ಬೆಂಗಳೂರು : ವಿಶ್ವ ತೊನ್ನು ರೋಗ ದಿನಾಚರಣೆಯ ಅಂಗವಾಗಿ ರಾಜಾಜಿನಗರದ ಇಎಸ್ಐ ಮಾದರಿ ಆಸ್ಪತ್ರೆಯ ಚರ್ಮರೋಗ ವಿಭಾಗದಿಂದ ತೊನ್ನು ರೋಗದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತೊನ್ನು ರೋಗದ ಕಾರಣಗಳು, ಲಕ್ಷಣಗಳು, ಚಿಕಿತ್ಸೆ ಹಾಗೂ ರೋಗದ ಬಗ್ಗೆ ಸಮಾಜದಲ್ಲಿ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಕುರಿತು ಮಾಹಿತಿ ನೀಡಲಾಯಿತು. ತೊನ್ನು ಸಾಂಕ್ರಾಮಿಕವಲ್ಲ ಹಾಗೂ ಇದು ಯಾವುದೇ ವ್ಯಕ್ತಿಯ ಸಾಮಾನ್ಯ ಜೀವನಕ್ಕೆ ಅಡ್ಡಿಯಾಗಬಾರದು ಎಂಬ ಸಂದೇಶವನ್ನು ವೈದ್ಯರು ನೀಡಿದರು.

ಚರ್ಮರೋಗ ತಜ್ಞ ಡಾ.ಎಮ್.ಎಸ್. ಗಿರೀಶ್ ಮಾತನಾಡಿ, ತೊನ್ನು ರೋಗದಿಂದ ಬಳಲುವವರನ್ನು ಸಮಾಜವು ಸಮಾನವಾಗಿ ಕಾಣಬೇಕು. ರೋಗಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಡಾ. ರಘುನಾಥ್ ಮಾತನಾಡಿ ತೊನ್ನು ವಂಶ ಪರಂಪರೆಯಾಗಿ ಹರಡುವುದಿಲ್ಲ, ಈಗ ಇದಕ್ಕೆ ಉತ್ತಮ ಚಿಕಿತ್ಸವಿದಾನಗಳು ಲಭ್ಯವಿದೆ. ಈ ಬಗ್ಗೆ ಇರುವ ಕೀಳರಿಮೆಯನ್ನು ಸಮಾಜದಿಂದ ತೆಗೆದು ಹಾಕೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ, ತೊನ್ನು ರೋಗದಿಂದ ಬಳಲುತ್ತಿರುವವರು ಹಾಗೂ ಅವರ ಕುಟುಂಬ ಸದಸ್ಯರು, ಡಾ. ವಿಜಯ ಲಕ್ಷ್ಮಿ, ಡಾ. ಶ್ರೀಕಾಂತ್, ಡಾ. ಯಶವಂತ್, ಗೋಪಾಲಕೃಷ್ಣ ಉಪಸ್ಥಿತರಿದ್ದರು.