ಬೆಂಗಳೂರು : ನಮ್ಮ ಸಂಸ್ಕೃತಿಯೇ ಭಾರತದ ಆತ್ಮ ಎಂದು ಹೊಸದಿಗಂತ ಪತ್ರಿಕೆಯ ಸಂಪಾದಕರಾದ ವಿನಾಯಕ ಭಟ್ ಮುರೂರು ಅಭಿಪ್ರಾಯಪಟ್ಟರು.
ಅವರು ನಗರದ ಮತ್ತಿಕೆರೆಯ ರಾಯಲ್ ಕಾಲೇಜಿನ ಸ್ವಾತಂತ್ರ್ಯೋತ್ಸವ ಸಮಾರಂಭ ಮತ್ತು ಸಂಕಲ್ಪ ಅಭಿಯಾನದ ಮಹಾ ಸಮರ್ಪಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ ಉಚಿತವಾಗಿ ಸಿಗುವ ಯಾವುದಕ್ಕೂ ಬೆಲೆ ಇರಲಾರದು, ನಾಗರಿಕರು ಸರ್ಕಾರದ ಯೋಜನೆಯ ದುರುಪಯೋಗ ಮಾಡಿಕೊಳ್ಳದೆ ಸದ್ಬಳಕೆ ಮಾಡಬೇಕು,ಹಿಂದಿನ ಹೋರಾಟದ ಸ್ಮರಣೆಯ ಜೊತೆ ಭವಿಷ್ಯದ ಭಾರತದ ಕುರಿತು ಯೋಚಿಸಬೇಕು, ಭಾರತದ ಗಡಿಯನ್ನು ಸೈನಿಕರು ಕಾಯುವಂತೆ ಭಾರತದ ಒಳಗಿನ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳಬೇಕು ಎಂದರು. ಧ್ವಜಾರೋಹಣ ನೆರವೇರಿಸಿದ ಭಾರತೀಯ ಸೈನ್ಯದ ನಿವೃತ್ತ ಯೋಧ ರಾಜೇಶ್ ಡಿ ಅವರನ್ನು ಸನ್ಮಾನಿಸಲಾಯಿತು. ರಾಯಲ್ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಒಂದು ತಿಂಗಳುಗಳ ಕಾಲ ಸುಮಾರು ೧೦ ಸಾವಿರ ಮನೆಗಳಿಗೆ ತೆರಳಿ ಮಾದಕ ವ್ಯಸನಗಳ ಕುರಿತು ಮತ್ತು ಪರಿಸರ ಸಂರಕ್ಷಣೆಯ ಕುರಿತು ನಡೆಸಿದ ಸಂಕಲ್ಪ ಅಭಿಯಾನದ ಮಹಾ ಸಮರ್ಪಣೆಯನ್ನು ವಿದ್ಯಾರ್ಥಿಗಳು ಕೈಯಲ್ಲಿ ದೀಪ ಹಿಡಿದು ಪ್ರತಿಜ್ಞೆಮಾಡುವ ಮೂಲಕ ಸಂಪನ್ನಗೊಳಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ.ದೇವರಾಜ್ ಬಿ.ಕೆ ವಹಿಸಿದ್ದರು. ನಿರ್ದೇಶಕಿ ಸುಜಾತ ದೇವರಾಜ್, ಟ್ರಸ್ಟಿ ಜೀವನ್ ಗೌಡ, ಪ್ರಾಚಾರ್ಯರಾದ ಡಾ.ಲಕ್ಷ್ಮೀಶ್ ಹೆಗಡೆ ಸೋಂದಾ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ನಂತರ ರಾಯಲ್ ಕಾಲೇಜಿನ ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.