ನಮಗೆಲ್ಲರಿಗೂ ಚೀನಾದ ಗ್ರೇಟ್ ವಾಲ್ ಗೊತ್ತಿದೆ ಅಲ್ಲವೇ? ಆದರೆ ನಮ್ಮ ಭಾರತ ದೇಶದಲ್ಲಿ ಚೀನಾದ ಬೃಹತ್ ಗೋಡೆಯ ರೀತಿಯದ್ದೇ ಮತ್ತೊಂದು ದೊಡ್ಡಕೋಟೆ ಹಲವಾರು ಶತಮಾನಗಳ ಹಿಂದೆಯೇ ನಿರ್ಮಾಣವಾಗಿದ್ದು ಸರಿ ಸುಮಾರು 36 ಕಿ.ಮೀ ಉದ್ದವನ್ನು ಹೊಂದಿದೆ ಎಂಬುದು ಇತ್ತೀಚಿಗಿನ ದಶಕಗಳಲ್ಲಿ ಉಪಗ್ರಹ ಕ್ರಾಂತಿಯ ನಂತರ ಜಗತ್ತಿಗೆ ತಿಳಿದಿದೆ.
ಈ ಗೋಡೆಯು ಚೀನಾ ಗೋಡೆಯ ನಂತರದ ಸ್ಥಾನವನ್ನು ಪಡೆದಿದೆ. ರಾಜಸ್ಥಾನದ ರಾಜಸಮಂದ ಜಿಲ್ಲೆಯ ಅರಾವಳಿ ಬೆಟ್ಟಗಳ ಮೇಲೆ ನಿರ್ಮಿಸಲಾಗಿರುವ ಈ ಕೋಟೆಯು ಸರಿಸುಮಾರು ಮೂವತ್ತಾರು ಕಿಲೋಮೀಟರ್ ಉದ್ದದವರೆಗೆ ಹರಡಿಕೊಂಡಿದೆ.
ಕ್ರಿಸ್ತಶಕ 1658 ರಲ್ಲಿ ರಾಣಾ ಕುಂಭ ಎಂಬ ಮಹಾರಾಜರು ಈ ಕೋಟೆಯನ್ನು ನಿರ್ಮಿಸಲು ಆರಂಭಿಸಿದರು. ಓರ್ವ ಅತ್ಯುತ್ತಮ ವಾಸ್ತುಶಿಲ್ಪಿಯಾಗಿದ್ದ ರಾಣಾ ಕುಂಭ ರಾಜರು ಶೂರ ಯೋಧ ಕೂಡ ಆಗಿದ್ದರು. ಸಂಗೀತ ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ಅವರಿಗೆ ಆಸಕ್ತಿಯಿತ್ತು. ತಮ್ಮ ಜೀವಿತದಲ್ಲಿ ಅವರು ಒಟ್ಟು 32 ಕೋಟೆಗಳನ್ನು ನಿರ್ಮಿಸಿದ್ದು ಅವುಗಳಲ್ಲಿ ಕುಂಬಳಗಡ ಕೋಟೆಯು ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿತ್ತು.
ಹದಿನೈದು ವರ್ಷಗಳವರೆಗೆ ನಡೆದ ಈ ಕೋಟೆಯ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕಾರ್ಮಿಕರು ಪಾಲ್ಗೊಂಡಿದ್ದರು. ಕೋಟೆಯ ಗೋಡೆಯು ಅತ್ಯಂತ ಅಗಲವಾಗಿದ್ದು ಕೆಲವೆಡೆ 20 ರಿಂದ 25 ಅಡಿಯವರೆಗೆ ವಿಸ್ತರಿಸಿಕೊಂಡಿರುವುದನ್ನು ನಾವು ಕಾಣಬಹುದು. ಎಂಟು ಕುದುರೆಗಳು ಅಕ್ಕಪಕ್ಕದಲ್ಲಿ ಇರುವಂತೆ ಒಟ್ಟಿಗೆ ಓಡುವಷ್ಟು ಅಗಲವಾದ ಗೋಡೆ ಅದಾಗಿತ್ತು.

ಬೆಟ್ಟದ ಮೇಲೆ ನಿರ್ಮಾಣವಾಗಿರುವ ಈ ಕೋಟೆಯ ಗೋಡೆಯು ಕಣಿವೆಗಳಲ್ಲಿ ಇಳಿದು, ಶಿಖರಗಳಲ್ಲಿ ಏರಿ ತಿರುವುಗಳಲ್ಲಿ ಹೊರಳಿಕೊಂಡಂತೆ ಭಾಸವಾಗುತ್ತದೆ. ದಾರದಲ್ಲಿ ಪೋಣಿಸಿದ ರೀತಿಯಲ್ಲಿ ಕಾಣಿಸುವ ಕೋಟೆಯ ಗೋಡೆಯು ಉತ್ತಮ ಗುಣಮಟ್ಟದ ಸಾಮಗ್ರಿಗಳಿಂದ ನಿರ್ಮಿಸಲ್ಪಟ್ಟಿದೆ.
ಎಂತಹ ಬಿರುಗಾಳಿ, ಮಳೆಗೂ ಬೆಚ್ಚದ ಬೆದರದ ಅಭೇದ್ಯ ಕೋಟೆಯ ಮೇಲೆ ದಾಳಿ ಮಾಡಲು ಸಾಧ್ಯವಾಗದೇ ಇರಲು ಕಾರಣ ಅದರ ಎತ್ತರ ಸಮುದ್ರ ಮಟ್ಟದಿಂದ ಸರಿಸುಮಾರು ಹನ್ನೊಂದು ನೂರು ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ ಈ ಕೋಟೆಯನ್ನು ಮೋಡಗಳು ಆವರಿಸಿಕೊಳ್ಳುವ ಕಾರಣ ಕೆಳಗಿನಿಂದ ಶತ್ರುಗಳು ಈ ಕೋಟೆಯಲ್ಲಿ ನಡೆಯುವ ವಿದ್ಯಮಾನಗಳನ್ನು ವೀಕ್ಷಿಸಲು ಸಾಧ್ಯವಿಲ್ಲ.
ಕೋಟೆಯ ಗೋಡೆಗಳು ಅಗಾಧ ಎತ್ತರವಾಗಿದ್ದು ಅದನ್ನು ಹತ್ತುವಾಗಲೇ ಸೈನಿಕರು ಸುಸ್ತಾಗಿ ದಣಿಯುತ್ತಾರೆ ಹಾಗೂ ದಣಿದ ಸೈನಿಕರಿಗೆ ಯುದ್ಧ ಮಾಡುವ ತಾಕತ್ತು ಉಳಿಯುವುದಿಲ್ಲ ಎಂಬ ಕಾರಣದಿಂದಾಗಿಯೇ ಕೋಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನ ಪಟ್ಟವರಿಗೆ ಅದು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ.
ಇನ್ನು ಕೋಟೆಯ ಒಳ ಭಾಗದಲ್ಲಿ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳು ಇದ್ದು 300ಕ್ಕೂ ಹೆಚ್ಚು ದೇವಸ್ಥಾನಗಳು, ವರ್ಷಗಟ್ಟಲೆ ಆಹಾರ ಧಾನ್ಯಗಳನ್ನು ಸಂಗ್ರಹಿಸಬಹುದಾದ ಬೃಹತ್ ಉಗ್ರಾಣಗಳು ಹಾಗೂ ಜನವಸತಿಗೆ ಅತ್ಯವಶ್ಯಕವಾದ ನೀರಿನ ಅನುಕೂಲತೆಗಳಾದ ಬಾವಿಗಳು ಹಾಗೂ ಕೆರೆಗಳು ಇದ್ದವು. ಒಂದು ವೇಳೆ ಯುದ್ಧ ನಡೆದರೂ ಕೂಡ ಕೋಟೆಯ ಒಳಭಾಗದಲ್ಲಿಯೇ ವರ್ಷಗಟ್ಟಲೆ ಬದುಕನ್ನು ಸಾಗಿಸಲು ಬೇಕಾದ ಎಲ್ಲ ರೀತಿಯ ವ್ಯವಸ್ಥೆಗಳನ್ನು ಅಲ್ಲಿ ಹೊಂದಿದ್ದರು.
ಇದರ ಜೊತೆಗೆ ಕೋಟೆಯನ್ನು ಪ್ರವೇಶಿಸಲು ಸಾಧ್ಯವಾಗದ ರೀತಿಯಲ್ಲಿ ಕೋಟೆಗೆ ಏಳು ಬಾಗಿಲುಗಳ ಕಾವಲು ಇತ್ತು. ಮೊದಲನೆಯ ಬಾಗಿಲಿಗಿಂತ ಹೆಚ್ಚು ಬಲಿಷ್ಠವಾಗಿ ಎರಡನೆಯ ಅದಕ್ಕಿಂತಲೂ ಹೆಚ್ಚು ಮೂರನೆಯ ಹೀಗೆ ಒಂದಕ್ಕಿಂತ ಒಂದು ಅಭೇದ್ಯವಾದ ದ್ವಾರಬಾಗಿಲುಗಳು ಇದ್ದವು. ಅವುಗಳ ಮೇಲೆ ಕಣ್ಗಾವಲು ಸೇನೆಯ ಪಹರೆ ಸದಾ ಇರುತ್ತಿತ್ತು. ಕೋಟೆಗೆ ದ್ವಾರಗಳ ಮೇಲೆ ನಿಂತು ಕಾಯುತ್ತಿದ್ದ ಶಸ್ತ್ರ ಸಜ್ಜಿತ ಸೈನಿಕರು ಕೋಟೆಯ ದ್ವಾರವನ್ನು ಮುರಿದು ಒಳಗೆ ಹೋಗಲು ಪ್ರಯತ್ನಿಸಿದರೆ ಮೇಲಿನಿಂದ ದೊಡ್ಡ ದೊಡ್ಡ ಗುಂಡು ಕಲ್ಲುಗಳನ್ನು ಎಸೆಯುವ ಮೂಲಕ, ಬಾಣಗಳ ಸುರಿಮಳೆಯನ್ನು ಸುರಿಸುವ ಮೂಲಕ ಶತ್ರುಗಳನ್ನು ಪ್ರತಿಬಂಧಿಸುವ ವ್ಯವಸ್ಥೆ ಇತ್ತು.
ಇದೇ ಕೋಟೆಯಲ್ಲಿ ಮಹಾರಾಣಾ ಪ್ರತಾಪರು 1540 ರಲ್ಲಿ ಜನಿಸಿದರು. ಇದೇ ಕೋಟೆಯಲ್ಲಿ ಉದಯ ಸಿಂಗ್ ಮಹಾರಾಜರನ್ನು ಅಡಗಿಸಿ ಇಡಲಾಗಿತ್ತು. ತಂದೆಗೆ ರಕ್ಷಣೆ ನೀಡಿದ ಕೋಟೆಯಲ್ಲಿ ಮಗನ ಜನನವಾಗಿದ್ದು ಮಗ ಕೂಡ ಮುಂದೆ ಎಂದು ಈ ಕೋಟೆಯು ವೈರಿಗಳ ಕೈಗೆ ಸೆರೆ ಸಿಕ್ಕದಂತೆ ಹೋರಾಡಿದರು.
ಇಂತಹ ಅಭೇದ್ಯ ಕೋಟೆಯನ್ನು ಕೇವಲ ಒಂದು ಬಾರಿ ಮಾತ್ರ ವಶಪಡಿಸಿಕೊಳ್ಳಲಾಯಿತು. ಮೊಘಲ ದೊರೆ ಅಕ್ಬರ್ ಗುಜರಾತ್ ಹಾಗೂ ಮಾಳ್ವ ಸೇನೆಯ ಜೊತೆಗೂಡಿ ಕೋಟೆಯನ್ನು ಎಲ್ಲ ಭಾಗಗಳಿಂದಲೂ ಸುತ್ತುವರೆದನು.ಯುದ್ಧದಿಂದ ಅವರನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಅಕ್ಬರ್ ಕೋಟೆಯ ಮೇಲ್ಭಾಗಕ್ಕೆ ಸಂಪರ್ಕಿಸಿದ್ದ ನೀರಿನ ಕಾಲುವೆಗಳನ್ನು ಧ್ವಂಸ ಮಾಡಿ ಅವರಿಗೆ ನೀರು ದೊರೆಯದಂತೆ ಮಾಡಿದ. ಪರಿಣಾಮವಾಗಿ ಕೋಟೆಯಲ್ಲಿ ಸಂರಕ್ಷಿಸಲ್ಪಟ್ಟ ಎಲ್ಲ ಬಾವಿಗಳು ಹಾಗೂ ಕೆರೆಗಳು ಮುಂದಿನ ಕೆಲವೇ ದಿನಗಳಲ್ಲಿ ಖಾಲಿಯಾದವು. ದಂಡಿಗೆ, ದಾಳಿಗೆ ಹೆದರಿ ಶರಣಾಗದ ಜನರು ನೀರಿಲ್ಲದ ಹಾಹಾಕಾರದಿಂದಾಗಿ ಶರಣಾಗತಿ ಪಡೆದರು.
ಭವ್ಯ ಭಾರತದ ಇತಿಹಾಸವನ್ನು ಸಾರುವ ಸರಿಸುಮಾರು ಮೂವತ್ತಾರು ಕಿಲೋಮೀಟರ್ ಉದ್ದದ ಈ ಕುಂಬಳಗಡ ಕೋಟೆಯು ನೂರಾರು ವರ್ಷಗಳಿಂದ ಜನರ ಗಮನದಿಂದ ದೂರವಾಗಿದ್ದರೂ ಕೂಡ ಉಪಗ್ರಹಗಳ ಬಳಕೆ ಆರಂಭವಾದ ಮೇಲೆ ಗೂಗಲ್ ಅರ್ಥ್ ನ ಸಹಾಯದಿಂದ ಜಾಗತಿಕವಾಗಿ ಬೆಳಕಿಗೆ ಬಂತು.
ನಾವು ನೋಡಿಲ್ಲ ಎಂದ ಮಾತ್ರಕ್ಕೆ ಅದು ಅಲ್ಲಿ ಇಲ್ಲವೆಂದಲ್ಲ... ನಮಗೆ ಕಣ್ಣಿಗೆ ಗೋಚರಿಸದ ಅದೆಷ್ಟು ಸತ್ಯಗಳು ಇತಿಹಾಸದ ಗರ್ಭದಲ್ಲಿ ಅಡಗಿವೆ ಅವುಗಳನ್ನು ಹುಡುಕಿ ಹೊರತೆಗೆದು ರಕ್ಷಿಸಬೇಕಾದದ್ದು, ಉಳಿಸಿಕೊಂಡು ಹೋಗುವ, ಹೆಮ್ಮೆಯಿಂದ ಪ್ರದರ್ಶಿಸಬೇಕಾದ ಕರ್ತವ್ಯ ನಮ್ಮದು. ಏನಂತೀರಾ ಸ್ನೇಹಿತರೇ ?
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್