ಬೆಳೆ ವಿಮೆ ನೋಂದಣಿ ಹೆಚ್ಚಳಕ್ಕೆ ಹಾಗೂ ಗೊಬ್ಬರ ಶೇಖರಣೆಗೆ ಸೂಚನೆ
ಬಳ್ಳಾರಿ: ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲು ಸರ್ಕಾರದ ಆದೇಶದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಭೇಟಿ ನಡೆಸಬೇಕು ಎಂದು ಕರ್ನಾಟಕ ಸರ್ಕಾರದ ಸಂಪುಟ ದರ್ಜೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಅತಿವೃಷ್ಠಿ ಮತ್ತು ಬರ ಪರಿಸ್ಥಿತಿ ನಿರ್ವಹಣೆಯ ಮೇಲುಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಹೇಳಿದರು.

ಗುರುವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲೆಯ ಬರಪರಿಸ್ಥಿತಿ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ನಿರ್ದೇಶನದಂತೆ ಯಾವುದೇ ಅಧಿಕಾರಿಗಳು ಕೇಂದ್ರಸ್ಥಾನ ಬಿಡದೆ, ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಬೇಕು. 'ನಾವು ನಿಮ್ಮೊಂದಿಗಿದ್ದೇವೆ' ಎಂಬ ಧೈರ್ಯವನ್ನು ರೈತರಲ್ಲಿ ತುಂಬುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.
ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸುವಂತೆ ಜಾಗೃತಿ ಮೂಡಿಸಲು ‘ವಿಶೇಷ ಡ್ರೈವ್’ ಮಾಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಮಧ್ಯಪ್ರವೇಶಿಸಿ, ಅಧಿಕಾರಿಗಳ ಜಾಗೃತಿಯ ಫಲವಾಗಿ ಪ್ರಸ್ತುತ ನೋಂದಾಯಿತ ರೈತರ ಸಂಖ್ಯೆ 37,000ಕ್ಕೆ ಏರಿಕೆಯಾಗಿದೆ. ಆಗಸ್ಟ್ 14ರವರೆಗೆ ಸಮಯಾವಕಾಶವಿದ್ದು, ಕನಿಷ್ಠ 60,000ದಿಂದ 75,000 ರೈತರನ್ನು ವಿಮಾ ವ್ಯಾಪ್ತಿಗೆ ತರುವ ಗುರಿ ಹೊಂದಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ ಒಟ್ಟು 57,000 ಹೆಕ್ಟೇರ್ ಪ್ರದೇಶದಲ್ಲಿ ಒಣಬೇಸಾಯ (ಖುಷ್ಕಿ) ಮತ್ತು ಸಂರಕ್ಷಿತ ನೀರಾವರಿ ಬೆಳೆಗಳು ಹಾನಿಗೊಳಗಾಗಿವೆ ಎಂದು ಕಂದಾಯ ಮತ್ತು ಕೃಷಿ ಇಲಾಖೆಯ ಜಂಟಿ ಸಮೀಕ್ಷೆಯಿಂದ ಅಂದಾಜಿಸಲಾಗಿದೆ. ಪ್ರಸ್ತುತ ಭತ್ತದ ಬೆಳೆಗೆ ವಿಮೆ ಮಾಡಿಸಲು ಅವಕಾಶವಿದ್ದು, ರಾಗಿ ಮತ್ತು ಜೋಳದಂತಹ ಬೆಳೆಗಳಿಗೆ ಗಡುವು ಮುಕ್ತಾಯಗೊಂಡಿದೆ. ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಸಿಗುವಂತೆ ಪಟ್ಟಿ ಸಿದ್ಧಪಡಿಸಲು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆಯಿಲ್ಲ. ಪ್ರಸ್ತುತ 69,877 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದ್ದು, ಯೂರಿಯಾ ಮತ್ತು ಡಿಎಪಿ ಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆಯಿದೆ. ಕೃತಕ ಅಭಾವ ಸೃಷ್ಟಿಯಾಗದಂತೆ ತಡೆಯಲು 'ಫ್ರೂಟ್ಸ್' ತಂತ್ರಾಂಶದ ಫಾರ್ಮರ್ ಐಡಿ ಆಧರಿಸಿ ಗೊಬ್ಬರ ವಿತರಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸೋಮ್ ಸುಂದರ್ ಅವರು ಹೇಳಿದರು.
ಸಚಿವ ಬಿ.ನಾಗೇಂದ್ರ ಅವರು ಮಾತನಾಡಿ, ರಸಗೊಬ್ಬರ ಖರೀದಿಸುವಾಗ ರೈತರಿಗೆ ಅನಗತ್ಯವಾಗಿ ಇತರ ಸೂಕ್ಷ್ಮ ಪೋಷಕಾಂಶಗಳನ್ನು ಬಲವಂತವಾಗಿ ಜೋಡಿಸಿ ಮಾರಾಟ ಮಾಡುವ ಸಾಗಣೆದಾರರು ಮತ್ತು ಡೀಲರ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸುವ ಮಾರಾಟಗಾರರ ವಿರುದ್ಧ ರಸಗೊಬ್ಬರ ನಿಯಂತ್ರಣ ಕಾಯ್ದೆ ಹಾಗೂ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ನೀರಾವರಿ ನೀರು ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಸಾಂಪ್ರದಾಯಿಕ ನೀರು ಭರಿತ ಭತ್ತದ ಬೇಸಾಯದ ಬದಲು ‘ಕೂರಿಗೆ ಪದ್ಧತಿ’ ಮೂಲಕ ಭತ್ತ ಬೆಳೆಯಲು ರೈತರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಸಾಂಪ್ರದಾಯಿಕ ಪದ್ಧತಿಗೆ ಹೋಲಿಸಿದರೆ ಕೂರಿಗೆ ಪದ್ಧತಿಯಲ್ಲಿ ಶೇ. 60 ರಷ್ಟು ನೀರು ಉಳಿತಾಯವಾಗಲಿದ್ದು, ಕೇವಲ ಶೇ. 40 ರಷ್ಟು ನೀರಿನ ಅಗತ್ಯವಿರುತ್ತದೆ. ಈ ಪದ್ಧತಿಯಲ್ಲಿ ಪ್ರತಿ ಹೆಕ್ಟೇರ್‌ಗೆ 62.5 ಕೆಜಿ ಬೀಜ ಬೇಕಿದ್ದರೆ, ಕೂರಿಗೆ ಪದ್ಧತಿಯಲ್ಲಿ ಕೇವಲ 12.5 ಕೆಜಿ ಬೀಜ ಸಾಕು. ಇದರಿಂದ ರೈತರ ಉತ್ಪಾದನಾ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ. ಸಾಮಾನ್ಯ ಪದ್ಧತಿಯಲ್ಲಿ ಪ್ರತಿ ಹೆಕ್ಟೇರ್‌ಗೆ 60 ರಿಂದ 70 ಕ್ವಿಂಟಲ್ ಇಳುವರಿ ಬಂದರೆ, ಕೂರಿಗೆ ಪದ್ಧತಿಯಲ್ಲಿ 40 ರಿಂದ 45 ಕ್ವಿಂಟಲ್ (ಕೆಲವು ಕಡೆ 60 ಕ್ವಿಂಟಲ್ ವರೆಗೂ) ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಕೆ.ಸೋಮಸುಂದರ್ ಅವರು ಮಾತನಾಡಿ, ಜಿಲ್ಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಒಟ್ಟು 1,18,000 ಹೆಕ್ಟೇರ್ ನೀರಾವರಿ ಭೂಮಿ ಇದ್ದು, ನಾನ್-ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 41,000 ಹೆಕ್ಟೇರ್ ಒಣಭೂಮಿ ಇದೆ. ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು 1,500 ಹೆಕ್ಟೇರ್ ಪ್ರದೇಶದಲ್ಲಿ ಕೂರಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಸಿರುಗುಪ್ಪ ತಾಲೂಕಿನಲ್ಲಿ ಸುಮಾರು 3,000 ಹೆಕ್ಟೇರ್ ಹಾಗೂ ಬಳ್ಳಾರಿ ತಾಲೂಕಿನ ಕೃಷ್ಣಾನಗರ ಕ್ಯಾಂಪ್ ಸುತ್ತಮುತ್ತಲಿನ ಭಾಗಗಳಲ್ಲಿ ರೈತರು ಈ ಪದ್ಧತಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲಾ 13 ಹೋಬಳಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಕೂರಿಗೆ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ಮಟ್ಟದಲ್ಲಿ ರೈತ ಮುಖಂಡರನ್ನು ಕರೆದು ಸಭೆ ನಡೆಸಲಾಗಿದೆ. ನೀರಿನ ಅಭಾವವಿರುವ ಪ್ರಸ್ತುತ ಸನ್ನಿವೇಶದಲ್ಲಿ ಕುಡಿಯುವ ನೀರು ಮತ್ತು ಕೃಷಿ ನಡುವೆ ಸಮತೋಲನ ಕಾಯ್ದುಕೊಳ್ಳಲು ಈ ಪದ್ಧತಿ ಅತ್ಯಂತ ಸೂಕ್ತವಾಗಿದ್ದು, ಹೆಚ್ಚಿನ ರೈತರು ಇದನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವವಾಗದಂತೆ ನೋಡಿಕೊಳ್ಳಬೇಕು. ಬಳ್ಳಾರಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಅಭಾವ ತೀವ್ರಗೊಳ್ಳುತ್ತಿದ್ದು, ಜಿಲ್ಲೆಯ ಕೆರಗಳಲ್ಲಿ ನೀರಿನ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿದಿದೆ. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸೂಕ್ತ ಕಾರ್ಯಯೋಜನೆ ರೂಪಿಸಿ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಸಂಡೂರು ಭಾಗದ ಮೆಟ್ರಿಕಿ ಮತ್ತು ವಿಟ್ಲಾಪುರ ಭಾಗಗಳಲ್ಲಿ ಜಾನುವಾರುಗಳ ಮೇವಿಗೆ ತೀವ್ರ ಅಭಾವ ಎದುರಾಗಿದೆ. ಈ ಪೈಕಿ ವಿಟ್ಲಾಪುರದಲ್ಲಿ ಮೇವಿಗೆ ಹೆಚ್ಚಿನ ಬೇಡಿಕೆಯಿದೆ. ನೀರಾವರಿ ಸೌಲಭ್ಯವಿರುವ ರೈತ ಕುಟುಂಬಕ್ಕೆ ಕಿಟ್‌ಗಳನ್ನು ವಿತರಣೆ ಮಾಡಬೇಕು. ಬರ ಘೋಷಣೆಯಾಗುವವರೆಗೆ ಕಾಯದೆ, ಸದ್ಯದ ಅಭಾವ ಪೂರೈಸಲು ಜಿಲ್ಲೆಯಾದ್ಯಂತ ಪ್ರತಿಯೊಂದು ಮನೆಗೆ ತೆರಳಿ ಜಾನುವಾರುಗಳ ಸಮೀಕ್ಷೆ ನಡೆಸಬೇಕು ಎಂದು ಪಶು ಸಂಗೋಪನಾ ಇಲಾಖಾಧಿಕಾರಿಗಳಿಗೆ ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನ:
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಜುಲೈ 1ರಿಂದ ಜಾರಿಗೆ ಬಂದಿರುವ ‘ವಿ ಬಿ ಜಿ ರಾಮ್ ಜಿ’ ಹೊಸ ಮಾರ್ಗದರ್ಶನದಂತೆ ಉದ್ಯೋಗ ದಿನಗಳನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಕೂಲಿ ಪ್ರಮಾಣವನ್ನು ರೂ.370 ರಿಂದ ರೂ.382 ಕ್ಕೆ ಏರಿಸಲಾಗಿದೆ. ಕೂಲಿ ಪಾವತಿಯಲ್ಲಿ ಶೇ. 40ರಷ್ಟು ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗಿದ್ದು, ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯು ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ 2ನೇ ಸ್ಥಾನದಲ್ಲಿದೆ. ಇದರಲ್ಲಿ ಕಾಲುವೆ ಸ್ವಚ್ಛತೆ ಜೊತೆಗೆ ದನದ ಕೊಟ್ಟಿಗೆ, ಕೋಳಿ ಶೆಡ್, ಕೃಷಿ ಹೊಂಡ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪ್ರತಿ ತಾಲೂಕಿನಲ್ಲಿ ಲಭ್ಯವಿರುವ 10 ಎಕರೆ ಸರ್ಕಾರಿ/ಗೋಮಾಳ ಜಮೀನಿನಲ್ಲಿ ದೊಡ್ಡ ಕೆರೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಯಾವುದೇ ಕಾರಣಕ್ಕೂ ತಪ್ಪು ಅಥವಾ ಗೊಂದಲಕಾರಿ ಮಾಹಿತಿ ನೀಡಬಾರದು. ಯಾವುದೇ ನ್ಯೂನತೆಗಳಿದ್ದರೂ ನೇರವಾಗಿ ತಿಳಿಸಿದರೆ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಮತ್ತು ನೂತನ ಆಲೋಚನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಆಡಳಿತಾತ್ಮಕವಾಗಿ ಸಂಪೂರ್ಣ ಮುಕ್ತ ಸ್ವಾತಂತ್ರ್ಯ ನೀಡಲಾಗುವುದು. ಸರ್ಕಾರದ ಹಣ ದುರುಪಯೋಗವಾಗದಂತೆ ತಡೆದು, ಪರಿಣಾಮಕಾರಿಯಾಗಿ ಕೆಲಸ ಮಾಡಲು ಕರೆ ನೀಡಿದರು.
ಸಭೆಯಲ್ಲಿ ಡಾ.ಬಾಬು ಜಗಜೀವನರಾಂ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆಯ ಮೇಯರ್ ಪಿ.ಗಾದೆಪ್ಪ, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನ ಉಪಾಧ್ಯಕ್ಷ ಹೆಚ್.ಲಕ್ಷ್ಮಣ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್, ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್ ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲಾ ತಾಲೂಕು ತಹಶೀಲ್ದಾರರು ಹಾಗೂ ಇತರರು ಉಪಸ್ಥಿತರಿದ್ದರು.