ಬಳ್ಳಾರಿ: ತಮ್ಮ ವಿಧೇಯ ಗುಣಗಳಿಂದ ಎಲ್ಲ ವರ್ಗದ ಜನರಿಗೆ ಅತ್ಯಾಪ್ತರಾಗಿರುವ, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಅಭಿವೃದ್ಧಿ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡುವ ಜನಪರ ಕಾಳಜಿಯುಳ್ಳ ನಾಯಕರಾಗಿರುವ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ಕ್ರಿಯಾಶೀಲ ಪದವೀಧರರ ವೇದಿಕೆ ರಾಜ್ಯಾಧ್ಯಕ್ಷರು ಹಾಗೂ ಎಸ್.ಸಿ., ಎಸ್.ಟಿ. ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾಗಿರುವ ಡಿ.ರಂಗಯ್ಯ ಅವರು ಎಐಸಿಸಿ ವರಿಷ್ಠರು ಹಾಗೂ ಕೆಪಿಸಿಸಿ ನಾಯಕರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಶಕೆ ಆರಂಭಿಸಿದ್ದ ಬಿ.ನಾಗೇಂದ್ರ ಅವರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಿ.ನಾಗೇಂದ್ರ ಅವರು ಪರಿಶಿಷ್ಟ ಪಂಗಡ ವರ್ಗಗಳ ಇಲಾಖೆಯ ಸಚಿವರಾಗಿದ್ದರು. ಸಚಿವ ಸಂಪುಟ ದರ್ಜೆ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಮೇಲಿನ ಸುಳ್ಳು ಆಪಾದನೆಯಿಂದ ಸಚಿವ ಸ್ಥಾನ ಕಳೆದುಕೊಳ್ಳುವಂತಾಗಿಯಿತು, ನಾಗೇಂದ್ರ ಅವರ ಜನಪರ ಆಡಳಿತ, ಅವರ ಸ್ನೇಹಶೀಲ ವ್ಯಕ್ತಿತ್ವ ಮತ್ತು ಹೃದಯವಂತಿಕೆಯನ್ನು ಗಮನಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಗೇಂದ್ರರನ್ನು ಮತ್ತೆ ಸಚಿವರನ್ನಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಆಗಾಗ ಹೇಳುತ್ತಿದ್ದರು. ದೊಡ್ಡ ದೊಡ್ಡ ಸಮಾವೇಶಗಳಲ್ಲೂ ನಾಗೇಂದ್ರ ಅವರ ಸಚಿವ ಸ್ಥಾನದ ಕುರಿತು ಪದೇಪದೇ ಉಚ್ಛರಿಸುತ್ತಿದ್ದರು. ಇದೀಗ ಮುಖ್ಯಮಂತ್ರಿಗಳ ಬದಲಾವಣೆ ಆಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಡಿ.ಕೆ.ಶಿವಕುಮಾರ್ ಅವರು ಆಡಳಿತ ವಹಿಸಿದ್ದಾರೆ. ಅವರ ಸಂಪುಟದಲ್ಲಿ ಪ್ರಥಮಾದ್ಯತೆ ಮೇರೆಗೆ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಲಭಿಸುತ್ತದೆ ಎನ್ನುವ ನಿರೀಕ್ಷೆ ನಮಗೆಲ್ಲ ಇತ್ತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಂಪುಟದ ಪ್ರಥಮ ಪಟ್ಟಿಯಲ್ಲಿ ನಾಗೇಂದ್ರ ಅವರನ್ನು ಕೈಬಿಟ್ಟಿದ್ದಕ್ಕೆ ನಮಗೆಲ್ಲ ನಿರಾಶೆ ಆಗಿದೆ.
ಜೂನ್ ೧೮ ರ ನಂತರ, ಕೊನೆ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಹೇಳಲಾಗುತ್ತಿದೆ. ಆಗಲಾದರೂ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕಲ್ಪಿಸಬೇಕು. ಇದುವರೆಗೆ ನಾಗೇಂದ್ರ ಅವರಿಗೆ ಸಚಿವ ಸ್ಥಾನ ಸಿಗದೇ ಇದ್ದುದರಿಂದ ಕೇವಲ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮತದಾರರಷ್ಟೇ ಅಲ್ಲದೆ, ಇಡೀ ಜಿಲ್ಲೆಯ ಜನರು ಮತ್ತು ಅವರ ಅಭಿಮಾನಿಗಳು ತುಂಬಾ ಬೇಸರಗೊಂಡಿದ್ದೇವೆ. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ನಾಗೇಂದ್ರ ಅವರಿಗೆ ಪ್ರಥಮ ಪಟ್ಟಿಯಲ್ಲಿ ಸಚಿವ ಸ್ಥಾನದ ಅವಕಾಶ ದೊರೆಯದೆ ನಮಗೆ ಇನ್ನಷ್ಟು ನಿರಾಸೆಯಾಗಿದೆ. ಎರಡನೇ ಪಟ್ಟಿಯಲ್ಲಾದರೂ ಇವರ ಹೆಸರನ್ನು ಸೇರಿಸಿ ಸಚಿವ ಸ್ಥಾನವನ್ನು ಘೋಷಿಸಬೇಕು. ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತ ಮತ್ತು ಶೋಷಿತ ಜನಾಂಗಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಎಂದೆAದಿಗೂ ಸಾಮಾಜಿಕ ನ್ಯಾಯ ಕೊಡುವ ಪಕ್ಷವಾಗಿದೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಪಕ್ಷದ ವರಿಷ್ಠರು, ಕೆಪಿಸಿಸಿ ಅಧ್ಯಕ್ಷರು ಮತ್ತು ನಾಯಕರು ಬಿ.ನಾಗೇಂದ್ರ ಅವರನ್ನು ಪರಿಗಣಿಸಬೇಕೆಂದು ಡಿ.ರಂಗಯ್ಯ ಅವರು ಅಗ್ರಹಿಸಿದ್ದಾರೆ.
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಬಿ.ನಾಗೇಂದ್ರ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಕಲೆ, ಸಂಗೀತ, ಸಾಹಿತ್ಯ ಮತ್ತು ಕ್ರೀಡೆಗಳ ಜೊತೆ ಜೊತೆಗೆ ಜನಪರ ಕೆಲಸಗಳನ್ನೂ ಮಾಡುತ್ತಿದ್ದಾರೆ. ಪಕ್ಷ ಭೇದ ಮರೆತು ಕ್ಷೇತ್ರದ ಎಲ್ಲ ಜನರೊಂದಿಗೆ ಒಡನಾಟ ಇರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆ, ಕಾರ್ಯಕರ್ತರ ಶ್ರೇಯಸ್ಸು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಪ್ರತಿಯೊಂದು ಹಂತದಲ್ಲಿ ತುಡಿಯುವ ಮನಸ್ಸು ಹೊಂದಿದ್ದಾರೆ. ಅವರದ್ದು ಅಭಿವೃದ್ಧಿಯೇ ಮೊದಲ ಧ್ಯೇಯ ಎನ್ನುವ ಮಂತ್ರ. ಕ್ಷೇತ್ರದ ಜನರ ಸಂಕಷ್ಟದಲ್ಲಿ ಭಾಗಿಯಾಗಿ ಸರ್ಕಾರದ ಸಾಕಷ್ಟು ಯೋಜನೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಾದ್ಯಂತ ಸಮಪರ್ಕವಾಗಿ ಅನುಷ್ಠಾನಗೊಳಿಸಿ ರಾಜ್ಯದ ಗಮನ ಸೆಳೆದಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಬಿ.ನಾಗೇಂದ್ರ ಅವರು ಓರ್ವ ಶಾಸಕರಾಗಿ, ಸಚಿವರಾಗಿ ಪ್ರತಿ ಹೆಜ್ಜೆಯಲ್ಲಿಯೂ ಮಾಡಿದ ಜನಪರ ಕಾರ್ಯಗಳು ರಾಜ್ಯಕ್ಕೆ ಮಾದರಿಯಾಗಿವೆ. ಯಾವುದೇ ಹಮ್ಮು-ಬಿಮ್ಮುಗಳಿಲ್ಲದೇ ಅತ್ಯಂತ ಸರಳ ಸಜ್ಜನಿಕೆಯಿಂದ ಎಲ್ಲ ಸಮುದಾಯದ ಜನರೊಂದಿಗೆ ಬೆರೆತು ವಿನೀತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲರ ಮನೆ ಮಗನಂತಿರುವ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮತ್ತು ವರಿಷ್ಠರು ಸಚಿವ ಸ್ಥಾನ ನೀಡಬೇಕು ಎಂದು ಡಿ.ರಂಗಯ್ಯ ಸಿಎಂ ಮತ್ತು ಕೈ ವರಿಷ್ಠ ನಾಯಕರಲ್ಲಿ ಒತ್ತಾಯಿಸಿದ್ದಾರೆ.