ಬಳ್ಳಾರಿ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಿ-ಖಾತೆ ಹಾಗೂ ಫಾರಂ-2 ವಿತರಣೆ ನಡೆಯುತ್ತಿರುವುದು ಸೇರಿದಂತೆ ವಿವಿಧ ನಾಗರಿಕ ಸೇವೆಗಳ ಒದಗಿಕೆಯಲ್ಲಿ ವಿಳಂಬ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ಮಹಾನಗರಪಾಲಿಕೆಯ ವಿವಿಧ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ (ಎಸ್ಪಿ) ವಾಸುದೇವರಾಮ ಅವರ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿ ಮಹಾನಗರಪಾಲಿಕೆಯ ಕೇಂದ್ರ ಕಚೇರಿ ಹಾಗೂ ವಿವಿಧ ವಲಯ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಬೆಳಿಗ್ಗೆಯಿಂದ ಆರಂಭವಾದ ಕಾರ್ಯಾಚರಣೆ ಹಲವು ಗಂಟೆಗಳ ಕಾಲ ಮುಂದುವರಿದಿದ್ದು, ಅಧಿಕಾರಿಗಳು ಕಡತಗಳು, ಅರ್ಜಿ ದಾಖಲೆಗಳು ಹಾಗೂ ಆಸ್ತಿ ಸಂಬಂಧಿತ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಬಿ-ಖಾತೆ ಹಾಗೂ ಫಾರಂ-2 ವಿತರಣೆ ಮಾಡಲಾಗುತ್ತಿದೆ ಎಂಬ ದೂರುಗಳು ಲೋಕಾಯುಕ್ತ ಕಚೇರಿಗೆ ಸಲ್ಲಿಕೆಯಾಗಿದ್ದವು. ಅಲ್ಲದೆ, ಸಾರ್ವಜನಿಕರಿಂದ ವಿವಿಧ ಸೇವೆಗಳಿಗೆ ಅನಗತ್ಯ ವಿಳಂಬ ಮಾಡುವುದು, ಕಡತಗಳನ್ನು ಬಾಕಿ ಇಡುವುದು ಹಾಗೂ ಕೆಲ ಪ್ರಕರಣಗಳಲ್ಲಿ ಅಕ್ರಮ ಹಣದ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಿಢೀರ್ ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪರಿಶೀಲನೆ ವೇಳೆ ಕೆಲವು ಪ್ರಕರಣಗಳಲ್ಲಿ ದಾಖಲೆಗಳ ನಿರ್ವಹಣೆಯಲ್ಲಿ ಲೋಪಗಳು ಕಂಡುಬಂದಿದ್ದು, ನಿಯಮಾನುಸಾರ ಅನುಮೋದನೆ ಪಡೆಯದೆ ಕೆಲವು ಕಡತಗಳನ್ನು ಮುಂದಕ್ಕೆ ಸಾಗಿಸಿರುವ ಶಂಕೆಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಸಮಗ್ರ ಪರಿಶೀಲನೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ಕಚೇರಿಗಳಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದು, ಬಾಕಿ ಇರುವ ಅರ್ಜಿಗಳು, ಆಸ್ತಿ ದಾಖಲೆಗಳು, ತೆರಿಗೆ ಸಂಬಂಧಿತ ಕಡತಗಳು ಹಾಗೂ ಬಿ-ಖಾತೆ ಮಂಜೂರಾತಿ ದಾಖಲೆಗಳನ್ನು ಪರಿಶೀಲಿಸಲಾಯಿತು. ಸಾರ್ವಜನಿಕರಿಗೆ ನೀಡಲಾಗುವ ಸೇವೆಗಳ ಪ್ರಕ್ರಿಯೆಗಳ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.
ಈ ಕುರಿತು ಪ್ರಕಟಣೆ ನೀಡಿರುವ ಲೋಕಾಯುಕ್ತ ಎಸ್ಪಿ ವಾಸುದೇವರಾಮ ಅವರು, "ದೂರುಗಳ ಆಧಾರದ ಮೇಲೆ ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆಯ ವೇಳೆ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಖಲೆಗಳ ಪರಿಶೀಲನೆಯ ನಂತರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
ಲೋಕಾಯುಕ್ತರ ದಿಢೀರ್ ಪರಿಶೀಲನೆ ಮಹಾನಗರಪಾಲಿಕೆ ವಲಯದಲ್ಲಿ ಸಂಚಲನ ಮೂಡಿಸಿದ್ದು, ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಯುವ ಸಾಧ್ಯತೆ ಇದೆ. ಸಾರ್ವಜನಿಕ ವಲಯದಲ್ಲಿಯೂ ಈ ಕಾರ್ಯಾಚರಣೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅಕ್ರಮಗಳಿಗೆ ಕಡಿವಾಣ ಬೀಳಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.