ಮೊಳಕಾಲ್ಮೂರು: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಶುದ್ಧತೆ ಕಾಪಾಡಲು ಎಸ್‌ಐಆರ್ (Special Intensive Revision) ಅತ್ಯಂತ ಅಗತ್ಯವಾಗಿದೆ ಎಂದು ಬಿಜೆಪಿ ಮುಖಂಡ ಪ್ರಭಾಕರ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಅವರು, ದೇಶದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಚುನಾವಣೆಗಳು ನಡೆಯುವುದರಿಂದ ಮತದಾರರ ಪಟ್ಟಿಯಲ್ಲಿನ ದ್ವಂದ್ವ ನೋಂದಣಿಗಳನ್ನು ಪತ್ತೆಹಚ್ಚುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಇದಕ್ಕೆ ಉದಾಹರಣೆ ನೀಡಿದ ಅವರು, ಒಬ್ಬ ವ್ಯಕ್ತಿಯ ಹೆಸರು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಲ್ಲಿದೆ, ಬಿಹಾರದ ಮತದಾರರ ಪಟ್ಟಿಯಲ್ಲೂ ಇದೆ, ದೆಹಲಿಯ ಮತದಾರರ ಪಟ್ಟಿಯಲ್ಲೂ ಇದೆ ಎಂದುಕೊಳ್ಳಿ. ದೆಹಲಿ ಚುನಾವಣೆ ಬಂದಾಗ ದೆಹಲಿಯಲ್ಲಿ, ಬಿಹಾರ ಚುನಾವಣೆ ಬಂದಾಗ ಬಿಹಾರದಲ್ಲಿ, ಪಶ್ಚಿಮ ಬಂಗಾಳ ಚುನಾವಣೆ ಬಂದಾಗ ಅಲ್ಲಿಯೂ ಮತದಾನ ಮಾಡುವಂತಹ ದ್ವಂದ್ವ ನೋಂದಣಿಗಳನ್ನು ಪರಿಶೀಲಿಸಬೇಕಲ್ಲವೇ ಎಂದು ಪ್ರಶ್ನಿಸಿದರು.
ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ.
ತುಮಕೂರಿನ ಮೂಲದ ವ್ಯಕ್ತಿಯೊಬ್ಬ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ ಎಂದುಕೊಳ್ಳಿ. ಆತನ ಹೆಸರು ತುಮಕೂರಿನ ಮತದಾರರ ಪಟ್ಟಿಯಲ್ಲಿಯೂ, ಬೆಂಗಳೂರಿನ ಮತದಾರರ ಪಟ್ಟಿಯಲ್ಲಿಯೂ ದಾಖಲಾಗಿದ್ದರೆ, ತುಮಕೂರಿನಲ್ಲಿ ಸ್ಥಳೀಯ ಚುನಾವಣೆ ಬಂದಾಗ ಅಲ್ಲಿಗೆ ತೆರಳಿ ಮತದಾನ ಮಾಡುವುದು, ಮೊಳಕಾಲ್ಮುರಿನ ವ್ಯಕ್ತಿ ಗ್ರಾಮ ಪಂಚಾಯತಿ ಚುನಾವಣೆಗೆ ತನ್ನ ಗ್ರಾಮದಲ್ಲಿ ಮತದಾನ ಮಾಡುವುದು. ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆ ಬಂದಾಗ ಇಲ್ಲಿಯೂ ಮತದಾನ ಮಾಡುವಂತಹ ದ್ವಂದ್ವ ನೋಂದಣಿಯ ಸಾಧ್ಯತೆಯನ್ನು ಪರಿಶೀಲಿಸಬೇಕಲ್ಲವೇ?
ಒಬ್ಬ ವ್ಯಕ್ತಿಗೆ ಒಂದೇ ಮತದಾನದ ಹಕ್ಕು ಇರಬೇಕು. ಒಂದೇ ವ್ಯಕ್ತಿಯ ಹೆಸರು ಬೇರೆ ಬೇರೆ ಕ್ಷೇತ್ರಗಳಲ್ಲಿ ದಾಖಲಾಗಿರುವುದನ್ನು ಪತ್ತೆಹಚ್ಚಿ ಕಾನೂನುಬದ್ಧವಾಗಿ ಸರಿಪಡಿಸಬೇಕು. ಇದು ಪ್ರಜಾಪ್ರಭುತ್ವದ ಮೂಲಭೂತ ಶಿಸ್ತು ಅಲ್ಲವೇ? ಕಾಂಗ್ರೆಸ್ ನವರಿಗೆ ಮತ್ತು ವಿರೋಧ ಪಕ್ಷಗಳಿಗೆ ಯಾಕೆ ಅರ್ಥವಾಗುತ್ತಿಲ್ಲ ಎಂದು ಪ್ರಭಾಕರ್ ಪ್ರಶ್ನಿಸಿದರು.
ಮತದಾರರ ಪಟ್ಟಿಯ ಶುದ್ಧೀಕರಣದ ಜೊತೆಗೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಲ್ಲಿಯೂ ದ್ವಂದ್ವ ಅಥವಾ ಅನರ್ಹ ಫಲಾನುಭವಿ ನೋಂದಣಿಗಳಿವೆಯೇ ಎಂಬುದನ್ನು ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸಬೇಕು. ರೇಷನ್ ಕಾರ್ಡ್ ಸೇರಿದಂತೆ ಸರ್ಕಾರದ ಸೌಲಭ್ಯಗಳು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಯಾವುದೇ ವ್ಯಕ್ತಿ ಅಥವಾ ವ್ಯವಸ್ಥೆ ಇವುಗಳನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ಇರಬಾರದು ಎಂದರು.
ಮತದಾನ ವ್ಯಾಪಾರವಲ್ಲ, ಅದು ಪ್ರಜಾಪ್ರಭುತ್ವದ ಪವಿತ್ರ ಹಕ್ಕು!
ಮತದಾನ ಎನ್ನುವುದು ಹಣ, ಆಮಿಷ ಅಥವಾ ವೈಯಕ್ತಿಕ ಲಾಭಕ್ಕಾಗಿ ನಡೆಯುವ ವ್ಯಾಪಾರವಾಗಬಾರದು. ಪ್ರತಿಯೊಬ್ಬ ಅರ್ಹ ನಾಗರಿಕನೂ ತನ್ನ ಸ್ವತಂತ್ರ ನಿರ್ಧಾರದಿಂದ ಮತ ಚಲಾಯಿಸಬೇಕು. ಮತದಾನದ ಪಾವಿತ್ರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಬಿಜೆಪಿ ಪ್ರತಿಪಾದಿಸುತ್ತಿರುವ ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆಯೂ ಚುನಾವಣಾ ಪ್ರಕ್ರಿಯೆಯಲ್ಲಿ ಪದೇಪದೇ ಉಂಟಾಗುವ ವೆಚ್ಚ ಮತ್ತು ಆಡಳಿತಾತ್ಮಕ ಅಡಚಣೆಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಎಸ್‌ಐಆರ್ ಮತ್ತು ಒಂದು ರಾಷ್ಟ್ರ, ಒಂದು ಚುನಾವಣೆ ಪ್ರತ್ಯೇಕ ಸುಧಾರಣೆಗಳಾಗಿದ್ದರೂ, ಚುನಾವಣಾ ವ್ಯವಸ್ಥೆಯ ಸುಧಾರಣೆಯ ದೃಷ್ಟಿಯಿಂದ ಎರಡೂ ಮಹತ್ವ ಪಡೆದಿವೆ ಎಂದರು.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಟಿಎಂಸಿ ಮಮತಾ ಬ್ಯಾನರ್ಜಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಸ್‌ಐಆರ್ ವಿರೋಧಿಸುವ ನಾಯಕರು ಮತದಾರರ ಪಟ್ಟಿಯ ಶುದ್ಧೀಕರಣದ ಅಗತ್ಯತೆಯನ್ನು ಅರ್ಥಮಾಡಿಕೊಳ್ಳಬೇಕು. ಯಾವುದೇ ಧರ್ಮ, ಜಾತಿ ಅಥವಾ ರಾಜಕೀಯ ಪಕ್ಷದ ಆಧಾರದ ಮೇಲೆ ತಾರತಮ್ಯ ಮಾಡದೆ ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಬೇಕು ಎಂಬುದು ನಮ್ಮ ನಿಲುವಾಗಿದೆ ಎಂದು ಹೇಳಿದರು.
ಅರ್ಹ ಮತದಾರರ ಹೆಸರು ಯಾವುದೇ ಕಾರಣಕ್ಕೂ ತಪ್ಪಾಗಿ ಅಳಿಸಿಹೋಗಬಾರದು. ಅದೇ ರೀತಿ ನಕಲಿ ಹಾಗೂ ದ್ವಂದ್ವ ನೋಂದಣಿಗಳಿಗೂ ಅವಕಾಶ ಇರಬಾರದು.
ಮತದಾರರ ಪಟ್ಟಿಯಲ್ಲಿ ಶುದ್ಧತೆ, ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವದಲ್ಲಿ ವಿಶ್ವಾಸಾರ್ಹತೆ ಇರಬೇಕು. ಇದೇ ಬಿಜೆಪಿಯ ನಿಲುವು ಎಂದು ಪ್ರಭಾಕರ್ ಸ್ಪಷ್ಟಪಡಿಸಿದರು.