LIVE TV StateNationalPoliticsInternationalCrimeEntertainmentSportsEducationFINANCE & TAXATION
State News

ಕಸ ಗುಡಿಸಿದ ಕೈಗೆ ಮಂತ್ರಿ ಪದವಿ

ಡಿಕೆಶಿ ಸರ್ಕಾರಕ್ಕೆ ಬಸವಂತಪ್ಪ ಕಳಸ

ಅಸ್ಪೃಶ್ಯ ವ್ಯಕ್ತಿಗೆ ಧಾರ್ಮಿಕ ಹೊಣೆಗಾರಿಕೆ ಸಾರಥ್ಯ

ಕಾಂಗ್ರೆಸ್ಸಿನ ಸಾಮಾಜಿಕ ನ್ಯಾಯಕ್ಕೆ ಕಿರೀಟ

ಪೌರಕಾರ್ಮಿಕನ ಪುತ್ರನಿಗೆ ಒಲಿದ ಸಚಿವ ಸ್ಥಾನ

ವಿಧಾನಸೌಧ ನಮ್ಮಪ್ಪನದ್ದಲ್ಲ, ಜನರ ಆಸ್ತಿ

ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ

ಬೆಂಗಳೂರು : ಸಾಮಾನ್ಯ ವ್ಯಕ್ತಿಯನ್ನೂ ಎತ್ತರದ ಸ್ಥಾನದಲ್ಲಿ ಪ್ರತಿಷ್ಠಾಪಿಸುವಷ್ಟು ಭಾರತದ ಪ್ರಜಾಪ್ರಭುತ್ವ ಬಲವಾಗಿದ್ದು, ಇದಕ್ಕೆ ಪೌರಕಾರ್ಮಿಕನ ಮಗನೊಬ್ಬ ಮಂತ್ರಿ ಪದವಿ ಅಲಂಕರಿಸಿರುವುದು ಉತ್ತಮ ಉದಾಹರಣೆ.

ಕಸ ಗುಡಿಸುತ್ತಿದ್ದ ಕೈಗಳು ಅಧಿಕಾರ ನಡೆಸುವಷ್ಟು ಶಕ್ತಿಯುತವಾಗಿವೆ. ಇದಕ್ಕೆ ಅವಕಾಶ ಕಲ್ಪಿಸಬೇಕಷ್ಟೇ ಎಂಬುದಕ್ಕೆ ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ಅವರು ಈಗಾಗಲೇ ಬಸವಣ್ಣನ ಹೆಸರಿನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ, ಸರಳವಾಗಿ ಕಚೇರಿ ಪ್ರವೇಶಿಸಿರುವುದು ರಾಜ್ಯದ ಗಮನಸೆಳೆದಿದೆ.

ಮುಜರಾಯಿ, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಮತ್ತು ಬಂದರು ಖಾತೆ ಜವಾಬ್ದಾರಿ ಲಭಿಸಿದ್ದು, ಪೌರಕಾರ್ಮಿಕನ ಮಗನೊಬ್ಬ ಸಚಿವನಾಗಿ, ಅದರಲ್ಲೂ ಎಲ್ಲ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯ ಹೊಣೆಗಾರಿಕೆ ನೇತೃತ್ವ ವಹಿಸಿಕೊಂಡಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಸೌಂದರ್ಯ ಎನ್ನಬಹುದು.

ದಾವಣಗೆರೆ ಗಾಂಧಿನಗರದ ಪೌರಕಾರ್ಮಿಕರಾದ ಪೈಲ್ವಾನ್ ಸಂಗಪ್ಪ-ಹನುಮಕ್ಕ ದಂಪತಿಯ ಪುತ್ರ ಬಸವಂತಪ್ಪ ಅವರದ್ದು ಬಡತನದ ನಡುವೆಯೇ ಬೆಳೆದ ಬಾಲ್ಯ.

ದಾವಣಗೆರೆ ಪ್ರತಿಷ್ಠಿತ ಎ.ಆರ್.ಜಿ ಕಾಲೇಜಿನಲ್ಲಿ ಪಿಯುಸಿ ಓದಿದ್ದು, ರಜಾ ದಿನಗಳಲ್ಲಿ ಅಪ್ಪ-ಅಮ್ಮ ಜೊತೆಗೂಡಿ ಮಗನೂ ಬೀದಿಬದಿ ಕಸ ಗುಡಿಸುತ್ತಿದ್ದ. ಈ ಹುಡುಗ ಮುಂದಿನ ದಿನಗಳಲ್ಲಿ ಸಚಿವನಾಗಿ ವಿಧಾನಸೌಧದಲ್ಲಿ ಕುಳಿತುಕೊಳ್ಳುತ್ತಾನೆಂದು ಆ ದಿನಗಳಲ್ಲಿ ಯಾರೂ ಊಹಿಸಿರಲಿಲ್ಲ.

ಆದರೆ, ಸೋದರ ಮಾವ ಎಚ್.ಆಂಜನೇಯ ಅವರ ಹೋರಾಟ, ಪಕ್ಷ ಸಂಘಟನೆ ಚಾಕಚಕ್ಯತೆ, ನೊಂದ ಜನರಿಗೆ ಸ್ಪಂದಿಸುವ ಗುಣಕ್ಕೆ ಆಕರ್ಷಿತನಾಗಿ ರಾಜಕೀಯ ಪ್ರವೇಶಿಸಿದ ಬಸವಂತಪ್ಪ, ಆಂಜನೇಯ ಅವರು ಸ್ಥಾಪಿಸಿದ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯ ನಿರ್ವಹಣೆ ಜೊತೆಗೆ, ಕಾಂಗ್ರೆಸ್ ಪಕ್ಷದ ಸಂಘಟನೆಯ ಕೆಲಸದಲ್ಲಿ ಸಕ್ರಿಯರಾಗಿದ್ದರು. ಪೋಸ್ಟರ್ ಅಂಟಿಸುವುದು, ಬ್ಯಾನರ್ ಕಟ್ಟುವುದು, ಕರಪತ್ರ ಹಂಚುವುದು... ಹೀಗೆ ಕಾರ್ಯಕರ್ತನಾಗಿ ನೆಲದಿಂದಲೇ ಬೆಳೆದವರು. ಹಂತಹಂತವಾಗಿ ಜಿಪಂ ಕ್ಷೇತ್ರದ ಸದಸ್ಯ, ಮಾಯಕೊಂಡ ಕ್ಷೇತ್ರದ ಜನರ ಪ್ರೀತಿ ಗಳಿಸಿ ಶಾಸಕರಾದರು. ಈಗ ಪೌರಕಾರ್ಮಿಕನ ಮಗನೊಬ್ಬ ಕರ್ನಾಟಕದ ಮಂತ್ರಿಯಾಗಿಯಾಗಿರುವುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವರ್ಚಸ್ಸನ್ನು ರಾಷ್ಟçಮಟ್ಟದಲ್ಲಿ ಹೆಚ್ಚಿಸಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೊಂದು ಇದೆ. ಬಸವಂತಪ್ಪ ಮಾದಿಗ ಸಮುದಾಯದವರು. ಸಮಾಜದಲ್ಲಿ ಇಂದಿಗೂ ಕೆಲ ಧಾರ್ಮಿಕ ಕೇಂದ್ರಗಳಿಗೆ ಮಾದಿಗ‌ ಸಮುದಾಯದವರಿಗೆ ಪ್ರವೇಶ ಇಲ್ಲ. ಇಂತಹ ಕಾಲಘಟ್ಟದಲ್ಲಿ ಅಸ್ಪೃಶ್ಯ ಸಮುದಾಯದ ವ್ಯಕ್ತಿಗೆ ಮುಜರಾಯಿ ಖಾತೆ ನೀಡಿರುವುದು ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಬದ್ಧತೆಗೆ ದೊಡ್ಡ ಉದಾಹರಣೆಯಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಇಂತಹದ್ದೊಂದು ಪ್ರಯೋಗಕ್ಕೆ ಒಡ್ಡಿಕೊಳ್ಳುವ ಶಕ್ತಿ, ಬದ್ಧತೆ  ಇರುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವೆಂಬುದನ್ನು ಧೃಡಪಡಿಸಿ, ಇತಿಹಾಸದ ಪುಟದಲ್ಲಿ ದಾಖಲಿಸಿದೆ.

ಮುಜರಾಯಿ ಇಲಾಖೆ ಅಂದರೆ ರಾಜ್ಯದ ಎಲ್ಲ ದೇವಸ್ಥಾನಗಳು, ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿ, ನಿರ್ವಹಣೆ, ಹಣಕಾಸು ನಿರ್ವಹಣೆಯ ಜವಾಬ್ದಾರಿ ಆಗಿದೆ. ಇಂತಹ ದೊಡ್ಡ ಹೊಣೆಗಾರಿಕೆಯನ್ನು ಬಸವಂತಪ್ಪ ಅವರಿಗೆ ವಹಿಸಿರುವುದು ಸಾಮಾಜಿಕ ಪರಿವರ್ತನೆಯ ಸಂಕೇತ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ಸಚಿವರು ಅಧಿಕಾರಕ್ಕೆ ಬಂದ ತಕ್ಷಣ ವಿಧಾನಸೌಧದ ಕೊಠಡಿಗಳನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನವೀಕರಣ ಮಾಡುತ್ತಾರೆ. ಗೋಡೆ ಕೆಡುವುದು, ಹೊಸ ಮೇಜು-ಕುರ್ಚಿ, ಸೋಪಾ ಖರೀದಿ, ಕಚೇರಿಯಲ್ಲಿ ಹೋಮ-ಹವನ, ಪೂಜೆ. ಇವೆಲ್ಲ ಸಾಮಾನ್ಯ.

ಆದರೆ, ಸರಳತೆ, ಸಜ್ಜನಿಕೆಯ ಬಸವಂತಪ್ಪ ಸೋಮವಾರ ಕಚೇರಿ ಪ್ರವೇಶಿಸಿದ ದೃಶ್ಯಗಳು ಬಹಳ ಗಮನಾರ್ಹವಾಗಿದ್ದವು. ವಿಧಾನಸೌಧದ ಮೂರನೇ ಮಹಡಿಯಲ್ಲಿ ತಮಗೆ ಕೊಟ್ಟ 343 ಕೊಠಡಿಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸರಳವಾಗಿ ಪ್ರವೇಶಿಸಿದರು. ಈ ವೇಳೆ ಹಿಂದಿನ ಸಚಿವರುಗಳು ಬಳಸಿದ್ದ ಹಳೇ ಮೇಜು-ಕುರ್ಚಿ, ಪರಿಕರಗಳೇ ಎದುರುಗೊಂಡವು. ರಾಷ್ಟ್ರ, ರಾಜ್ಯದ ಅನೇಕರ ಭಾವಚಿತ್ರಗಳು ಗೋಡೆಗಳ ಮೇಲೆ ರಾರಾಜಿಸುತ್ತಿದ್ದವು. ಮುಖ್ಯವಾಗಿ ಯಾವುದೇ ಧಾರ್ಮಿಕ ಸಂಕೇತಗಳು ಕಾಣಿಸಲಿಲ್ಲ, ಪೂಜಾ-ಹೋಮಗಳ ಸದ್ದು ಇರಲಿಲ್ಲ. ಭೀಕರ ಬರಗಾಲ ರಾಜ್ಯದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿರುವುದನ್ನು ಅರಿತಿರುವುದಕ್ಕೆ ಸಾಕ್ಷಿಯೆಂಬಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಾಯಕೊಂಡ ಸೇರಿ ವಿವಿಧ ಕ್ಷೇತ್ರದಿಂದ ಆಗಮಿಸಿದ್ದವರು, ಸರಳ ಕಾರ್ಯಕ್ರಮ ಕಂಡು, ನಮ್ಮ ಬಸವಂತಣ್ಣ ಹಳ್ಳಿಯಲ್ಲಿದ್ರೂ ಅಷ್ಟೇ, ವಿಧಾನಸೌಧದಲ್ಲಿದ್ರೂ ಅಷ್ಟೇ ಸರಳತೆ ಬಿಟ್ಟುಕೊಡಲ್ಲ. ಇಂತಹ ಗುಣಕ್ಕಾಗಿಯೇ ಸಚಿವ ಸ್ಥಾನ ಒಲಿದುಬಂದಿದೆ ಎಂಬ ಮಾತುಗಳು ಕೇಳಿಬಂದವು.

news_1787021558_1_274.webp

 

ಏನ್ ಅಣ್ಣಾ ಸ್ಪಲ್ಪ ಜೋರಾಗಿ ಕಚೇರಿ ಪ್ರವೇಶಿಸಬೇಕಿತ್ತು. ಹೈಟೆಕ್ ಆಗಿ ಕಚೇರಿ ಮಾರ್ಪಾಡು ಮಾಡಬೇಕಿತ್ತೆಂಬ ಕೆಲವರ ಅಭಿಮಾನದ ಮಾತಿಗೆ ಪ್ರತಿಕ್ರಿಯಿಸುತ್ತಿದ್ದ ಬಸವಂತಪ್ಪ, ಅಣ್ಣಾ ವಿಧಾನಸೌಧ ನಮ್ಮಪ್ಪನ್ನದ್ದಲ್ಲ, ನಾನೂ ಇಲ್ಲೇ ಶಾಶ್ವತವಾಗಿ ಇರುವುದಿಲ್ಲ. ಇದು ಜನರ ನಿಮ್ಮಗಳ ಆಸ್ತಿ. ಸಿಕ್ಕ ಅವಕಾಶ ಬಳಸಿಕೊಂಡು ಸಾರ್ವಜನಿಕರ ಕೆಲಸ ಮಾಡಿದ್ರೆ ಮಾತ್ರ ನೀವು ಕೊಟ್ಟ ಅಧಿಕಾರಕ್ಕೊಂದು ಗೌರವ ಕೊಟ್ಟಂತೆ ಆಗುತ್ತದೆಂಬ ಮಾತುಗಳು ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸುತ್ತಿದ್ದವು.

ಅದರಲ್ಲೂ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಮುಖ್ಯಮಂತ್ರಿಗಳು ನಮಗೆ ಕೆಲ ಜವಾಬ್ದಾರಿಗಳನ್ನು ವಹಿಸಿದ್ದು, ಬರ ಅಧ್ಯಯನದ ಜೊತೆಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಸೂಚಿಸಿದ್ದಾರೆ. ಇಂತಹ ಸಂದರ್ಭ ಕೊಠಡಿ ನವೀಕರಣ, ಹೊಸ ಮೇಜು-ಕುರ್ಚಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸರ್ಕಾರದ ಬೊಕ್ಕಸಕ್ಕೆ ಹೊರೆ ಮಾಡುವುದು ಸರಿಯಲ್ಲ ಅಣ್ಣಾ. ಆದ್ದರಿಂದ ಸರಳವಾಗಿ ಕಚೇರಿ ಪ್ರವೇಶಿಸಿದ್ದೇನೆ. ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧದ ಪ್ರವೇಶ ದ್ವಾರದಲ್ಲಿ ಸರ್ಕಾರದ ಕೆಲಸ ದೇವರ  ಎಂಬ ಬರಹ ಸದಾ ನನ್ನೆದೆಗೆ ಪ್ರವೇಶಿಸಿ ನನ್ನ ಜವಾಬ್ದಾರಿಯನ್ನು ನೆನಪಿಸುತ್ತದೆಂಬ ಮಾತುಗಳು ಅವರ ಸಾಮಾಜಿಕ ಕಾಳಜಿಗೆ ಸಾಕ್ಷಿಕರಿಸುವಂತಿದ್ದವು.

ಧರ್ಮ, ದೇವರು, ಪೂಜೆ ಎಲ್ಲವೂ ದೇವಸ್ಥಾನ ಮತ್ತು ನಮ್ಮ ಮನೆಯೊಳಗೆ ಇರಬೇಕು. ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳು ನಾಡಿನ ಅಭಿವೃದ್ಧಿಗೆ ಶ್ರಮಿಸುವ ಚಿಂತನಾ ಕೇಂದ್ರಗಳು ಆಗಿರಬೇಕು. ಈ ನಿಟ್ಟಿನಲ್ಲಿ ಸಾಗುತ್ತಿದ್ದೇನೆ. ಈ ಮಧ್ಯೆ ನಾನು ಎಲ್ಲ ಧರ್ಮದವರ ನಂಬಿಕೆ ಗೌರವಿಸುವೆ. ನನಗೆ ವಹಿಸಿರುವ ಮುಜರಾಯಿ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸುವೆ. ಯಾವ ಜಾತಿ ಧರ್ಮದವರ ಭಾವನೆಗಳಿಗೆ ಸಣ್ಣ ಧಕ್ಕೆಯೂ ಆಗದಂತೆ ದೇವರ ಕೆಲಸ ಮಾಡುವೆ ಎನ್ನುವ ಅವರ ಮಾತುಗಳು ಹೊಸ ನಾಂದಿಗೆ ಮುನ್ಸೂಚನೆಯಂತೆ ಗೋಚರಿಸಿದವು.

ಇಡೀ ರಾಜಕೀಯ ಕ್ಷೇತ್ರಕ್ಕೆ ಬಸವಂತಪ್ಪ ಅವರ ನಡೆ ಮಾದರಿಯಂತಿತ್ತು. ಅಧಿಕಾರ ಸಿಕ್ಕ  ಕೂಡಲೇ ವೈಭವ, ಆಡಂಬರದ ಕಡೆಗೆ ಓಡುವ ಪ್ರವೃತ್ತಿಯ ಮಧ್ಯೆ, ಸರಳತೆಯನ್ನು ಆಯ್ಕೆ ಮಾಡಿಕೊಂಡ ಬಸವಂತಪ್ಪ ನಡೆ ವಿಶೇಷವಾಗಿತ್ತು.

ಮುಜರಾಯಿ ಜೊತೆಗೆ ಬಸವಂತಪ್ಪನವರಿಗೆ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ, ಬಂದರು ಖಾತೆ ಸಿಕ್ಕಿದೆ. ಈ ಎರಡೂ ಇಲಾಖೆಗಳಲ್ಲಿ ಅವರು ಕ್ರಾಂತಿ ಮಾಡುವ ಛಲ ಹೊಂದಿದಂತೆ ಅವರ ನಡೆ, ಮಾತುಗಳಲ್ಲಿ ಕಂಡುಬಂದಿತು.

ಕರಾವಳಿ ಕರ್ನಾಟಕದ ಮೀನುಗಾರರ ಸಮಸ್ಯೆ, ಮೀನು ಮಾರುಕಟ್ಟೆ ಆಧುನೀಕರಣ, ಮೀನುಗಾರರಿಗೆ ಸಬ್ಸಿಡಿ, ಆಳ ಸಮುದ್ರ ಮೀನುಗಾರಿಕೆಗೆ ಉತ್ತೇಜನ... ಇವೆಲ್ಲ ಅವರ ಮುಂದಿರುವ ಸವಾಲು. ಅದೇ ರೀತಿ ಒಳನಾಡು ಜಲಮಾರ್ಗ, ಸಣ್ಣ ಬಂದರುಗಳ ಅಭಿವೃದ್ಧಿ ಮೂಲಕ ಸಾರಿಗೆ ವೆಚ್ಚ ಕಡಿಮೆ ಮಾಡುವ ಯೋಜನೆಗೆ ಮುನ್ನುಡಿ ಬರೆಯಬೇಕಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ದಾವಣಗೆರೆಯಂತಹ ಒಳನಾಡು ಜಿಲ್ಲೆಯ ವ್ಯಕ್ತಿಗೆ, ಕರಾವಳಿ ಮತ್ತು ಬಂದರು ಖಾತೆ ನೀಡಿರುವುದೇ ಅಚ್ಚರಿ. ಮಾಯಕೊಂಡ ಕ್ಷೇತ್ರದಲ್ಲಿ ಮನೆ ಮಾತಾಗಿರುವ ಬಸವಂತಪ್ಪ ಈ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಸರ್ಕಾರಕ್ಕೆ ಉತ್ತಮ ಹೆಸರು ತಂದುಕೊಡುತ್ತಾರೆಂಬುದು ವರಿಷ್ಠರು ಮತ್ತು ಮುಖ್ಯಮಂತ್ರಿ ಅವರ ಲೆಕ್ಕಾಚಾರ ಎನ್ನಲಾಗುತ್ತಿದೆ.

 

 

ಸಾಮಾಜಿಕ ನ್ಯಾಯದ ಹೊಸ ಅಧ್ಯಾಯ

 

ಬಸವಂತಪ್ಪನವರ ಏಳಿಗೆ ಕೇವಲ ಒಬ್ಬ ವ್ಯಕ್ತಿಯ ಬೆಳವಣಿಗೆ ಅಲ್ಲ. ಇದು ಸಂವಿಧಾನ ನೀಡಿದ ಅವಕಾಶಗಳ ಫಲ. ದಾರ್ಶನಿಕರ ಕನಸಿನಂತೆ ಸಮಾಜದ ಕಡೆಗೆ ವ್ಯಕ್ತಿ ಅಧಿಕಾರದ ಗದ್ದುಗೆ ಏರಬಹುದೆಂಬುದಕ್ಕೆ ಸ್ಪಷ್ಟ ಉದಾರಹಣೆ. ಪೌರಕಾರ್ಮಿಕನ ಮಗ ಸಚಿವನಾಗಿರುವುದು ವಿಶೇಷ. ಅಸ್ಪೃಶ್ಯ ಎಂದು ಮೂಲೆಗುಂಪು ಮಾಡಲಾದ ಸಮುದಾಯದ ವ್ಯಕ್ತಿ ಎಲ್ಲ ಧರ್ಮಗಳ ದೇವಸ್ಥಾನಗಳ ಅಭಿವೃದ್ಧಿಯ ಉಸ್ತುವಾರಿ ಹೊತ್ತಿರುವುದು ಗಮನಾರ್ಹ. ಅದರಲ್ಲೂ ಸರಳ ಜೀವನದ ಮೂಲಕ ಅಧಿಕಾರದ ಅರ್ಥವನ್ನು ಮತ್ತೆ ವ್ಯಾಖ್ಯಾನಿಸಿದವರು ಬಸವಂತಪ್ಪ. ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಹೆಸರಲ್ಲಿ ಹಿಂದುಳಿದ, ದಲಿತ ಸಮುದಾಯದ ನಾಯಕರಿಗೆ ಪ್ರಾತಿನಿಧ್ಯ ನೀಡುತ್ತಲೇ ಇದೆ. ಬಸವಂತಪ್ಪನವರ ಸಚಿವ ಸ್ಥಾನವೂ ಅದರ ಮುಂದುವರಿದ ಬಹುದೊಡ್ಡ ಭಾಗ.

 

ಅಧಿಕಾರ ಎಂದರೆ ಸೇವೆ

 

ಅಧಿಕಾರವೆಂದರೇ ಸೇವೆ ಮಾಡಲು ದೊರೆತ ಅವಕಾಶವೆಂಬುದನ್ನು ಬಸವಂತಪ್ಪ ನೆನಪಿಸುತ್ತಿದ್ದಾರೆ. ಬೀದಿ ಗುಡಿಸಿದ ಕೈಗಳು ಇವತ್ತು ರಾಜ್ಯದ ಧಾರ್ಮಿಕ ಮತ್ತು ಆರ್ಥಿಕ ನೀತಿಗಳನ್ನು ನಿರ್ಧರಿಸುವ ಸ್ಥಾನದಲ್ಲಿವೆ. ಇದು ನಿಜಕ್ಕೂ ಪ್ರಜಾಪ್ರಭುತ್ವದ ಗೆಲುವು. ಅದರಲ್ಲೂ ಸಾಲು ಸಾಲು ಸವಾಲುಗಳನ್ನು ಮಡಿಲಲ್ಲಿಟ್ಟುಕೊಂಡಿರುವ ವಿಜಯನಗರ ಜಿಲ್ಲೆಯ ಉಸ್ತುವಾರಿ ದೊರೆತಿರುವುದು ಅಚ್ಚರಿ. ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿಸುವ ಸವಾಲು ಎದುರಿಗಿದೆ.

 

ಜನರ ನಿರೀಕ್ಷೆ

 

ಮಾಯಕೊಂಡ ಕ್ಷೇತ್ರದ ಜನರು ಮಾತ್ರವಲ್ಲ, ಇಡೀ ರಾಜ್ಯದ ಎಲ್ಲ ವರ್ಗದ ಜನರು ಬಸವಂತಪ್ಪನವರತ್ತ ಆಶಾಭಾವದಿಂದ ನೋಡುತ್ತಿದ್ದಾರೆ. ಮುಜರಾಯಿ ಇಲಾಖೆಯನ್ನು ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರಿಗೂ ಸೇರಿದ್ದೆಂಬ ಸಂದೇಶ ನೀಡಬೇಕಿದೆ.  ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಹಣ ಸರಿಯಾಗಿ ಬಳಕೆಯಾಗಬೇಕು. ಮೀನುಗಾರರಿಗೆ ನ್ಯಾಯ ದೊರೆತು ಅವರ ಬದುಕು ಸುಧಾರಿಸಬೇಕಿದೆ.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆಬಳ್ಳಾರಿಯಲ್ಲಿ ದಿವಂಗತ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಪರಿಷತ್ ಸಭೆ ಹಾಗೂ ನಶಾಮುಕ್ತ ಭಾರತ ಅಭಿಯಾನಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಸಿಎಂ ಡಿ ಕೆ ಶಿವಕುಮಾರ್ ಒತ್ತಾಯಯಾರಿಗೆ ಒಲೆಯುತ್ತೆ ಬಿಜೆಪಿ ಟಿಕೆಟ್ ರಾಜೀವ್ ಗಾಂಧಿ ಹಾದಿಯಲ್ಲಿ ರಾಹುಲ್ ಗಾಂಧಿ