LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಒಂದೇ ರಾಜ್ಯದವರಾಗಿ ನಾವು ನಾವೇ ನೀರಿಗಾಗಿ ಕಿತ್ತಾಡುವುದು ಬೇಡ

ಗುಬ್ಬಿ : "ನಾವು ಒಂದೇ ರಾಜ್ಯದವರು. ನೀರಿಗಾಗಿ ನಾವು ನಾವೇ ಕಿತ್ತಾಟ ನಡೆಸುವುದು ಬೇಡ. ಎಲ್ಲರಿಗೂ ಸರಿಯಾದ ರೀತಿಯಲ್ಲಿ ನೀರನ್ನು ನೀಡಲಾಗುವುದು. ನೆರೆ ರಾಜ್ಯದವರ ಜೊತೆ ತಿಕ್ಕಾಟ ನಡೆಸುವಂತೆ ನಾವು, ನಾವೇ ಕಿತ್ತಾಡುವುದು ಸರಿಯಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಗುಬ್ಬಿ ತಾಲ್ಲೂಕಿನ 42 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ₹50 ಕೋಟಿ ವೆಚ್ಚದ "ಮಠದ ಹಳ್ಳ" ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

"ಬೆಂಗಳೂರಿನಲ್ಲಿ ಕಾವೇರಿ ಆರತಿ ಮಾಡಿ ಪ್ರಾರ್ಥನೆ ಮಾಡಿದೆ. ಕಾವೇರಿ ತಾಯಿ ಕೃಪೆಯಿಂದ ಮುಂಗಾರು ಆರಂಭವಾಗುವ ಮುನ್ನವೇ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳು ಬಹುತೇಕೆ ತುಂಬಿವೆ. ಕಳೆದ ವರ್ಷ 30% ತುಂಬಿದ್ದ ಕೆಆರ್ ಎಸ್ ಈ ವರ್ಷ 89% ತುಂಬಿದೆ. ಕಳೆದ ವರ್ಷ 30% ತುಂಬಿದ್ದ ಹೇಮಾವತಿ 85% ತುಂಬಿದೆ. ಕಳೆದ ವರ್ಷ 40% ತುಂಬಿದ್ದ ಹಾರಂಗಿ ಈ ವರ್ಷ 70% ತುಂಬಿದೆ. 51% ತುಂಬಿದ್ದ ಕಬಿನಿ ಈ ವರ್ಷ 80% ತುಂಬಿದೆ" ಎಂದು ಹರ್ಷ ವ್ಯಕ್ತಪಡಿಸಿದರು.



"ಬಹಳ ಸಂತೋಷದಿಂದ ಇಂದು ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದೇನೆ. ವಾಸು ಅವರ ಕ್ಷೇತ್ರ ಬೇರೆ ಅಲ್ಲ, ಡಿ.ಕೆ. ಶಿವಕುಮಾರ್ ಕ್ಷೇತ್ರ ಬೇರೆ ಅಲ್ಲ. ಇದು ನಮ್ಮ ಕ್ಷೇತ್ರ. ಯಾರು ಎಷ್ಟೇ ವಿರೋಧ ಮಾಡಲಿ, ಇಲ್ಲಿನ ರೈತರಿಗಾಗಿ ಏನು ಕೆಲಸ ಮಾಡಬೇಕೋ ನಾವು ಅದನ್ನು ಮಾಡುತ್ತೇವೆ. ಟಿ.ಬಿ ಜಯಚಂದ್ರ ಅವರಂತೆಯೇ ವಾಸು ಅವರೂ ನೀರಾವರಿ ಯೋಜನೆಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ನೀವು ಆತಂಕಪಡುವ ಅಗತ್ಯವಿಲ್ಲ" ಎಂದು ತಿಳಿಸಿದರು.

"ಪಕ್ಕದ ರಂಗನಹಳ್ಳಿಯವರು ನಮ್ಮ ಊರಿಗೂ ನೀರು ಕೊಡಿ ಎಂದು ಮನವಿ ಸಲ್ಲಿಸಿದರು. ಅವರ ಗ್ರಾಮಕ್ಕೂ ನೀರು ಪೂರೈಸಲಾಗುವುದು" ಎಂದು ಭರವಸೆ ನೀಡಿದರು.

"ಕುಮಾರಸ್ವಾಮಿ ಅವರು ಎತ್ತಿನಹೊಳೆ ನೀರು ಹೊರಗೆ ಹರಿಸುವುದು ಅಸಾಧ್ಯ ಎಂದಿದ್ದರು. ನಾವು ಅದನ್ನು ಸಾಧ್ಯವಾಗಿಸಿದ್ದೇನೆ. ಮಾತನಾಡುವವರು ಕಣ್ಣಾರೆ ನೋಡಲಿ ಎಂದು ನೀರನ್ನು ಹರಿಸಿದ್ದೇವೆ. ಅದು ನಿಮ್ಮ ಜಿಲ್ಲೆ ಗಡಿವರೆಗೂ ಬಂದಿದೆ. ಕೆಲವು ಕಡೆ ಅರಣ್ಯ ಇಲಾಖೆ ಸಮಸ್ಯೆ ಇದೆ. ಹಾಸನ ಹಾಗೂ ಜಿಲ್ಲಾಧಿಕಾರಿಗಳು ಭೂಮಿ ನೀಡಿದ್ದು, ಆದಷ್ಟು ಬೇಗ ಇಲ್ಲಿಗೆ ನೀರು ಹರಿಯಲಿದೆ" ಎಂದು ತಿಳಿಸಿದರು.



"ನಾನು ಕೊರಟಗೆರೆ ಹಾಗೂ ದೊಡ್ಡಬಳ್ಳಾಪುರದಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ವಿಚಾರವಾಗಿ ಪರಮೇಶ್ವರ್ ಅವರ ಜೊತೆ ಮಾತನಾಡಿದ್ದೇನೆ. ರೈತರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ನಾವು ಕನಿಷ್ಠ 3 ಟಿಎಂಸಿ ನೀರು ಸಂಗ್ರಹ ಮಾಡದಿದ್ದರೆ, ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀರು ನೀಡಲು ಸಾಧ್ಯವಿಲ್ಲ. ಹೀಗಾಗಿ ಈ ಯೋಜನೆ ಜಾರಿಗೆ ತಾಂತ್ರಿಕ ಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಿದ್ದು, ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡುತ್ತೇನೆ" ಎಂದು ತಿಳಿಸಿದರು.

"ಈ ಯೋಜನೆಯಲ್ಲಿ ಮೊದಲು ಕುಡಿಯುವ ನೀರನ್ನು ಪೂರೈಸಬೇಕು. ಆನಂತರ ಕೆರೆಗಳಿಗೆ ನೀರು ತುಂಬಿಸಲಾಗುವುದು. ಎಲ್ಲರಿಗೂ ಸರಿಯಾಗಿ ನೀರು ಹಂಚುವ ಕೆಲಸ ಮಾಡಲಾಗುವುದು" ಎಂದು ತಿಳಿಸಿದರು.

"ಹೇಮಾವತಿ ನೀರು ಬರುತ್ತಿದೆ. ಎತ್ತಿನಹೊಳೆ ನೀರನ್ನು ಕಳೆದ ವರ್ಷ ವಾಣಿ ವಿಲಾಸಕ್ಕೆ ಹರಿಸಲಾಗಿತ್ತು. ಕಾವೇರಿ ಅಂತಿಮ ತೀರ್ಪಿನಂತೆ ನೀರನ್ನು ಹೇಮಾವತಿ ತುಂಬಿಸಲಾಗುವುದು. ಇನ್ನು ಸ್ಥಳೀಯ ನಾಯಕರ ಮನವಿಯಂತೆ ಈ ಭಾಗದ ಕಾಲುವೆಗಳಿಗೆ ಎರಡು ದಿನಗಳಲ್ಲಿ ನೀರನ್ನು ಹರಿಸಿ ಕೆರೆ ತುಂಬಿಸಲು ಸೂಚನೆ ನೀಡಲಾಗುವುದು" ಎಂದು ತಿಳಿಸಿದರು.

"ಕೋಲಾರದಲ್ಲಿ 2 ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಬರದ ಸ್ಥಿತಿ ಇದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ನೀರು ತರಲಾಗುತ್ತಿದೆ" ಎಂದು ತಿಳಿಸಿದರು.

"ಇಲ್ಲಿರುವ ಮೇಲ್ಗಾಲುವೆ ದೇಶದಲ್ಲಿ  ಬೇರೆ ಎಲ್ಲೂ ಇಲ್ಲ. ಇದಕ್ಕಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ. ನಿಮ್ಮ ಸಹಕಾರ ಇರಲಿ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಶ್ರಮಿಸುತ್ತೇವೆ. ನೀವು ಶಾಸಕ ಗುಬ್ಬಿ ವಾಸು ಅವರ ಪರವಾಗಿ ನಿಲ್ಲಿ. ನಾನು ನಿಮ್ಮ ಪರ ನಿಲ್ಲುತ್ತೇನೆ" ಎಂದು ತಿಳಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ