ನಾಯಕನಹಟ್ಟಿ: ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಬೋಸಮ್ಮ ಮಂಜುನಾಥ ರಾಜೀನಾಮೆಯಿಂದ ತೆರವಾಗಿರುವ ಹುದ್ದೆಗೆ ಇದೀಗ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಮೂರನೇ ವಾರ್ಡ್ ಸದಸ್ಯೆ ಮಹೇಶ್ವರಿ ಹಾಗೂ ಐದನೇ ವಾರ್ಡ್ ಸುನಿತಾ ಮುದಿಯಪ್ಪ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಕಳೆದ ವಾರ ಉಪಾಧ್ಯಕ್ಷರು ರಾಜೀನಾಮೆ ನೀಡಿ, ಅದು ಅಂಗೀಕಾರವಾದ ಬೆನ್ನಲ್ಲೇ ಈ ಎರಡು ಹೆಸರುಗಳು ಮುಂಚೂಣಿಗೆ ಬಂದಿವೆ. ಪಟ್ಟಣ ಪಂಚಾಯತ್ ನಲ್ಲಿ ಒಟ್ಟು 15 ಸದಸ್ಯರಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳಾ ಮೀಸಲಾತಿ ಇರುವುದರಿಂದ ಈ ಇಬ್ಬರಿಗೂ ಅವಕಾಶವಿದೆ.
ಯಾರಿಗೆ ಒಲಿಯಲಿದೆ ಶಾಸಕರ ಬೆಂಬಲ?
ಈ ಚುನಾವಣೆಯಲ್ಲಿ ಶಾಸಕರ ನಡೆ ಕುತೂಹಲ ಕೆರಳಿಸಿದೆ. ಮಹೇಶ್ವರಿ ಅವರು ಮೂರನೇ ವಾರ್ಡ್ ನಲ್ಲಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದು, ಕಳೆದ 2 ವರ್ಷದಿಂದ ಪಕ್ಷದ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಸ್ಥಳೀಯ ಹಿರಿಯ ಸದಸ್ಯರ ಬೆಂಬಲ ಇದೆ ಎನ್ನಲಾಗಿದೆ.
ಸುನಿತಾ ಮುದಿಯಪ್ಪ ಅವರು ಐದನೇ ವಾರ್ಡ್ ಸದಸ್ಯೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಗೆದ್ದಿದ್ದರೂ, ಈಗ ಶಾಸಕರ ಆಪ್ತ ಬಳಗದಲ್ಲಿದ್ದಾರೆ. ಮತ್ತು ಸಂಘಟನಾ ಬಲ ಅವರಿಗೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಪಟ್ಟಣ ಪಂಚಾಯತ್ ಮೂಲಗಳ ಪ್ರಕಾರ, 15 ಸದಸ್ಯರಲ್ಲಿ ಸುಮಾರು 8 ಸದಸ್ಯರು ಮಹೇಶ್ವರಿ ಪರ ಇದ್ದರೆ, 5 ಸದಸ್ಯರು ಸುನಿತಾ ಮುದಿಯಪ್ಪ ಅವರ ಪರ ಇದ್ದಾರೆ. ಇಬ್ಬರು ಸದಸ್ಯರು ಇನ್ನೂ ತಟಸ್ಥರಾಗಿದ್ದಾರೆ. ಅವರ ನಿರ್ಧಾರವೇ ಅಂತಿಮವಾಗಲಿದೆ.
ಹೈಕೋರ್ಟ್ ಕೇಸ್ ಮತ್ತು ನೀತಿ ಸಂಹಿತೆ ಅಡ್ಡಿ
ಆದರೆ ಈ ಚುನಾವಣೆ ಅಷ್ಟು ಸುಲಭವಲ್ಲ. ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಪ್ರಕರಣ ಹೈಕೋರ್ಟ್ ನಲ್ಲಿ ಪೆಂಡಿಂಗ್ ಇರುವುದರಿಂದ ಮತ್ತು ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಉಪವಿಭಾಗಾಧಿಕಾರಿಗಳು (AC) ಜಿಲ್ಲಾಧಿಕಾರಿ ಮತ್ತು ಹೈಕೋರ್ಟ್ ಅನುಮತಿ ಪಡೆದ ನಂತರವೇ ನೋಟಿಫಿಕೇಷನ್ ಹೊರಡಿಸಬೇಕಿದೆ.
ಸದ್ಯ ವಿಧಾನ ಪರಿಷತ್ ಮತದಾನ ಅಕ್ಟೋಬರ್ 23 ರಂದು ಮುಗಿದು, ಫಲಿತಾಂಶ ಅಕ್ಟೋಬರ್ 27 ರಂದು ಬಂದ ನಂತರವೇ ಉಪಾಧ್ಯಕ್ಷ ಚುನಾವಣೆಯ ಅಧಿಕೃತ ನೋಟಿಫಿಕೇಷನ್ ಹೊರಬೀಳುವ ಸಾಧ್ಯತೆ ಇದೆ.
ಅಂತಿಮವಾಗಿ ಶಾಸಕರು ಯಾರಿಗೆ ಹಸಿರು ನಿಶಾನೆ ತೋರುತ್ತಾರೆ ಎಂಬುದರ ಮೇಲೆ ನಾಯಕನಹಟ್ಟಿ ಪಟ್ಟಣ ಪಂಚಾಯತ್ ನ ಮುಂದಿನ ಉಪಾಧ್ಯಕ್ಷರು ಯಾರಾಗುತ್ತಾರೆ ಎಂಬುದು ನಿರ್ಧಾರವಾಗಲಿದೆ.
ಪಟ್ಟಣ ಪಂಚಾಯತಿ ಸದಸ್ಯೆ ಸುನಿತ ಮುದಿಯಪ್ಪ ಮಾತನಾಡಿ ಪಕ್ಷದ ತೀರ್ಮಾನವೇ ಅಂತಿಮ ತೀರ್ಮಾನ ಪಕ್ಷ ಯಾರಿಗೂ ಕೊಟ್ಟರು ನಾನು ಅವರ ಪರವಾಗಿ ಕೆಲಸ ಮಾಡುವೆ ಮೊಳಕಾಲ್ಮೂರು ಶಾಸಕ ಎನ್. ವೈ ಗೋಪಾಲಕೃಷ್ಣ ಯಾರಿಗೆಹೇಳುತ್ತಾರೆ ಅವರಿಗೆ ನಾನು ಬೆಂಬಲವನ್ನು ಸೂಚಿಸುತ್ತೇನೆ ಎಂದರು