ಬಳ್ಳಾರಿ: ಕುಟುಂಬದ ಸಮಗ್ರ ಅಭಿವೃದ್ಧಿ ಹಾಗೂ ನೆಮ್ಮದಿಗೆ ಮಹಿಳೆಯರ ಆರೋಗ್ಯ ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಂದು ಕುಟುಂಬದಲ್ಲೂ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಹನುಮಂತಪ್ಪ ಅವರು ಹೇಳಿದರು.
ನಗರದ 5ನೇ ವಾರ್ಡ್ನ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಆರೋಗ್ಯ ಕೇಂದ್ರ ಮರಿಸ್ವಾಮಿಮಠ ಹಾಗೂ ‘ನಮ್ಮ ಕ್ಲಿನಿಕ್' ಅಂದ್ರಾಳ್ ಇವರ ಸಹಯೋಗದೊಂದಿಗೆ ಮಹಿಳಾ ಆರೋಗ್ಯ ಸಮಿತಿ ಸದಸ್ಯರಿಗೆ ಆಯೋಜಿಸಲಾಗಿದ್ದ ‘ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಕಾರ್ಯಕ್ರಮ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಆರೋಗ್ಯ ಸಮಿತಿ ರಚನೆ:
ನಗರದ ವಿವಿಧ ವಾರ್ಡ್ಗಳಲ್ಲಿ 15 ರಿಂದ 20 ಮಹಿಳೆಯರನ್ನು ಆಯ್ಕೆ ಮಾಡಿ ಸಮಿತಿ ರಚಿಸಲಾಗುತ್ತಿದ್ದು, ಇವರ ಮೂಲಕ ಸಾರ್ವಜನಿಕರಿಗೆ ಸಿಗುವ ಆರೋಗ್ಯ ಸೇವೆಗಳ ಕುರಿತು ಚರ್ಚಿಸಿ ಸೂಕ್ತ ಸಲಹೆ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಗರ್ಭಿಣಿಯರ ನೋಂದಣಿ, ನಿಯಮಿತ ತಪಾಸಣೆ, ಆಸ್ಪತ್ರೆಗಳಲ್ಲೇ ಸುರಕ್ಷಿತ ಹೆರಿಗೆ ಮತ್ತು ಪ್ರಸವೋತ್ತರ ಆರೈಕೆಗೆ ಆದ್ಯತೆ ನೀಡಲಾಗುವುದು. ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ ಮತ್ತು ಆರೋಗ್ಯಕರ ಜೀವನಶೈಲಿ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

ಮುಟ್ಟಿನ ಸ್ವಚ್ಛತೆ, ರಕ್ತಹೀನತೆ ತಡೆಗಟ್ಟುವಿಕೆ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗೆ ನೀಡಲಾಗುವ ಹೆಚ್‌ಪಿವಿ ಲಸಿಕೆ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಡೆಂಗ್ಯೂ, ಕ್ಷಯ, ಮಧುಮೇಹ ಹಾಗೂ ರಕ್ತದೊತ್ತಡದಂತಹ ಕಾಯಿಲೆಗಳ ಉಚಿತ ತಪಾಸಣೆಗೆ ಪ್ರೇರಣೆ ನೀಡಲಾಗುತ್ತಿದ್ದು, ಮಾನಸಿಕ ಒತ್ತಡ ನಿವಾರಣೆಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸಬೇಕು ಎಂದು ಕೋರಿದರು.
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳನ್ನು ಮುಚ್ಚಿಡದೆ ಕ್ಷೇತ್ರ ಮಟ್ಟದ ಸಿಬ್ಬಂದಿಗಳ ಗಮನಕ್ಕೆ ತರಬೇಕು ಮತ್ತು ನಿರಂತರ ತಪಾಸಣೆ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿಶ್ವ ಅಂಗಾಂಗ ದಾನ ದಿನದ ಜಾಗೃತಿ:
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು ವಿಶ್ವ ಅಂಗಾಂಗ ದಾನ ದಿನದ ಮಹತ್ವ ಹಾಗೂ ಅಂಗಾಂಗ ದಾನದ ಅಗತ್ಯತೆಯ ಬಗ್ಗೆ ಸುದೀರ್ಘವಾಗಿ ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯಕ್ರಮ ಸಂಯೋಜಕ ರಾಘವೇಂದ್ರ ಅವರು ಮಹಿಳಾ ಆರೋಗ್ಯ ಸಮಿತಿಯ ಕಾರ್ಯವೈಖರಿ ಮತ್ತು ನಿಯಮಾವಳಿಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ.ಸೌಜನ್ಯ, ಡಾ. ಮೊಹಮ್ಮದ್ ತಕ್ವೀರ್ ಅಲಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಎಸ್. ಕರ್ಜಗಿ, ನಗರ ಕಾರ್ಯಕ್ರಮ ವ್ಯವಸ್ಥಾಪಕಿ ರುದ್ರಮ್ಮ, ಆರೋಗ್ಯ ನಿರೀಕ್ಷಕ ನಾಗರಾಜ್, ಸಿಮ್ರಾನ್, ಎಲ್.ಡಿ.ಸಿ ಸೋಮಶೇಖರ್, ಸ್ಥಳೀಯ ವಾರ್ಡ್ ಮುಖಂಡರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.