ಪರಿಸರ ವಿಜ್ಞಾನವು ಆಧುನಿಕ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಸ್ತುತ ಕ್ಷೇತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇತ್ತೀಚಿನ ದಶಕಗಳಲ್ಲಿ, ಹವಾಮಾನ ಬದಲಾವಣೆ, ಜಾಗತಿಕ ತಾಪಮಾನದ ಏರಿಕೆ, ಮಾಲಿನ್ಯ, ಜೀವವೈವಿಧ್ಯ ನಷ್ಟ, ತ್ಯಾಜ್ಯ ಸಂಗ್ರಹಣೆ, ನೀರಿನ ಕೊರತೆ ಮತ್ತು ಪರಿಸರ ಅವನತಿಯಂತಹ ಪರಿಸರ ಸಮಸ್ಯೆಗಳು ಜಾಗತಿಕ ಸವಾಲುಗಳಾಗಿ ಮಾರ್ಪಟ್ಟಿವೆ. ಇದರ ಪರಿಣಾಮವಾಗಿ, ಸರ್ಕಾರಿ ಸಂಸ್ಥೆಗಳು, ಕೈಗಾರಿಕೆಗಳು, ಪುರಸಭೆಗಳು, ಸಂಶೋಧನಾ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಖಾಸಗಿ ವಲಯಗಳಲ್ಲಿ ಅರ್ಹ ಪರಿಸರ ವೃತ್ತಿಪರರ ಅಗತ್ಯವು ಅಗಾಧವಾಗಿ ಹೆಚ್ಚಾಗಿದೆ. ಪರಿಸರ ವಿಜ್ಞಾನದಲ್ಲಿ ಬಿ.ಎಸ್ಸಿ., ಎಂ.ಎಸ್ಸಿ., ಪರಿಸರ ಎಂಜಿನಿಯರಿಂಗ್ ಮಾಡಿರುವ ವಿದ್ಯಾರ್ಥಿಗಳು ಲಾಭದಾಯಕ ವೃತ್ತಿಜೀವನವನ್ನು ತಮ್ಮದಾಗಿಸಿಕೊಳ್ಳಬಹುದು.
ಪರಿಸರ ವಿಜ್ಞಾನ: ಒಂದು ವೃತ್ತಿ
ಅನೇಕ ಸಾಂಪ್ರದಾಯಿಕ ವೃತ್ತಿಗಳಿಗಿಂತ ಭಿನ್ನವಾಗಿ, ಪರಿಸರ ವಿಜ್ಞಾನವು ಜೀವನೋಪಾಯವನ್ನು ಗಳಿಸಲು ಮಾತ್ರವಲ್ಲದೆ ಸಮಾಜ ಮತ್ತು ಪ್ರಕೃತಿಗೆ ಸೇವೆ ಸಲ್ಲಿಸಲು ಅವಕಾಶವನ್ನು ಒದಗಿಸುತ್ತದೆ. ಪರಿಸರ ಕಾನೂನುಗಳು ಮತ್ತು ಸುಸ್ಥಿರ ಅಭಿವೃದ್ಧಿ ನೀತಿಗಳು ಹೆಚ್ಚುತ್ತಿರುವ ಕಾರಣ ಪರಿಸರ ತಜ್ಞರಿಗೆ ಗಮನಾರ್ಹವಾಗಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿವೆ.
ಸರ್ಕಾರಿ ಉದ್ಯೋಗಾವಕಾಶಗಳು
ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿ ಅವಕಾಶಗಳು: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು (SPCBs) ಗಳಲ್ಲಿ ವಿಜ್ಞಾನಿ, ಎನ್ವಿರಾನ್ಮೆಂಟಲ್ ಆಫಿಸರ್, ಸಂಶೋಧನಾ ಸಹಾಯಕ, ತಾಂತ್ರಿಕ ಅಧಿಕಾರಿ, ಪ್ರಯೋಗಾಲಯ ವಿಶ್ಲೇಷಕ, ಪರಿಸರ ಸಲಹೆಗಾರ ಹುದ್ದೆಗಳಿಗೆ ಪರಿಸರ ವೃತ್ತಿಪರರನ್ನು ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ನೇರ ನೇಮಕಾತಿಯ ಮೂಲಕ ನೇಮಿಸಿಕೊಳ್ಳಲಾಗುತ್ತಿದೆ.
ಸಂಶೋಧನೆ ಮತ್ತು ಶೈಕ್ಷಣಿಕ ವೃತ್ತಿಗಳು: ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ NET/SLET, ಪಿಎಚ್ಡಿ ಮಾಡಿದವರಿಗೆ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳಲ್ಲಿ, ಸಂಶೋಧನಾ ಸಂಸ್ಥೆಗಳು, ಪರಿಸರ ಪ್ರಯೋಗಾಲಯಗಳು, ಅಂತರರಾಷ್ಟ್ರೀಯ ಸಂಸ್ಥೆಗಳು, ಹವಾಮಾನ ಸಂಶೋಧನಾ ಕೇಂದ್ರಗಳಲ್ಲಿ ವೃತ್ತಿ ಅವಕಾಶಗಳು ಲಭ್ಯವಿದೆ.
ಪುರಸಭೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ವೃತ್ತಿ ಅವಕಾಶಗಳು
ಕ್ಷಿಪ್ರ ನಗರೀಕರಣವು ಘನತ್ಯಾಜ್ಯ ನಿರ್ವಹಣೆ, ಒಳಚರಂಡಿ ಸಂಸ್ಕರಣಾ ಘಟಕಗಳು (STP), ಕೆರೆಗಳು ಹಾಗೂ ನೀರಿನ ಮೂಲಗಳ ಸಂರಕ್ಷಣಾ ಯೋಜನೆಗಳು, ನಗರ ಜೀವವೈವಿಧ್ಯ ನಿರ್ವಹಣೆ, ಸ್ಮಾರ್ಟ್ ಸಿಟಿ ಪರಿಸರ ಮೇಲ್ವಿಚಾರಣೆ, ನೀರಿನ ಗುಣಮಟ್ಟದ ಮೌಲ್ಯಮಾಪನ, ನೈರ್ಮಲ್ಯ ಮತ್ತು ನಗರ ಮಾಲಿನ್ಯ ನಿಯಂತ್ರಣದಲ್ಲಿ ಅಗಾಧ ಸವಾಲುಗಳನ್ನು ಸೃಷ್ಟಿಸಿದೆ. ನಗರ ಪರಿಸರ ವ್ಯವಸ್ಥೆಗಳ ವೈಜ್ಞಾನಿಕ ನಿರ್ವಹಣೆಗಾಗಿ ನಗರಸಭೆ ನಿಗಮಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಈಗ ಹೆಚ್ಚಾಗಿ ಪರಿಸರ ವೃತ್ತಿಪರರನ್ನು ನೇಮಿಸಿಕೊಳ್ಳುತ್ತಿವೆ.
ಕೈಗಾರಿಕಾ ಮತ್ತು ಖಾಸಗಿ ವಲಯದ ವೃತ್ತಿಜೀವನ
EHS (ಎನ್ವಿರಾನ್ಮೆಂಟಲ್ ಹೆಲ್ತ್ ಸೇಫ್ಟಿ): ಸರ್ಕಾರದ ಮಾನದಂಡಗಳಂತೆ ಔಷಧೀಯ ಕೈಗಾರಿಕೆಗಳು, ರಾಸಾಯನಿಕ ಕೈಗಾರಿಕೆಗಳು, ಜವಳಿ ಕೈಗಾರಿಕೆಗಳು, ಗಣಿಗಾರಿಕೆ ವಲಯಗಳು, ಆಟೋಮೊಬೈಲ್ ಕೈಗಾರಿಕೆಗಳು, ಪೆಟ್ರೋಕೆಮಿಕಲ್ ಕೈಗಾರಿಕೆಗಳು, ಆಹಾರ ಸಂಸ್ಕರಣಾ ಘಟಕಗಳು, ಐಟಿ ಮತ್ತು ಉತ್ಪಾದನಾ ಕಂಪನಿಗಳಲ್ಲಿ EHS ಅಧಿಕಾರಿಗಳನ್ನು ನೇಮಿಸುವುದು ಕಡ್ಡಾಯ ಮಾಡಲಾಗಿದೆ ಹಾಗೂ ಈ ಕ್ಷೇತ್ರದಲ್ಲಿ EHS ಪರಿಣಿತರ ಕೊರತೆ ಇದೆ.
STP ಮತ್ತು ETP ನಿರ್ವಹಣೆಯಲ್ಲಿ ಅವಕಾಶಗಳು: ಪರಿಸರ ವೃತ್ತಿಪರರಿಗೆ ಒಳಚರಂಡಿ ಸಂಸ್ಕರಣಾ ಘಟಕಗಳು (STP), ತ್ಯಾಜ್ಯ ಸಂಸ್ಕರಣಾ ಘಟಕಗಳು (ETP), ನೀರು ಸಂಸ್ಕರಣಾ ಘಟಕಗಳು (WTP), ಕ್ಷೇತ್ರಗಳಲ್ಲಿ ಹೆಚ್ಚಿನ ಬೇಡಿಕೆಯಿದೆ.
ಎನ್ವಿರಾನ್ಮೆಂಟಲ್, ಸೋಶಿಯಲ್ ಅಂಡ್ ಗವರ್ನೆನ್ಸ್ (ESG) ವೃತ್ತಿಗಳು: ಅನೇಕ ಅಂತರರಾಷ್ಟ್ರೀಯ, ರಾಷ್ಟ್ರೀಯ ಕಂಪನಿಗಳು • ಸುಸ್ಥಿರತೆ ಅಧಿಕಾರಿ • ESG ವಿಶ್ಲೇಷಕ • ಹವಾಮಾನ ಬದಲಾವಣೆ ಸಲಹೆಗಾರ • ಕಾರ್ಬನ್ ಫುಟ್ ಪ್ರಿಂಟ್ ವಿಶ್ಲೇಷಕ • ಗ್ರೀನ್ ಬಿಳ್ಡಿಂಗ್ ಸಲಹೆಗಾರ • ಕಾರ್ಪೊರೇಟ್ ಸುಸ್ಥಿರತೆಯ ವ್ಯವಸ್ಥಾಪಕರಾಗಿ ಪರಿಸರ ತಜ್ಞರನ್ನು ನೆಮಿಸಿಕೊಳ್ಳುತ್ತಿವೆ. ಮುಂಬರುವ ದಿನಗಳಲ್ಲಿ ಸರ್ಕಾರದ ಸ್ಥಳೀಯ ಸಂಸ್ಥೆಗಳಲ್ಲಿಯೂ ಕೂಡ ಕಾರ್ಬನ್ ಫುಟ್ ಪ್ರಿಂಟ್ ವಿಶ್ಲೇಷಕ ಪರಿಸರ ತಜ್ಞರನ್ನು ನೇಮಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.
NGO ಮತ್ತು ಪರಿಸರ ವಕಾಲತ್ತು ಕ್ಷೇತ್ರದಲ್ಲಿ ವೃತ್ತಿಜೀವನ: ಪರಿಸರ ವಿಜ್ಞಾನ ಪದವೀಧರರು ವನ್ಯಜೀವಿ ಸಂರಕ್ಷಣೆ, ಜೀವವೈವಿಧ್ಯ ಸಂರಕ್ಷಣೆ, ಜಲ ಸಂರಕ್ಷಣೆ, ಹವಾಮಾನ ಕ್ರಿಯಾ ಕಾರ್ಯಕ್ರಮಗಳು, ಗ್ರಾಮೀಣ ಪರಿಸರ ಅಭಿವೃದ್ಧಿ, ಪರಿಸರ ಶಿಕ್ಷಣ, ತ್ಯಾಜ್ಯ ನಿರ್ವಹಣಾ ಜಾಗೃತಿ ತೊಡಗಿಸಿಕೊಂಡಿರುವ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದು ಅಥವಾ ತಮ್ಮದೇ ಆದ NGO ಗಳನ್ನು ಪ್ರಾರಂಭೀಸಬಹುದು.
ಎನ್ವಿರಾನ್ಮೆಂಟಲ್ ಕನ್ಸಲ್ಟೆನ್ಸಿ: ಹೆಚ್ಚುತ್ತಿರುವ ಪರಿಸರ ನಿಯಮಗಳೊಂದಿಗೆ, ಕೈಗಾರಿಕೆಗಳಿಗೆ ಪರಿಸರ ಅನುಮತಿಗಳನ್ನು ಪಡೆಯಲು ಮತ್ತು ಸರ್ಕಾರದ ಮಾನಡಂಡಗಳನ್ನು ಕಾಪಾಡಿಕೊಳ್ಳಲು ಪರಿಸರ ತಜ್ಞರ ಮಾರ್ಗದರ್ಶನದ ಅಗತ್ಯವಿದೆ.
ಹಸಿರು ಉದ್ಯಮಶೀಲತಾ ಅವಕಾಶಗಳು: ಪರಿಸರ ವಿಜ್ಞಾನ ಪದವಿಧರರು ತಮ್ಮದೇ ಆದಂತಹ ಈ ಕೆಳಗೆ ತಿಳಿಸಿರುವ ಸ್ವಂತದ ಹಸಿರು ಉದ್ದಿಮೆಗಳನ್ನು ಪ್ರಾರಂಭಿಸಬಹುದು. ವಾಟರ್ ಟೆಸ್ಟಿಂಗ್ ಪ್ರಯೋಗಾಲಯಗಳು, ತ್ಯಾಜ್ಯ ಮರುಬಳಕೆ ಘಟಕಗಳು, ಸಾವಯವ ಗೊಬ್ಬರ ಉತ್ಪಾದನಾ ಘಟಕಗಳು, ಮಳೆನೀರು ಕೊಯ್ಲು ವ್ಯವಸ್ಥೆಗಳು, ಪರಿಸರ ತರಬೇತಿ ಸಂಸ್ಥೆಗಳು
ಜೈವಿಕ ಗೊಬ್ಬರ ಘಟಕಗಳು, ನವೀಕರಿಸಬಹುದಾದ ಇಂಧನ ಸಲಹಾ ಸೇವೆಗಳು
ಪರಿಸರ ವಿಜ್ಞಾನದ ಭವಿಷ್ಯದ ವ್ಯಾಪ್ತಿ: ಜಾಗತಿಕವಾಗಿ ಪರಿಸರ ಸವಾಲುಗಳು ಹೆಚ್ಚುತ್ತಿವೆ ಮತ್ತು ಸರ್ಕಾರಗಳು ಹಾಗೂ ಕೈಗಾರಿಕೆಗಳು ಪರಿಸರ ನಿರ್ವಹಣೆ ಮತ್ತು ಸುಸ್ಥಿರತೆಯಲ್ಲಿ ಭಾರಿ ಹೂಡಿಕೆ ಮಾಡುತ್ತಿವೆ. ಪರಿಣಾಮವಾಗಿ, ಪರಿಸರ ವಿಜ್ಞಾನವು ಭವಿಷ್ಯವನ್ನು ಕೇಂದ್ರೀಕರಿಸಿದ ಮತ್ತು ಉದ್ಯೋಗ ಸೃಷ್ಟಿಸುವ ವಿಭಾಗಗಳಲ್ಲಿ ಒಂದಾಗುತ್ತಿದೆ.
ಪರಿಸರ ವಿಜ್ಞಾನ ಕೊರ್ಸ್ ಎಲ್ಲಿ ಕಲಿಸಲಾಗುತ್ತದೆ: ಕರ್ನಾಟಕ ರಾಜ್ಯದ ಮೈಸೂರು, ಕುವೆಂಪು, ದಾವಣಗೆರೆ, ಬೆಂಗಳೂರು, ಮಂಗಳೂರು, ಗುಲ್ಬರ್ಗಾ ವಿಶ್ವವಿದ್ಯಾನಿಲಯಗಳಲ್ಲಿ M.Sc.Ph.D ಪದವಿ ನೀಡಲಾಗುತ್ತಿದೆ ಜೊತೆಗೆ ಕೆಲವು ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ BE ಪರಿಸರ ಇಂಜಿನಿಯರಿಂಗ್ ನೀಡಲಾಗುತ್ತಿದೆ.

ಡಾ. ನಾಗೇಂದ್ರ ನಾಯ್ಕ ಕೆ.
ಪರಿಸರ ವಿಜ್ಞಾನ ಸಹ ಪ್ರಾಧ್ಯಾಪಕರು,
ಸ.ಪ್ರ.ದ. ಕಾಲೇಜು ದಾವಣಗೆರೆ