11 ಕ್ರೀಡಾಪಟುಗಳು ರಾಜ್ಯಮಟ್ಟದ ಸಿ.ಎಂ ಕಪ್ ಸ್ಪರ್ಧೆಗೆ ಆಯ್ಕೆ :: ವುಶೂ -ಟೆಕ್ವಾಂಡೋ ಕ್ರೀಡೆಯಲ್ಲಿ 21 ಪದಕಗಳ ಬೇಟೆ
ಗಂಗಾವತಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜಯನಗರ ಮತ್ತು ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಹೊಸಪೇಟೆ ಹಾಗೂ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಗಂಗಾವತಿ ತಾಲೂಕಿನ ಕ್ರೀಡಾಪಟುಗಳು ವುಶೂ ಹಾಗೂ ಟೆಕ್ವಾಂಡೋ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ.
ಬೇತಲ್ ಸಮೂಹ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ರಾಜ್ಯ ಮಟ್ಟದ ವಿಶೇಷ ಕ್ರೀಡೆಗಳ ಮುಖ್ಯ ತರಬೇತುದಾರ ಬಾಬುಸಾಬ ಅವರ ಮಾರ್ಗದರ್ಶನದಲ್ಲಿ ಬೇತಲ್ ಸಮೂಹ ಶಿಕ್ಷಣ ಸಂಸ್ಥೆ ಸೇರಿದಂತೆ ಗಂಗಾವತಿಯ ವಿವಿಧ ಶಿಕ್ಷಣ ಸಂಸ್ಥೆಗಳ ಕ್ರೀಡಾಪಟುಗಳು ವುಶೂ ಮತ್ತು ಟೆಕ್ವಾಂಡೋ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಬೇತಲ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಮಹಾವಿದ್ಯಾಲಯದ 12 ವಿದ್ಯಾರ್ಥಿಗಳು ಸೇರಿದಂತೆ ದೆಹಲಿ ಪಬ್ಲಿಕ್ ಶಾಲೆ, ಸರೋಜಮ್ಮ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಹೆಬೂಬನಗರ, ವೈ.ಜೆ.ಆರ್. ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಭಾಗ್ಯನಗರ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಒಟ್ಟು 21 ಕ್ರೀಡಾಪಟುಗಳು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿ ವಿಭಾಗ ಮಟ್ಟದ ವುಶೂ ಮತ್ತು ಟೆಕ್ವಾಂಡೋ ಸ್ಪರ್ಧೆಯಲ್ಲಿ ಗಂಗಾವತಿಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಒಟ್ಟು 21 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರಲ್ಲಿ 11 ಪ್ರಥಮ, 06 ದ್ವಿತೀಯ ಹಾಗೂ 04 ತೃತೀಯ ಸ್ಥಾನಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು:
ರಾಜಬಕ್ಷಿ, ಕೃತಿಕಾ.ಎಚ್., ಹೇಮಂತ್ ಕುಮಾರ್, ಅನುಷಾ, ಐಶ್ವರ್ಯ, ಆಫ್ರಿನ್, ಚೈತ್ರಾ, ದಾನಮ್ಮ, ಕಾವ್ಯ, ಮಹ್ಮದ್ ರಿಯಾನ್ ಹಾಗೂ ಮಂಜುನಾಥ್.
ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು : ಸಂಜನಾ, ನಂದನ್, ಶಿವರಾಜಗೌಡ, ಮಣಿಕಂಠ, ಮರ್ದಾನ್ ಅಲಿ ಹಾಗೂ ಶರಣಬಸವ.
ತೃತೀಯ ಸ್ಥಾನ ಪಡೆದ ಕ್ರೀಡಾಪಟುಗಳು : ರಾಕೇಶ್ ನಾಯಕ, ಅಕ್ಷಯಕುಮಾರ್, ಕಾರ್ತಿಕ್ ಕೆ. ಹಾಗೂ ಮಂಜುನಾಥ್ ಕೆ.
ಈ ಪೈಕಿ ಪ್ರಥಮ ಸ್ಥಾನ ಪಡೆದ 11 ಕ್ರೀಡಾಪಟುಗಳು ರಾಜ್ಯಮಟ್ಟದ ದಸರಾ ಸಿಎಂ ಕಪ್–2026 ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟದ ಕ್ರೀಡಾಕೂಟವು ಮೈಸೂರಿನಲ್ಲಿ ನಡೆಯಲಿದ್ದು, ಆಯ್ಕೆಯಾದ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಗಂಗಾವತಿ ತಾಲೂಕಿನ ಪರವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಬೇತಲ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜು ಸುಧಾಕರ್ ಮಾತನಾಡಿ, “ಕ್ರೀಡೆಯಲ್ಲಿ ಸಾಧನೆ ಎಂಬುದು ಒಂದು ದಿನದಲ್ಲಿ ದೊರೆಯುವ ಫಲವಲ್ಲ. ವಿದ್ಯಾರ್ಥಿಗಳ ಆಸಕ್ತಿ, ನಿರಂತರ ಅಭ್ಯಾಸ ಹಾಗೂ ತರಬೇತುದಾರರ ಸೂಕ್ತ ಮಾರ್ಗದರ್ಶನದಿಂದ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸೇರಿದಂತೆ ಗಂಗಾವತಿಯ ವಿವಿಧ ಶಿಕ್ಷಣ ಸಂಸ್ಥೆಗಳ ಕ್ರೀಡಾಪಟುಗಳು 21 ಪದಕಗಳನ್ನು ಗಳಿಸಿರುವುದು ಸಂತಸ ತಂದಿದೆ. ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ 11 ಕ್ರೀಡಾಪಟುಗಳಿಗೆ ಸಂಸ್ಥೆಯ ವತಿಯಿಂದ ಅಗತ್ಯ ಪ್ರೋತ್ಸಾಹ ಮತ್ತು ಸಹಕಾರವನ್ನು ಮುಂದುವರಿಸಲಾಗುವುದು” ಎಂದು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ರಾಜ್ಯ ಮಟ್ಟದ ವಿಶೇಷ ಕ್ರೀಡೆಗಳ ಮುಖ್ಯ ತರಬೇತುದಾರ ಬಾಬುಸಾಬ ಮಾತನಾಡಿ, “ವಿಭಾಗ ಮಟ್ಟದ ಸ್ಪರ್ಧೆಯಲ್ಲಿ 21 ಕ್ರೀಡಾಪಟುಗಳು ಭಾಗವಹಿಸಿ 21 ಪದಕಗಳನ್ನು ಗೆದ್ದಿರುವುದು ನಮ್ಮ ತರಬೇತಿ ತಂಡದ ಪರಿಶ್ರಮಕ್ಕೆ ದೊರೆತ ಫಲವಾಗಿದೆ. ಪ್ರತಿಯೊಬ್ಬ ಕ್ರೀಡಾಪಟುವಿನ ಸಾಮರ್ಥ್ಯವನ್ನು ಗುರುತಿಸಿ, ಅವರ ತಾಂತ್ರಿಕ ಕೌಶಲ್ಯ, ದೈಹಿಕ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ. ಇದೀಗ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ 11 ಕ್ರೀಡಾಪಟುಗಳ ಮೇಲೆ ಹೆಚ್ಚಿನ ಗಮನಹರಿಸಿ, ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ದಸರಾ ಸಿಎಂ ಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಅಗತ್ಯ ಸಿದ್ಧತೆ ಮಾಡಲಾಗುವುದು” ಎಂದು ತಿಳಿಸಿದರು.
ಗಂಗಾವತಿ ತಾಲೂಕಿನ ಕ್ರೀಡಾಪಟುಗಳ ಈ ಗಮನಾರ್ಹ ಸಾಧನೆಗೆ ಬೇತಲ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಹೇಮಾ ಸುಧಾಕರ್, ಅಧ್ಯಕ್ಷ ರಾಜು ಸುಧಾಕರ್, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಖಜಾಂಚಿ ಸುಜಾತ ರಾಜು, ಪದವಿ ಕಾಲೇಜಿನ ಪ್ರಾಚಾರ್ಯ ಬಸವರಾಜ್ ಕೆ., ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ದೈಹಿಕ ಶಿಕ್ಷಣ ಶಿಕ್ಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.