ಪ್ರೀತಿ ಮಮತೆ ಮುಕ್ಕಿ
ಕರುಣೆ ಕಕ್ಕುಲತೆ ಕುಕ್ಕಿ
ಬಾಂಧವ್ಯ ಬಸಿದು
ದ್ವೇಷ ಹೊಸೆವ ನಮ್ಮಲ್ಲಿ
ವಾತ್ಸಲ್ಯ ವಿಜಯವಾಗಲಿ
ದಯೆ ದಶಮಿಯಾಗಲಿ
ನೀತಿ ನೇಮವ ಜಾರಿಸಿ,
ಕೋಮು ಗಲಭೆ ಘರ್ಜಿಸಿ
ಧರ್ಮದ ದಾರಿ ತಪ್ಪಿಸಿ
ಕರ್ಮ ಕಾರುವ ನಮ್ಮಲ್ಲಿ
ವಿಶ್ವಾಸ ವಿಜಯವಾಗಲಿ
ಧರ್ಮ ದಶಮಿಯಾಗಲಿ
ಸತ್ಯ ಸುಮಗಳ ಕಿತ್ತು
ಮಿತ್ಯ ಮುಳ್ಳುಗಳ ಬಿತ್ತಿ
ಸಭ್ಯತೆಯ ತಿಳಿಯ ಕದಡಿ
ರಾಡಿ ಹರಡುವ ನಮ್ಮಲ್ಲಿ
ಪ್ರಕೃತಿ ವಿಜಯವಾಗಲಿ
ಸಂಸ್ಕೃತಿ ದಶಮಿಯಾಗಲಿ
ಮನಜಮತ ಧರ್ಮವಾಗಿ
ವಿಶ್ವಪಥ ನಮ್ಮ ಗುರಿಯಾಗಿ
ಸರಹದ್ದುಗಳಿಲ್ಲದ ಬಾನುವಾಗಿ
ಸಹಿಷ್ಣತೆ ಧಾತ್ರಿಯಾಗೆ ನಮ್ಮಲ್ಲಿ
ಪ್ರೀತಿ ವಿಜಯವಾಗುವುದು
ಪ್ರೇಮ ದಶಮಿಯಾಗುವುದು.
ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.