ತುಮಕೂರು: ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ , ಒಳ್ಳೆಯ ವ್ಯಾಯಾಮ ಯೋಗ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಶಾಲೆಯ ಪ್ರಾಂಶುಪಾಲರಾದ ಜ್ಯೋತಿ ಹೇಳಿದರು.
ಗೂಳೂರು ಹೋಬಳಿಯ ಕಳ್ಳಿ ಪಾಳ್ಯ ದಲ್ಲಿರುವ ಎನ್.ಜಿ. ಪ್ಲಬಿಕ್ ಶಾಲೆಯಲ್ಲಿ ನವಧಾನ್ಯಗಳಲ್ಲಿ ಒಂದಾದ ರಾಗಿಯ ಮಹತ್ವ ತಿಳಿಸುವ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಗಿಯು ಅತ್ಯಧಿಕ ಕ್ಯಾಲ್ಸಿಯಂ ಹೊಂದಿರುವ ಧಾನ್ಯವಾಗಿದೆ. ಇದು ಮಕ್ಕಳ ಮೂಳೆ ಮತ್ತು ಹಲ್ಲುಗಳ ಬೆಳವಣಿಗೆಗೆ ಹಾಗೂ ವಯಸ್ಕರಲ್ಲಿ ಮೂಳೆ ದೃಢತೆಗೆ ಸಹಕಾರಿ. ರಾಗಿಯಲ್ಲಿ ಗೋಧಿ ಮತ್ತು ಅಕ್ಕಿಗಿಂತ ಹೆಚ್ಚು ಕಬ್ಬಿಣಾಂಶವಿದ್ದು, ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ರಕ್ತಹೀನತೆ ದೂರ ಮಾಡುತ್ತದೆ. ಆದ್ದರಿಂದ ಬೆಳೆಯುವ ಮಕ್ಕಳಿಗೆ ರಾಗಿ ಆಹಾರ ನೀಡುವುದು ಅತ್ಯವಿದೆ ಎಂದರು.
ಚೈನೀಸ್, ಜಂಕ್ಫುಡ್ಗಳಿಗೆ ಮಕ್ಕಳು ಅಡಿಕ್ಟ್ ಆಗಿದ್ದು, ಅವರನ್ನು ಚೈನೀಸ್ ಫುಡ್ ತಿನ್ನುವ ಚಟದಿಂದ ಬಿಡಿಸಲು ರಾಗಿ ಸೇರಿ ಸಿರಿಧಾನ್ಯಗಳ ಆಹಾರ ತಿನ್ನುವ ಅಭ್ಯಾಸ ಮಾಡಿಸುವುಸುವುದು ಅಗತ್ಯವಿದೆ ಎಂದರು.

ರಾಗಿ ಬೆಳೆ ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿದೆ. ಕರ್ನಾಟಕ ಬಿಟ್ಟರೆ, ತಮಿಳುನಾಡು, ಮತ್ತು ಮಹಾರಾಷ್ಟ್ರ ರಾಜ್ಯಗಳು ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿವೆ. ರಾಗಿ ಬೇಸಾಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಪ್ರತಿವರ್ಷ ಸುಮಾರು 22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆದು ೨೬ ರಿಂದ 28 ಲಕ್ಷ ಟನ್ ರಾಗಿಯನ್ನು ದೇಶದಲ್ಲಿ ಉತ್ಪಾದಿಸಲಾಗುತ್ತಿದೆ. ಉತ್ಪಾದನೆಯ ಮುಕ್ಕಾಲುಪಾಲು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮತ್ತು ಮಹಾರಾಷ್ಟ್ರ ರಾಜ್ಯಗಳು ಉತ್ಪಾದಿಸುತ್ತಿವೆ ಎಂದರು.
ಈ ವೇಳೆ ಪ್ರಾಂಶುಪಾಲರಾದ ಜ್ಯೋತಿ, ಶಿಕ್ಷಕರಾದ ಕಸ್ತೂರಿ, ಮಾನಸ, ಸೌಮ್ಯ ಜಿ, ನಂದಿನಿ, ಸೌಮ್ಯ ಬಿ.ಆರ್ , ಅನುಷಾ, ರಂಜಿತ, ಭಾಗ್ಯಶ್ರೀ, ಉಷಾ ಸೇರಿ ಇತರರಿದ್ದರು.
ಗಮನ ಸೆಳೆದ ನಾನಾ ರಾಗಿ ತಿನಿಸುಗಳು
ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ರಾಗಿಯಿಂದ ಮಾಡಿದ ವಿವಿಧ ತಿನಿಸುಗಳನ್ನು ತಂದಿದ್ದರು. ರಾಗಿ ಮುದ್ದೆ, ರಾಗಿ ದೋಸೆ ,ರಾಗಿ ಇಡ್ಲಿ, ರಾಗಿ ಶಾವಿಗೆ, ರಾಗಿ ಬಿಸ್ಕೆಟ್ ರಾಗಿ ಲಾಡನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ರಾಗಿ ತಿಂದವರಿಗೆ ರೋಗವಿಲ್ಲ ಎಂಬ ಸಂದೇಶ ಸಾರಿದರು.