಗೆದ್ದಲುಗಳನ್ನು ತಿನ್ನುತ್ತವೆ. ಮಳೆಗಾಲದಲ್ಲಿ ಇವುಗಳ ಬಿಲದಲ್ಲಿ ನೀರು ಶೇಖರಣೆ ಆಗುವುದರಿಂದ ಬೆಚ್ಚಗಿನ ಪ್ರದೇಶಕ್ಕೆ ಬರುತ್ತವೆ. ಆಗ ಊರೊಳಗೂ ನುಗ್ಗುತ್ತವೆ ಎನ್ನುತ್ತಾರೆ ವಸಂತ್.

 

ಮನೆಗೆ ಲಗ್ಗೆ:

 

ಕಪ್ಪೆ, ಮೀನು ಹಾಗೂ ಸರೀಸೃಪಗಳಂತೆ ಹಾವು ಕೂಡ ಅನಿಯತತಾಪಿ ಪ್ರಾಣಿ. ವಾತಾವರಣದ ಉಷ್ಣತೆಯಲ್ಲಿ ಏರಿಳಿತವಾದಂತೆ ಅವುಗಳ ದೇಹೋಷ್ಣತೆಯಲ್ಲೂ ಏರಿಳಿತವಾಗುತ್ತದೆ. ಅತಿ ಚಳಿ ಅಥವಾ ಅತಿ ಉಷ್ಣವನ್ನು ಹಾವು ತಡೆದುಕೊಳ್ಳಲಾರದು. ಆದ್ದರಿಂದ ಚಳಿಗಾಲದ ಎಳೆಬಿಸಿಲಿಗೆ ಆಗಾಗ್ಗೆ ಮೈಯೊಡ್ಡಿ ಮಲಗಿರುವುದುಂಟು. ಅಂತೆಯೇ ಬೇಸಿಗೆಯಲ್ಲಿ ಹಗಲುವೇಳೆ ಬಿಲಗಳಲ್ಲಿದ್ದು ರಾತ್ರಿ ಬಿಲದಿಂದ ಹೊರಬರುತ್ತದೆ. ಮನೆಗಳು, ಶಾಲೆ, ಕಟ್ಟಡಗಳು, ಸಮುದಾಯ ಭವನ ಹೀಗೆ ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಆಗ ಜನರು ಅವುಗಳನ್ನು ಬಡಿಯುವ ಬದಲು ನನಗೆ ತಿಳಿಸುತ್ತಾರೆ. ಕೆರೆಹಳ್ಳಿ, ಶಹಪುರ, ಗುಡದಳ್ಳಿ, ಬೂದಗುಂಪ, ಗಿಣಿಗೇರಿ, ಕೊಪ್ಪಳ, ಹಿಟ್ನಾಳ, ಅಗಳಕೇರಿ, ಶಿವಪುರ, ಕಿಡದಾಳ, ಬಸಾಪುರ, ಕನಕಾಪುರ, ಬೇವಿನಹಳ್ಳಿ, ಲಿಂಗದಹಳ್ಳಿ, ಚಂದ್ರಗಿರಿ, ಬಿಳೆಬಾವಿ, ನಾಗೇಶನಹಳ್ಳಿ, ಜಬ್ಬಲಗುಡ್ಡ, ಇಂದಿರಾನಗರ, ಇಂದ್ರಿಗಿ, ಒಳಬಳ್ಳಾರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದೇನೆ ಎನ್ನುತ್ತಾರೆ ವಸಂತ್. 

 

ಚಿಕ್ಕ ಕುಟುಂಬ:

 

ಹೀಗೆ ಉರಗಗಳನ್ನು ಹಿಡಿಯುವ ಕಾಯಕ ಮಾಡಿಕೊಂಡಿರುವ ವಸಂತ್, ಅಯ್ಯಮ್ಮ ಎನ್ನುವ ಸಂಗಾತಿಯೊಂದಿಗೆ ಮೂವರು ಮಕ್ಕಳನ್ನು ಪಡೆದು ಪುಟ್ಟದಾದ ಸಂಸಾರ ನಡೆಸುತ್ತಿದ್ದಾರೆ. ರಾಹುಲ್, ಮಹೇಂದ್ರ ಇಬ್ಬರು ಪುತ್ರರು ಮತ್ತು ಸ್ಫೂರ್ತಿ ಎನ್ನುವ ಹೆಣ್ಣುಮಗುವಿನೊಂದಿಗೆ ದಿನಗಳನ್ನು ದೂಡುತ್ತಿದ್ದಾರೆ. ಪೋಷಕರು ಶಿಕ್ಷಣ ಕಲಿಸದೇ ಆಡು ಕಾಯಲು ಅಡವಿಗೆ ಬಿಟ್ಟರು. ಹೀಗಾಗಿ ನನ್ನ ಬದುಕು ಕಟ್ಟಿಕೊಳ್ಳಲು ಬೆಂಗಳೂರಿನಂತಹ ನಗರಕ್ಕೆ ಹೋಗಿ ಅಲ್ಲಿನ ಜೀವನ ಸಹ್ಯವಾಗದೇ ಹುಟ್ಟೂರು ಕೆರೆಹಳ್ಳಿಯಲ್ಲಿಯೇ ಬರಬೇಕಾಯಿತು ಎನ್ನುವ ವಸಂತ್, ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ದಾಖಲಿಸಿ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಪರಿಸರ ಮತ್ತು ಉರಗ ಪ್ರೇಮಿಯಾಗಿರುವ ವಸಂತ್ ಮನುಷ್ಯನಂತೆ ಎಲ್ಲ ಪ್ರಾಣಿಗಳಿಗೂ ಜೀವಿಸುವ ಹಕ್ಕಿದೆ. ಅವುಗಳನ್ನು ಕೊಲ್ಲದೇ ಬದುಕು ನೀಡುವುದು ಮಾನವೀಯ ಧರ್ಮವೆಂದು ಹೇಳುವ ವಸಂತ್ ಅವರಿಗೆ ಜನರಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

news_1784174706_0_425.webp

 

ಸನ್ಮಾನ:

 

ಹಾವುಗಳನ್ನು ಕಂಡರೆ ಕೊಲ್ಲುವ ಜನರ ಮನಸ್ಸನ್ನು ಪರಿವರ್ತನೆ ಮಾಡುವ ವಸಂತ್ ಅವರ ಸರೀಸೃಪಗಳ ಕಾಳಜಿ ಗಮನಿಸಿ ಹಲವಾರು ಸಂಘಟನೆಗಳು ಸನ್ಮಾನಿಸಿ ಗೌರವಿಸಿವೆ. ಕೆರೆಹಳ್ಳಿ ಗುಡ್ಡಗಾಡು ಪ್ರದೇಶವಾದ್ದರಿಂದ ಹೊಲ, ಗದ್ದೆ, ಮನೆ, ಭವನ, ಶಾಲೆ, ಕಾಲೇಜು, ಗುಡಿ, ದೇವರ ಮನೆ, ದನದ ತೊಟ್ಟಿ, ಕೈಗಾರಿಕೆ, ಯಂತ್ರಗಳು, ಬೈಕ್ ನಲ್ಲಿ ಕಾಣಸಿಗುವ ಹಾವುಗಳನ್ನು ಹಿಡಿದು ಕಾಡಿಗೆ ಬಿಡುತ್ತಿದ್ದಾರೆ. ಉರಗ ಪ್ರೇಮಿಯಾದ ಇವರಿಗೆ ಗುಳದಳ್ಳಿ ಗ್ರಾಮದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಆಡಳಿತ ಮಂಡಳಿ, ಬೂದುಗುಂಪಾ ಶ್ರೀ ಕುವೆಂಪು ಹಿರಿಯ ಪ್ರಾಥಮಿಕ ಪ್ರೌಢಶಾಲೆ ಆಡಳಿತ ಮಂಡಳಿ, ಕನಕನದೊಡ್ಡಿ ಗವಿಶ್ರೀ ನೀರು ಹಂಚಿಕೆದಾರರ ಸಂಘ ಮತ್ತು ವಿಜಯನಗರದ ಪತ್ತಿನ ಸಹಕಾರ ಸಂಘ ಸೇರಿದಂತೆ ಹಲವು ಸಂಘಟನೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST