ಬಳ್ಳಾರಿ: ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಸಮಗ್ರ ಮತದಾರ ಪಟ್ಟಿಯ ಪರಿಷ್ಕರಣೆಯ ಸಮೀಕ್ಷಾ ಕಾರ್ಯದ (ಎಸ್ಐಆರ್) ಕರಡು ಮತದಾರರ ಪಟ್ಟಿಯಲ್ಲಿನ ಮತದಾರರ ಪೈಕಿ 7561 ಮತದಾರರ ಹೆಸರು ಡಿಲೀಟ್ ಮಾಡಲು ಯತ್ನಿಸಿದ ಬಿಜೆಪಿಯ ಬಿಎಲ್ಎ ಶ್ರೀನಿವಾಸ್ ಮೋತ್ಕರ್ ವಿರುದ್ಧ ಕಾಂಗ್ರೆಸ್ಸಿನ ಬಿಎಲ್ಎ ಗೌತಮ್ ಎಸ್ ಅವರು ಬ್ರೂಸಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯ ಪೈಕಿ 7561 ಮತದಾರರ ಹೆಸರು ಡಿಲೀಟ್ ಮಾಡುವಂತೆ ಆರಂಭದಲ್ಲಿ ಚುನಾವಣಾಧಿಕಾರಿಗಳಿಗೆ ಅಕ್ರಮವಾಗಿ, ಕಾನೂನು ಬಾಹಿರವಾಗಿ ಫಾರಂ7 ಸಲ್ಲಿಸಿ, ತದನಂತರ ಪ್ರತ್ಯೇಕ ದೂರು ಸಲ್ಲಿಸಿದ್ದರು. ಈ ದೂರಿನೊಂದಿಗೆ ನೀಡಿದ ಮತದಾರರ ಪಟ್ಟಿಯಲ್ಲಿ ಬಹುತೇಕ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ, ದಲಿತ ಸಮುದಾಯಗಳ ಮತದಾರರನ್ನೇ ಕೇಂದ್ರೀಕರಿಸಲಾಗಿದೆ.

ದೂರು ಸ್ವೀಕಾರ ವಿಳಂಬ ಆದ ಹಿನ್ನೆಲೆಯಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಠಾಣೆಗೆ ತೆರಳಿ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ತಡರಾತ್ರಿ ನಡೆದಿದೆ.
ಶಾಸಕರು ಠಾಣೆಗೆ ಭೇಟಿ ನೀಡಿದ ನಂತರ ಹೆಚ್ಚುವರಿ ಎಸ್ಪಿ ನವೀನ್ ಕುಮಾರ್, ಡಿವೈಎಸ್ಪಿ ಸ್ಥಳಕ್ಕೆ ಬಂದರು.
ಸಿಪಿಐ ಮಹಾಂತೇಶ್ ದೂರು ದಾಖಲಿಸುವುದು ವಿಳಂಬ ಆಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು.
ಎಫ್ಐಆರ್ ದಾಖಲಾದ ನಂತರ ಶಾಸಕರು ತೆರಳಿದರು.