ನಾಯಕನಹಟ್ಟಿ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಅವರು ಅಧಿಕಾರ ವಹಿಸಿಕೊಂಡ ನಂತರ ಪಟ್ಟಣ ಪಂಚಾಯಿತಿಯ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೆಲವು ಸದಸ್ಯರು ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರು ಸತ್ಯಕ್ಕೆ ದೂರವಾದದ್ದು ಎಂದು ಅಧ್ಯಕ್ಷೆ ಮಂಜುಳಾ ಶ್ರೀಕಾಂತ್ ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ 28, 2024ರಂದು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ಯಾವುದೇ ರೀತಿಯ ಆರ್ಥಿಕ ಸಂಪನ್ಮೂಲ ಇರಲಿಲ್ಲ. ನಂತರ ರಾಜ್ಯ ಸರ್ಕಾರ ಎ-ಖಾತಾ, ಬಿ-ಖಾತಾ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಗೆ ಸುಮಾರು ₹90 ಲಕ್ಷದಷ್ಟು ಕಂದಾಯ ವಸೂಲಿಯಾಗಿತ್ತು. ಈ ಹಣವನ್ನು ಪಟ್ಟಣದ ಅಗತ್ಯ ಕಾಮಗಾರಿಗಳು ಹಾಗೂ ಬಾಕಿ ಪಾವತಿಗಳಿಗೆ ನಿಯಮಾನುಸಾರ ಬಳಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೌರಕಾರ್ಮಿಕರ ಬಾಕಿ ವೇತನ, ನೀರು ಸರಬರಾಜು ಸಿಬ್ಬಂದಿಯ ವೇತನ ಹಾಗೂ ಸುಮಾರು ನಾಲ್ಕು ವರ್ಷಗಳಿಂದ ವೇತನ ಪಾವತಿಯಾಗದಿದ್ದ ಡ್ರೈವರ್‌ಗಳ ವೇತನ ಸೇರಿದಂತೆ ವಿವಿಧ ಬಾಕಿಗಳನ್ನು ಪಾವತಿಸಲಾಗಿದೆ. ಅಲ್ಲದೆ, ತಾವು ಅಧ್ಯಕ್ಷರಾಗುವ ಮುನ್ನವೇ ಪಟ್ಟಣ ಪಂಚಾಯಿತಿಗೆ ಸುಮಾರು ₹10 ಲಕ್ಷ ಸಾಲ ಬಾಕಿ ಇತ್ತು. ಈ ಎಲ್ಲ ಬಾಕಿ ಪಾವತಿಗಳನ್ನು ಸೇರಿಸಿ ಸುಮಾರು ₹80 ಲಕ್ಷದಷ್ಟು ಮೊತ್ತವನ್ನು ಪಾವತಿಸಲಾಗಿದೆ ಎಂದು ಅಧ್ಯಕ್ಷೆ ವಿವರಿಸಿದ್ದಾರೆ.
ಮಾರ್ಚ್ 2025ರಲ್ಲಿ ನಡೆದ ಜಾತ್ರೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಸುಮಾರು 10 ಬೋರ್‌ವೆಲ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಅವುಗಳಲ್ಲಿ ಐದು ಬೋರ್‌ವೆಲ್‌ಗಳಿಗೆ ಸಂಬಂಧಿಸಿದ ಹಣವನ್ನು ಈಗಾಗಲೇ ಪಾವತಿಸಲಾಗಿದೆ. ಪಟ್ಟಣದ ನಿತ್ಯ ಕಸ ವಿಲೇವಾರಿ ವಾಹನಗಳಿಗೆ ಡೀಸೆಲ್‌ಗಾಗಿ ತಿಂಗಳಿಗೆ ಸುಮಾರು ₹70 ಸಾವಿರದಷ್ಟು ವೆಚ್ಚವಾಗುತ್ತಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಎ-ಖಾತಾ ಮತ್ತು ಬಿ-ಖಾತಾ ಪ್ರಕ್ರಿಯೆ ಸಂದರ್ಭದಲ್ಲಿ ಕಚೇರಿಯಲ್ಲಿ ಅಗತ್ಯವಿದ್ದ ಕಂಪ್ಯೂಟರ್, ಲ್ಯಾಪ್‌ಟಾಪ್ ಹಾಗೂ ಜೆರಾಕ್ಸ್ ಯಂತ್ರಗಳನ್ನು ಸರ್ಕಾರದ ನಿಯಮಾವಳಿಗಳಂತೆ ಖರೀದಿಸಲಾಗಿದೆ. ಪಟ್ಟಣ ಪಂಚಾಯಿತಿ ಕಚೇರಿ ಸುತ್ತಮುತ್ತ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯದಂತೆ ಹಾಗೂ ವಾಹನಗಳ ಬ್ಯಾಟರಿ ಸೇರಿದಂತೆ ಸಾರ್ವಜನಿಕ ಆಸ್ತಿಗಳ ಕಳವು ತಡೆಯುವ ಉದ್ದೇಶದಿಂದ ಕಚೇರಿಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ಸಿಸಿ ಕ್ಯಾಮೆರಾಗಳನ್ನು ಏಜೆನ್ಸಿ ಮೂಲಕ ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಾಯಕನಹಟ್ಟಿ ಜಾತ್ರೆಗಳ ಸಂದರ್ಭದಲ್ಲಿ ಕೈಗೊಂಡ ಖರ್ಚು-ವೆಚ್ಚಗಳನ್ನು ಸಹ ಕಂದಾಯ ವಸೂಲಿಯಲ್ಲಿಯೇ ದಾಖಲಿಸಲಾಗಿದೆ. ಹೀಗಿರುವಾಗ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳ ವಿರುದ್ಧ ಹಣ ದುರುಪಯೋಗದ ಆರೋಪ ಮಾಡಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವುದು ಸತ್ಯಾಂಶಕ್ಕೆ ವಿರುದ್ಧವಾಗಿದೆ ಎಂದು ಮಂಜುಳಾ ಶ್ರೀಕಾಂತ್ ಹೇಳಿದ್ದಾರೆ.
“ನಾವು ಯಾವುದೇ ರೀತಿಯ ಹಣ ದುರುಪಯೋಗ ಮಾಡಿಲ್ಲ. ಪಟ್ಟಣ ಪಂಚಾಯಿತಿಯ ಹಣವನ್ನು ನಿಯಮಾನುಸಾರವಾಗಿ ಸಾರ್ವಜನಿಕರ ಅಗತ್ಯಗಳಿಗೆ ಬಳಸಿಕೊಂಡು ಪಾರದರ್ಶಕವಾಗಿ ಆಡಳಿತ ನಡೆಸಿದ್ದೇವೆ. ಸಾರ್ವಜನಿಕರಿಗೆ ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಆದರೂ ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ದೂರು ನೀಡಿರುವುದು ವಿಷಾದನೀಯ,” ಎಂದು ಅವರು ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿಯಲ್ಲಿನ ಎಲ್ಲಾ ಲೆಕ್ಕಪತ್ರಗಳು, ಖರ್ಚು-ವೆಚ್ಚಗಳ ದಾಖಲೆಗಳು ಹಾಗೂ ಸಂಬಂಧಿತ ದಾಖಲೆಗಳನ್ನು ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಸಲ್ಲಿಸಲು ಸಿದ್ಧರಿದ್ದೇವೆ. ದಾಖಲೆಗಳನ್ನು ಪರಿಶೀಲಿಸಿದರೆ ಹಣ ದುರುಪಯೋಗದ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಸ್ಪಷ್ಟವಾಗಲಿದೆ ಎಂದು ಅಧ್ಯಕ್ಷೆ ಮಂಜುಳಾ ಶ್ರೀಕಾಂತ್ ತಿಳಿಸಿದ್ದಾರೆ.
2016ರಿಂದ 2020ರವರೆಗಿನ ಅವಧಿಯ ಅಕ್ರಮಗಳ ಕುರಿತು ಲೋಕಾಯುಕ್ತಕ್ಕೆ ದೂರು ನೀಡುವ ಎಚ್ಚರಿಕೆ
“ನಮ್ಮ ವಿರುದ್ಧ ಇದೇ ರೀತಿಯಾಗಿ ಸುಳ್ಳು ಆರೋಪಗಳನ್ನು ಮುಂದುವರಿಸಿದರೆ, ಹಿಂದೆ 2016ರಿಂದ 2020ರವರೆಗೆ ಪಟ್ಟಣ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮಗಳು ಹಾಗೂ ಅವ್ಯವಹಾರಗಳ ಕುರಿತು ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು. ಈ ಕುರಿತು ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ನಾವು ಹಿಂದೆ ಸರಿಯುವುದಿಲ್ಲ,” ಎಂದು ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣ ಪಂಚಾಯಿತಿಯ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಂಡಿದ್ದು, ಪ್ರತಿಯೊಂದು ಖರ್ಚು-ವೆಚ್ಚಕ್ಕೂ ಸಂಬಂಧಿಸಿದ ದಾಖಲೆಗಳು ಲಭ್ಯವಿವೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.