ಬೆಂಗಳೂರು : ಹೊಸಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಟಿ.ಗೋವಿಂದ ಹಾಗೂ ಸಿಬ್ಬಂದಿ ರಮೇಶ್ ಮತ್ತು ಗೋಪಾಲ್ ಇವರುಗಳ ವಿರುದ್ಧ ದಲಿತ ಹೋರಾಟಗಾರನ ಮೇಲೆ ಮಾನಸಿಕ ಹಿಂಸೆ ನೀಡಿ, ಅಮಾನವೀಯವಾಗಿ ಮೂತ್ರ ಕುಡಿಸಲು ಯತ್ನಿಸಿದ ಗಂಭೀರ ಆರೋಪ ನಿನ್ನೆ ವರದಿಯಾಗಿದೆ.
ಈ ಸಂಬಂಧ ದಲಿತ ಮುಖಂಡ ಹಾಗೂ ಹೋರಾಟಗಾರ ಎಂ.ನಾಗೇಶ್(44) ಅವರು ಇಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಡಿಸಿಆರ್‌ಇ), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅಧಿಕೃತವಾಗಿ ಲಿಖಿತ ದೂರು ಸಲ್ಲಿಸಿದ್ದಾರೆ.

ಘಟನೆಯ ಹಿನ್ನೆಲೆ: ಇತ್ತೀಚೆಗೆ ರಾಯಚೂರು ಜಿಲ್ಲೆಯ ವ್ಯಾಪ್ತಿಯ ಹೊಕ್ರಾಣಿ ಗ್ರಾಮದ ವಿದ್ಯಾರ್ಥಿನಿ ಅಶ್ವಿನಿ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಸೆ.3ರಂದು ಹೊಸಕೋಟೆಯಲ್ಲಿ ದಲಿತ ಸಂಘಟನೆಗಳ ವತಿಯಿಂದ ಮುಂಬತ್ತಿ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಹೋರಾಟದ ಹಿನ್ನೆಲೆಯಲ್ಲಿ ಅಮಾನವೀಯ ಕೃತ್ಯ ನಡೆದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಹೊಸಕೋಟೆ ನಿವಾಸಿ ಶಶಿಕುಮಾರ್ ಎಂಬುವರಿಗೆ ಸಹಾಯ ಮಾಡಲು ತೆರಳಿದ್ದ ದಲಿತ ಮುಖಂಡ ಹಾಗೂ ದೂರುದಾರ ಎಂ. ನಾಗೇಶ್ ಅವರನ್ನು ತಡೆದು, ಜಾತಿ ಹೆಸರು ಬಳಸಿ ನಿಂದಿಸಿ, ಕುತ್ತಿಗೆ ಪಟ್ಟಿ ಹಿಡಿದು ಜೀಪ್‌ಗೆ ತಳ್ಳಲಾಗಿದೆ.

ಕೋಲಾರ ಹೆದ್ದಾರಿಯ ಸ್ವಾತಿ ಹೋಟೆಲ್ ಹತ್ತಿರದ ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಕರೆದೊಯ್ದು, ನೀರಿನ ಬಾಟಲಿಯಲ್ಲಿ ಮೂತ್ರ ವಿಸರ್ಜಿಸಿ ಕುಡಿಸಲು ಯತ್ನಿಸಲಾಗಿದೆ. ಈ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ನಿಂದನೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರುದಾರರ ಮೊಬೈಲ್ ಕಿತ್ತುಕೊಂಡು ವೀಡಿಯೊಗಳನ್ನು ಸಹ ಡಿಲೀಟ್ ಮಾಡಲಾಗಿದ್ದು, ಜೇಬಿನಲ್ಲಿದ್ದ 10 ಸಾವಿರ ರೂ. ನಗದನ್ನು ಬಲವಂತವಾಗಿ ಕಿತ್ತುಕೊಳ್ಳಲಾಗಿದೆ. ಹೀಗಾಗಿ ಈ ಕೃತ್ಯವು ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬೇಕು. ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಎಫ್ ಐಆರ್ ದಾಖಲಿಸಿ ಬಂಧಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಲೇ ಇದರ ಬಗ್ಗೆ ದೊಡ್ಡ ಮಟ್ಟದ ತನಿಖೆ ನಡೆಸಿ ಸಂತ್ರಸ್ತ ದಲಿತ ಹೋರಾಟಗಾರ ಎಂ. ನಾಗೇಶ್ ಅವರಿಗೆ ನ್ಯಾಯ ಕೊಡಿಸಬೇಕು. ಮುಖ್ಯವಾಗಿ ದೌರ್ಜನ್ಯ, ಜಾತಿ ನಿಂದನೆ, ಮೂತ್ರ ವಿಸರ್ಜಿಸಿ ಬಾಯಿಗೆ ಕುಡಿಸಲು ಯತ್ನಿಸಿದ ಇಂತಹ ಕೃತ್ಯ ಎಸಗಿದ ಹೊಸಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಟಿ. ಗೋವಿಂದ ಹಾಗೂ ಸಿಬ್ಬಂದಿಗಳಾದ ರಮೇಶ್ ಮತ್ತು ಗೋಪಾಲ್ ಇವರುಗಳ ವಿರುದ್ಧ ಶೀಘ್ರವಾಗಿ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಲಾಗಿದೆ. ತಪ್ಪಿದ್ದಲ್ಲಿ ದಲಿತಪರ ಮತ್ತು ಪ್ರಗತಿಪರ, ಸಮಾನ ಮನಸ್ಸುಳ್ಳ ಸಂಘಟನೆಗಳ ಒಕ್ಕೂಟದ ವತಿಯಿಂದ ಇಡೀ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.