ಬೆಂಗಳೂರು: ಭಾರತದಲ್ಲಿ ಕಾನ್ಟ್ರಾಕ್ಟ್ ಬ್ರಿಡ್ಜ್ ಆಟದ ಶ್ರೇಷ್ಠ ಆಡಳಿತ ಸಂಸ್ಥೆಯಾಗಿರುವ ಹಾಗೂ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಮಾನ್ಯತೆ ಪಡೆದಿರುವ ಬ್ರಿಡ್ಜ್ ಫೆಡರೇಶನ್ ಆಫ್ ಇಂಡಿಯಾ, ಪ್ರತಿಷ್ಠಿತ 5ನೇ ಬೋನಸ್ ಏಷ್ಯಾ ಕಪ್ ಬ್ರಿಡ್ಜ್ ಚಾಂಪಿಯನ್ಶಿಪ್ ಅನ್ನು ಜೂನ್ 21ರಿಂದ 27ರವರೆಗೆ ಗೋವಾದ ತಾಜ್ ಸಿಡಾಡೆ ಡಿ ಗೋವಾ ಹೊರೈಜನ್ನಲ್ಲಿ ಆಯೋಜಿಸಿದೆ.
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಏಷ್ಯಾ ಕಪ್, ಏಷ್ಯಾ ಮತ್ತು ಓಷಿಯಾನಿಯಾದ ಪ್ರಮುಖ ರಾಷ್ಟ್ರಗಳ ಭಾಗವಹಿಸುವಿಕೆಯಿಂದ ಏಷ್ಯಾ ಬ್ರಿಡ್ಜ್ ಸಮುದಾಯದ ಆಶ್ರಯದಲ್ಲಿ ನಡೆಯುವ ಅತ್ಯಂತ ಪ್ರತಿಷ್ಠಿತ ಖಂಡ ಮಟ್ಟದ ಬ್ರಿಡ್ಜ್ ಚಾಂಪಿಯನ್ಶಿಪ್ಗಳಲ್ಲಿ ಒಂದಾಗಿದೆ.

ಈ ವರ್ಷ ಭಾರತ, ಚೀನಾ, ಜಪಾನ್, ಚೈನೀಸ್ ತೈಪೆ, ಹಾಂಗ್ ಕಾಂಗ್ ಚೈನಾ, ಸಿಂಗಾಪುರ್, ಥೈಲ್ಯಾಂಡ್, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡನ್, ಕುವೈತ್ ಮತ್ತು ಸೌದಿ ಅರೇಬಿಯಾ ಸೇರಿ 20ಕ್ಕೂ ಹೆಚ್ಚು ದೇಶಗಳಿಂದ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಬ್ರಿಡ್ಜ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಪ್ರಸಾದ್ ಕೆನಿ ಮಾತನಾಡಿ, ಪ್ರತಿಷ್ಠಿತ ಬೋನಸ್ ಏಷ್ಯಾ ಕಪ್ ಬ್ರಿಡ್ಜ್ ಚಾಂಪಿಯನ್ಶಿಪ್ ಆಯೋಜಿಸಲು ಭಾರತಕ್ಕೆ ಇದು ಎರಡನೇ ಬಾರಿ ಸಿಕ್ಕಿರುವ ಗೌರವ. ಇದು ಜಾಗತಿಕ ಮೈಂಡ್ ಸ್ಪೋರ್ಟ್ ಹಾಗೂ ಬೌದ್ಧಿಕ ಕ್ರೀಡಾಕೂಟಗಳ ಪ್ರಮುಖ ಗಮ್ಯಸ್ಥಾನವಾಗಿ ಭಾರತದ ಬೆಳೆಯುತ್ತಿರುವ ಪ್ರತಿಷ್ಠೆಯನ್ನು ತೋರಿಸುತ್ತದೆ ಎಂದು ಹೇಳಿದರು.
ನಂತರ ವಾರಪೂರ್ತಿ ಅರ್ಹತಾ ಸುತ್ತುಗಳು, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಪ್ರತಿ ವಿಭಾಗಕ್ಕೆ ಕೇವಲ 16 ತಂಡಗಳಿಗೆ ಅವಕಾಶ ಇರುತ್ತದೆ. ಈ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿ 2026ರ ಜೂನ್ 27ರಂದು ಎಲ್ಲಾ ನೋಂದಾಯಿತ ಆಟಗಾರರಿಗಾಗಿ ವಿಶೇಷ “ಫ್ರೆಂಡ್ಶಿಪ್ ಪೇರ್ಸ್ ಈವೆಂಟ್” ಆಯೋಜಿಸಲಾಗಿದೆ.

ಭಾರತ ಈ ಚಾಂಪಿಯನ್ಶಿಪ್ನಲ್ಲಿ ಇದುವರೆಗೆ 8 ಚಿನ್ನ ಸೇರಿದಂತೆ ಒಟ್ಟು 20 ಪದಕಗಳನ್ನು ಗೆದ್ದು ಹೆಮ್ಮೆಯ ಪರಂಪರೆಯನ್ನು ಹೊಂದಿದೆ. ಸುಭಾಷ್ ಗುಪ್ತಾ–ಸಂದೀಪ್ ಠಾಕ್ರಾಲ್ ಹಾಗೂ ರಾಜೇಶ್ವರ್ ತಿವಾರಿ–ಸುಮಿತ್ ಮುಖರ್ಜಿ ಮೊದಲಾದ ಭಾರತದ ಪ್ರಮುಖ ಜೋಡಿಗಳು ಈ ಬಾರಿ ಭಾರತದ ಪದಕ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಲಿವೆ.
“ಈ ವರ್ಷದ ಚಾಂಪಿಯನ್ಶಿಪ್ ಏಷ್ಯಾ-ಪೆಸಿಫಿಕ್ ಪ್ರದೇಶದ ಅತ್ಯಂತ ಸಾಧನೆಗೈದ ಬ್ರಿಡ್ಜ್ ಆಟಗಾರರು, ರಾಷ್ಟ್ರೀಯ ಚಾಂಪಿಯನ್ಗಳು ಮತ್ತು ಅಂತರರಾಷ್ಟ್ರೀಯ ಪದಕ ವಿಜೇತರನ್ನು ಒಂದೇ ವೇದಿಕೆಗೆ ತರುತ್ತದೆ,” ಎಂದು ಕೆನಿ ಹೇಳಿದರು.