ಭುವನೇಶ್ವರ : ಇಲ್ಲಿನ ಕಳಿಂಗ ಇನ್ಸ್‌ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ವಿಶ್ವವಿದ್ಯಾಲಯದ ಸಾಧನೆ ಕುರಿತು ಡಿಸ್ಕವರಿ ವಾಹಿನಿಯು 'ದಿ ಗ್ರೇಟ್ ಇಂಡಿಯಾ ಯೂನಿವರ್ಸಿಟಿ - KIIT ಭುವನೇಶ್ವರ್' ಎಂಬ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ.
ಭಾರತದ ಅತ್ಯಂತ ಪ್ರಭಾವಶಾಲಿ ಶಿಕ್ಷಣ ಸಂಸ್ಥೆಯಲ್ಲಿ ಏನೆಲ್ಲ ಸೌಲಭ್ಯಗಳಿರಬೇಕು, ಯುವಕರ ಮನಸ್ಸನ್ನು ಸಬಲೀಕರಣಗೊಳಿಸುವುದರಿಂದ ಹಿಡಿದು ಭವಿಷ್ಯದ ಬದಲಾವಣೆಗೆ ಅವರನ್ನು ರೂಪಿಸುವವರೆಗೆ ಇರಬೇಕಾದ ದೂರದೃಷ್ಟಿ, ದೃಢನಿಶ್ಚಯ ಮತ್ತು ಪರಿವರ್ತನೆಯ ಕಥೆ ಎಂಬ ವಿವರದೊಂದಿಗೆ ಕಾರ್ಯಕ್ರಮ ಪ್ರಸಾರವಾಗಿದೆ.
'ಟೈಮ್ಸ್ ಹೈಯರ್ ಎಜುಕೇಶನ್ (THE) ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್ಸ್ 2027' ಪಟ್ಟಿಯಲ್ಲಿ ಕೆಐಐಟಿ ಭಾರತದ ವಿಶ್ವವಿದ್ಯಾಲಯಗಳ ಪೈಕಿ 4ನೇ ಸ್ಥಾನ ಪಡೆದಿತ್ತು. ಇದೀಗ ಡಿಸ್ಕವರಿ ವಾಹಿನಿಯಲ್ಲಿ ವಿಶ್ವವಿದ್ಯಾಲಯದ ಹಿರಿಮೆಗಳ ಬಗೆಗೆ ಕಾರ್ಯಕ್ರಮ ಪ್ರಸಾರವಾಗಿರುವುದರಿಂದ ವಿಶ್ವಮಟ್ಟದಲ್ಲಿ ಕ್ಯಾಂಪಸ್‌ನ ಪರಿಚಯವಾಗಿದೆ.
ಮೂವತ್ತು ಕ್ಯಾಂಪಸ್ ಗಳು, ಸಾವಿರಾರು ಜೀವಗಳು, ವಿಶ್ವಮಟ್ಟದ ಸಂಶೋಧನೆಯ ವಿವರದಿಂದ ಹಿಡಿದು ವಿಶ್ವವಿದ್ಯಾಲಯದ ಕ್ರೀಡಾಪಟುಗಳು ಒಲಂಪಿಕ್ಸ್‌ನಲ್ಲಿ ಮಾಡಿದ ಸಾಧನೆ, ಸ್ಟಾರ್ಟ್ ಅಪ್, ಬದಲಾವಣೆಯ ನೇತಾರರು, ವಿಶ್ವದರ್ಜೆಯ ಶಾಲಾ ಕೊಠಡಿಗಳು, ಅತ್ಯಾಧುನಿಕ ಸೌಲಭ್ಯ ಕ್ರೀಡಾಂಗಣಗಳು ಹೀಗೆ ಎಲ್ಲದರ ಬಗ್ಗೆಯೂ ಕಾರ್ಯಕ್ರಮದಲ್ಲಿ ವಿವರಿಸಲಾಗಿದೆ.

ಡಾ.ಅಚ್ಯುತ ಸಮಂತ ದೃಷ್ಟಿಕೋನ
ಕೆಐಐಟಿಯ ಸಂಸ್ಥಾಪಕರಾದ ಡಾ. ಅಚ್ಯುತ ಸಮಂತ ಅವರು ಯಾವ ದೃಷ್ಟಿಯನ್ನಿಟ್ಟುಕೊಂಡು ಈ ವಿವಿಯನ್ನು ಸ್ಥಾಪನೆ ಮಾಡಿದರು. ಯಾವ ಗುರಿಗಳನ್ನು ಇಟ್ಟುಕೊಂಡಿದ್ದರು ಮತ್ತು ಅವುಗಳನ್ನು ಸಾಧಿಸಲು ಏನೆಲ್ಲ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂಬ ವಿವರಗಳನ್ನು ವಾಹಿನಿ ವಿವರಿಸಿದೆ.
ಶಿಕ್ಷಣದಂತೆ ಕ್ರೀಡೆಗೆ ಇಲ್ಲಿ ಸಮಾನ ಪ್ರಾತಿನಿಧ್ಯ ನೀಡಲಾಗಿದೆ. ಕ್ರೀಡೆ ಕೇವಲ ಪಠ್ಯೇತರ ಚಟುವಟಿಕೆ ಮಾತ್ರವಾಗಿ ಇಲ್ಲಿ ಇರುವುದಿಲ್ಲ. ಅದು ವಿದ್ಯಾರ್ಥಿಯ ಜೀವನದ ಅವಿಭಾಜ್ಯ ಅಂಗ. ಆಡುತ್ತಾ ಆಡುತ್ತಾ ಕಲಿಯುತ್ತಾರೆ. ಕಲಿಯುತ್ತಾ ಕಲಿಯುತ್ತಾ ಆಡುತ್ತಾರೆ ಎಂದು ಸಮಂತ ಅವರು ಹೇಳುತ್ತಾರೆ.
ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳು
ಇಲ್ಲಿ ಹದಿನೆಂಟು ಅಂತರರಾಷ್ಟ್ರೀಯ ಕ್ರೀಡಾ ಕಾಂಪ್ಲೆಕ್ಸ್‌ಗಳು ಇವೆ. ಒಲಂಪಿಕ್ ಗಾತ್ರದ ಈಜುಕೊಳ, ಸಿಂಥೆಟಿಕ್ ಅಥ್ಲೆಟಕ್ಸ್ ಟ್ರ್ಯಾಕ್, ಕ್ರಿಕೆಟ್ ಸ್ಟೇಡಿಯಂ, ಇಪ್ಪತ್ತು ಸಾವಿರ ಸಾಮರ್ಥ್ಯದ ಪ್ಲಡ್‌ಲೈಟ್, ಹಾಕಿ, ರಗ್ಬಿ ಕ್ರೀಡಾಂಗಳು ಇಲ್ಲಿವೆ. ಇದರಿಂದಲೇ ಇಲ್ಲಿನ ಕ್ರೀಡಾಪಟುಗಳು ಒಲಂಪಿಕ್ಸ್ ಹಾಗೂ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂಬ ವಿವರವನ್ನು ಕಾರ್ಯಕ್ರಮದಲ್ಲಿ ನೀಡಲಾಗಿದೆ.
ಈ ಸಂಸ್ಥೆ ಎಂತಹವರಿಗೂ ಕನಸು ಕಾಣುವಂತೆ ಮಾಡುತ್ತದೆ. ಕೇವಲ ಕನಸಾಗಿ ಉಳಿಯುವಂತೆ ಮಾಡುವುದಿಲ್ಲ. ಆ ಕನಸು ನನಸಾಗಲು ಎಲ್ಲಾ ನೆರವನ್ನು ಮಾಡುತ್ತದೆ. ಆದ್ದರಿಂದಲೇ ಇಲ್ಲಿನ ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಯ್ಲಿ, ಧೋನಿ ಮುಂತಾದವರಂತೆ ಸಾಧನೆ ಮಾಡಲು ಕ್ರೀಡಾಪಟುಗಳು ಕನಸು ಕಾಣುತ್ತಾರೆ.

ಕೇವಲ ಪದವಿ ಪ್ರಮಾಣ ಪತ್ರ ಪಡೆದ ಪದವೀಧರರನ್ನು ಉತ್ಪಾದಿಸುವ ಸಂಸ್ಥೆಯಾಗಿ ಕೆಐಐಟಿ ಹೆಸರು ಪಡೆದಿಲ್ಲ. ಇಲ್ಲಿ ಓದಿದವರು ಸಮಾಜದಲ್ಲಿ ಪರಿವರ್ತನೆಯ ಹರಿಕಾರರಾಗಿ ಹೇಗೆ ಗುರುತಿಸಿಕೊಳ್ಳುತ್ತಾರೆ ಎಂಬುದನ್ನೂ ಗಮನಿಸಲಾಗುತ್ತದೆ. ಅಂತಹ ಆತ್ಮವಿಶ್ವಾಸ, ನಾಯಕತ್ವ ಗುಣ, ಸಾಮರ್ಥ್ಯವನ್ನು ಇಲ್ಲಿ ಬೆಳೆಸಲಾಗುತ್ತದೆ.
ಇಲ್ಲಿ ಕಲಿಕೆಗೆ ಸ್ವಾತಂತ್ರ್ಯ ಇದೆ. ಅಭಿವ್ಯಕ್ತಿಗೆ ಸ್ಥಳವಿದೆ. ಅತ್ಯಾಧುನಿಕ ಸೌಲಭ್ಯಗಳಿವೆ. ಕಲಿಕೆಗೆ ಯಾವುದೇ ಕೊರತೆಗಳು ಇಲ್ಲಿ ಕಾಣುವುದಿಲ್ಲ. ಆದ್ದರಿಂದ ಯಾವುದೇ ಮಹದಾಸೆ ಇಟ್ಟುಕೊಂಡು ಬಂದವರನ್ನು ನಿರಾಶೆಯಿಂದ ಕಳಿಸುವುದಿಲ್ಲ. ಅವರಲ್ಲಿ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ನಂಬಿಕೆ, ಸಾಧಿಸುವ ಹಂಬಲವನ್ನು ಇಮ್ಮಡಿಗೊಳಿಸುತ್ತೆ. ಇದನ್ನು ಇಲ್ಲಿನ ವಿದ್ಯಾರ್ಥಿಗಳ ಮಾತುಗಳಲ್ಲೇ ಕಾರ್ಯಕ್ರಮದಲ್ಲಿ ವಿವರಿಸಲಾಗಿದೆ.
ಇಲ್ಲಿ ಅಧ್ಯಯನ ಮಾಡಿದವರು ಕ್ಯಾಂಪಸ್ ಆಯ್ಕೆಯಲ್ಲಿ ಉತ್ತೀರ್ಣರಾಗಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ದೊಡ್ಡ ವೇತನದ ಉದ್ಯೋಗ ಪಡೆದಿರುವುದನ್ನು ಅವರ ಮಾತಿನಲ್ಲೇ ಕಾರ್ಯಕ್ರಮದಲ್ಲಿ ವಿವರಿಸಲಾಗಿದೆ. ಕೆಐಐಟಿಯನ್ನು ಸಂಶೋಧನೆ, ಅನ್ವೇಷಣೆ ಮತ್ತು ಅಪರಿಮಿತ ಅವಕಾಶಗಳ ಹಬ್ ಆಗಿ ಹೇಗೆ ಮಾಡಲಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲಿನ ಮಕ್ಕಳು ಇದ್ದರೂ ಅವರೆಲ್ಲರ ಮೇಲೂ ಹೇಗೆ ಗಮನ ಇಡಲಾಗಿದೆ ಎಂಬುದನ್ನು ತಿಳಿಸಿದೆ.
ಈ ಸಂಸ್ಥೆಗೆ ಭಾರತದಾದ್ಯಂತ ಮತ್ತು ವಿಶ್ವದ ವಿವಿಧ ದೇಶಗಳಿಂದ ಕಲಿಕೆಗೆ ಬರುತ್ತಾರೆ. ಅವರೆಲ್ಲರೂ ಕೆಐಐಟಿ ತಮ್ಮ ಎರಡನೇ ಮನೆ ಎಂದುಕೊಂಡೇ ಇರುತ್ತಾರೆ. ತಾವೂ ಬೆಳೆಯುತ್ತಾರೆ. ವಿವಿಗೂ ಹೆಸರು ತರುತ್ತಾರೆ.
ನ್ಯಾಷನಲ್ ಜಿಯೋಗ್ರಾಫಿಕ್‌ನಲ್ಲಿ ಕೆಐಐಟಿ
ಎರಡು ವರ್ಷಗಳ ಹಿಂದೆ ನ್ಯಾಷನಲ್ ಜಿಯೋಗ್ರಾಫಿಕ್ ವಾಹಿನಿಯಲ್ಲಿ "ಎ ಹೋಂ ಎವೇ ಪ್ರಂ ಹೋಂ ಇಂಡಿಯಾಸ್ ಮೆಗಾ ಕಿಚನ್ಸ್" ಎಂಬ ಹೆಸರಿನಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು. ಕಳಿಂಗ ಇನ್ಸ್‌ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ಸ್ (ಕೆಐಎಸ್‌ಎಸ್) ನ ಸಾವಿರಾರು ಬುಡಕಟ್ಟು ವಿದ್ಯಾರ್ಥಿಗಳಿಗೆ ಶುಚಿ, ರುಚಿಯಾದ ಆಹಾರವನ್ನು ಸಮಯಕ್ಕೆ ಸರಿಯಾಗಿ ಹೇಗೆ ತಯಾರು ಮಾಡಲಾಗುತ್ತದೆ ಎಂಬ ವಿವರವನ್ನು ಈ ಕಾರ್ಯಕ್ರಮದಲ್ಲಿ ನೀಡಲಾಗಿತ್ತು.
ಡಾ. ಅಚ್ಯುತ ಸಮಂತ ಧನ್ಯವಾದ
'ದಿ ಗ್ರೇಟ್ ಇಂಡಿಯಾ ಯೂನಿವರ್ಸಿಟಿ - KIIT ಭುವನೇಶ್ವರ್' ಹೆಸರಿನಲ್ಲಿ ಡಿಸ್ಕವರಿ ವಾಹಿನಿ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿದ್ದು ತಿಳಿದು ಅಪಾರ ಖುಷಿಯಾಯಿತು. ವಿಶ್ವಮಟ್ಟದ ವೀಕ್ಷಕರಿಗೆ ನಮ್ಮ ಸಂಸ್ಥೆಯ ಸಾಧನೆಗಳನ್ನು ಈ ಕಾರ್ಯಕ್ರಮ ತಿಳಿಸಿದೆ. ಇದು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಸಂಸ್ಥಾಪಕರಾದ ಡಾ.ಅಚ್ಯುತ ಸಮಂತ ಅವರು ಹೇಳಿದ್ದಾರೆ.