LIVE TV StateNationalPoliticsCrimeEntertainmentSportsEducationFINANCE & TAXATION
National News

ಏಷ್ಯನ್ ಗೇಮ್ಸ್: ಐತಿಹಾಸಿಕ ಸಾಧನೆ ಮಾಡಿದ ಕ್ರೀಡಾಪಟುಗಳು

ಕೆಐಐಟಿ, ಕೆಐಎಸ್ಎಸ್ ಸಂಸ್ಥೆಗಳ ಕ್ರೀಡಾಪಟುಗಳ ಪಾರಮ್ಯ

ಭಾರತದ 85 ಪದಕಗಳಲ್ಲಿ 21 ಪದಕಗಳು ಕೆಐಐಟಿ, ಕಿಸ್‌ ಕ್ರೀಡಾಪಟುಗಳ ಪಾಲು 

ಭಾರತದ ವಿಶ್ವವಿದ್ಯಾಲಯಗಳಲ್ಲೇ ಅತ್ಯಧಿಕ ಪದಕ ಪಡೆದ ಹೆಮ್ಮೆ

 

ಭುವನೇಶ್ವರ: ಜಪಾನ್‌ನ ಪ್ರಮುಖ ನಗರ ಐಚಿ- ನಗೋಯಾದಲ್ಲಿ ನಡೆಯುತ್ತಿದ್ದ 20 ನೇ ಏಷ್ಯನ್‌ ಕ್ರೀಡಾಕೂಟ ಮುಕ್ತಾಯವಾಗಿದೆ. ಗೇಮ್ಸ್‌ ನ ವಿವಿಧ ಕ್ರೀಡೆಗಳಲ್ಲಿ ಭುವನೇಶ್ವರದ ಕಳಿಂಗ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಸ್ಟ್ರಿಯಲ್‌ ಟೆಕ್ನಾಲಜಿ (ಕೆಐಐಟಿ) ಮತ್ತು ಕಳಿಂಗ ಇನ್ಸ್‌ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸಸ್‌ (ಕಿಸ್‌) ಕ್ರೀಡಾಪಟುಗಳು 21 ಪದಕಗಳನ್ನು ಪಡೆದು ದೇಶಕ್ಕೆ ಕೀರ್ತಿ ತರುವುದರ ಜೊತೆಗೆ ತಾವು ಪ್ರತಿನಿಧಿಸಿದ್ದ ಸಂಸ್ಥೆಗೂ ಹೆಮ್ಮೆ ತಂದಿದ್ದಾರೆ. ಇದರಲ್ಲಿ 3 ಚಿನ್ನ, 7 ಬೆಳ್ಳಿ ಮತ್ತು 11 ಕಂಚಿನ ಪದಕಗಳು ಸೇರಿವೆ. ಇಡೀ ಭಾರತದಲ್ಲಿ ಯಾವುದೇ ವಿಶ್ವವಿದ್ಯಾಲಯಗಳು ಇಷ್ಟೊಂದು ಪದಕಗಳನ್ನು ಪಡೆದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

 

ಒಟ್ಟು 85 ಪದಕಗಳನ್ನು ಪಡೆಯುವ ಮೂಲಕ ಪದಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇದರಲ್ಲಿ 21 ಚಿನ್ನ, 27 ಬೆಳ್ಳಿ ಮತ್ತು 37 ಕಂಚಿನ ಪದಕ ಪಡೆದಿದೆ. ಭಾರತದ ಈ ಸಾಧನೆಯಲ್ಲಿ ಗಣನೀಯವಾದ ಕೊಡುಗೆ ಇರುವುದು ಕಳಿಂಗ ಶಿಕ್ಷಣ ಸಂಸ್ಥೆಗಳದ್ದು ಎಂಬುದು ಹೆಮ್ಮೆಯ ಸಂಗತಿಯಾಗಿದೆ.

 

ಈ ಬಾರಿಯ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡಿ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೊಳಗಾಗುತ್ತಿದೆ. ಈ ಸಾಧನೆಯಲ್ಲಿ ಕೆಐಐಟಿ ಮತ್ತು ಕೆಐಎಸ್‌ಎಸ್‌ನ ಕ್ರೀಡಾಪಟುಗಳ ಹೆಚ್ಚಿನ ಪಾಲು ಇದೆ ಎಂಬುದು ವಿಶೇಷವಾಗಿದೆ.

 news_1791257443_2_754.webp

 

 

ಕೆಐಐಟಿಯ ಕ್ರೀಡಾಸಾಧಕರು

ಕಳಿಂಗ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಸ್ಟ್ರಿಯಲ್‌ ಟೆಕ್ನಾಲಜಿ (ಕೆಐಐಟಿ) ಅನ್ನು ಪ್ರತಿನಿಧಿಸಿದ್ದ ಕ್ರೀಡಾಪಟುಗಳಲ್ಲಿ 19 ಪದಕಗಳನ್ನು ಪಡೆದಿದ್ದಾರೆ.

 

ಮಹಿಳೆಯರ 10000 ಮೀಟರ್‌ ಓಟದಲ್ಲಿ ಸೀಮಾ ಕುಮಾರಿ ಅವರು ಕಂಚಿನ ಪದಕ ಗೆದ್ದಿದ್ದಾರೆ. ಅವರು ಸಮಯ 32:50.05 ದಲ್ಲಿ ಓಟವನ್ನು ಪೂರ್ಣಗೊಳಿಸಿ ಮೂರನೇ ಸ್ಥಾನ ಪಡೆದರು. ಪುರುಷರ ಮ್ಯಾರಥಾನ್‌ನಲ್ಲಿ ಸವಾನ್‌ ಬರ್ವಾಲ್‌ ಅವರು, ಬೆಳ್ಳಿ ಪದಕ ಪಡೆದರು. ಏಷ್ಯನ್ ಗೇಮ್ಸ್ ಮ್ಯಾರಥಾನ್‌ನಲ್ಲಿ ಭಾರತಕ್ಕೆ ಬರೋಬ್ಬರಿ 44 ವರ್ಷಗಳ ನಂತರ ಪದಕ ತಂದುಕೊಟ್ಟ ಹಿರಿಮೆ ಇವರದ್ದು, 1982ರ ನಂತರ ಭಾರತ ಈ ವಿಭಾಗದಲ್ಲಿ ಪದಕ ಗೆದ್ದಿರಲಿಲ್ಲ. ತೇಜಿಂದರ್‌ ಸಿಂಗ್‌ ತೂರ್‌ ಅವರು ಪುರುಷರ ಶಾಟ್‌ಪುಟ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 2018ರ ಜಕಾರ್ತ ಮತ್ತು 2022ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಸತತ ಮೂರು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

 

ಪ್ರಾಚಿ ಚೌಧರಿ ಅವರು ಮಹಿಳೆಯರ 400 ಮೀಟರ್ ಓಟದಲ್ಲಿ ಕಂಚಿನ ಪದಕ ಪಡೆದು ಕೀರ್ತಿ ತಂದಿದ್ದಾರೆ. ಇನ್ನು ಹರಿತ ಭದ್ರ ಅವರು, ಮಹಿಳೆಯರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

 

3 ಪದಕ ಕೊರಳಿಗೇರಿಸಿದ ವಿದ್ಯಾ

ವಿದ್ಯಾ ರಾಮ್‌ ರಾಜ್‌ ಅವರು ಮಹಿಳೆಯರ 400 ಮೀಟರ್‌ ಹರ್ಡಲ್ಸ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇವರು ಮಹಿಳೆಯರ 4x400 ಮೀಟರ್ ರಿಲೇ ಮಿಶ್ರ  4x400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಮಹಿಳೆಯರ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಒಟ್ಟು 3 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ.

 

ಭಾರತದ ಪ್ರಮುಖ ಹೈಜಂಪರ್ ಸರ್ವೇಶ್‌ ಕುಶಾರೆ ಅವರು ಪುರುಷರ ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ  ಐತಿಹಾಸಿಕ ಸಾಧನೆ ಮಾಡಿದ್ದಾರೆ. ಭಾರತ 56 ವರ್ಷಗಳ ಬಳಿಕ ಈ ವಿಭಾಗದಲ್ಲಿ ಪದಕ ಪಡೆದಿದೆ. ಆನ್ಸಿ ಸೋಜನ್ ಎಡಪ್ಪಿಲ್ಲಿ ಅವರು ಮಹಿಳೆಯರ ಉದ್ದ ಜಿಗಿತದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಇದಕ್ಕೂ ಮುನ್ನ 2022ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲೂ ಬೆಳ್ಳಿ ಪದಕ ಪಡೆದಿದ್ದರು.

 

ಬರಾನಿಕಾ ಎಲಂಗೋವನ್ ಅವರು ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಪೋಲ್ ವಾಲ್ಟ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಖ್ಯಾತಿ ಇವರದ್ದು. ಯಶ್‌ವೀರ್‌ ಸಿಂಗ್‌ ಅವರು, ಏಷ್ಯನ್ ಕ್ರೀಡಾಕೂಟದಲ್ಲಿ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ಪುರುಷರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ 85.72 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದರು. ಎಂ.ಶ್ರೀಶಂಕರ್‌ ಅವರು, ಪುರುಷರ ಲಾಂಗ್‌ ಜಂಪ್‌ನಲ್ಲಿ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

 

ರೋಹಿತ್‌ ಯಾದವ್‌ ಅವರು, ಪುರುಷರ ಜಾವೆಲಿನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ತೇಜಸ್ವಿನ್‌ ಶಂಕರ್‌ ಅವರು ಪುರುಷರ ಅತ್ಯಂತ ಕಠಿಣವಾದ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಒಟ್ಟು 7,934 ಅಂಕಗಳನ್ನು ಗಳಿಸುವ ಮೂಲಕ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್‌ನ ಡೆಕಾಥ್ಲಾನ್‌ನಲ್ಲಿ ಎರಡು ಪದಕಗಳನ್ನು (2023ರಲ್ಲಿ ಬೆಳ್ಳಿ, 2026ರಲ್ಲಿ ಕಂಚು) ಗೆದ್ದ ಮೊದಲ ಭಾರತೀಯ ಪುರುಷ ಅತ್ಲೀಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಾರುಲ್‌ ಚೌಧರಿ ಅವರು ಈ ಬಾರಿಯ ಏಷ್ಯನ್‌ ಗೇಮ್ಸ್‌ನಲ್ಲಿ ಎರಡು ಪದಕ ಪಡೆದ್ದಾರೆ. ಮಹಿಳೆಯರ 5,000 ಮೀ.ಫೈನಲ್‌ನಲ್ಲಿ 15:14.61 ಅವಧಿಯಲ್ಲಿ ಗುರಿ ತಲುಪಿದ ಪಾರುಲ್ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಮಹಿಳೆಯರ 3000 ಮೀಟರ್‌ ಸ್ಟೀಫಲ್‌ಚೇಸ್‌ನಲ್ಲಿ ಸಹ ಕಂಚಿನ ಪದಕ ಗೆದ್ದು ಬೀಗಿದರು.

 

ಮಿಶ್ರ ರಿಲೆಯಲ್ಲಿ ಚಿನ್ನದ ಪದಕ ಬೀಗಿದರು

ಇನ್ನು ಮಿಶ್ರ ರಿಲೆಯಲ್ಲಿ ಕೆಐಐಟಿ ಮತ್ತು ಕೆಐಎಸ್‌ಎಸ್‌ ಕ್ರೀಡಾಪಟುಗಳು ವಿಶಿಷ್ಟ ಸಾಧನೆ ಮಾಡಿದ್ದಾರೆ. 4x100 ಮೀಟರ್‌ ಮಿಶ್ರ ರಿಲೇಯಲ್ಲಿ ಅನಿಮೇಶ್‌ ಕುಜೂರ್‌, ಗುರಿಂದರ್‌ ವೀರ್‌ ಸಿಂಗ್‌, ಹರಿತ ಭದ್ರ ಹಾಗೂ ಎಸ್‌.ಸ್ನೇಹಾ ಅವರು ಕಂಚಿನ ಪದಕ ಪಡೆದಿದ್ದಾರೆ.  ಹಾಗೆಯೆ 4x400 ಮೀಟರ್‌ ಪುರುಷರ ರಿಲೇಯಲ್ಲಿ ಧರ್ಮವೀರ್‌ ಚೌಧರಿ, ಜಯಕುಮಾರ್‌, ಮನು ಟಿ.ಎಸ್‌. ಹಾಗೂ ವಿಶಾಲ್‌ ಟಿ.ಕೆ. ಅವರು ಕಂಚಿನ ಪದಕ ಪಡೆದಿದ್ದಾರೆ. ಇನ್ನು ಮಹಿಳೆಯ 4x400 ಮೀಟರ್‌ ರಿಲೇಯಲ್ಲಿ ಚಿನ್ನದ ಪದಕ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ತಂಡದಲ್ಲಿದ್ದ ಕಿರಣ್‌ ಪಾಹಲ್‌, ಎಂ.ಆರ್‌.ಪೂವಮ್ಮ, ಪ್ರಾಚಿ ಹಾಗೂ ವಿದ್ಯಾ ರಾಮ್‌ ರಾಜ್‌ ಅವರು ಈ ತಂಡದಲ್ಲಿದ್ದರು. ಈ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತ ಗೆದ್ದ ಮೊದಲ ಮತ್ತು ಇದುವರೆಗಿನ ಏಕೈಕ ಚಿನ್ನದ ಪದಕ ಇದಾಗಿದೆ.

 news_1791257442_0_624.webp

 

ಕಿಸ್‌ಗೆ ಎರಡು ಪದಕಗಳ ಗರಿ

ಕಳಿಂಗ ಇನ್ಸ್‌ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸಸ್‌ (ಕಿಸ್‌) ಕ್ರೀಡಾಪಟುಗಳು 2 ಪದಕ ಪಡೆದಿದ್ದಾರೆ. ಇದರಲ್ಲಿ ಸುನೇಲಿತಾ ಟೊಪ್ಪೊ ಅವರು ಪುರುಷರ ಹಾಕಿ ತಂಡ ಚಿನ್ನದ ಪದಕ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮಿಡ್‌ಫೀಲ್ಡರ್ ಆಗಿ ಅತ್ಯುತ್ತಮ ಪ್ರದರ್ಶನ ನೀಡಿದ ಇವರು, ಒಟ್ಟು 4 ಗೋಲುಗಳನ್ನು ಗಳಿಸಿದರು. ಇದರಲ್ಲಿ ಇಂಡೋನೇಷ್ಯಾ ಮತ್ತು ಸಿಂಗಪುರ ವಿರುದ್ಧ ತಲಾ ಎರಡು ಗೋಲುಗಳು ಸೇರಿವೆ. ಫೈನಲ್‌ನಲ್ಲಿ ಚೀನಾವನ್ನು 1-0 ಅಂತರದಿಂದ ಸೋಲಿಸಿ ಭಾರತವು ಚಿನ್ನದ ಪದಕವನ್ನು ಗೆದ್ದುಕೊಂಡಿತು.

 

ಅಮಿತ್ ರೋಹಿ ದಾಸ್ ಅವರು, ಪುರುಷರ ಹಾಕಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಭಾರತದ  ಗೆಲುವಿನಲ್ಲಿ ಡಿಫೆಂಡರ್ ಆಗಿ ಅತ್ಯುತ್ತಮ ಪ್ರದರ್ಶನ ನೀಡಿದರು. ಭಾರತವು ಫೈನಲ್‌ನಲ್ಲಿ ಮಲೇಷ್ಯಾವನ್ನು 5-1 ಅಂತರದಿಂದ ಸೋಲಿಸಿ ಚಿನ್ನ ಗೆದ್ದಿದೆ.

 

 

ವಿಶ್ವದರ್ಜೆಯ ಕ್ರೀಡಾ ಸೌಲಭ್ಯಗಳು ಇಲ್ಲಿವೆ

ಏಷ್ಯನ್ ಕ್ರೀಡಾಕೂಟದಲ್ಲಿ ಸಂಸ್ಥೆಯ ಕ್ರೀಡಾಪಟುಗಳು ಈ ಮಟ್ಟಿನ ಸಾಧನೆ ಮಾಡಲು ಅವರಿಗೆ ನೆರವಾಗಿರುವುದು ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳು. ಈ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡಿರುವ ಕ್ರೀಡಾಳುಗಳು ತಮ್ಮ ಸಾಧನೆ ತೋರಿದ್ದಾರೆ. ಕೆಐಎಸ್‌ಎಸ್‌ ಮತ್ತು ಕೆಐಐಟಿನಲ್ಲಿ ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯಗಳು ಇವೆ. ವಿಶ್ವದರ್ಜೆಯ ಅಥ್ಲೆಟಿಕ್‌ ಸ್ಟೇಡಿಯಂ, ಸೈಕ್ಲಿಂಗ್‌ ವೆಲೋಡ್ರೋಮ್‌, ರಗ್ಬಿ, ಹಾಕಿ, ಫುಟ್ಬಾಲ್‌ ಸ್ಟೇಡಿಯಂ, ಒಲಂಪಿಕ್‌ ದರ್ಜೆಯ ಈಜುಕೊಳ,̇18 ಬಹು ಕ್ರೀಡಾ ಸಂಕೀರ್ಣಗಳು, ಜಿಮ್ನಾಶಿಯಂ ಇವೆ. ಅಲ್ಲದೆ ಈ ಎಲ್ಲದಕ್ಕೂ ಪರಿಣಿತ ತರಬೇತುದಾರರು, ಕೋಚ್‌ಗಳು ಇದ್ದಾರೆ.

 

ಸಮಂತ ಅವರಿಗೆ ಕ್ರೀಡಾಪಟುಗಳ ಧನ್ಯವಾದ

ಕೆಐಐಟಿ ಹಾಗೂ ಕೆಐಎಸ್‌ಎಸ್‌ ಏಷ್ಯನ್‌ ಗೇಮ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡುವಲ್ಲಿ ಸಾಕಷ್ಟು ಪ್ರೋತ್ಸಾಹ, ಬೆಂಬಲ ನೀಡಿರುವ ಅಚ್ಯುತ ಸಮಂತ ಅವರಿಗೆ ಪದಕ ವಿಜೇತ ಕ್ರೀಡಾಪಟುಗಳ ಧನ್ಯವಾದಗಳನ್ನು ತಿಳಿಸಿದ್ದಾರೆ.

 

ಸಮಂತ ಅವರು ಶಿಕ್ಷಣಕ್ಕೆ ನೀಡುವಷ್ಟೇ ಪ್ರೋತ್ಸಾಹವನ್ನು ಕ್ರೀಡೆಗೂ ನೀಡುತ್ತಿದ್ದಾರೆ. ಸಂಸ್ಥೆಯಲ್ಲಿ ವಿಶ್ವದರ್ಜೆಯ ಕ್ರೀಡಾ ಸೌಲಭ್ಯಗಳು, ಅತ್ಯುತ್ತಮ ಮಾರ್ಗದರ್ಶಕರು ಇರುವುದರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಸಮಂತ ಅವರ ದೂರದೃಷ್ಟಿ ಹಾಗೂ ಮುಂದಾಲೋಚನೆಯಿಂದ ಸಂಸ್ಥೆ ಇಷ್ಟು ಪದಕ ಗೆಲ್ಲಲು ಸಾಧ್ಯವಾಗಿದೆ. ಅವರು ನೀಡುತ್ತಿರುವ ಪ್ರೋತ್ಸಾಹ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದ್ದಾರೆ.

 

 

ಐತಿಹಾಸಿಕ ಸಾಧನೆ ಹೆಮ್ಮೆ ತಂದಿದೆ

ಏಷ್ಯನ್‌ ಕ್ರೀಡಾಕೂಟದಲ್ಲಿ ನಮ್ಮ ಸಂಸ್ಥೆಯ ಕ್ರೀಡಾಪಟುಗಳು ಇಷ್ಟೊಂದು ಪದಕ ಪಡೆದು ದಾಖಲೆ ಮಾಡಿರುವುದು ಹೆಮ್ಮೆ ತಂದಿದೆ. ಮೊದಲಿನಿಂದಲೂ ನಮ್ಮ ಸಂಸ್ಥೆಗಳಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ನಮ್ಮ ಪ್ರೋತ್ಸಾಹದ ಜೊತೆಗೆ ಕ್ರೀಡಾಪಟುಗಳಲ್ಲಿ ಛಲದಿಂದ ಇಂತಹ ಸಾಧನೆ ಸಾಧ್ಯವಾಗಿದೆ. ಈ ಸಾಧನೆ ನಮಗೆ ಸ್ಫೂರ್ತಿ ನೀಡಿದ್ದು, ಇನ್ನಷ್ಟು ಸಾಧಕರಿಗೆ ಪ್ರೇರಣೆಯಾಗಲಿದೆ. ಈ ಎಲ್ಲರ ಸಾಧನೆ ಹಿಂದಿರುವ ಮಾರ್ಗದರ್ಶಕರು, ಪೋಷಕರಿಗೆ ಅನಂತ ಅನಂತ ಧನ್ಯವಾದಗಳು. ನಿಮ್ಮ ಸಹಕಾರ, ಪ್ರೋತ್ಸಾಹ ಹಾಗೂ ಬೆಂಬಲ ಸದಾ ಹೀಗೆಯೇ ಇರಲಿ.

ಡಾ. ಅಚ್ಯುತ ಸಮಂತ 

ಸಂಸ್ಥಾಪಕರು, ಕೆಐಐಟಿ, ಕೆಐಎಂಎಸ್‌ ಹಾಗೂ ಕೆಐಎಸ್‌ಎಸ್‌

ಲೋಕಸಭಾ ಮತ್ತು ರಾಜ್ಯಸಭಾ ಮಾಜಿ ಸದಸ್ಯರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಜಯ ದಶಮಿಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ದಸರಾ ಹಾಗೂ ಆಯುಧ ಪೂಜೆಜಾತಿಭೇದವಿಲ್ಲದೆ ದಲಿತರ ಮನೆಯಲ್ಲಿ ಊಟ ಸವಿದ ಡಾ. ಬಿ. ಯೋಗೇಶ್ ಡಿಸ್ಕವರಿ ವಾಹಿನಿಯಲ್ಲಿ ಕೆಐಐಟಿ ಸಾಧನೆ ಬಣ್ಣನೆ ಕನ್ನಡಿಗರು ವಿಶಾಲತೆ, ಸಾಮರಸ್ಯ ಉಳ್ಳವರಾಗಿರುವುದರಿಂದಲೇ ಕನ್ನಡಕ್ಕೆ ಕಂಟಕ!ಹಾಡಿನ ಚಿತ್ರೀಕರಣದೊಂದಿಗೆ ‘ಚಂದ್ರಗಿರಿ’ ಚಿತ್ರೀಕರಣ ಮುಕ್ತಾಯಸರ್ವೋದಯ ಮಹಾವಿದ್ಯಾಲಯದ ಸೌಕರ್ಯ, ಶೈಕ್ಷಣಿಕ ಸಾಧನೆಗೆ ದಾವಣಗೆರೆ ವಿವಿ ಉಪಕುಲಪತಿ ಮೆಚ್ಚುಗೆಬಡತನ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನಾಚರಣೆ ಬೆಂಗಳೂರಿನಲ್ಲಿ ಐಸಿಎಸ್ಐ ಇನ್ವೆಸ್ಟ್ ಇಂಡಿಯಾ ಶೃಂಗಸಭೆ ಆಯೋಜನೆಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಮಾತುಗಳಿಗೆ ಖಂಡನೆ, ಕ್ಷಮೆಯಾಚನೆಗೆ ಆಗ್ರಹ: ರಾಷ್ಟ್ರೀಯ ಅಂಬೇಡ್ಕರ್ ಸೇನೆಯ ಅರ್ಜುನ್ ಗೋಪಾಲಯ್ಯ