LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಶಾಸಕರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು: ಉಪ್ಪನಾಯಕನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆ

ಚಿತ್ರದುರ್ಗ: ತಾಲೂಕಿನ ಉಪ್ಪನಾಯಕನಹಳ್ಳಿ ಗ್ರಾಮದಲ್ಲಿ ತೀವ್ರಗೊಂಡಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಮಸ್ಥರು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ದೂರವಾಣಿ ಮೂಲಕ ಮನವಿ ಸಲ್ಲಿಸಿದ ಬೆನ್ನಲ್ಲೇ, ಶಾಸಕರು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸೂಚನೆ ನೀಡಿದರು.

 

ಶಾಸಕರ ನಿರ್ದೇಶನದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಮೂರ್ತಿ ಹಾಗೂ ಸೊಂಡೆಕೊಳ ಗ್ರಾಮ ಪಂಚಾಯಿತಿಯ ಪಿಡಿಒ ಬಿ.ಕೆ. ನಾಸಿರ್ ಪಾಷಾ ಅವರು ಉಪ್ಪನಾಯಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಲಭ್ಯತೆ, ಬೋರ್ವೆಲ್ಗಳ ಸ್ಥಿತಿ ಹಾಗೂ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸ್ಥಳ ಪರಿಶೀಲನೆ ನಡೆಸಿದರು.

 

ಕಳೆದ ಒಂದು ತಿಂಗಳ ಹಿಂದೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಿದ್ದರು. ಕೂಡಲೇ ಸ್ಪಂದಿಸಿದ್ದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಗ್ರಾಮದಲ್ಲಿ ಎರಡು ಹೊಸ ಕೊಳವೆಬಾವಿಗಳನ್ನು ಕೊರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಸುಮಾರು 1,000 ಅಡಿ ಆಳದವರೆಗೆ ಎರಡು ಬೋರ್ವೆಲ್ಗಳನ್ನು ಕೊರೆಯಲಾಗಿದ್ದು, ಅಲ್ಪ ಪ್ರಮಾಣದಲ್ಲಿ ನೀರು ದೊರೆತ ಪರಿಣಾಮ ತಾತ್ಕಾಲಿಕವಾಗಿ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಿತ್ತು.

ಆದರೆ ಬೇಸಿಗೆಯ ಪರಿಣಾಮ ಹಾಗೂ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಮತ್ತೊಮ್ಮೆ ಶಾಸಕರಿಗೆ ಮನವಿ ಮಾಡಿದರು.

 

ಇದಕ್ಕೆ ಸ್ಪಂದಿಸಿದ ಶಾಸಕರು, ಗ್ರಾಮದಲ್ಲಿ ಮತ್ತೊಂದು ಹೊಸ ಕೊಳವೆಬಾವಿ ಕೊರೆಯುವ ಜೊತೆಗೆ, ಅಗತ್ಯವಿದ್ದರೆ ಪರ್ಯಾಯ ಮೂಲಗಳಿಂದಲೂ ಕುಡಿಯುವ ನೀರು ಪೂರೈಕೆ ಮಾಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

 

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದ್ದು, ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡುಬಂದರೂ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 

ಸಂದರ್ಭದಲ್ಲಿ ಗ್ರಾಮಸ್ಥರಾದ ಸುಧಾಕರ್, ನಂಜುಂಡಪ್ಪ, ರುದ್ರಪ್ಪ, ಮಧುಕುಮಾರ್, ರಾಜಪ್ಪ, ನಾಗರಾಜಪ್ಪ, ಅಂಜಿನಪ್ಪ, ವಿನೋದ್ ಕುಮಾರ್, ಹುಲುಗಪ್ಪ, ತಿಪ್ಪೇಸ್ವಾಮಿ, ಉಲ್ಲಾಸ್, ರಘು, ರಂಗಸ್ವಾಮಿ, ಶ್ರೀನಿವಾಸ್, ದೇವರಾಜ್, ವೀರೇಶ್, ಮಂಜುನಾಥ್, ದಿನೇಶ್, ನಾಗರಾಜ್ ಸೇರಿದಂತೆ ಸೊಂಡೆಕೊಳ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST