ಬಳ್ಳಾರಿ: ದೆಹಲಿಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿ, ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ ಎಂದು ಆರೋಪಿಸಿ ಹಾಗೂ ಸಿಪಿಎಂ ನಾಯಕರ ಬಂಧನವನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬಳ್ಳಾರಿ ತಾಲೂಕು ಸಮಿತಿಯ ನೇತೃತ್ವದಲ್ಲಿ ನಗರದ ಗಡಿಗಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.
ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಪಿಎಂ, ಇತರ ಎಡಪಕ್ಷಗಳು ಹಾಗೂ ವಿದ್ಯಾರ್ಥಿ-ಯುವಜನ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದವು. ಆದರೆ, ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಅ.9ರ ರಾತ್ರಿ 10 ಗಂಟೆಯಿಂದ ಅ.10ರ ರಾತ್ರಿ 10 ಗಂಟೆಯವರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ರೈಲು ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು ಹಾಗೂ ವಾಹನ ಸಂಚಾರದ ಮೇಲೆಯೂ ನಿರ್ಬಂಧ ವಿಧಿಸಲಾಗಿತ್ತು. 25 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ, ಬ್ಯಾರಿಕೇಡ್‌ಗಳನ್ನು ಅಳವಡಿಸುವ ಮೂಲಕ ಪ್ರತಿಭಟನಾಕಾರರಿಗೆ ಜಂತರ್ ಮಂತರ್ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಬೃಂದಾ ಕಾರಟ್, ಪಿಣರಾಯಿ ವಿಜಯನ್ ಹಾಗೂ ಕೆ.ಕೆ. ಶೈಲಜಾ ಸೇರಿದಂತೆ ಪಕ್ಷದ ಮುಖಂಡರನ್ನು ಬಂಧಿಸಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ದೆಹಲಿಯಲ್ಲಿರುವ ಎ.ಕೆ.ಜಿ. ಭವನಕ್ಕೆ ಮುತ್ತಿಗೆ ಹಾಕಿರುವುದು ಹಾಗೂ ಹರಿಕಿಶನ್ ಸಿಂಗ್ ಸುರ್ಜಿತ್ ಭವನದಲ್ಲಿದ್ದ ವಿದ್ಯಾರ್ಥಿ-ಯುವಜನರು ಹೊರಬರದಂತೆ ಪೊಲೀಸರು ನಿರ್ಬಂಧ ವಿಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ನಿರ್ಬಂಧಗಳು ಪ್ರಜಾಪ್ರಭುತ್ವದ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು, ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ದೇಶಾದ್ಯಂತ ಹೋರಾಟಗಳನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮತಗಳ್ಳತನಕ್ಕೆ ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಿಪಿಎಂ ಬಳ್ಳಾರಿ ತಾಲೂಕು ಕಾರ್ಯದರ್ಶಿ ಜೆ. ಚಂದ್ರಕುಮಾರಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜೆ. ಸತ್ಯಬಾಬು, ಪಾಂಡುರಂಗರಾಜ್, ಡಿವೈಎಫ್‌ಐನ ಯು. ಎರ್ರಿಸ್ವಾಮಿ, ಅರುಣಾ, ಮಲ್ಲಮ್ಮ, ಎಂ. ತಿಪ್ಪೇಸ್ವಾಮಿ, ಗಂಗಣ್ಣ ಪತ್ತಾರ್, ಗುರುಸಿದ್ದಮೂರ್ತಿ, ವರದರಾಜ್, ಎಸ್‌ಎಫ್‌ಐನ ಮುಖಂಡರು ಹಾಗೂ ವೆಂಕಟೇಶ್, ನವೀನ್, ರಾಣಿ ಸೇರಿದಂತೆ ವಿದ್ಯಾರ್ಥಿ-ಯುವಜನರು ಮತ್ತು ಮಹಿಳಾ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.