ನಾಯಕನಹಟ್ಟಿ: ಇಡೀ ವಿಶ್ವದಲ್ಲಿ ಬಕ್ರೀದ್ ಹಬ್ಬವನ್ನು ಇಸ್ಲಾಮಿನ ಕ್ಯಾಲೆಂಡರ್ ಪ್ರಕಾರ ಜಿಲ್ ಹಿಜ್ಜಾದ ಮೊದಲನೇ 10 ದಿನಗಳ ಕಾಲ ಆಚರಿಸಲಾಗುತ್ತದೆ. ಇದೇ ತಿಂಗಳ 6 ದಿನಗಳಲ್ಲಿ ಇಸ್ಲಾಂನ 5ನೇ ಆರಾಧನಾ ಸ್ಥಂಬವಾದ ಹಜ್ ಯಾತ್ರೆಯನ್ನೂ ಸಹ ಆಚರಿಸಲಾಗುತ್ತದೆ. ಇಡೀ ವಿಶ್ವದ ಜನರು ಹಜ್ ಯಾತ್ರೆಗಾಗಿ ವಿವಿದ ದೇಶಗಳಿಂದ ಮೆಕ್ಕಾ ಪಟ್ಟಣಕ್ಕೆ ಬಂದು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
ಇದರ ಹಿನ್ನೆಲೆಯನ್ನು ನೋಡುವುದಾದರೆ ಇಸ್ಲಾಂನ ಪ್ರಮುಖ ಪ್ರವಾದಿಗಳಲ್ಲಿ ಒಬ್ಬರಾದ ಇಬ್ರಾಹಿಂ ಮತ್ತು ತನ್ನ ಪತ್ನಿ ಹಾಜಿರಾ ಹಾಗೂ ತಮ್ಮ ಪುತ್ರ ಪ್ರವಾದಿ ಇಸ್ಮಾಯಿಲ್ ಜಬೀವುಲ್ಲಾ ಇವರ ತ್ಯಾಗ ಮತ್ತು ಬಲಿದಾನಗಳ ಪ್ರತಿಯಾಗಿ ಅಲ್ಲಾಹ್ನು ಇಸ್ಲಾಂನಲ್ಲಿ ಹಜ್ ಯಾತ್ರೆಯನ್ನು ಕಡ್ಡಾಯಗೊಳಿಸಿದ್ದಾರೆ.
ಸುಮಾರು 2000 ವರ್ಷಗಳ ಹಿಂದೆ ಪ್ರವಾದಿ ಇಬ್ರಾಹೀಂರು ತನ್ನ ಅನುಯಾಯಿಗಳನ್ನು ಏಕ ದೇವನಾದ ಅಲ್ಲಾಹ್ನ ಆರಾಧನೆಯನ್ನು ಮಾತ್ರ ಮಾಡಿ ಎಂದು ಕರೆ ನೀಡಿದ್ದರು. ಹಾಗೂ ಜೀವನದಲ್ಲಿ ಅಲ್ಲಾಹ್ನು ಯಾವ ರೀತಿ ಜೀವಿಸಲು ಕಡ್ಡಾಯಗೊಳಿಸಿದ್ದಾನೋ ಅದೇ ರೀತಿಯಾಗಿ ಜೀವಿಸಲು ಪ್ರೇರಣೆ ನೀಡಿದರು. ತಮ್ಮ ಸ್ವಂತ ಜೀವನದಲ್ಲಿ ಅಲ್ಲಾಹ್ನ ನಿಯಮಗಳನ್ನು ಅಳವಡಿಸಿಕೊಂಡು ಜೀವಿಸುತ್ತಿದ್ದರು. ತಮ್ಮ ಸ್ವಂತ ತಂದೆಯವರಾದ ಹಾಜರ್ರವರು ಮೂರ್ತಿಗಳನ್ನು ತಯಾರಿಸುತ್ತಿದ್ದು ಹಾಗೂ ಜನರಿಗೆ ಅವುಗಳನ್ನು ಮಾರಾಟಮಾಡಿ ಮೂರ್ತಿ ಪೂಜೆಯನ್ನು ಸ್ವತಃ ತಾವುಗಳೂ ಸಹ ನಿರ್ವಹಿಸುತ್ತಿದ್ದರು. ಆದರೆ ದೇವನಾದ ಅಲ್ಲಾಹ್ನಿಗೆ ಇದು ಇಷ್ಟವಿಲ್ಲದ್ದಾಗಿತ್ತು. ಇದನ್ನು ಸರಿಪಡಿಸಲೆಂದೇ ಪ್ರವಾದಿಗಳನ್ನು ಭೂಮಿಗೆ ಕಳುಹಿಸಿ ಅವರ ಕಡೆಯಿಂದ ಜನರನ್ನು ಒಳಿತಿನ ಕಡೆಗೆ ಕರೆಯುವ ಕೆಲವನ್ನು ಪ್ರವಾದಿಗಳ ಮುಖಾಂತರ ಪಡೆಯುತ್ತಿದ್ದನು. ಅದೇ ರೀತಿಯಾಗಿ ಇಬ್ರಾಹೀಂರವರೂ ಸಹ ಅಲ್ಲಾಹ್ನ ನಿಯಮಗಳನ್ನು ಜನರಿಗೆ ತಿಳಿ ಹೇಳಿದರು ಆದರೆ ವಿಗ್ರಹಗಳನ್ನು ಆರಾಧಿಸುತ್ತಿದ್ದ ಜನರಿಗೆ ಇದು ಇಷ್ಟವಾಗಲಿಲ್ಲ. ಇಬ್ರಾಹೀಂರವರನ್ನು ವಿವಿಧ ರೀತಿಗಳಲ್ಲಿ ಹಿಂಸೆ ಕೊಡಲು ಶುರುಮಾಡಿದರು.
ಇದರಿಂದ ಬೇಸತ್ತ ಇಬ್ರಾಹಿಂರು ಅಲ್ಲಾಹ್ನ ಆಜ್ಞೆಯಂತೆ ಸ್ವಂತ ಸ್ಥಳವನ್ನು ಬಿಟ್ಟು ಬೇರೆ ಕಡೆಗೆ ಹೋಗುತ್ತಾರೆ. ಇವರಿಗೆ ಇದ್ದ ಒಂದು ಕೊರತೆ ಎಂದರೆ ಸುಮಾರು 90 ವರ್ಷಗಳೂ ಕಳೆದರೂ ಒಬ್ಬ ಸಂತಾನ ಇರುವುದಿಲ್ಲ. ಇದನ್ನು ಕುರಿತು ಅಲ್ಲಾಹ್ನಲ್ಲಿ ತುಂಬಾ ಬೇಡಿಕೆಗಳನ್ನು ಇಟ್ಟಾಗ ಅಲ್ಲಾಹ್ನು ತನ್ನ ಅನುಗ್ರಹವನ್ನು ಇವರ ಮೇಲೆ ತೋರಿಸುತ್ತಾರೆ. 90ರ ಇಳಿ ವಯಸ್ಸಿನಲ್ಲಿ ಮಗುವನ್ನು ಅನುಗ್ರಹಿಸುತ್ತಾನೆ. ಇವರಿಗೆ ಅಲ್ಲಾಹ್ನ ಆದೇಶದಂತೆ ಇಸ್ಮಾಯಿಲ್ ಎಂದು ನಾಮಕರಣ ಮಾಡುತ್ತಾರೆ. ಇನ್ನು ಚಿಕ್ಕ ಕಂದಮ್ಮನಾಗಿದ್ದ ಇಸ್ಮಾಯಿಲ್ ರವರನ್ನು ಮತ್ತು ಇಬ್ರಾಹೀಂರ ಪತ್ನಿಯವರನ್ನು ತನ್ನಿಂದ ದೂರಮಾಡಿ ಒಂದು ನಿರ್ಜನ ಪ್ರದೇಶಕ್ಕೆ ಬಿಟ್ಟು ಬರಲು ಅಲ್ಲಾಹ್ನು ಆಜ್ಞಾಪಿಸುತ್ತಾನೆ ಇದರಂತಹೇ ಇಬ್ರಾಹೀಂರು ಅಲ್ಲಾಹ್ನ ಆಜ್ಞೆಯನ್ನು ಪಾಲಿಸುತ್ತಾರೆ. ತಮ್ಮ ಮಡದಿ ಹಾಗೂ ಇನ್ನು ಹಾಲು ಕುಡಿಯುತ್ತಿದ್ದ ಇಸ್ಮಾಯಿಲ್ರನ್ನು ಯಾರೂ ವಾಸವಿರದ, ಅನ್ನ-ಆಹಾರಗಳು, ಕುಡಿಯಲು ನೀರೂ ಸಹ ಇಲ್ಲದ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಬಿಟ್ಟು ಬರುತ್ತಾರೆ.
ಪವಿತ್ರ ಮಹಿಳೆಯಾದ ಹಾಜಿರಾ ರವರು ತಮ್ಮ ಕಂದಮ್ಮ ಇಸ್ಮಾಯಿಲ್ರೊಂದಿಗೆ ಕಾಲ ಕಳೆಯುತ್ತಾರೆ. ತಮ್ಮ ಜೊತೆ ಇದ್ದ ಸ್ವಲ್ಪ ಆಹಾರ, ನೀರು ಖಾಲಿಯಾಗುತ್ತದೆ. ಮಗುವಿಗೆ ತಾಯಿಯ ಹಾಲು ಉಣಿಸಲೂ ಸಹ ತಾಯಿ ಹಾಲೂ ಕೊನೆಯಾಗುತ್ತದೆ. ಇಂತಹ ಕಷ್ಟದ ಕಾಲದಲ್ಲೂ ಸಹ ಇವರು ಅಲ್ಲಾಹ್ನ ಆಜ್ಞೆಗಳನ್ನು ಪಾಲಿಸುತ್ತಲೇ ಇರುತ್ತಾರೆ. ಆಹಾರ, ನೀರು ಖಾಲಿಯಾದ ಸಮಯದಲ್ಲಿ ತಲ್ಲಣಗೊಂಡ ತಾಯಿ ಎಲ್ಲಿಯಾದರೂ, ಯಾರಾದರೂ ಬರುವರೋ ಎಂದು ಸಫಾ, ಮರ್ವಾ ಬೆಟ್ಟಗಳ ಮದ್ಯೆ ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟದ ಕಡೆ ತಿರುಗುತ್ತಾರೆ. ಆಗ ಅಲ್ಲಾಹ್ನು ಇಸ್ಮಾಯಿಲ್ರ ಪಾದದ ಕೆಳಗಿಂದ ನೀರನ್ನು ಬರುವಂತೆ ಮಾಡುತ್ತಾರೆ. ಈ ನೀರು ಅಂದಿನಿಂದ ಇಂದಿನವರೆಗೂ ಬರುತ್ತಲೇ ಇದೆ, ಇದರ ಹೆಸರನ್ನು ಜಮ್-ಜಮ್ ಎಂದು ಕರೆಯುತ್ತಾರೆ. ಈ ನೀರನ್ನು ಇಡೀ ವಿಶ್ವದ ಜನತೆ ಕುಡಿಯುತ್ತಾರೆ ಹಾಗೂ ಆಹಾರ ಹಾಗೂ ನೀರಾಗಿ ಬಳಸುತ್ತಿದ್ದಾರೆ. ನಂತರ ಪ್ರವಾದಿಯವರ ಪತ್ನಿ ಹಾಜಿರ ಮತ್ತು ಇಸ್ಮಾಯಿಲ್ರವರು ಇಂತಹ ಕಷ್ಟದ ಸಮಯವನ್ನು ಯಶಸ್ವಿಯಾಗಿ ಅಲ್ಲಾಹ್ನನ್ನು ಮೆಚ್ಚಿಸುತ್ತಾರೆ.
ನಂತರ ಇಬ್ರಾಹಿಂರು ತಮ್ಮ ಪತ್ನಿ ಹಾಗೂ ಮಗನೊಂದು ಜೀವನ ನಡೆಸಲು ಮುಂದುವರೆಸುತ್ತಾರೆ. ಒಂದು ದಿನ ಇಬ್ರಾಹಿಂರವರು ತಮ್ಮ ಕನಸಿನಲ್ಲಿ ಪುತ್ರನಾದ ಇಸ್ಮಾಯಿಲ್ನನ್ನು ಅಲ್ಲಾಹ್ನ ಹೆಸರಿನಲ್ಲಿ ಬಲಿಕೊಡುವ ದೃಶ್ಯವನ್ನು ನೋಡುತ್ತಾರೆ. ಇದೇ ರೀತಿಯಾಗಿ ಮೂರು ರಾತ್ರಿಯಲ್ಲಿ ಕನಸನ್ನು ಕಾಣುತ್ತಾರೆ. ಈ ಕನಸನ್ನು ಅಲ್ಲಾಹ್ನ ಆಜ್ಞೆಯೆಂದು ತಿಳಿದು ತಮ್ಮ ಪುತ್ರನ ಬಳಿ ಹೇಳುತ್ತಾರೆ. ಅದನ್ನು ಕೇಳಿದ ಪುತ್ರನಾದ ಇಸ್ಮಾಯಿಲ್ರವರು ಇದು ಅಲ್ಲಾಹ್ನ ಆಜ್ಞೆಯಾಗಿದ್ದರೆ ನನಗೆ ಇದು ಸಂಪೂರ್ಣ ಒಪ್ಪಿಗೆ ಇದೆ ನೀವು ಅಲ್ಲಾಹ್ನ ಆಜ್ಞೆಯನ್ನು ಪಾಲಿಸಿರಿ ನಾನು ತಾಳ್ಮೆಯುಳ್ಳವನಾಗಿರುತ್ತೇನೆ ಮತ್ತು ಅಲ್ಲಾಹ್ನ ಆಜ್ಞೆಗೆ ಸಿದ್ದನಿದ್ದೇನೆ ಎಂದು ಹೇಳುತ್ತಾರೆ. ಇದರಂತೆಯೇ ಇಬ್ರಾಹೀಂರು ತಮ್ಮ ಕನಸಿನಲ್ಲಿ ಕಂಡಂತೆ ತಮ್ಮ ಪುತ್ರನಾದ ಇಸ್ಮಾಯಿಲ್ರನ್ನು ಬಲಿ ಕೊಡಲು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಸಮಯದಲ್ಲಿ ಇಬ್ಲೀಸ್ನು ಶೈತಾನನು ಇವರನ್ನು ಗೊಂದಲಕ್ಕೆ ತಳಲ್ಲು ಬಯಸುತ್ತಾನೆ. ಆದರೆ ಇದನ್ನರಿತ ಇಬ್ರಾಹೀಂರು ಶೈತಾನನಿಗೆ ಕಲ್ಲು ಎಸೆದು ತಮ್ಮ ಕಾರ್ಯವನ್ನು ಮಾಡಲು ಮುಂದುವರೆಯುತ್ತಾರೆ. ಮಗನ್ನನು ಬಲಿ ಕೊಡುವ ಸಮಯ ಬಂದಾಗ ಮಗನ ಮುಖಕ್ಕೆ ಕಪ್ಪು ಬಟ್ಟೆಯನ್ನು ಕಟ್ಟಿ ಬಲಿ ಕೊಡಲು ಚೂರಿ ಚಲಾಯಿಸುತ್ತಾರೆ. ಆದರೆ ಮಗನ ಬದಲಾಗಿ ಸ್ವರ್ಗದಿಂದ ಬಂದಂತಹ ಕುರಿಯೊಂದನ್ನು ಬಲಿ ನೀಡುತ್ತಾರೆ.
ಇಬ್ರಾಹಿಂ ಮತ್ತು ಇಸ್ಮಾಯಿಲ್ ಇವರಿಬ್ಬರ ಈ ತ್ಯಾಗ ಮತ್ತು ಬಲಿದಾನ ಪ್ರತೀಖವಾಗಿ ಅಲ್ಲಾಹ್ನು ಅವರ ಈ ಕೆಲಸವನ್ನು ಮೆಚ್ಚಿಕೊಂಡು ಪ್ರತೀ ವರ್ಷ ಹಜ್ ಯಾತ್ರಯಲ್ಲಿ ಇವರುಗಳು ಕಾರ್ಯಗಳನ್ನು ಪುನರ್ವರ್ತಿಸಲು ಆಜ್ಞಾಪಿಸಿದ್ದಾನೆ. ಹಾಗೂ ವಿಶ್ವದಾದ್ಯಂತ ಬಕ್ರೀದ್(ಈದ್-ಉ-ಜುಹಾ)ದ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿಯನ್ನರ್ಪಿಸಿ ತಮ್ಮ ಎಲ್ಲವನ್ನು ಅಲ್ಲಾಹ್ನಿಗೆ ಅರ್ಪಿಸುವ ಪ್ರತೀಕವಾಗಿ ಈ ಬಕ್ರೀದ್ ಆಚರಣೆ ನಡೆಯುತ್ತದೆ. ಬಲಿಯಾಗಿ ಅರ್ಪಿಸಿದ ಪ್ರಾಣಿಯ ಮಾಂಸವನ್ನು ಮೂರು ಭಾಗವಾಗಿ ವಿಂಗಡಿಸಿ ತಮಗೆ ಮತ್ತು ತಮ್ಮ ಸಂಬಂಧಿಕರಿಗೆ ಹಾಗೂ ಬಡವರಿಗೆ ಹಂಚಿಕೊಂಡು ಈ ಬಕ್ರೀದ್ ಹಬ್ಬವನ್ನು ತ್ಯಾಗ ಮತ್ತು ಬಲಿದಾನಗಳ ಸಂಕೇತವಾಗಿ ಆಚರಿಸುತ್ತಾರೆ.

ಸೈಯದ್ ಅನ್ವರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಪ.ಪಂ. ನಾಯಕನಹಟ್ಟಿ, ಹಾಗೂ
ಅಧ್ಯಕ್ಷರು ಜಾಮಿಯಾ ಮಸ್ಜಿದ್ ಕಮಿಟಿ
ನಾಯಕನಹಟ್ಟಿ