LIVE TV StateNationalPoliticsCrimeEntertainmentSportsEducationFINANCE & TAXATION
Districts Bellary

ಬಳ್ಳಾರಿಯಲ್ಲಿ ಸಂಭ್ರಮದ ಶ್ರೀ ಕೃಷ್ಣ ಜಯಂತ್ಯೋತ್ಸವ

ಗೊಲ್ಲರ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ರೂ.25 ಲಕ್ಷ ಅನುದಾನ: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ:  ನಗರದ ಗೊಲ್ಲರ ಸಂಘದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.25 ಲಕ್ಷ ಅನುದಾನ ನೀಡಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರದ ವಾಲ್ಮೀಕಿ ವೃತ್ತದ ಲೋಕಾರ್ಪಣೆ ಸಂದರ್ಭದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವುದಾಗಿ ಅವರು ತಿಳಿಸಿದರು.
ಗೊಲ್ಲರ ಸಮಾಜವು ಸದಾ ದಾನ-ಧರ್ಮ ಹಾಗೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಇಂತಹ ಸಮುದಾಯದ ಕೊಡುಗೆಯನ್ನು ಗೌರವಿಸಿ ರಾಜಕೀಯವಾಗಿಯೂ ಶಕ್ತಿ ತುಂಬಲಾಗಿದೆ. ಸಮುದಾಯದ ಮುಖಂಡರು ರಾಜಕೀಯ ಮುನ್ನೆಲೆಗೆ ಬಂದಾಗ ಮಾತ್ರ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಲು ಸಾಧ್ಯ ಎಂದರು.

news_1788520286_1_743.webp

 


ಹುಟ್ಟಿದ ತಕ್ಷಣವೇ ಸೋದರಮಾವನಿಂದಲೇ ಪ್ರಾಣಾಪಾಯ ಎದುರಿಸಿದ ಕೃಷ್ಣ, ಜನ್ಮ ನೀಡಿದ ತಾಯಿ ಹಾಗೂ ಬೆಳೆಸಿದ ಪೋಷಕರಿಂದ ದೂರವಾಗಿ ಅಪಾರ ಕಷ್ಟ-ಸಂಕಟಗಳನ್ನು ಎದುರಿಸಿದರು. ಗಾಂಧಾರಿಯ ಶಾಪ, ಸ್ವಂತ ವಂಶದ ಮಕ್ಕಳ ವಿನಾಶದಂತಹ ಅತೀವ ನೋವುಗಳ ನಡುವೆಯೂ ಕೃಷ್ಣ ಧರ್ಮ ರಕ್ಷಣೆಯ ಹಾದಿಯನ್ನು ಬಿಡಲಿಲ್ಲ. ಸಣ್ಣಪುಟ್ಟ ಸಂಕಷ್ಟಗಳಿಗೆ ಧೃತಿಗೆಡದೆ ‘ಧರ್ಮೋ ರಕ್ಷತಿ ರಕ್ಷಿತಃ' ಎಂಬ ತತ್ವವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಧರ್ಮ ಮಾರ್ಗದಲ್ಲಿ ಸಾಗಿ ಸಮಾಜ ಹಾಗೂ ದೇಶದ ಒಳಿತಿಗಾಗಿ ಶ್ರಮಿಸುವುದೇ ಶ್ರೀಕಷ್ಣನ  ಬದುಕಿನಿಂದ ನಾವು ಕಲಿಯಬೇಕಾದ ಪಾಠವಾಗಿದೆ ಎಂದರು.


ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಮಾತನಾಡಿ, ಮಹಾ ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಶ್ರೀಕೃಷ್ಣನ ಅವತಾರವು ಲೋಕದಲ್ಲಿ ಧರ್ಮವನ್ನು ರಕ್ಷಿಸಿ ಅಧರ್ಮವನ್ನು ತೊಡೆದುಹಾಕಲು ಸಂಭವಿಸಿತು. ಧರ್ಮಕ್ಕೆ ಯಾವಾಗ ಆಪತ್ತು ಎದುರಾಗುತ್ತದೆಯೋ ಆಗೆಲ್ಲ ಭಗವಂತನು ಮನುಷ್ಯನಾಗಿ ಭೂಮಿಗೆ ಬಂದು ಧರ್ಮ ಸಂಸ್ಥಾಪನೆ ಮಾಡುತ್ತಾನೆ ಎಂಬ ಭಗವದ್ಗೀತೆಯ ತತ್ವವನ್ನು ಅವರು ಸ್ಮರಿಸಿದರು.

news_1788520286_0_624.webp

 


ಹುಟ್ಟು ಆಕಸ್ಮಿಕ, ಆದರೆ ಸಾವು ನಿಶ್ಚಿತ. ಇವೆರಡೂ ಪ್ರಕೃತಿಯ ನಿಯಮಗಳಾಗಿದ್ದು, ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದನ್ನು ಎದುರಿಸಲು ಮಾನವ ಸದಾ ಸಿದ್ಧನಾಗಿರಬೇಕು. ಕಷ್ಟ-ತೊಂದರೆಗಳು ಬಂದಾಗ ಪ್ರಾಮಾಣಿಕತೆಯಿಂದ ಇದ್ದು ಎದುರಿಸಬೇಕು, ಧನ-ಸಂಪತ್ತು ಇದ್ದಾಗ ಸರಳವಾಗಿರ ಬೇಕು, ಅಧಿಕಾರ ದೊರೆತಾಗ ವಿನಯತೆ ಪ್ರದರ್ಶಿಸಬೇಕು ಹಾಗೂ ಕೋಪ ಬಂದಾಗ ಶಾಂತತೆಯನ್ನು ಕಾಪಾಡಿಕೊಳ್ಳುವುದೇ ನಿಜವಾದ ಜೀವನ ನಿರ್ವಹಣೆ ಎಂದು ಶ್ರೀ ಕೃಷ್ಣನ ತತ್ವಗಳನ್ನು ವಿವರಿಸಿದರು.


ಜೀವನದಲ್ಲಿ ಶಾಶ್ವತವಾದ ಸುಖ- ದುಃಖ ಇರುವುದಿಲ್ಲ, ಬದಲಿಗೆ ಬದುಕಿನಲ್ಲಿ ದೊರೆಯುವುದೆಲ್ಲ ಕೇವಲ ಅನುಭವಗಳು ಮಾತ್ರ. ಜೀವನದಲ್ಲಿ ಏನೇ ಸಂಭವಿಸಿದರೂ ಅದು ಒಳ್ಳೆಯದಕ್ಕಾಗಿಯೇ ಆಗಿರುತ್ತದೆ. ಆಗುವುದೆಲ್ಲವೂ ಒಳ್ಳೆಯದಕ್ಕೇ ಎಂಬ ಸಕಾರಾತ್ಮಕ ಭಾವನೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕೃಷ್ಣನ ಬೋಧನೆಗಳು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಪ್ರತಿಯೊಬ್ಬರ ದೈನಂದಿನ ಬದುಕಿಗೂ ದಾರಿದೀಪವಾಗಬೇಕು ಎಂದು ಕರೆ ನೀಡಿದರು.


ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಮಾತನಾಡಿ, ಶ್ರೀಕೃಷ್ಣ ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿರದೆ ಇಡೀ ಜಗತ್ತಿಗೆ ಮಾರ್ಗದರ್ಶನ ನೀಡಿದ ವಿಶ್ವಗುರು ಆಗಿದ್ದವರು ಎಂದು ಹೇಳಿದರು.

news_1788520286_3_273.webp

 


ಸಮುದಾಯ ಭವನ ಮತ್ತು ದೇವಸ್ಥಾನ ನಿರ್ಮಾಣ:
ಬಳ್ಳಾರಿ ಜಿಲ್ಲಾ ಯಾದವ ಸಂಘಕ್ಕೆ ಹಿಂದಿನ ವರ್ಷ ಸಮುದಾಯದವರ ಸಹಕಾರದಿಂದ ನಿವೇಶನ ಖರೀದಿಸಲಾಗಿದೆ. ಅಲ್ಲಿ ಸಮಾಜದ ಬಹುದಿನಗಳ ಬೇಡಿಕೆಯಾದ ಸಮುದಾಯ ಭವನ ಹಾಗೂ ಶ್ರೀಕೃಷ್ಣನ ದೇವಾಲಯ ನಿರ್ಮಾಣಕ್ಕೆ ರೂ.2.5 ಕೋಟಿ ವೆಚ್ಚದ ನೀಲನಕ್ಷೆ ಹಾಗೂ ಅಗತ್ಯ ಪರವಾನಗಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಜಯಂತಿಗಳ ಜೊತೆಗೆ ಸಣ್ಣ ಸಣ್ಣ ಸಮುದಾಯಗಳನ್ನು ಒಗ್ಗೂಡಿಸಿ ಉತ್ಸಾಹ ತುಂಬುವ ಉದ್ದೇಶದಿಂದ, ಶಾಸಕರು ಹಾಗೂ ಮಹಾನಗರ ಪಾಲಿಕೆ ಸದಸ್ಯರ ಸಹಕಾರದೊಂದಿಗೆ ಸಣ್ಣ ಸಮಾಜಗಳ ಜಯಂತಿ ಆಚರಣೆಗೆ ರೂ. 50 ಸಾವಿರ ಅನುದಾನ ಬಳ್ಳಾರಿ ಮಹಾನಗರ ಪಾಲಿಕೆಯಿಂದ ಒದಗಿಸಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಆಲಂಬಾಷ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬಳ್ಳಾರಿಯ ವೈ.ಬಸವರಾಜ ತಂಡದ ಸಮೂಹ ನೃತ್ಯ ನೋಡುಗರ ಮನಸೆಳೆಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು.

news_1788520286_4_563.webp

 


ಅದ್ದೂರಿ ಮೆರವಣಿಗೆ:
ನಗರದಲ್ಲಿ ಶ್ರೀ ಕೃಷ್ಣ ಜಯಂತಿ ಅಂಗವಾಗಿ ಅತ್ಯಂತ ಸಂಭ್ರಮ ಹಾಗೂ ಸಡಗರದೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು. ನಗರದ ಮುನ್ಸಿಪಾಲ್ ಕಾಲೇಜು ಆವರಣದಿಂದ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು.
ನಗರದ ಪ್ರಮುಖ ರಸ್ತೆಗಳಾದ ಇಂದಿರಾ ವೃತ್ತ, ಗಡಿಗಿ ಚನ್ನಪ್ಪ ವೃತ್ತ ಹಾಗೂ ಹಳೇ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯ ಮೂಲಕ ಹೆಚ್.ಆರ್. ಗವಿಯಪ್ಪ ವೃತ್ತದ ಮಾರ್ಗವಾಗಿ ಚಲಿಸಿ, ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಸಭಾಂಗಣವನ್ನು ತಲುಪಿ ಸಂಪನ್ನಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡು ಮೆರಗು ಹೆಚ್ಚಿಸಿದವು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾ ಗೊಲ್ಲರ ಸಂಘದ ಗೌರವಾಧ್ಯಕ್ಷ ಪಿ.ತಿಮ್ಮಪ್ಪ ಯಾದವ್, ಸಹಾಯಕ ಆಯುಕ್ತ ರಾಜೇಶ್.ಹೆಚ್.ಡಿ., ತಹಶೀಲ್ದಾರರಾದ ಟಿ.ರೇಖಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು-ಡಾ. ನಿಗ್ಗುಡಗಿವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ ಪಠ್ಯದ ಜೊತೆಗೆ ಮೌಲ್ಯವರ್ಧಿತ ಕೋರ್ಸಗಳ ಆಯ್ಕೆ ಬಹುಮುಖ್ಯ-ಯಡ್ರಾಮಿ