LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಕುಂಭದ್ರೋಣ ಮಳೆಗೆ ತತ್ತರಿಸಿದ ಬಳ್ಳಾರಿ ಜನ

ವ್ಯಾಪಾರ ವಹಿವಾಟು ಸ್ಥಗಿತ | ರಸ್ತೆಗಳು ಜಲಾವೃತ | ಧರೆಗುರುಳಿದ ಕಂಬಗಳು, ಮರಗಳು

 

ಬಳ್ಳಾರಿ : ವರ್ಷದ ಮೊದಲ ಭಾರೀ ಮಳೆಯೇ ಗಣಿನಾಡು ಬಳ್ಳಾರಿಯನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಸೋಮವಾರ ಸಂಜೆ ಆರಂಭವಾದ ಧಾರಾಕಾರ ಮಳೆ ಹಲವು ಗಂಟೆಗಳ ಕಾಲ ನಿರಂತರವಾಗಿ ಸುರಿದ ಪರಿಣಾಮ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡವು. ರಸ್ತೆಗಳು ಕೆರೆಗಳಂತಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಗಾಂಧಿನಗರ, ಕೌಲ್ಬಜಾರ್, ಬೆಂಗಳೂರು ರಸ್ತೆ, ಮೋತಿ ಸರ್ಕಲ್, ಸುಧಾ ಕ್ರಾಸ್, ಡಬ್ಲ್ಯುಡಿಸಿ ಪ್ರದೇಶ, ಹವಂಬಾವಿ, ಬಸವೇಶ್ವರ ನಗರ ಸೇರಿದಂತೆ ಹಲವೆಡೆ ಮಳೆ ನೀರು ರಸ್ತೆ ಮೇಲೆ ಹರಿದು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಕೆಲವೆಡೆ ಅಂಗಡಿಗಳಿಗೆ ನೀರು ನುಗ್ಗಿದ ಪರಿಣಾಮ ವ್ಯಾಪಾರಸ್ಥರು ಆತಂಕಕ್ಕೀಡಾದರು. ಮಳೆಯ ತೀವ್ರತೆಗೆ ವ್ಯಾಪಾರ ವಹಿವಾಟು ಸಂಪೂರ್ಣ ಕುಂಠಿತಗೊಂಡಿದ್ದು, ಸಂಜೆ ವೇಳೆಗೆ ಅನೇಕ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟವು.

news_1779338262_0_706.webp

 

ಭಾರೀ ಮಳೆಯೊಂದಿಗೆ ಗುಡುಗು ಹಾಗೂ ಸಿಡಿಲಿನ ಆರ್ಭಟವೂ ಹೆಚ್ಚಾಗಿದ್ದರಿಂದ ಜನರು ಭಯಭೀತರಾದರು. ಮಳೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ಆಕಾಶದಲ್ಲಿ ನಿರಂತರ ಮಿಂಚು ಕಾಣಿಸಿಕೊಂಡು, ಭಾರೀ ಸದ್ದುಗಳೊಂದಿಗೆ ಸಿಡಿಲು ಬಡಿದ ಪರಿಣಾಮ ಮಕ್ಕಳು, ವೃದ್ಧರು ಹಾಗೂ ಮಹಿಳೆಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಹಲವರು ಸುರಕ್ಷತೆಗಾಗಿ ಮನೆಗಳಲ್ಲೇ ಉಳಿದುಕೊಂಡರು.

ನಗರದ ತಗ್ಗು ಪ್ರದೇಶಗಳಾದ ರಾಯಲ್ ಸರ್ಕಲ್ ಸುತ್ತಮುತ್ತ, ಕಪಗಲ್ಲು ರಸ್ತೆ, ಕಣೇಕಲ್ ರಸ್ತೆ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದ ಘಟನೆಗಳು ವರದಿಯಾಗಿವೆ. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆಯೇ ನಿಂತು ಕೆಸರುಮಯ ವಾತಾವರಣ ನಿರ್ಮಾಣವಾಯಿತು. ಮಳೆ ನೀರು ಮತ್ತು ಚರಂಡಿ ನೀರು ಒಂದೇ ಸೇರಿ ಹರಿದ ಪರಿಣಾಮ ಜನರು ದುರ್ವಾಸನೆ ಹಾಗೂ ಅಸ್ವಚ್ಛತೆಯಿಂದ ಸಂಕಷ್ಟ ಅನುಭವಿಸಿದರು.

news_1779338263_1_799.webp

 

ಮಳೆಯಿಂದ ವಾಹನ ಸವಾರರು ಪರದಾಡುವಂತಾಯಿತು. ರಸ್ತೆಗಳಲ್ಲಿನ ಗುಂಡಿಗಳು ನೀರಿನಿಂದ ಮುಚ್ಚಿಕೊಂಡಿದ್ದರಿಂದ ಬೈಕ್ ಸವಾರರು ಹಲವು ಕಡೆ ಜಾರಿ ಬಿದ್ದ ಘಟನೆಗಳು ಸಂಭವಿಸಿವೆ. ಸಂಚಾರ ದಟ್ಟಣೆ ಹೆಚ್ಚಾಗಿ, ನಗರದ ಪ್ರಮುಖ ವೃತ್ತಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಉದ್ಯೋಗಿಗಳು ಗಂಟೆಗಟ್ಟಲೆ ಟ್ರಾಫಿಕ್ನಲ್ಲಿ ಸಿಲುಕಿಕೊಂಡರು.

ನಗರದ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವೂ ಉಂಟಾಯಿತು. ಗುಡುಗು-ಸಿಡಿಲಿನ ಭೀತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಜನರು ಕತ್ತಲಲ್ಲೇ ಕಾಲ ಕಳೆಯುವಂತಾಯಿತು.

news_1779338263_2_488.webp

 

ಕೃಷಿಕರಲ್ಲಿ ಮಾತ್ರ ಮಳೆ ಸಂತಸ ಮೂಡಿಸಿದೆ. ಹಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನತೆಗೆ ಮಳೆ ತಂಪು ನೀಡಿದರೂ, ಏಕಾಏಕಿ ಸುರಿದ ಧಾರಾಕಾರ ಮಳೆಯಿಂದ ನಗರ ಪ್ರದೇಶಗಳಲ್ಲಿ ಅವಾಂತರಗಳು ಸೃಷ್ಟಿಯಾದವು. ಮುಂಗಾರು ಪೂರ್ವ ಸಿದ್ಧತೆಗಳ ಕೊರತೆ ಮತ್ತೊಮ್ಮೆ ಬಹಿರಂಗಗೊಂಡಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿ ವರ್ಷ ಮಳೆಯಾದಾಗ ಇದೇ ಸಮಸ್ಯೆ ಎದುರಾಗುತ್ತದೆ. ರಸ್ತೆ, ಚರಂಡಿ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದರೂ ಪರಿಸ್ಥಿತಿ ಬದಲಾಗಿಲ್ಲ,” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಹವಾಮಾನ ಇಲಾಖೆ ಮುಂದಿನ ಕೆಲ ದಿನಗಳ ಕಾಲ ಜಿಲ್ಲೆಯಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಪ್ರಸಕ್ತ ಮುಂಗಾರಿನ ಮೊದಲ ಮಳೆಗೆ ನಗರಕ್ಕೆ ತಂಪು ತಂದರೂ. ಅದರಿಂದ ಅನೇಕ ನಷ್ಟಗಳನ್ನು ತಂದೊಡ್ಡಿದೆ.ಗಿಡ ಮರಗಳು ಧರೆಗುರುಳಿವೆ. ಮನೆಗಳು ಕುಸಿದಿವೆ. ತಗ್ಗು ಪ್ರದೇಶದಲ್ಲಿನ ಮನೆ, ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿವೆ. ಅನೇಕ ಕಡೆ ಮಳೆ  ನೀರು ಸರಾಗವಾಗಿ ಹರಿಯದೆ ಮಡುಗಟ್ಟಿದೆ.  ಅಂದಾಜಿನ ಪ್ರಕಾರ ೪೦ ಮಿ.ಮೀ. ಮಳೆ ಬಿದ್ದಿದೆಯಂತೆ. ನಿನ್ನೆ ಸಂಜೆ ನಗರದಲ್ಲಿ ಸುರಿದ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ತೆರೆದ ಚರಂಡಿಗಳನ್ನು ಪಾಲಿಕೆ ಸರಿಯಾದ ರೀತಿಯಲ್ಲಿ ಸ್ವಚ್ಚಗೊಳಿಸದ ಕಾರಣ ಅವು ತುಂಬಿ ಹರಿದು ರಸ್ತೆಗಳ ಮೂಲಕ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿವೆ.

news_1779338263_3_917.webp

 

  • ·         ಬೀಸಿದ ಬಿರುಗಾಳಿಗೆ ಎಪಿಎಂಸಿ ಸೇರುದಂತೆ ಅನೇಕ ಕಾಲೋನಿಗಳಲ್ಲಿನ ೫೦೦ ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ. ಬಿಸಿಲುನ ತಾಪ ತಡೆಯಲು ಕಂಟೋನ್ ಮೆಂಟ್ ಬಳಿ  ಹಾಕಿದ್ದ ಹಸಿರು ಪರದೆ ವ್ಯವಸ್ಥೆ ಕುಸಿದು ಬಿದ್ದಿದೆ.
  • ·         ಇನ್ನು ಕೋಟ್ಯಾಂತರ ರೂಪಾಯಿ ವೆಚ್ಚದಿಂದ ಅಭಿವೃದ್ಧಿ ಪಡಿಸಿದ ನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ಮಳೆ ನೀರು ಹೊರಗೆ ಹರಿದು ಹೋಗುವ ಅವ್ಯವಸ್ಥೆಯಿಂದ ಸಿಂಥಟಿಕ್ ಟ್ರಾಕ್, ಸುತ್ತಮುತ್ತ ನೀರು ಮಲೆ ನಿಂತಿದೆ.
  • ·         ಅನೇಕ ಕಡೆಗಳಲ್ಲಿ  ೫೦ ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಸಹ ಉರುಳಿ ಬಿದ್ದಿವೆ. ಇದರಿಂದ ರಾತ್ರಿ ಇಡೀ ಅನೇಕ ಪ್ರದೇಶಗಳಲ್ಲಿ ಕತ್ತಲು ಆವರಿಸಿತ್ತು.
  • ·         ಅವಾಂತರಗಳನ್ನು ಸರಿಪಡಿಸುವ ಕಾರ್ಯ ನಡೆದಿದೆ. ಈಗಲೇ ಪಾಲಿಕೆ ತೆರೆದ ಚರಂಡಿ, ರಾಜಕಾಲುವೆಗಳಲ್ಲಿನ ಹೂಳನ್ನು ತೆಯುವ ಕಾರ್ಯ ಭರದಿಂದ  ಸಾಗಬೇಕಿದೆ.
Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ