ಬಳ್ಳಾರಿ: ನಗರದ ಜಿಲ್ಲಾಡಳಿತ ಕಚೇರಿಗಳಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶನಿವಾರ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಅವರು, ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಆವರಣ ಹಾಗೂ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸಲ್ಲಿಸಿದರು.

ಮೊದಲು ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಾಗೂ ನಂತರ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿಗಳು ರಾಷ್ಟ್ರಧ್ವಜವನ್ನು ಅನಾವರಣಗೊಳಿಸಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ- ಸಿಬ್ಬಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅದೇರೀತಿಯಾಗಿ ನೂತನ ಜಿಲ್ಲಾಡಳಿತ ಭವನದಲ್ಲಿನ ಹಾಗೂ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಪುಷ್ಪಾರ್ಚನೆಗೈದು, ಗೌರವ ನಮನ ಸಲ್ಲಿಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ: ಧ್ವಜಾರೋಹಣದ ನಂತರ, ಹಳೆಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತ್ಯೋತ್ಸವವನ್ನು ಆಚರಿಸಲಾಯಿತು.
ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ದೇಶಭಕ್ತಿ ಹಾಗೂ ಹೋರಾಟದ ಗುಣಗಳನ್ನು ನೆನೆಯಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್. ಎನ್., ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಬಳ್ಳಾರಿ ತಾಲ್ಲೂಕು ತಹಶೀಲ್ದಾರಾದ ಟಿ.ರೇಖಾ, ಡಿಡಿಎಲ್ಆರ್ ಪ್ರಮೋದ್, ಅಬಕಾರಿ ಉಪ ಆಯುಕ್ತ ಮಂಜುನಾಥ್. ಡಿಯುಡಿಸಿ ಪಿಡಿ ಅಬ್ದುಲ್ ರೆಹಮಾನ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.