ಹಾಸನ: ಮನುಷ್ಯನಿಗೆ ದೇಹದ ಕೊಳೆ ತೆಗೆಯಲು ಸ್ನಾನ ಎಷ್ಟು ಮುಖ್ಯವೋ ಮನಸ್ಸಿನಲ್ಲಿ ಮನೆ ಮಾಡಿಕೊಂಡಿರುವ ಕೊಳೆ ಕಲ್ಮಶಗಳನ್ನು ತೆಗೆಯಲು ಉತ್ತಮ ಪುಸ್ತಕಗಳನ್ನು ಓದುವುದು ಸಹಕಾರಿ ಬಹಳ ಮುಖ್ಯವಾದದ್ದು. ಅದಕ್ಕಾಗಿ ಉತ್ತಮ ಪುಸ್ತಕಗಳನ್ನು ಒಳಗೊಂಡ ಒಂದು ವಾಚನಾಲಯ ಪ್ರತಿಯೊಂದು ಮನೆಯಲ್ಲಿ ಇರುವುದು ಅಷ್ಟೇ ಮುಖ್ಯವಾದದ್ದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ತಿಳಿಸಿದರು.
ಹಾಸನ ವಿದ್ಯಾ ನಗರ ಬಡಾವಣೆಯ ಚಿತ್ರ ಕಲಾವಿದರು ನಿವೃತ್ತ ಚಿತ್ರಕಲಾ ಶಿಕ್ಷಕರು ಶ್ರೀ ಬಿ. ಎಸ್. ದೇಸಾಯಿ ಅವರ ನಿವಾಸದ ಕಲಾ ಗ್ಯಾಲರಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅನುಷ್ಟಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಮ್ಮ ದಿನನಿತ್ಯದ ಕಾರ್ಯಭಾರ ಒತ್ತಡ ಮುಗಿಸಿಕೊಂಡು ನಿದ್ರೆಗೆ ಜಾರುವ ಮುನ್ನ ಸ್ವಲ್ಪ ಹೊತ್ತು ಓದುವುದರಿಂದ ನಿದ್ದೆ ತಾನಾಗಿಯೇ ಆವರಿಸಿಕೊಳ್ಳುತ್ತದೆ. ಪುಸ್ತಕ ಓದುವಿಕೆ ಧ್ಯಾನಕ್ಕೆ ಸಮಾನವಾದದ್ದು. ದಿನದಿಂದ ದಿನಕ್ಕೆ ನಮ್ಮ ಮನಸ್ಸು ಸಹಜವಾಗಿ ಒಳ್ಳೆಯ ಮತ್ತು ಕೆಟ್ಟ ಯೋಚನೆಗಳಿಂದ ಮನಸ್ಸು ಮಲಿನವಾಗಿರುತ್ತದೆ. ಅದನ್ನು ತೊಳೆಯಬೇಕು. ಕಾರಣ ಉತ್ತಮ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಇದೇ ಕಾರಣಕ್ಕೆ ಚಿತ್ರ ಕಲಾವಿದರು ಬಿ.ಎಸ್. ದೇಸಾಯಿ ಅವರ ಮನೆಯನ್ನು ಆಯ್ಕೆ ಮಾಡಿಕೊಂಡಿದ್ದು, ಇವರ ಮನೆಯಲ್ಲೇ ಕಲಾ ಗ್ಯಾಲರಿ ವಾಚನಾಲಯ ಇರುವುದು ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭಕ್ಕೆ ವಿಶೇಷ ಮಾದರಿಯಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ವಾಚನಾಲಯ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯಲ್ಲಿ ಈ ಮೂಲಕ ಚಾಲನೆ ನೀಡಲಾಗಿದ್ದು ರಾಜ್ಯದಲ್ಲಿ ಒಂದು ಲಕ್ಷದ ಗುರಿ ಸಾಧಿಸುವ ಆಶಯ ಇದೆ ಎಂದು ಡಾ.ಮಾನಸ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿರ್ಮಲ ಚಿತ್ರಕಲಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಶ್ರೀ ಆರ್. ಸಿ. ಕಾರದಕಟ್ಟಿ ಮಾತನಾಡಿ ಹಾಸನಕ್ಕೆ ಬಿ.ಎಸ್. ದೇಸಾಯಿ ಅವರು ಚಿತ್ರಕಲಾ ಶಿಕ್ಷಕರಾಗಿ ಬಂದ ನಂತರ ತ್ರಿವೇಣಿ ಸಂಗಮದಂತೆ, ಕಲಾ ಪ್ರಾತ್ಯಕ್ಷಿಕೆ , ವಿಚಾರ ಸಂಕಿರಣ, ಚಿತ್ರಕಲಾ ಪ್ರದರ್ಶನಗಳು ಕಲಾ ಚಟುವಟಿಕೆಗಳು ಚಾಲನೆಗೊಂಡು ರಾಜ್ಯದ ಹಿರಿಯ ಚಿತ್ರಕಲಾವಿದರ, ಯುವ ಕಲಾವಿದರ ಆಗಮನ ಹೆಚ್ಚಾಗಿ ಕಲೆಯ ಬಗ್ಗೆ ಜ್ಞಾನ ವಿಸ್ತರಿಸುತ್ತಾ ಬಂತು. ರಾಜ್ಯ ಚಿತ್ರಕಲಾ ಶಿಕ್ಷಕರ ಸಮ್ಮೇಳನ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಚಿತ್ರಕಲಾ ಶಿಬಿರ ವಾರ್ಷಿಕ ಕಲಾ ಪ್ರದರ್ಶನ ಮತ್ತು ಅದರ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹು ಯಶಸ್ವಿಯಾಗಿ ನಿರ್ವಹಿಸಿದ ಯಶಸ್ಸು ದೇಸಾಯಿ ಅವರದು ಎಂದು ಶ್ಲಾಘಿಸಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಕಥೆ ಕವಿತೆ ಸಾಹಿತ್ಯ ಮತ್ತು ಚಿತ್ರಕಲೆ ಒಂದಕ್ಕೊಂದು ಪರಸ್ಪರ ಪೂರಕವಾಗಿದೆ. ಒಂದು ಕಥೆ ಕಾದಂಬರಿ ಕವಿತೆಗಳ ಸಾರವನ್ನು ಒಂದು ಚಿತ್ರಕಲೆ ಅಭಿವ್ಯಕ್ತಿಸುತ್ತದೆ. ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವು ಕನ್ನಡ ಪುಸ್ತಕ ಪ್ರಾಧಿಕಾರದ ಒಂದು ಉತ್ತಮ ಕಾರ್ಯವಾಗಿದೆ. ಓದುವ ಅಭಿರುಚಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ. ಪುಸ್ತಕ ಕೊಂಡು ಓದಿ ಸಂಗ್ರಹಿಸಿ ಅವುಗಳನ್ನು ಇತರರಿಗೂ ಓದಲು ಎರವಲು ಕೊಡುವುದು ಉತ್ತಮ ಆಶಯವಾಗಿದೆ ಎಂದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು ಹಾಗೂ ಪ್ರಾಧ್ಯಾಪಕರು ಡಾ. ಕುಶಲ್ ಬರಗೂರು ಮಾತನಾಡಿ ಜಿಲ್ಲೆಯಲ್ಲಿ ಉತ್ತಮ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಆಶಯ ಹೊಂದಿದ್ದು ಕವಿಗಳು ಸಾಹಿತಿಗಳು ಲೇಖಕರು ತಮ್ಮ ಮನೆಗಳಲ್ಲಿ ಸಂಗ್ರಹಿಸಿರುವ ಪುಸ್ತಕಗಳ ಮಾಹಿತಿ ನೀಡಿದರೆ ಅವರ ಮನೆಯಲ್ಲಿ ಅವರನ್ನು ಗೌರವಿಸಿ ಅವರ ಕೃತಿ ಕುರಿತಂತೆ ಉಪನ್ಯಾಸ ಏರ್ಪಡಿಸುವ ಆಶಯವಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಹಾಸನ ಜಿಲ್ಲಾ ಮಾಜಿ ಅಧ್ಯಕ್ಷರು ಮತ್ತು ಪತ್ರಕರ್ತರು ಉದಯರವಿ, ಕದಂಬ ಸೈನ್ಯ ಕನ್ನಡ ಸಂಘಟನೆ ಹಾಸನ ಜಿಲ್ಲಾಧ್ಯಕ್ಷರು ಮತ್ತು ನಿವೃತ್ತ ಪ್ರಾಂಶುಪಾಲರು ಗಣೇಶ್ ಅಂಕಪುರ ಭಾಗವಹಿಸಿದ್ದರು ಬಿ. ಎಸ್. ದೇಸಾಯಿ ದಂಪತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಸನ್ಮಾನಿಸಿ ಅಭಿನಂದನೆ ಪತ್ರ ನೀಡಲಾಯಿತು. ಗೊರೊರು ಶ್ರೀಕಾಂತ್ ಪ್ರಾರ್ಥಿಸಿದರು.