ನಾಯಕನಹಟ್ಟಿ : ರಾಜ್ಯದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರುವುದಿಲ್ಲ ಜೆ.ಡಿ.ಎಸ್. ಮತ್ತು ಬಿ.ಜೆ.ಪಿ.ಯವರು ಮೈತ್ರಿ ಮಾಡಿಕೊಂಡರೂ ಕೂಡ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ರಾಜ್ಯದಲ್ಲಿ 2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ದ್ರಾಕ್ಷಿ ರಸ ನಿಗಮ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ಬಾಬು ಸ್ಪಷ್ಟನೆ ನೀಡಿದರು.
ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರ ಮದ್ಯಸ್ಥಿಕತೆ ಇಲ್ಲದೆ ಪ್ರತಿಯೊಬ್ಬ ಫಲಾನುಭವಿಗಳ ಮನೆ ಬಾಗಿಲಿಗೆ ಗ್ಯಾರೆಂಟಿ ಯೋಜನೆಗಳ ಲಾಭವನ್ನು ಮುಟ್ಟಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಗ್ಯಾರೆಂಟಿ ಯೋಜನೆಗಳಿಂದ ಮಹಿಳೆಯರಿಗೆ, ನಿರುದ್ಯೋಗಿಗಳಿಗೆ ತುಂಬಾ ಅನುಕೂಲವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಕೂಡ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ ಹಾಗೂ ನಡೆಯುತ್ತಿದೆ. ಜನಪರ, ಬಡವರ ಪರ, ಮಹಿಳೆಯರ ಪರ, ರೈತರ ಪರ, ಮದ್ಯಮ ವರ್ಗದವರ ಪರ ಯೋಜನೆಗಳನ್ನು ಯಶಸ್ವಿಯಾಗಿ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲೂ ಈ ಯೋಜನೆಗಳಿಂದ ಜನರಿಗೆ ಅನುಕೂಲ ಮಾಡುವ ಬದ್ದತೆ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ಭವಿಷ್ಯ ನುಡಿದರು.
ಗೃಹಲಕ್ಷ್ಮಿ ಹಣದಿಂದ ಅನೇಕ ಮಹಿಳೆಯರು ಸ್ವಯಂ ಉದ್ಯೋಗ, ತಮ್ಮ ಮಕ್ಕಳ ವಿದ್ಯಾಭ್ಯಾಸ, ವೃದ್ದರ ಜೀವನದ ಅನುಕೂಲಕ್ಕೆ ಬಳಸಿಕೊಂಡು ಯೋಜನೆಯನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸುತ್ತಾ ಬಂದಿದ್ದಾರೆ. ಕೆಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ಅನೇಕರಿಗೆ ಈ ಹಣ ನೆರವಿಗೆ ಬಂದಿದೆ. ಶಕ್ತಿ ಯೋಜನೆಯಿಂದ ದುಡಿಯುವ ಮಹಿಳೆಯರು, ವೃದ್ದ ಮಹಿಳೆಯರು ತಮ್ಮ ಕೆಲಸ ಕಾರ್ಯಗಳಿಗೆ ಬಳಸಿಕೊಂಡು ಹಾಗು ದೇವಸ್ಥಾನಗಳಿಗೆ ಹೋಗುವುದರ ಮೂಲಕ ಇಡೀ ವಿಶ್ವದಲ್ಲೇ ಅತ್ಯಂತ ಯಶಸ್ವಿಯಾದ ಯೋಜನೆಯೆಂದು ದಾಖಲೆ ನಿರ್ಮಿಸಿದ್ದಾರೆ ಎಂದು ಅವರು ಮಾತನಾಡಿದರು.