ನಾಯಕನಹಟ್ಟಿ : 2028ರಲ್ಲಿ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ಭಯ ಬಿಜೆಪಿಯನ್ನು ಕಾಡುತ್ತಿದೆ. ದೇಶಾದ್ಯಂತ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಇಡಿ, ಸಿಬಿಐನಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ದ್ರಾಕ್ಷಿ ರಸ ನಿಗಮ ಮಂಡಳಿ ಅಧ್ಯಕ್ಷ ಡಾ||ಯೋಗೇಶ್ ಬಾಬು ಆರೋಪಿಸಿದರು.
ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ತೇಜೋವಧೆ ಮಾಡುವ ಹುನ್ನಾರ ನಡೆಯುತ್ತಿದ್ದು, ಇಂತಹ ದಾಳಿಗಳಿಂದ ಕಾಂಗ್ರೆಸ್ ನಾಯಕರು ಹೆದರುವುದಿಲ್ಲ. ಇದುವರೆಗೂ ಕೇಂದ್ರ ಸರ್ಕಾರ ನಡೆಸಿದ ಇಡಿ ದಾಳಿಯಲ್ಲಿ ಹೆಚ್ಚು ಬಲಿಯಾದವರು ನಮ್ಮ ಕಾಂಗ್ರೆಸ್ ಮಾತ್ರ. ಇದು ಹೀಗೆ ಮುಂದುವರಿಯುವುದು ಸರಿಯಲ್ಲ ಎಂದು ಎಚ್ಚರಿಸಿದರು.
ವಿರೋಧ ಪಕ್ಷಗಳ ನಾಯಕರನ್ನು ಹತ್ತಿಕ್ಕುವ ಉದ್ದೇಶದಿಂದಲೇ ಇಂತಹ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ತನಿಖೆಗಳ ಹೆಸರಿನಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳ ಪ್ರಬಲ ಧ್ವನಿಯನ್ನು ಅಡಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. 31 ಗಂಟೆಗಳ ಕಾಲ ತಪಾಸಣೆ ನಡೆಸಿದರೂ ಯಾವುದೇ ಅಕ್ರಮ ಪತ್ತೆಯಾಗಿಲ್ಲ, ಜನತೆ ಈ ರಾಜಕೀಯ ಪಿತೂರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಂತಹ ಸೇಡಿನ ರಾಜಕಾರಣ ಮುಂದುವರಿದರೆ ಮುಂಬರುವ ದಿನಗಳಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ರೂಪಿಸಲಾಗುವುದು ಎಂದರು.
ಸತೀಶ್ ಜಾರಕಿಹೊಳಿ ಅವರು ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿದ್ದು ಆಹಿಂದ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಇಂತಹ ನಾಯಕರನ್ನು ರಾಜಕೀಯವಾಗಿ ಹತ್ತಿಕ್ಕುವ ಉದ್ದೇಶದಿಂದ ತನಿಖ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿದರು. ಸತೀಶ್ ಜಾರಕಿಹೊಳಿಯವರು ಪ್ರಭಾವಿ ನಾಯಕರು ಆಗಾಗಿ ಬಿಜೆಪಿಯವರು ಬಹಳ ದಿನಗಳಿಂದ ಅವರ ಮೇಲೆ ಕಣ್ಣೀಟ್ಟಿದ್ದರು ಆದರೆ ಅದು ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕೆ ಈ ರೀತಿ ಇಡಿ ದಾಳಿ ಮಾಡಿಸಿದ್ದಾರೆ. ಈ ದಾಳಿಯನ್ನು ಇಲ್ಲಿಗೆ ನಿಲ್ಲಸಬೇಕು ಎಂದು ಡಾ|| ಯೋಗೇಶ್ ಬಾಬು ಆಗ್ರಹಿಸಿದರು.