ನಾಯಕನಹಟ್ಟಿ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ. ವೀರಭದ್ರಪ್ಪ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎಲ್ಲ ಹೋಬಳಿಗಳಲ್ಲೂ ಸಮರ್ಪಕ ಮಳೆಯಿಲ್ಲದೆ ಬರದ ಛಾಯೆ ಆವರಿಸಿದೆ. ಕೆಲ ರೈತರು ಬಿತ್ತನೆ ಮಾಡಿದ್ದರೆ, ಇನ್ನೂ ಅನೇಕ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಬಿತ್ತನೆ ಮಾಡಿದ ರೈತರೂ ಉತ್ತಮ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ನೀರಾವರಿ ಆಶ್ರಿತ ಬೆಳೆಯಾಗಿರುವ ಟೊಮೆಟೊಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಉಂಟಾಗಿರುವುದರಿಂದ ಟೊಮೆಟೊ ಬೆಳೆದ ರೈತರು ಕಂಗಾಲಾಗಿದ್ದಾರೆ. ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಉತ್ತಮ ಬೆಳೆ ನಿರೀಕ್ಷಿಸಿದ್ದ ರೈತರಿಗೆ ಬೆಲೆ ಕುಸಿತ ಮತ್ತಷ್ಟು ಸಂಕಷ್ಟ ತಂದಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಟೊಮೆಟೊಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ನೂತನ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ಮೊಳಕಾಲ್ಮೂರು ಕ್ಷೇತ್ರದ ರೈತರ ಸಮಸ್ಯೆಗಳತ್ತ ವಿಶೇಷ ಗಮನ ಹರಿಸಬೇಕು. ಇಡೀ ಚಿತ್ರದುರ್ಗ ಜಿಲ್ಲೆಗೆ ಹೋಲಿಸಿದರೆ ಮೊಳಕಾಲ್ಮೂರು ಕ್ಷೇತ್ರವೇ ಹೆಚ್ಚು ಬರಪೀಡಿತ ಪ್ರದೇಶವಾಗಿದ್ದು, ಉದ್ಯೋಗ ಅರಸಿ ರೈತರು ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದ ಬಹುತೇಕ ಕೆರೆಗಳಲ್ಲಿ ನೀರಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯೂ ಪೂರ್ಣಗೊಂಡಿಲ್ಲ. ಆದರೆ ಪಕ್ಕದ ಜಗಳೂರು ತಾಲೂಕಿನಲ್ಲಿ ಯೋಜನೆಯಿಂದ ಕೆರೆಗಳು ತುಂಬಿ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು.
‘ಆಂಧ್ರಕ್ಕೆ ಹೋಗಬೇಕಾದರೆ ಶಾಸಕರೇ ಹೋಗಲಿ’
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಪ್ರದೇಶಕ್ಕೆ ಸೇರಿಸುವ ಕುರಿತು ಶಾಸಕ ಎನ್.ವೈ. ಗೋಪಾಲಕೃಷ್ಣ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವೀರಭದ್ರಪ್ಪ, “ಶಾಸಕರು ಬೇಕಾದರೆ ಆಂಧ್ರಕ್ಕೆ ಹೋಗಲಿ, ಕ್ಷೇತ್ರದ ಜನರು ಯಾಕೆ ಹೋಗಬೇಕು?” ಎಂದು ಪ್ರಶ್ನಿಸಿದರು.
ಕ್ಷೇತ್ರದಲ್ಲಿ ಬರಗಾಲ ತೀವ್ರವಾಗಿರುವ ಸಂದರ್ಭದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಬೇಕಾದ ಶಾಸಕರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸುವ ಹೇಳಿಕೆ ನೀಡಿರುವುದು ಸರಿಯಲ್ಲ. ಸಚಿವ ಸ್ಥಾನ ಕೈತಪ್ಪಿದ ಹತಾಶೆಯಿಂದ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ರೈತರ ಬೋರ್‌ವೆಲ್‌ಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ರಾಜಕೀಯ ವಾಗ್ವಾದಗಳಿಗೆ ಮುಂದಾಗುವುದು ಸರಿಯಲ್ಲ. ರೈತರಿಂದಲೇ ದೇಶ ಉಳಿದಿದೆಯೇ ಹೊರತು ರಾಜಕೀಯ ವ್ಯಕ್ತಿಗಳಿಂದಲ್ಲ. ಶಾಸಕರು ರೈತರ ಕಷ್ಟ-ಸುಖಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎನ್.ವೈ. ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ನಮಗಿಂತಲೂ ಹೆಚ್ಚಿನ ಅನುಭವವಿದೆ. ಸಚಿವ ಸ್ಥಾನ ನೀಡಿಲ್ಲವೆಂದರೆ ರಾಜೀನಾಮೆ ನೀಡಲಿ; ಆದರೆ ಮೊಳಕಾಲ್ಮೂರು ಕ್ಷೇತ್ರವನ್ನು ಬೇರೆ ರಾಜ್ಯಕ್ಕೆ ಅಥವಾ ಬೇರೆ ಕ್ಷೇತ್ರಕ್ಕೆ ಸೇರಿಸುವುದು ಸಾಧ್ಯವಿಲ್ಲ ಎಂದು ವೀರಭದ್ರಪ್ಪ ಹೇಳಿದರು.
ಕ್ಷೇತ್ರದಲ್ಲಿ ಗೋವುಗಳ ಸಂಖ್ಯೆಯೂ ಹೆಚ್ಚಿದ್ದು, ಮೇವು ಮತ್ತು ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ತುರ್ತಾಗಿ ಗೋಶಾಲೆಗಳನ್ನು ತೆರೆಯಬೇಕು. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿಗಳು ಕೂಡ್ಲಿಗಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಪ್ರಸ್ತಾವನೆ ಸಲ್ಲಿಸಿರುವಂತೆ, ಮೊಳಕಾಲ್ಮೂರು ಕ್ಷೇತ್ರವನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಡಿ.ಬಿ. ಕರಿಬಸಪ್ಪ ಚೌಳಕೆರೆ, ರೈತ ಘಟಕದ ಅಧ್ಯಕ್ಷ ಎಸ್.ಬಿ. ತಿಪ್ಪೇಸ್ವಾಮಿ ಮಲ್ಲೂರಹಳ್ಳಿ, ತಾಲೂಕು ಉಪಾಧ್ಯಕ್ಷ ರೇಖಲಗೆರೆ ಮಹೇಂದ್ರಪ್ಪ, ಗೌಡಗೆರೆ ರಂಗಪ್ಪ, ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಪೂಜಾರಿ ಕೆ.ಪಿ. ತಿಪ್ಪೇಸ್ವಾಮಿ ಮಾದಯ್ಯನಹಟ್ಟಿ ಸೇರಿದಂತೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.