ಬಳ್ಳಾರಿ: ಇಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ಮಠ, ವಸುಧೈವ ಕುಟುಂಬಕo ಪ್ರತಿಷ್ಠಾನ ಹಾಗೂ ಪುನರುತ್ಥಾನ ಅಧ್ಯಯನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಇದೇ ಜೂನ್ ೨೮ ರಂದು
`ಬೀಸಿಬೀಸಾಟದಿರು ಬಿಂಕದದೈವ - ವಿಜಯರಾಯ' ಎನ್ನುವ ಕೃತಿಯ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿದೆ.
ಸತ್ಯನಾರಾಯಣ ಪೇಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಂದು ಸಂಜೆ ೫-೩೦ಕ್ಕೆ ಜರುಗಲಿರುವ ಈ ಕಾರ್ಯಕ್ರಮದಲ್ಲಿ ಹೈದರಾಬಾದ್ ನ ಕವಿಗಳು, ಖ್ಯಾತ ಅನುವಾದಕರಾದ ರಮೇಶಬಾಬು ಚಂದಕಚರ್ಲ ಅವರು ಪುಸ್ತಕ ಅನಾವರಣಗೊಳಿಸಲಿದ್ದಾರೆ. ಬೆಂಗಳೂರಿನ ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ವಿ.ಶ್ರೀಶಾನಂದ ಅವರು ಅಧ್ಯಕ್ಷತೆ ಹಾಗೂ ವಕ್ತವ್ಯ ವಹಿಸಲಿದ್ದಾರೆ.
ಅತಿಥಿಗಳಾಗಿ ಬೆಂಗಳೂರಿನ ಸಿ.ಜೆ. ಶ್ರೀನಿವಾಸ ದಾಸ, ರಾಮಸಾಗರದ ಪಿ. ನರಸಿಂಹ ಮೂರ್ತಿ, ಬಳ್ಳಾರಿ ರಾಘವೇಂದ್ರ ಸ್ವಾಮಿಗಳ ಮಠದ ಪ್ರಬಂಧಕರಾದ ಪ್ರಸನ್ನಾಚಾರ್ಯ ಐ.ಜಿ,, ಕೃತಿಯ ಕರ್ತೃಗಳಾದ ಅನಂತಪುರ `ವಿಜಯನಗರ ಕಾನೂನು ವಿದ್ಯಾಲಯ'ದ ಪ್ರಾಂಶುಪಾಲರಾದ ಡಾ.ಹೇತೂರ್ ರಾಮಚಂದ್ರಾಚಾರ್ ಮತ್ತು ಬಳ್ಳಾರಿಯ ಖ್ಯಾತ ನ್ಯಾಯವಾದಿಗಳು ಹಾಗೂ ಸಮಾಜ ಸೇವಕರಾದ ಶ್ರೀನಿವಾಸ ಢಾಣಾಪುರ ಇವರು ಪಾಲ್ಗೊಳ್ಳಲಿದ್ದಾರೆ. ಶ್ರೀ ಮಂತ್ರಾಲಯ ಕ್ಷೇತ್ರದ ಶ್ರೀ ರಾಘವೇಂದ್ರ ದಾಸ ಸಾಹಿತ್ಯ ಪ್ರತಿಷ್ಠಾನದ ಸಂಚಾಲಕರಾದ ಸುಳಾದಿ ಹನುಮೇಶ ದಾಸರು `ದಾಸವರೇಣ್ಯ ವಿಜಯದಾಸರು' ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇದೇವೇಳೆ ಬೆಂಗಳೂರಿನ ನಿರ್ಮಾಪಕರು, ಖ್ಯಾತ ಚಲನಚಿತ್ರ ನಿರ್ದೇಶಕರಾದ ಮಧುಸೂದನ್ ಹವಾಲ್ದಾರ್, ಕಮಲಾಪುರದ ಶ್ರೀಕೃಷ್ಣಾವಧೂತರ ವಂಶಜರಾದ ರಾಘವೇಂದ್ರಾಚಾರ್ಯ ಸಂಡೂರು ಮತ್ತು ಬಳ್ಳಾರಿಯ ಚಲನಚಿತ್ರ ಕಲಾವಿದರಾದ ಆರ್.ಎನ್.ರಘುನಾಥ ಅವರಿಗೆ ವಿಶೇಷ ಗೌರವ ಸನ್ಮಾನ ಸಮಾರಂಭ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತವಿದೆ ಎಂದು ಸಂಘಟಕರು ತಿಳಿಸಿದ್ದಾರೆ.