ಹೊಸಕೋಟೆ: ಬಾಲ್ಯದಲ್ಲಿಯೇ ರಂಗಭೂಮಿಗೆ ಕಾಲಿಟ್ಟು, ಶಾಸ್ತ್ರೀಯ ಸಂಗೀತದಿಂದ ಹಿಡಿದು ಜನಪದ, ಭಾವಗೀತೆ, ಭಕ್ತಿಗೀತೆ, ವಚನ, ದಾಸರ ಪದ, ಸುಗಮ ಸಂಗೀತ ಹಾಗೂ ಚಲನಚಿತ್ರ ಸಂಗೀತದವರೆಗೆ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಯುವ ಸಂಗೀತ ಕಲಾವಿದ ಮಧುಸೂದನ್ ಟಿ.ವಿ. ಅವರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ತಿಮ್ಮಸಂದ್ರ ಗ್ರಾಮದ ವೆಂಕಟೇಶಪ್ಪ ಮತ್ತು ಮುನಿರತ್ನಮ್ಮ ದಂಪತಿಯ ಪುತ್ರ ಮಧುಸೂದನ್ ಟಿವಿ, ಬಿಎ, ಪದವಿಯೊಂದಿಗೆ ಬ್ಯಾಚುಲರ್ ಆಫ್ ಮ್ಯೂಸಿಕ್ ಶಿಕ್ಷಣವನ್ನು ಪಡೆದಿದ್ದಾರೆ. ಬಾಲ್ಯದಿಂದಲೇ ಸಂಗೀತ ಮತ್ತು ರಂಗಭೂಮಿಯತ್ತ ಅಪಾರ ಆಸಕ್ತಿ ಹೊಂದಿದ್ದ ಅವರು, ತಮ್ಮ ಕಲಾ ಬದುಕಿನ ಪಯಣವನ್ನು ಕೇವಲ 9ನೇ ವಯಸ್ಸಿನಲ್ಲಿಯೇ ಆರಂಭಿಸಿದರು.
9ನೇ ವಯಸ್ಸಿನಲ್ಲಿ ರಂಗ ಪ್ರವೇಶ:
2006ರ ಜೂನ್ 21ರಂದು ತಮ್ಮ ತಂದೆ ವೆಂಕಟೇಶಪ್ಪ ಅವರ ಸಾಹಿತ್ಯ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ‘ಶಿವಭಕ್ತ ಮಾರ್ಕಂಡೇಯ’ ನಾಟಕದ ಮೂಲಕ ಮಧುಸೂದನ್ ಅವರು ರಂಗಭೂಮಿಗೆ ಪಾದಾರ್ಪಣೆ ಮಾಡಿದರು. ತಂದೆಯವರೇ ಅವರನ್ನು ರಂಗ ಪ್ರವೇಶ ಮಾಡಿಸಿ ಕಲಾಜಗತ್ತಿನತ್ತ ಕರೆತಂದರು. ಅಂದಿನಿಂದ ರಂಗಭೂಮಿ ಹಾಗೂ ಸಂಗೀತ ಕ್ಷೇತ್ರವನ್ನು ಜೀವನದ ಪ್ರಮುಖ ಭಾಗವನ್ನಾಗಿಸಿಕೊಂಡ ಮಧುಸೂದನ್ ಅವರು ಹೊಸಕೋಟೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗುರುಗಳಾದ ಜನಾರ್ಧನ್ ಅವರ ಬಳಿ ಸಂಗೀತಾಭ್ಯಾಸ ಆರಂಭಿಸಿದರು. ತಂದೆಯವರ ಮಾರ್ಗದರ್ಶನದಲ್ಲಿ ರಂಗಗೀತೆ, ಜನಪದ ಗಾಯನ ಹಾಗೂ ಹಾರ್ಮೋನಿಯಂ ವಾದನವನ್ನು ಕಲಿತು ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡರು.

ಹಂಸಲೇಖ ಗರಡಿಯಲ್ಲಿ ಸಂಗೀತಾಭ್ಯಾಸ:
ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಮಾರ್ಗದರ್ಶನದಲ್ಲಿ ಸಂಗೀತ ಗಾಯನ, ಚಲನಚಿತ್ರ ಸಂಗೀತ ಹಾಗೂ ದೇಸಿ ಸಂಗೀತ ಶಾಸ್ತ್ರ ಮತ್ತು ಸಂಯೋಜನೆಯ ಅಧ್ಯಯನ ನಡೆಸಿದರು. ಇದರ ಜತೆಗೆ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ಶ್ರೀ ಸಿದ್ಧಲಿಂಗೇಶ್ ಕಣವಿ, ರಾಜು ಹಾಗೂ ಮಾಲಾಶ್ರೀ ಕಣವಿ ಅವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಎ ಗ್ರೇಡ್ ಪದವಿ ಪಡೆದು ತಮ್ಮ ಸಂಗೀತ ಜ್ಞಾನವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ.
ಹಿರಿಯ ಸಂಗೀತ ಗುರುಗಳಾದ ಪಂಡಿತ್ ಡಾ. ಗೋಪಾಲ್ ಕೆ.ರಾಯಚೂರು ಅವರ ಮಾರ್ಗದರ್ಶನದಲ್ಲಿ ಹಾಗೂ ಮುಂಬೈನ ಅಖಿಲ ಭಾರತೀಯ ಗಂಧರ್ವ ಸಂಗೀತ ಮಹಾವಿದ್ಯಾಲಯದ ಮಾನ್ಯತೆ ಹೊಂದಿರುವ ಸಾಮಗಾನ ಸಂಗೀತ ವಿದ್ಯಾಲಯದಲ್ಲಿ ಸಂಗೀತಾಭ್ಯಾಸ ಮುಂದುವರಿಸಿದ್ದಾರೆ.
ಸಂಗೀತ ಶಿಕ್ಷಕರಾಗಿ ಸೇವೆ:
ಮಧುಸೂದನ್ ಅವರು ವಿವಿಧ ಪ್ರತಿಷ್ಠಿತ ಶಿಕ್ಷಣ ಮತ್ತು ಸಂಗೀತ ಸಂಸ್ಥೆಗಳಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಹಂಸಲೇಖ ದೇಸಿ ವಿದ್ಯಾಸಂಸ್ಥೆ, ವರ್ಣ ಕಲಾನಿಕೇತನ, ಹೊಸಕೋಟೆಯ ವಿವೇಕಾನಂದ ಶಾಲೆ, ಎಚ್‌ಎಂವಿ ಇಂಟರ್‌ನ್ಯಾಷನಲ್ ಕಲ್ಚರಲ್ ಸ್ಕೂಲ್, ವೀನಸ್ ಮ್ಯೂಸಿಕ್ ಅಂಡ್ ಡಾನ್ಸ್ ಅಕಾಡೆಮಿ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಸಹನಾ ಅಕಾಡೆಮಿ ಸೇರಿ ಹಲವು ಸಂಸ್ಥಗಳಲ್ಲಿ ಸಂಗೀತ ಶೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಸ್ಪರ್ಧೆಗಳಲ್ಲಿ ಸಾಧನೆ:
2013ರಲ್ಲಿ ಸೂಲಿಬೆಲೆಯ ವಿವೇಕಾನಂದ ಪ್ರೌಢಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾವಗೀತೆ ಗಾಯನಕ್ಕೆ ದ್ವಿತೀಯ ಸ್ಥಾನ, 2014ರಲ್ಲಿ ಸೂಲಿಬೆಲೆಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ದೇಶಭಕ್ತಿ ಗೀತೆ ವಿಭಾಗದಲ್ಲಿ ಪ್ರಥಮ ಸ್ಥಾನ, 2015ರಲ್ಲಿ ಸರಕಾರಿ ಪಿಯು ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಕ್ತಿಗೀತೆ ಮತ್ತು ಜನಪದ ಗೀತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ತಮ್ಮ ಪ್ರತಿಭೆಯನ್ನು ಮೆರೆದರು.
ಹಾರ್ಮೋನಿಯಂ ವಾದನದಲ್ಲೂ ಪರಿಣತಿ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೊಸಕೋಟೆ ತಾಲೂಕಿನಲ್ಲಿ ನಡೆದ 954ನೇ ಮಧ್ಯವರ್ಜನ ಶಿಬಿರದಲ್ಲಿ ತಮ್ಮ ತಂದೆ ವೆಂಕಟೇಶಪ್ಪ ಅವರ ಗಾಯನ ಕಾರ್ಯಕ್ರಮಕ್ಕೆ ಹಾರ್ಮೋನಿಯಂ ಸಾಥ್ ನೀಡಿದರು. 2017ರಲ್ಲಿ ಸೂಲಿಬೆಲೆ ಸರ್ಕಾರಿ ಪಿಯು ಕಾಲೇಜಿನ ವಾರ್ಷಿಕೋತ್ಸವದಲ್ಲಿ ಹಾರ್ಮೋನಿಯಂ ವಾದನದೊಂದಿಗೆ ಗಾಯನ ಪ್ರದರ್ಶನ ನೀಡಿದರು. ದೇವನಹಳ್ಳಿ ತಾಲೂಕಿನ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ನಡೆದ ರಾಮನಾಮ ಸಪ್ತಾಹ ಕಾರ್ಯಕ್ರಮದಲ್ಲಿಯೂ ಹಾರ್ಮೋನಿಯಂ ಸಾಥ್ ನೀಡುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ.

ರಾಜ್ಯಮಟ್ಟದ ವೇದಿಕೆಗಳಲ್ಲಿ ಗಾಯನ:
2022ರ ಮಾರ್ಚ್ 3ರಂದು ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಜನ್ಮದಿನದ ಅಂಗವಾಗಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಹಂಸಲೇಖ ದೇಸಿ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತ ನಮನ ಸಲ್ಲಿಸಿದರು. 2022ರ ಏಪ್ರಿಲ್ 1ರಂದು ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳ ಜಯಂತೋತ್ಸವದ ಅಂಗವಾಗಿ ನಡೆದ ‘ನಡೆಯುವ ದೇವರ ಬಸವ ಭಾರತ’ ಬೃಹತ್ ಕಾರ್ಯಕ್ರಮದಲ್ಲಿ ಹಂಸಲೇಖ ಅವರ ತಂಡದೊಂದಿಗೆ 150ಕ್ಕೂ ಹೆಚ್ಚು ಗಾಯಕರ ಜತೆ ಹಾಡುಗಾರಿಕೆಯಲ್ಲಿ ಭಾಗವಹಿಸಿದ್ದರು. ಹಂಸಲೇಖ ದೇಸಿ ವಿದ್ಯಾಸಂಸ್ಥೆಯ 12 ತಿಂಗಳ ಕನ್ನಡ ಉತ್ಸವದಲ್ಲಿ ವರ್ಷಪೂರ್ತಿ ಪ್ರತಿ ತಿಂಗಳು ನಡೆದ ಕನ್ನಡ ಹಾಡುಗಳ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ತಮ್ಮ ಗಾಯನವನ್ನು ಪ್ರಸ್ತುತಪಡಿಸಿದರು.
ಚಲನಚಿತ್ರ ಕ್ಷೇತ್ರಕ್ಕೂ ಪ್ರವೇಶ:
ಮಧುಸೂದನ್ ಅವರ ಗಾಯನ ಪ್ರತಿಭೆ ರಂಗಭೂಮಿ ಹಾಗೂ ವೇದಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಳಗಾವಿಯ ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿಗಳ ‘ಮಹಾತ್ಮರ ಚರಿತಾಮೃತ’ ಗ್ರಂಥದ ಟೈಟಲ್ ಹಾಡಿಗೆ ಧ್ವನಿ ನೀಡಿದ್ದಾರೆ. ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್ ಅವರ ‘ಪದ್ಮಗಂಧಿ ಸಂಸ್ಕೃತ’ ಚಿತ್ರಕ್ಕೂ ಹಾಡುಗಾರಿಕೆ ನೀಡುವ ಮೂಲಕ ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿಯೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಉತ್ಸವದಿಂದ ಸಿದ್ದಗಂಗಾ ಮಠದವರೆಗೆ
ಕಲಬುರಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದ ಬೃಹತ್ ವೇದಿಕೆಯಲ್ಲಿ ಮಾಲಾಶ್ರೀ ಕಣವಿ ಅವರ ತಂಡದೊಂದಿಗೆ ಹಾಡುಗಾರಿಕೆಯಲ್ಲಿ ಭಾಗವಹಿಸಿದ್ದಾರೆ.
2024ರ ಮಾರ್ಚ್ 10ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ಜನಪದ ಕಾರ್ಯಕ್ರಮದಲ್ಲಿ ಗಾಯನ ಪ್ರಸ್ತುತಿ ನೀಡಿದರು.
ಅಲ್ಲದೇ ಬಸವನಗುಡಿಯ ಉದಯ ಬಾನು ಕಲಾ ಸಂಘ ಸೇರಿದಂತೆ ರಾಜ್ಯದ ಅನೇಕ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿಗಳ ಸರಮಾಲೆ:
ಸಂಗೀತ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ನಿರಂತರ ಸೇವೆ ಗುರುತಿಸಿ ಮಧುಸೂದನ್ ಅವರಿಗೆ ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ ಲಭಿಸಿವೆ. ಪ್ರಮುಖವಾಗಿ ವಿಶ್ವ ಮಾನವ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಬೆಸ್ಟ್ ಟ್ಯಾಲೆಂಟ್ ಅವಾರ್ಡ್, ಸಮಾಜ ಶಕ್ತಿ ಟ್ರಸ್ಟ್ ವತಿಯಿಂದ ಕರ್ನಾಟಕ ಸೇವಾರತ್ನ ಪ್ರಶಸ್ತಿ, ಪರ್ವ ನ್ಯೂಸ್ ವತಿಯಿಂದ ಗಾನಸಿರಿ ಪ್ರಶಸ್ತಿ-14 ಸೆಪ್ಟೆಂಬರ್ 2025, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರುನಾಡ ಕಲಾಸಿರಿ ಬಳಗ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಮಾನವ ಪ್ರತಿಷ್ಠಾನ ವತಿಯಿಂದ ಬೆಸ್ಟ್ ಸಿಂಗಿಂಗ್ ಟ್ಯಾಲೆಂಟ್ ಪ್ರಶಸ್ತಿ, ಕೆಎನ್ ಫೌಂಡೇಶನ್ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಗೀತ ಸೇವೆಗಾಗಿ ಪಾಂಡವ ಪ್ರಶಸ್ತಿ.
ಜೀ ಸರಿಗಮಪ ವೇದಿಕೆಯಲ್ಲೂ ಹಾಡುಗಾರಿಕೆ
ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದ ಸರಿಗಮಪ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್ ಹಾಗೂ ವಿಜಯ್ ಪ್ರಕಾಶ್ ಅವರ ತಂಡದೊಂದಿಗೆ ಹಾಡುಗಾರಿಕೆಯಲ್ಲಿ ಭಾಗವಹಿಸಿರುವುದು ಮಧುಸೂದನ್ ಅವರ ಸಂಗೀತ ಜೀವನದ ವಿಶೇಷ ಸಾಧನೆಗಳಲ್ಲಿ ಒಂದಾಗಿದೆ.