LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Bellary

ದರೋಜಿ ಕೆರೆ ಸಂರಕ್ಷಣೆ ಮತ್ತು ಮಾಲಿನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಸೂಚನೆ

ಬಳ್ಳಾರಿ : ದರೋಜಿ ಕೆರೆಯ ಜಲಚರ ವ್ಯವಸ್ಥೆ ಹಾಗೂ ಪರಿಸರವನ್ನು ರಕ್ಷಿಸಲು ಮತ್ತು ಮಾಲಿನ್ಯವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಒಗ್ಗೂಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.

 

ನಗರದ ನೂತನ ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

ದರೋಜಿ ಕೆರೆಯು ಅತ್ಯಂತ ಸೂಕ್ಷ್ಮ ಹಾಗೂ ಶ್ರೀಮಂತ ಜಲಚರ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ಬೆಳೆಯುವ ಬೃಹತ್ ಗಾತ್ರದ ದರೋಜಿ ತಳಿಯ ಮೀನುಗಳಿಗೆ ಕೋಲ್ಕತ್ತಾದಂತಹ ದೂರದ ನಗರಗಳಲ್ಲೂ ಭಾರೀ ಬೇಡಿಕೆಯಿದೆ. ಈ ಕೆರೆಯು ಹಿಂದೆ ಎರಡು ಪ್ರತ್ಯೇಕ ಕೆರೆಗಳಾಗಿದ್ದು, ನಂತರದ ದಿನಗಳಲ್ಲಿ ಒಂದಾಗಿ ಮಾರ್ಪಟ್ಟಿದೆ ಎಂದು ತಿಳಿಸಿದರು.

 news_1786641977_0_870.webp

 

ಮಾಲಿನ್ಯದ ಮೂಲ ಹಾಗೂ ಕೆರೆ ಹೂಳು ತುಂಬುವಿಕೆ: ನಾರಿಹಳ್ಳ ಪ್ರದೇಶದಿಂದ ಹರಿದುಬರುವ ನೀರು ಮತ್ತು ಹೂಳು ಕೆರೆಯ ನೀರಿನ ಶೇಖರಣಾ ಸಾಮರ್ಥ್ಯವನ್ನು ಕುಗ್ಗಿಸಿದೆ. ಜೊತೆಗೆ, ಕುಡಿತಿನಿ, ಕುರೇಕುಪ್ಪ ಹಾಗೂ ತೋರಣಗಲ್ಲು ಭಾಗಗಳ ಸಂಸ್ಕರಿಸದ ತ್ಯಾಜ್ಯ ನೀರು ಹಾಗೂ ಘನತ್ಯಾಜ್ಯಗಳು ನೇರವಾಗಿ ಕೆರೆಗೆ ಸೇರುತ್ತಿರುವುದು ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿದೆ ಎಂದರು.

 

ಕೆರೆಯ ಮಾಲಿನ್ಯ ನಿಯಂತ್ರಣಕ್ಕೆ ನೀರಾವರಿ ಇಲಾಖೆ, ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕುರೇಕುಪ್ಪ, ತೋರಣಗಲ್ಲು ಸ್ಥಳೀಯ ಆಡಳಿತ ಸಂಸ್ಥೆಗಳು, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ ಸೇರಿದಂತೆ ಎಲ್ಲಾ ಭಾಗಿದಾರರ ಜಂಟಿ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು ಎಂದರು.

 

ಕಲುಷಿತ ನೀರು ಸಂಸ್ಕರಣೆ ಮತ್ತು ಕ್ರಿಯಾ ಯೋಜನೆ: ಕೆರೆಗೆ ಕಲುಷಿತ ನೀರು ಹರಿಯುವ ಸ್ಥಳಗಳನ್ನು ಗುರುತಿಸಿ, ನೀರು ಕೆರೆ ಸೇರುವ ಮುನ್ನವೇ ಸಂಸ್ಕರಿಸಲು ಸ್ಪಷ್ಟ ಕ್ರಿಯಾ ಯೋಜನೆ ತಯಾರಿಸಲಾಗುವುದು. ತ್ಯಾಜ್ಯ ನೀರು ಮತ್ತು ಕೈಗಾರಿಕಾ ಕಲುಷಿತ ನೀರನ್ನು ಸಂಸ್ಕರಿಸಿದ ನಂತರವೇ ಬಿಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ ಎಂದರು.

 news_1786641978_3_740.webp

 

ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ

ಕೆರೆಯ ದಂಡೆಯ ಸವೆತ ತಡೆಯಲು ಮತ್ತು ಪರಿಸರ ಸಮತೋಲನ ಕಾಯಲು ಮ್ಯಾಂಗ್ರೋವ್ ಮಾದರಿಯ ಸಸ್ಯಗಳನ್ನು ನೆಡಲು ನಿರ್ಧರಿಸಲಾಗುವುದು. ದರೋಜಿ ಕೆರೆಯು ಪ್ರವಾಸಿ ಆಕರ್ಷಣೆಯ ಸಾಮರ್ಥ್ಯ ಹೊಂದಿದ್ದು, ಕೆರೆಯನ್ನು ಕಲುಷಿತ ಮುಕ್ತಗೊಳಿಸಿ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಗೆ ಅಗತ್ಯವಿರುವ ವೆಚ್ಚವನ್ನು ಕೆಎಂಇಆರ್ಸಿ ಅಡಿಯಲ್ಲಿ ಭರಿಸಲು ಹಾಗೂ ಮುಂದಿನ ದಿನಗಳಲ್ಲಿ ತಜ್ಞರ ಸಲಹೆ ಪಡೆದು ಕೆರೆಯ ಜೀವವೈವಿಧ್ಯವನ್ನು ಉಳಿಸಲು ಸಮಗ್ರ ಹೆಜ್ಜೆ ಇಡಲಾಗುವುದು ಎಂದರು.

 

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಕೆರೆಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿತ ಕಂಡಿದ್ದು, ರೈತರಲ್ಲಿ ಭಾರೀ ಆತಂಕ ಮೂಡಿಸಿದ್ದು, ಬಳ್ಳಾರಿ ಮತ್ತು ಸಿರುಗುಪ್ಪ ತಾಲೂಕುಗಳಲ್ಲಿನ ಕೆರೆಗಳ ಸ್ಥಿತಿ ಚಿಂತಾಜನಕವಾಗಿವೆ. ಶೇಕಡಾ 30ಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 36 ಕೆರೆಗಳಿದ್ದು, ಈ ಪೈಕಿ ಬಳ್ಳಾರಿ ತಾಲೂಕಿನಲ್ಲಿ 7 ಹಾಗೂ ಸಿರುಗುಪ್ಪ ತಾಲೂಕಿನಲ್ಲಿ 29 ಕೆರೆಗಳಿವೆ. ಪ್ರಸ್ತುತ ಹೆಚ್ಚಿನ ಕೆರೆಗಳು ಒಣಗುವ ಹಂತ ತಲುಪಿವೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕೆರೆಗಳಲ್ಲಿ ನೀರಿನ ಸಂಗ್ರಹಣೆ ತೀವ್ರ ಪ್ರಮಾಣದಲ್ಲಿ ಕುಸಿದಿದೆ ಎಂದರು.

 

ಹಿಂಗಾರು ಮುಂಗಾರು ಅಥವಾ ಮಳೆಗಾಲದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಲುಷಿತ ನೀರು ಸರಬರಾಜಾಗುವುದನ್ನು ತಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಜಂಟಿ ತಪಾಸಣೆ ನಡೆಸಬೇಕು ಸೂಚನೆ ನೀಡಿದರು.

 

ಮಳೆ ಮಾಪಕ ಯಂತ್ರಗಳ ವೈಫಲ್ಯ:

ಜಿಲ್ಲೆಯಾದ್ಯಂತ ಒಟ್ಟು 46 ಮಳೆ ಮಾಪಕ ಯಂತ್ರಗಳು ಪರಿಶೀಲನೆಯಲ್ಲಿದ್ದು, ಇವುಗಳಲ್ಲಿ ಹಲವು ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಎಸ್‌ಎನ್‌ಡಿಎಂಸಿ ಕನ್ಸಲ್ಟೆಂಟ್ ಅವರೊಂದಿಗೆ ಸಮನ್ವಯ ಸಾಧಿಸಿ, ದೋಷಪೂರಿತ ಯಂತ್ರಗಳನ್ನು ತಕ್ಷಣವೇ ದುರಸ್ತಿಗೊಳಿಸಿ ಸಕ್ರಿಯಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.

 

ತಾಲ್ಲೂಕು ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಸಂಬಂಧಿಸಿದ ಶಾಸಕರೊಂದಿಗೆ ಸಮಯಾವಕಾಶ ಪಡೆದುಕೊಂಡು ಕಡ್ಡಾಯವಾಗಿ ನಡೆಸಬೇಕು. ಅದೇರೀತಿಯಾಗಿ ತಮ್ಮ- ತಮ್ಮ ಇಲಾಖೆಗಳ ಸಾಮಾನ್ಯ ಮಾಹಿತಿ ತಿಳಿದುಕೊಳ್ಳಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 news_1786641977_2_256.webp

 

ಜಿಲ್ಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಲಭ್ಯತೆ, ಬೆಳೆ ವಿಮೆ ನೋಂದಣಿ, ರಸ್ತೆಗಳಲ್ಲಿ ತಗ್ಗು-ಗುಂಡಿ, ರಸ್ತೆ ಮೇಲ್ಸೇತುವೆ ದುರಸ್ತಿ, ನಿರಂತರ ವಿದ್ಯುತ್ ಸರಬರಾಜಿಗೆ ಆದ್ಯತೆ ನೀಡಬೇಕು. ‘ಭಾರತ್ ಜೋಡೋ’ ಯುವಕರ ಸಂಘ ನೋಂದಣಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ  ‘ಪ್ರಜಾಸೇವೆ’ ಕಾರ್ಯಕ್ರಮ ಆಯೋಜಿಸಲು ದಿನಾಂಕ, ವೇಳಾಪಟ್ಟಿ, ಸ್ಥಳ ನಿಗದಿ ಸೇರಿದಂತೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಾಗಿ ಧೂಮೀಕರಣ ಕಾರ್ಯ ಹಾಗೂ ಸಮುದಾಯಗಳಲ್ಲಿ ಜನ- ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

 

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಇಂದುಧರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಅಬ್ದುಲ್ ರೆಹಮಾನ್, ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿಡಿಯೋ ಸಂವಾದದ ಮೂಲಕ ಎಲ್ಲಾ ತಾಲೂಕು ತಹಶೀಲ್ದಾರರು ಉಪಸ್ಥಿತರಿದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
“ಅಮೋಘ” ಚಲನಚಿತ್ರದ ಹಾಡು ಬಿಡುಗಡೆಬಳ್ಳಾರಿ ಜಿಲ್ಲೆಯ ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ ದರ್ಶನ ಪಡೆದ ಮಾಜಿ ಶಾಸಕ ಸುರೇಶ್ ಬಾಬುಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ: ಪ್ರೊ. ಎನ್.ಎಂ. ಸಾಲಿಸಾಂಸಾರಿಕ ಜೀವನ ಪ್ರವೇಶಿಸಿದ ಸ್ಪೈಡರ್ ಮ್ಯಾನ್ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ