ಚಿತ್ರದುರ್ಗ:ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಷ್ಟೇ ನರ್ಸ್‍ಗಳ ಪಾತ್ರವೂ ಅತ್ಯಂತ ನಿರ್ಣಾಯಕ ಮತ್ತು ಸಮಾನವಾದದ್ದು ಎಂದು ಜಿಲ್ಲಾಧಿಕಾರಿ ಎಸ್. ರಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಸಿ.ಎಂ.ಸಿ.ಆರ್.ಐ) ನಸಿರ್ಂಗ್ ಮಹಾವಿದ್ಯಾಲಯದ ಪ್ರಥಮ ವರ್ಷದ ಬಿ.ಎಸ್.ಸಿ. ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ದೀಪ ಬೆಳಗುವ ಮತ್ತು ಪ್ರಮಾಣ ವಚನ’ ಸ್ವೀಕರಿಸುವ ‘ಜ್ಯೋತಿರ್ಗಮಯ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ಸಂದರ್ಭಗಳಲ್ಲಿ ವೈದ್ಯರಿಗಿಂತಲೂ ಹೆಚ್ಚಿನ ಜವಾಬ್ದಾರಿ ನರ್ಸ್‍ಗಳ ಮೇಲಿರುತ್ತದೆ. ಎಷ್ಟೋ ಕ್ಲಿಷ್ಟಕರ ಹಾಗೂ ಗಂಡಾಂತರಕಾರಿ ಸಂದರ್ಭಗಳಲ್ಲಿ ರೋಗಿಗಳನ್ನು ತಮ್ಮ ಸ್ವಂತ ಒಡಹುಟ್ಟಿದವರಂತೆ ಕಾಳಜಿ ವಹಿಸಿ ನೋಡಿಕೊಳ್ಳುವವರು ನರ್ಸ್‍ಗಳು ಎಂದು ಬಣ್ಣಿಸಿದರು.
ಮನುಷ್ಯನ ಜೀವಕ್ಕಿಂತ ಅಮೂಲ್ಯವಾದುದು ಮತ್ತೊಂದಿಲ್ಲ ಎಂದ ಜಿಲ್ಲಾಧಿಕಾರಿಗಳು, ಹಣ ಸಂಪಾದನೆ ಮಾಡಬಹುದು ಆದರೆ ಕಳೆದುಕೊಂಡ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ ಎಂದರು. ಲೈಫ್ ಸೈನ್ಸ್ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಹ ರೋಗಿಗಳ ಜೀವವನ್ನು ಉಳಿಸುವಲ್ಲಿ ಡಾಕ್ಟರ್ ಹಾಗೂ ನರ್ಸ್‍ಗಳ ಪಾತ್ರ ದೊಡ್ಡದು ಎಂದು ತಿಳಿಸಿದರು. ಆದ್ದರಿಂದ ವಿದ್ಯಾರ್ಥಿಗಳು ನರ್ಸಿಂಗ್ ವೃತ್ತಿಯನ್ನು ಅತ್ಯಂತ ಗೌರವದಿಂದ ಹಾಗೂ ನಿಸ್ವಾರ್ಥ ಮನಸ್ಸಿನಿಂದ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಬೇರೆ ವೃತ್ತಿಗಳಲ್ಲಿ ಕೇವಲ ಹಣ ಸಂಪಾದನೆ ಅಥವಾ ಸ್ವಂತ ಉದ್ಯೋಗ ಇರುತ್ತದೆ, ಆದರೆ ನರ್ಸಿಂಗ್ ವೃತ್ತಿ ಎಂದರೆ ಅದು ನೇರವಾಗಿ ಸಮಾಜ ಸೇವೆಯಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಶ್ಲಾಘಿಸಿದರು.
ಅತಿ ಹೆಚ್ಚು ಮಾನವೀಯತೆ ಹಾಗೂ ತಾಳ್ಮೆ ಅಗತ್ಯವಿರುವ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಇದರ ಬಗ್ಗೆ ಹೆಮ್ಮೆ ಪಡಬೇಕು ಎಂದು ತಿಳಿಸಿದರು.
ಆಸ್ಪತ್ರೆಗಳಲ್ಲಿ ರೋಗಿಗಳೊಂದಿಗೆ ವ್ಯವಹರಿಸುವಾಗ ಅವರ ಮಾನಸಿಕ ಸ್ಥಿತಿ ಯಾವಾಗಲೂ ಒಂದೇ ರೀತಿ ಇರುವುದಿಲ್ಲವಾದ್ದರಿಂದ, ನರ್ಸ್‍ಗಳು ಅತೀವ ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ ಎಂದರು.
ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದ ಪಠ್ಯಕ್ರಮವನ್ನು ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿ ಬೋಧಿಸಲಾಗುತ್ತಿದೆ. ರಾಜ್ಯದ ನರ್ಸಿಂಗ್ ಪದವೀಧರ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ರಿಜಿಸ್ಟಾರ್ ಶ್ರೀಕಾಂತ್ ಪುಲಾರಿ ಹೇಳಿದರು
ಈ ವರ್ಷದ ಬಿ.ಎಸ್ಸಿ ನರ್ಸಿಂಗ್ ಕೋರ್ಸ್‍ಗಳಿಗೆ ರಾಜ್ಯದಾದ್ಯಂತ ವಿದ್ಯಾರ್ಥಿಗಳಿಂದ ಅತ್ಯುತ್ತಮ ಬೇಡಿಕೆ ವ್ಯಕ್ತವಾಗಿದ್ದು, ಕೆಇಎ ಮೂಲಕ ನಡೆದ ಮೊದಲ ರೌಂಡ್ ಕೌನ್ಸಿಲಿಂಗ್‍ನಲ್ಲೇ ಶೇ. 99ರಷ್ಟು ಸೀಟ್‍ಗಳು ಭರ್ತಿಯಾಗಿವೆ. ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿನ ನರ್ಸಿಂಗ್ ಕಾಲೇಜು ಸೀಟುಗಳನ್ನು ಗರಿಷ್ಠ 250ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಪ್ರತಿವರ್ಷ 70,000 ನರ್ಸಿಂಗ್ ಪದವೀಧರರು ಹೊರಬರುತ್ತಿದ್ದರೂ ಕೂಡ, ಜಾಗತಿಕ ಮಟ್ಟದಲ್ಲಿ ನರ್ಸ್‍ಗಳಿಗೆ ಭಾರಿ ಬೇಡಿಕೆ ಇರುವುದರಿಂದ ಉದ್ಯೋಗ ಕೊರತೆ ಕಾಡುವುದಿಲ್ಲ. ಜರ್ಮನಿ, ಜಪಾನ್ ಮತ್ತು ಇಟಲಿಯ ಮೆಡಿಕಲ್ ಪ್ರತಿನಿಧಿಗಳು ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ನರ್ಸ್‌ಗಳನ್ನು ಅವರ ದೇಶಕ್ಕೆ ಆಹ್ವಾನಿಸುತ್ತಿದ್ದಾರೆ ಎಂದರು
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ. ಬಿ.ವೈ.ಯುವರಾಜ್ ಮಾತನಾಡಿದರು
ಪ್ರಾಂಶುಪಾಲ ಕಿರಣ್ ಕುಮಾರ್ ಪ್ರಮಾಣ ವಚನ ಬೋಧಿಸಿದರು. ನರ್ಸಿಂಗ್ ಕಾಲೇಜು ನೋಡಲ್ ಅಧಿಕಾರಿ ಡಾ.ಶಬ್ನಮ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೈದ್ಯಕೀಯ ಕಾಲೇಜು ಅಧೀಕ್ಷಕಿ ಡಾ.ಮೇಘಾ.ಜಿ.ಹೆಚ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ.ಎಸ್.ಪಿ, ಅಕಾಡೆಮಿಕ್ ರಿಜಿಸ್ಟಾರ್ ಡಾ.ಚಂದ್ರಿಕಾ, ನರ್ಸಿಂಗ್ ಕೌನ್ಸಿಲ್ ಆಡಳಿತಾಧಿಕಾರಿ ವಿಶ್ವಾಸ್.ಎಸ್.ವಿ, ಶ್ರೂಷಕ ಕಾಲೇಜು ಅಧೀಕ್ಷಕಿ ಶಾಂತಮ್ಮ ನರ್ಸಿಂಗ್ ಕಾಲೇಜು ಸಿಬ್ಬಂದಿಗಳಾದ ಕರಿಬಸ್ಯಾನಾಯ್ಕ್, ಹನುಮಂತರೆಡ್ಡಿ.ಎಂ.ಟಿ, ಆರ್.ತಿಪ್ಪೇಸ್ವಾಮಿ, ಲಲಿತಾ.ಎನ್., ಸುಶ್ಮಿತಾ.ಸಿ.ಬಿ, ದೀಪಾ, ಟಿ.ಪುಷ್ಪಲತಾ ಸೇರಿದಂತೆ ಮತ್ತಿರರು ಇದ್ದರು.