ರಾಯಚೂರು: ಕಳೆದ ಏರಡ್ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಅಕಾಲಿಕ ಮಳೆಯಿಂದ ತಗ್ಗು ಗುಂಡಿಗಳು ಸೇರಿದಂತೆ ಅಲ್ಲಲ್ಲಿ ನೀರು ನಿಲ್ಲುವುದರಿಂದ ಡೆಂಗ್ಯು ಹರಡುವ ಈಡಿಸ್ ಇಜಿಪ್ಟೈ ಸೊಳ್ಳೆಯ ಸಂತತಿ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಸಂಭಾವ್ಯ ಡೆಂಗ್ಯು ಪ್ರಕರಣಗಳು ಕಂಡು ಬರುವ ಸಾಧ್ಯತೆಗಳಿದ್ದು, ದಯವಿಟ್ಟು ಸಾರ್ವಜನಿಕರು ಮನೆಯ ಸುತ್ತಲು ನೀರು ನಿಲ್ಲದಂತೆ ಮಾಡುವ ಜೊತೆಗೆ ಬಳಕೆಗಾಗಿ ನೀರು ತುಂಬುವ ಡ್ರಮ್, ಬ್ಯಾರೆಲ್, ಕಲ್ಲಿನ ಡೋಣಿ ಮುಂತಾದ ಪರಿಕರಗಳನ್ಮು ವಾರಕ್ಕೊಮ್ಮೆ ಸ್ವಚ್ಚಗೊಳಿಸಿ ಮತ್ತು ಯಾರಿಗಾದರೂ ಒಂದೇ ದಿನ ಜ್ವರ ಕಂಡು ಬಂದರೂ ಸಹ ವೈದ್ಯರ ಬಳಿ ಪರೀಕ್ಷಿಸಿ ಅಗತ್ಯ ಚಿಕಿತ್ಸೆ ಪಡೆಯಿರಿ ಎಂದು ಸಾರ್ವಜನಿಕರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರ ಬಾಬು ವಿನಂತಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ವಿನಂತಿಸುತ್ತಾ, ಮನೆಯ ಒಳಗಿನ ಸಾಮಗ್ರಿಗಳನ್ನು ನಿಗಾ ವಹಿಸಿದಂತೆ ಮನೆಯ ಹೊರಗೆ ನೀರು ಸುತ್ತಲು ನೀರು ಸಂಗ್ರಹವಾಗುವ ಪ್ಲಾಸ್ಟಿಕ್ ಕಪ್, ತಗಡಿನ ಟಿನ್, ತೆಂಗಿನ ಚಿಪ್ಪು, ಒಡೆದ ಮಡಿಕೆ, ಬಿಸಾಡಿದ ಟೈರ್, ಮುಂತಾದ ತ್ಯಾಜ್ಯವನ್ನು ವಿಲೇವಾರಿ ಮಾಡಲು ವಿನಂತಿಸಿದರು.
ಮನೆಯಲ್ಲಿರುವ ಚಿಕ್ಕ ಮಕ್ಕಳು, ಗರ್ಭಿಣಿಯರು, ವಯೋವೃದ್ದರು, ಬಾಣಂತಿಯರಿಗೆ ಸೊಳ್ಳೆ ಕಡೆಯದಂತೆ ಕಾಳಜಿ ತೆಗೆದುಕೊಳ್ಳಿ ನಿರ್ಲಕ್ಷ್ಯ ವಹಿಸಬೇಡಿ ಎಂದಿದ್ದಾರೆ.
ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ
ಸಾಮಾನ್ಯವಾಗಿ ಜ್ವರವನ್ನು ನಾವು ನಿರ್ಲಕ್ಷಿಸುತ್ತೆವೆ, ಇಂತ ಸಂದರ್ಭಗಳಲ್ಲಿ ಡೆಂಗ್ಯು ಸಂಬಂಧಿತ ಜ್ವರವಾಗಿದ್ದರೆ ರೋಗಿಯು ಪ್ಲೇಟ್ಲೆಟ್ಸ್ಗಳ ಶೀಘ್ರ ಕುಸಿಯುವಿಕೆಯಿಂದ ಆರೋಗ್ಯ ಸಮಸ್ಯೆ ಎದುರಾಗಿ ರಕ್ತಸ್ರಾವದಂತಹ ಗಂಭಿರ ಸಮಸ್ಯೆ ಎದುರುಸ ಬೇಕಾಗಬಹುದು. ಕಾರಣ ಯಾರಿಗಾದರೂ 3 ದಿನಗಳ ಕಡಿಮೆಯಾಗದ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡಲ್ಲಿ ನಿರ್ಲಕ್ಷಿಸಿದೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಅಗತ್ಯ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆಯಂತೆ ಲಕ್ಷಣಗಳ ಆಧಾರದ ಮೇರೆಗೆ ಚಿಕಿತ್ಸೆ ಪಡೆಯಲು ಕೋರಿದರು.
ಲಾರ್ವಾ ಸಮೀಕ್ಷೆಗೆ ಸಹಕರಿಸಿ:
ಜಿಲ್ಲಾ ರೋಗ ವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ ಚಂದ್ರಶೇಖರಯ್ಯ ಸ್ವಾಮಿ, ರವರ ನೇತೃತ್ವದಲ್ಲಿ ಮಂಗಳವಾರ ಹಾಗೂ ಶುಕ್ರವಾರ ಸೊಳ್ಳೆಗಳ ಉತ್ಪತಿ ತಾಣಗಳನ್ನು ಗುರ್ತಿಸಿ ನಾಶಗೊಳಿಸಲು ಸಿಬ್ಬಂದಿಯವರಿಂದ ಲಾರ್ವಾ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಪರಿಕರಗಳಿಗೆ ಮುಚ್ಚಳ ಮುಚ್ಚಿ ಬಟ್ಟೆ ಕಟ್ಟಲು ವಿನಂತಿಸಿ, ಬಳಕೆ ಮಾಡದ ನೀರು ಸಂಗ್ರಹಕಗಳಿಗೆ ಕೊಬ್ಬರಿ ಎಣ್ಣೆಯನ್ನು ಹಾಕುವ ಮೂಲಕ ಸೊಳ್ಳೆ ಉತ್ಪತ್ತಿ ತಡೆಯಲು ವಿನಂತಿಸಿದರು.
ಹಾಗೂ ಬಳಸದಿರುವ ನೀರು ನಿಲ್ಲುವ ಸ್ಥಳಗಳಲ್ಲಿ ಸುಟ್ಟ ಆಯಿಲ್ ಹಾಕಲು ಹಾಗೂ ಅಗತ್ಯವಿರುವಲ್ಲಿ ಟೆಮೋಪಾಸ್ ದ್ರಾವಣ ಹಾಕಲು ಕ್ರಮವಹಿಸಲಾಗುತ್ತಿದ್ದು ಜನತೆ ಸಹಕರಿಸಲು ವಿನಂತಿಸಿದ್ದಾರೆ.
ಕೆರೆ-ಕುಂಟೆ ಅಥವಾ ಇತರೆ ಅಸುರಕ್ಷಿತ ನೀರು ಕುಡಿಯಬೇಡಿ.:
ಮಳೆಯಿಂದ ನೀರಿನ ಮೂಲಗಳು ಕಲುಷಿತವಾಗುವ ಸಾಧ್ಯತೆಯಿದ್ದು, ಶುದ್ದೀಕರಿಸಲಾಗದ ಯಾವುದೇ ನೀರನ್ನು ಕುಡಿಯಬೇಡಿ.
ಇದು ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳ ಉಂಟಾಗುವಿಕೆಗೆ ಸಾಧ್ಯವಾಗುವುದು. ಈ ಹಿನ್ನಲೆ ಶುದ್ದೀಕರಿಸಿದ ನೀರು ಅಥವಾ ನೀರು ಶುದ್ದೀಕರಣ ಘಟಕದ ನೀರನ್ನು ಕುಡಿಯಲು ಬಳಸಬೇಕು. ಅಲ್ಲದೆ ಊಟದ ಮೊದಲು ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ 45 ಸೆಕೆಂಡ್ಗಳ ಕಾಲ ತೊಳೆದ ನಂತರ ಆಹಾರ ಸೇವಿಸಬೇಕು. ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಬೇಕು. ಸುರಕ್ಷಿತ ಆಹಾರ ಮಾತ್ರ ಸೇವಿಸಿ, ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಿರಿ, ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥ ಸೇವಿಸಬಾರದು, ಮಲ, ಮೂತ್ರ ವಿಸರ್ಜನೆಗಾಗಿ ಶೌಚಾಲಯ ಬಳಸಬೇಕು. ಇದಕ್ಕಾಗಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ ಗಣೇಶ್ ಕೆ ನೇತೃತ್ವದಲ್ಲಿ ಅಗತ್ಯ ಜಾಗೃತಿ ನೀಡಲಾಗುತ್ತಿದೆ ಎಂದರು. ಅಲ್ಲದೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಓಆರ್ಎಸ್ ಜೀವ ಜಲ ಪ್ಯಾಕೇಟ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಔಷಧಿಗಳು ಲಭ್ಯವಿವೆ. ಯಾವುದೇ ತುರ್ತು ಸಂದರ್ಭದಲ್ಲಿ 108 ಕ್ಕೆ ಕರೆ ಮಾಡಿ ಆ್ಯಂಬ್ಯುಲೆನ್ಸ್ ಸದುಪಯೋಗ ಪಡೆಯಲು ತಿಳಿಸಿದ್ದಾರೆ.