ಬೆಂಗಳೂರು: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಕೆರೆ, ಗೋಮಾಳ, ಸರ್ಕಾರಿ ಜಮೀನು ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದೆ. ಕೂಡಲೇ ಸರ್ಕಾರ ಆ ಜಮೀನುಗಳನ್ನು ವಶಪಡಿಸಿಕೊಳ್ಳಬೇಕು. ಅಲ್ಲದೆ, ದಲಿತ ಮಹಿಳೆ ರಂಗಮ್ಮನವರಿಗೆ ಸೇರಿದ 2 ಎಕರೆ ಜಾಗವನ್ನು ಮರಳಿ ಅವರ ಸ್ವಾಧೀನಕ್ಕೆ ನೀಡಬೇಕು ಎಂದು ಆಗ್ರಹಿಸಿ 'ರಾಷ್ಟ್ರೀಯ ಅಂಬೇಡ್ಕರ್ ಸೇನೆ' ಹಾಗೂ ಸಮತಾ ಸೈನಿಕ ದಳದ ವತಿಯಿಂದ ಸೋಮವಾರ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯ ನಂತರ, ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರಾದ ಅರ್ಜುನ್ ಗೋಪಾಲಯ್ಯ ಹಾಗೂ ಸಮತಾ ಸೈನಿಕ ದಳದ ಯುವ ಘಟಕದ ಅಧ್ಯಕ್ಷರಾದ ಚಳುವಳಿ ನಾಗೇಶ್ ನೇತೃತ್ವದ ನಿಯೋಗವು ವಿಧಾನಸೌಧದಲ್ಲಿ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ, ಈ ಕುರಿತು ಸಂಪೂರ್ಣ ವಿವರಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿದೆ.
ಡಿಸಿಎಂ ಜಿ. ಪರಮೇಶ್ವರ್ ಅವರ ಭರವಸೆ: ನಿಯೋಗದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು, "ಆರ್ಟ್ ಆಫ್ ಲಿವಿಂಗ್ ಸಂಸ್ಥೆಯವರು ಮಾನ್ಯ ಉಚ್ಚ ನ್ಯಾಯಾಲಯದಿಂದ ಮಧ್ಯಂತರ ತಡೆಯಾಜ್ಞೆ ತಂದಿದ್ದಾರೆ. ಈ ರೀತಿಯ ಪ್ರಕರಣಗಳನ್ನು ಬಗೆಹರಿಸಲು ಹಾಗೂ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ವಿಶೇಷ ತಿದ್ದುಪಡಿ ಮಸೂದೆಯನ್ನು ತಯಾರಿಸಲಾಗುತ್ತಿದೆ. ಮುಂಬರುವ ಸದನದಲ್ಲಿ ಅದನ್ನು ಜಾರಿಗೆ ತರಲಾಗುವುದು" ಎಂದು ಭರವಸೆ ನೀಡಿದರು.
ಇದೇ ನಿಯೋಗದಲ್ಲಿ ಅಂಬೇಡ್ಕರ್ ಸೇನೆ ಮತ್ತು ವಿವಿಧ ದಲಿತ ಪರ ಸಂಘಟನೆಗಳ ಪ್ರಮುಖರು ಇದ್ದರು.