LIVE TV StateNationalPoliticsInternationalCrimeEntertainmentSportsEducationFINANCE & TAXATION
Districts | Districts Bellary

ಶೀಘ್ರ ವರದಿ ಸಲ್ಲಿಕೆಗೆ ಸಚಿವ ಬಿ.ನಾಗೇಂದ್ರ ಅಧಿಕಾರಿಗಳಿಗೆ ಸೂಚನೆ

ಬಳ್ಳಾರಿ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ : ಮಳೆ ಕೊರತೆಯಿಂದ ಒಣಗುತ್ತಿರುವ ಬೆಳೆಗಳು

ಬಳ್ಳಾರಿ:  ಜಿಲ್ಲೆಯಾದ್ಯಂತ ಮಳೆ ಅಭಾವ ಮತ್ತು ಬೆಳೆ ಹಾನಿಯ ಕುರಿತು ತಕ್ಷಣವೇ ಸಮಗ್ರ ಜಂಟಿ ಸಮೀಕ್ಷೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಬಳ್ಳಾರಿ ಜಿಲ್ಲೆ ಬರ ಪರಿಸ್ಥಿತಿ ವೀಕ್ಷಣೆಗೆ ನಿಯೋಜಿಸಲಾಗಿರುವ ಸಚಿವರಾದ ಬಿ.ನಾಗೇಂದ್ರ ಅವರು ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ, ಬಳ್ಳಾರಿ ತಾಲ್ಲೂಕಿನ ಹಲಕುಂದಿ, ಮಿಂಚೇರಿ ಗ್ರಾಮದಲ್ಲಿ ಬರಪರಿಸ್ಥಿತಿ ಹಿನ್ನಲೆಯಲ್ಲಿ ಬೆಳೆಹಾನಿ ಪರಿವೀಕ್ಷಣೆ ನಡೆಸಿ ಅವರು ಮಾತನಾಡಿದರು.

 ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದೆ ಕೃಷಿ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲೆಯಲ್ಲಿ ರೈತರು ಬಿತ್ತನೆ ಕಾರ್ಯ ಮಾಡಿದ್ದರೂ, ಕಳೆದ ಎರಡು ತಿಂಗಳಿಂದ ಹನಿ ಮಳೆಯೂ ಬಾರದೆ ಬೆಳೆಗಳು ಜಮೀನಿನಲ್ಲೇ ಒಣಗಿ ನಶಿಸುತ್ತಿವೆ. ಕಂದಾಯ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಪ್ರತಿಯೊಂದು ತಾಲೂಕಿನ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ನೈಜ ಪರಿಸ್ಥಿತಿಯ ಆಧಾರದ ಮೇಲೆ ನಿಖರ ವರದಿ ಸಿದ್ಧಪಡಿಸಬೇಕು ಎಂದು ನಿರ್ದೇಶನ ನೀಡಿದರು.

news_1786018760_2_678.webp

 

ತೊಗರಿ, ಹತ್ತಿ, ಮೆಕ್ಕೆಜೋಳ ಹಾಗೂ ಸಜ್ಜೆ ಸೇರಿದಂತೆ ಪ್ರಮುಖ ಬೆಳೆಗಳು ನೀರಿನ ಅಭಾವದಿಂದ ಬಾಡಿಹೋಗುತ್ತಿದ್ದು, ರೈತರಿಗೆ ಭಾರಿ ನಷ್ಟ ಉಂಟಾಗುವ ಭೀತಿ ಎದುರಾಗಿದೆ. ಅಧಿಕಾರಿಗಳು ನೀಡುವ ಸಮೀಕ್ಷಾ ವರದಿಯ ಆಧಾರದ ಮೇಲೆ ಬರಪೀಡಿತ ಪ್ರದೇಶಗಳ ಘೋಷಣೆ ಹಾಗೂ ರೈತರಿಗೆ ಪರಿಹಾರ ಒದಗಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಮಳೆ ಬಂದರೂ ಶೇ. 50ರಷ್ಟು ಇಳುವರಿಯೂ ಸಿಗಲಾರದು:

ಬಿತ್ತನೆಯಾಗಿ 50ರಿಂದ 60 ದಿನಗಳು ಕಳೆದಿವೆ. ಬೆಳೆ ಬೆಳವಣಿಗೆಯ ಹಂತದಲ್ಲೇ ಮಳೆ ಇಲ್ಲದೆ ಗಿಡಗಳ ಬೆಳವಣಿಗೆ ಸಂಪೂರ್ಣ ಕುಂಠಿತಗೊಂಡಿದೆ ಇನ್ನು ಮುಂದಿನ 10 ದಿನಗಳಲ್ಲಿ ಮಳೆ ಬಂದರೂ ಸಹ ಶೇ. 50ರಷ್ಟು ಕೂಡ ಇಳುವರಿ ಪಡೆಯಲು ಸಾಧ್ಯವಿಲ್ಲ, ಬೆಳೆಗಳು ಈಗಾಗಲೇ ಹಾನಿಗೊಳಗಾಗಿವೆ ಎಂದು ಕೃಷಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

 

ಶನಿವಾರದೊಳಗೆ ವರದಿ ಸಲ್ಲಿಕೆಗೆ ಸೂಚನೆ

ಸರಕಾರದ ನಿಗದಿತ ಮಾನದಂಡಗಳ ಆಧಾರದ ಮೇಲೆ ಕಂದಾಯ ಸಚಿವರೊಂದಿಗೆ ಚರ್ಚಿಸಿ,  ಮುಂದಿನ ಸೂಕ್ತ ಕ್ರಮ ಹಾಗೂ ಪರಿಹಾರ ಘೋಷಣೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಹಾಗಾಗಿ ಜಿಲ್ಲೆಯ ತಾಲ್ಲೂಕುವಾರು ಬೆಳೆ ಹಾನಿ ಹಾಗೂ ಕೃಷಿ ಸ್ಥಿತಿಗತಿಯ ಸಮಗ್ರ ವರದಿಯನ್ನು ಶನಿವಾರದೊಳಗೆ ಸಿದ್ಧಪಡಿಸಿ ಸಲ್ಲಿಸುವಂತೆ ಸಚಿವ ಬಿ. ನಾಗೇಂದ್ರ ಅವರು ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 news_1786018760_1_441.webp

 

ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಕಟಿಬದ್ಧ: ಕೃಷಿ ಪರಿಸ್ಥಿತಿ ವೀಕ್ಷಣೆ ನಡೆಸಿ, ರೈತರ ಪರ ನಿಲ್ಲುವ ಅಭಯ ನೀಡಿದ ಸಚಿವ ನಾಗೇಂದ್ರ

ಸಂಪುಟ ವಿಸ್ತರಣೆಯ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ, ರಾಜ್ಯದಾದ್ಯಂತ ಅತಿಯಾದ ಮಳೆ ಅಥವಾ ಮಳೆ ಅಭಾವದಿಂದ ತೊಂದರೆಗೊಳಗಾದ ರೈತರ ನೆರವಿಗೆ ಧಾವಿಸುವುದು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ ಎಂದು ಸಚಿವ ಬಿ.ನಾಗೇಂದ್ರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಮಳೆಯ ಅಭಾವದಿಂದಾಗಿ ಎಕರೆಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿ ತೊಗರಿ, ಹತ್ತಿ, ಸೂರ್ಯಕಾಂತಿ ಮತ್ತು ಜೋಳ ಬೆಳೆದ ಸಣ್ಣ ಹಾಗೂ ಬಡ ರೈತರಿಗೆ ಭಾರಿ ನಷ್ಟ ಉಂಟಾಗಿದೆ. ಜಿಲ್ಲಾಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಸೇರಿದಂತೆ ಎಲ್ಲಾ ಅಧಿಕಾರಿಗಳು ಈಗಾಗಲೇ ಬೆಳೆ ನಷ್ಟದ ಸರ್ವೇ ಕಾರ್ಯದಲ್ಲಿ ತೊಡಗಿದ್ದು, ರೈತರ ಬೆನ್ನಲುಬಾಗಿ ನಿಲ್ಲಲು ಸರ್ಕಾರ ಬದ್ಧವಾಗಿದೆ ಎಂದರು.

ತುಂಗಭದ್ರಾ ಜಲಾಶಯ ಹಾಗೂ ನೀರಿನ ಸ್ಥಿತಿಗತಿ:

ಬಳ್ಳಾರಿ ಜಿಲ್ಲೆಯ ಕೃಷಿ ಹಾಗೂ ಕುಡಿಯುವ ನೀರಿನ ಪ್ರಮುಖ ಆಸರೆಯಾಗಿರುವ ತುಂಗಭದ್ರಾ ಜಲಾಶಯದಲ್ಲಿ 65 ರಿಂದ 70 ಟಿಎಂಸಿ ನೀರು ತಲುಪುವ ನಿರೀಕ್ಷೆಯಿದೆ. ಜಲಾಶಯದಲ್ಲಿ ಕನಿಷ್ಠ 80 ಟಿಎಂಸಿ ನೀರು ಶೇಖರಣೆಯಾದ ನಂತರವೇ ಸಲಹಾ ಸಮಿತಿಯ ಸಭೆ ನಡೆಸಿ, ಕುಡಿಯುವ ನೀರು ಹಾಗೂ ಕೃಷಿ ಕಾಲುವೆಗಳಿಗೆ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಂದಿನ 10 ದಿನಗಳಲ್ಲಿ ಮಲೆನಾಡು ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಜಲಾಶಯ ಭರ್ತಿಯಾಗುವ ಭರವಸೆಯಿದೆ ಎಂದು ತಿಳಿಸಿದರು.

ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ರೈತರಿಂದ ಕೇಳಿಬರುತ್ತಿರುವ ಆಗ್ರಹಕ್ಕೆ ಸ್ಪಂದಿಸಿದ ಸಚಿವರು, ಬರ ಘೋಷಣೆ ಮಾಡಲು ಮಳೆಯ ಪ್ರಮಾಣದ ಕುರಿತು ಕೆಲವು ನಿರ್ದಿಷ್ಟ ಮಾನದಂಡಗಳಿವೆ. ಮುಂದಿನ 10 ದಿನಗಳ ಪರಿಸ್ಥಿತಿಯನ್ನು ವೀಕ್ಷಿಸಿ, ಮಾನದಂಡಗಳಿಗೆ ಒಳಪಟ್ಟರೆ ಬಳ್ಳಾರಿ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಲು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.

news_1786018760_0_683.webp

 

ಜಿಲ್ಲೆಯ ಅಭಿವೃದ್ಧಿ ಕನಸು:

ಬಳ್ಳಾರಿಯ ವಿಮಾನ ನಿಲ್ದಾಣ ಯೋಜನೆ, ರಸ್ತೆಗಳ ಅಭಿವೃದ್ಧಿ, ರಾಹುಲ್ ಗಾಂಧಿ ಅವರ ಕನಸಿನ ರೂ.5,000 ಕೋಟಿ ವೆಚ್ಚದ ಜೀನ್ಸ್ ಹಾಗೂ ಅಪೆರಲ್ ಪಾರ್ಕ್ ಸ್ಥಾಪನೆ ಮತ್ತು ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ಸುಸಜ್ಜಿತ ಆರೋಗ್ಯ ಸೇವೆಗಳನ್ನು ಜಿಲ್ಲೆಗೆ ತರುವ ಮೂಲಕ ಅಭಿವೃದ್ಧಿಯ ಹೊಸ ಅಲೆಯನ್ನು ತರುವುದಾಗಿ ಭರವಸೆ ನೀಡಿದರು.

 

 ಈ ವೇಳೆ ಡಾ.ಬಾಬು ಜಗನ್ ಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಕೃಷಿ ಜಂಟಿ ನಿರ್ದೇಶಕ ಕೆ. ಸೋಮಸುಂದರ್ ಸೇರಿದಂತೆ ಜನಪ್ರತಿನಿಧಿಗಳು, ರೈತರು ಹಾಗೂ ಸಾರ್ವಜನಿಕರು ಇದ್ದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
“ಅಮೋಘ” ಚಲನಚಿತ್ರದ ಹಾಡು ಬಿಡುಗಡೆಬಳ್ಳಾರಿ ಜಿಲ್ಲೆಯ ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ ದರ್ಶನ ಪಡೆದ ಮಾಜಿ ಶಾಸಕ ಸುರೇಶ್ ಬಾಬುಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ: ಪ್ರೊ. ಎನ್.ಎಂ. ಸಾಲಿಸಾಂಸಾರಿಕ ಜೀವನ ಪ್ರವೇಶಿಸಿದ ಸ್ಪೈಡರ್ ಮ್ಯಾನ್ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ