ಬಳ್ಳಾರಿ: ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನೂತನ ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಪಟ್ಟಿಯು ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ ಹಾಗೂ ಜಿಲ್ಲೆಯ ಎಲ್ಲಾ ನಿಗದಿತ ಸ್ಥಳಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದರು.
‘ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ’ ಅಂಗವಾಗಿ ಕರಡು ಮತದಾರರ ಪಟ್ಟಿ ಪ್ರಕಟ ಕುರಿತು ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕರಡು ಮತದಾರರ ಪಟ್ಟಿಗೆ ಸಂಬAಧಿಸಿದAತೆ ಸಾರ್ವಜನಿಕರು ಹಾಗೂ ಯುವ ಮತದಾರರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ವೇಳಾಪಟ್ಟಿ ವಿವರ:
ಕರಡು ಮತದಾರರ ಪಟ್ಟಿ ಪ್ರಕಟಣೆ: 24.08.2026
ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನಿಗದಿತ ಅವಧಿ: 24.08.2026 ರಿಂದ 23.09.2026 ರವರೆಗೆ
ನೋಟೀಸ್ ಹಂತ ಹಾಗೂ ಆಕ್ಷೇಪಣೆಗಳ ವಿಲೇವಾರಿ: 24.08.2026 ರಿಂದ 22.10.2026 ರವರೆಗೆ
ಅಂತಿಮ ಮತದಾರರ ಪಟ್ಟಿ ಪ್ರಕಟಣೆ: 27.10.2026
ಜಿಲ್ಲೆಯ ಕರಡು ಮತದಾರರ ಅಂಕಿ-ಅಂಶ (ಕ್ಷೇತ್ರವಾರು):
ಮತಗಟ್ಟೆಗಳ ಪುನರ್ವಿಂಗಡಣೆ ನಂತರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 1,260 ಮತಗಟ್ಟೆಗಳಿದ್ದು, 10,06,307 ಮತದಾರರಿದ್ದಾರೆ. ಒಟ್ಟು ಮತದಾರರಲ್ಲಿ 4,94,371 ಪುರುಷರು, 5,11,740 ಮಹಿಳೆಯರು ಹಾಗೂ 196 ತೃತೀಯ ಲಿಂಗಿ ಮತದಾರರಿದ್ದಾರೆ.
ವಿವಿಧ ವರ್ಗದ ಮತದಾರರು:
ಯುವ ಮತದಾರರು (18-19 ವರ್ಷ): 17,767
ಹಿರಿಯ ನಾಗರಿಕರು (80 ವರ್ಷಕ್ಕೂ ಮೇಲ್ಪಟ್ಟ): 12,607
ವಿಶೇಷ ಚೇತನರು: 13,288
ಸೇವಾ ಮತದಾರರು (ಸರ್ವಿಸ್ ವೋಟರ್ಸ್): 183
ಹೊಸದಾಗಿ ಸಲ್ಲಿಕೆಯಾದ ಫಾರ್ಮ್-6 ಅರ್ಜಿಗಳು: 7,841
ಕ್ಷೇತ್ರವಾರು ಮತದಾರರ ವಿವರ:
ಕಂಪ್ಲಿ (91): ಮತಗಟ್ಟೆಗಳು-253, ಪುರುಷರು-1,00,706, ಮಹಿಳೆಯರು-1,04,047, ತೃತೀಯ ಲಿಂಗಿಗಳು-39, ಒಟ್ಟು ಮತದಾರರು-2,04,792.
ಸಿರುಗುಪ್ಪ (92): ಮತಗಟ್ಟೆಗಳು-244, ಪುರುಷರು-96,963, ಮಹಿಳೆಯರು-99,153, ತೃತೀಯ ಲಿಂಗಿಗಳು-57, ಒಟ್ಟು ಮತದಾರರು-1,96,173.
ಬಳ್ಳಾರಿ ಗ್ರಾಮೀಣ (93): ಮತಗಟ್ಟೆಗಳು-238, ಪುರುಷರು-98,214, ಮಹಿಳೆಯರು-1,01,713, ತೃತೀಯ ಲಿಂಗಿಗಳು-45, ಒಟ್ಟು ಮತದಾರರು-1,99,972.
ಬಳ್ಳಾರಿ ನಗರ (94): ಮತಗಟ್ಟೆಗಳು-261, ಪುರುಷರು-97,298, ಮಹಿಳೆಯರು-1,05,308, ತೃತೀಯ ಲಿಂಗಿಗಳು-35, ಒಟ್ಟು ಮತದಾರರು-2,02,641.
ಸಂಡೂರು (95): ಮತಗಟ್ಟೆಗಳು-264, ಪುರುಷರು-1,01,190, ಮಹಿಳೆಯರು-1,01,519, ತೃತೀಯ ಲಿಂಗಿಗಳು-20, ಒಟ್ಟು ಮತದಾರರು-2,02,729.

ಸ್ಥಳಾಂತರ ಮತ್ತು ನಿಧನರಾದವರ ಮಾಹಿತಿ:
ಮನೆ ಮನೆ ಭೇಟಿ ಪರಿಶೀಲನೆ ವೇಳೆ ಕಂಡುಬರದ ಮತದಾರರು-49,700 ಜನ, ಶಾಶ್ವತ ಸ್ಥಳಾಂತರಗೊAಡವರು-1,02,151 ಜನ, ದ್ವಿಮುಖ/ಎರಡು ಕಡೆ ಹೆಸರು ಹೊಂದಿರುವವರು-21,472 ಜನ, ಮೃತಪಟ್ಟ ಮತದಾರರು-ಜಿಲ್ಲೆಯಾದ್ಯಂತ 41,144 ಮೃತ ಮತದಾರರನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲಾಗಿದೆ ಹಾಗೂ ಇತರೆ-8,792 ಮತದಾರರಿದ್ದಾರೆ.
ಅರ್ಜಿ ಸಲ್ಲಿಕೆ ಹಾಗೂ ತಿದ್ದುಪಡಿಗೆ ಮಾಹಿತಿ:
ಹೊಸ ಮತದಾರರ ನೋಂದಣಿ (ನಮೂನೆ-6): ದಿನಾಂಕ 01.10.2026 ಕ್ಕೆ 18 ವರ್ಷ ಪೂರ್ಣಗೊಳ್ಳುವ ಅರ್ಹ ಯುವಕ-ಯುವತಿಯರು ನಮೂನೆ-6 ಅರ್ಜಿಯನ್ನು ಘೋಷಣಾ ನಮೂನೆ (ಅನುಬಂಧ-ಡಿ)ಯೊAದಿಗೆ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.
ತಿದ್ದುಪಡಿ ಮತ್ತು ಸ್ಥಳಾಂತರ (ನಮೂನೆ-8): ಹೆಸರು, ವಿಳಾಸ, ಭಾವಚಿತ್ರ ಮುಂತಾದ ವಿವರಗಳ ತಿದ್ದುಪಡಿಗಾಗಿ ನಮೂನೆ-8 ಅರ್ಜಿಯನ್ನು (ಅನುಬಂಧ-ಡಿಯೊAದಿಗೆ) ಸಲ್ಲಿಸಬೇಕು.
ಹೆಸರು ತೆಗೆದುಹಾಕಲು (ನಮೂನೆ-7): ಮರಣ ಹೊಂದಿದ ಅಥವಾ ಕಾಯಂ ಸ್ಥಳಾಂತರಗೊAಡ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ನಮೂನೆ-7 ರಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅವರು ವಿವರಿಸಿದರು.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಪಟ್ಟಿ ವೀಕ್ಷಣೆ:
ಅರ್ಹ ನಾಗರಿಕರು ಆನ್‌ಲೈನ್ ಮೂಲಕ ECINET App ಅಥವಾ ಭಾರತ ಚುನಾವಣಾ ಆಯೋಗದ ಪೋರ್ಟಲ್ voters.eci.gov.in ಮೂಲಕ ಅರ್ಜಿ ಸಲ್ಲಿಸಬಹುದು. ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವವರು ಸಂಬAಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳು ಅಥವಾ ತಾಲೂಕು ಕಚೇರಿಗಳನ್ನು ಸಂಪರ್ಕಿಸಬಹುದು ಎಂದರು.
ಅದೇರೀತಿಯಾಗಿ ಕರಡು ಮತದಾರರ ಪಟ್ಟಿಯನ್ನು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಜಾಲತಾಣ (ceo.karnataka.gov.in) ಹಾಗೂ ಬಳ್ಳಾರಿ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್ (ballari.nic.in) ನಲ್ಲಿ ಸಾರ್ವಜನಿಕರ ಪರಿಶೀಲನೆಗಾಗಿ ಪ್ರಕಟಿಸಲಾಗಿದೆ ಎಂದರು.
ಆಕ್ಷೇಪಣೆ ಸಲ್ಲಿಕೆಗೆ ಅವಧಿ:
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಥವಾ ತಿದ್ದುಪಡಿ/ಆಕ್ಷೇಪಣೆಗಳಿದ್ದರೆ ಸಾರ್ವಜನಿಕರು ಆಗಸ್ಟ್ 24 ರಿಂದ ಸೆಪ್ಟೆಂಬರ್ 23 ರವರೆಗೆ (ಒಂದು ತಿಂಗಳ ಕಾಲ) ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬಹುದು. ಸಲ್ಲಿಸಲಾದ ಎಲ್ಲಾ ಆಕ್ಷೇಪಣೆ ಹಾಗೂ ಅರ್ಜಿಗಳನ್ನು ಅಧಿಕಾರಿಗಳು ಅಕ್ಟೋಬರ್ 22 ರೊಳಗೆ ಕಾನೂನುಬದ್ಧವಾಗಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಲಿದ್ದಾರೆ. ಸಾರ್ವಜನಿಕರು ಹಾಗೂ ಮತದಾರರು ತಮ್ಮ ಹೆಸರನ್ನು ಪರಿಶೀಲಿಸಿಕೊಂಡು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಕೋರಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್., ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ್, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ರೇಣುಕಾ ಸೇರಿದಂತೆ ಇತರರು ಇದ್ದರು.