ಬಳ್ಳಾರಿ : ಜೆಸ್ಕಾಂ ಬಳ್ಳಾರಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 339 ಗುತ್ತಿಗೆ ನೌಕರರ ಪೈಕಿ ಶೇ.40ರಷ್ಟು ನೌಕರರನ್ನು ಕಡಿತಗೊಳಿಸುವ ಪ್ರಸ್ತಾವನೆಯನ್ನು ಕೈಬಿಟ್ಟು, ಎಲ್ಲ ಗುತ್ತಿಗೆ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಎಐಯುಟಿಯುಸಿ ಸಂಯೋಜಿತ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘದ ಬಳ್ಳಾರಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಸಂಘದ ಅಧ್ಯಕ್ಷ ಡಾ. ಪ್ರಮೋದ್.ಎನ್ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಬಳ್ಳಾರಿ ವಲಯದ ವಿವಿಧ ಕಚೇರಿಗಳು ಹಾಗೂ ಕ್ಷೇತ್ರಗಳಲ್ಲಿ ಸುಮಾರು 339 ಹೊರಗುತ್ತಿಗೆ ನೌಕರರು ಹಲವು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಂಪ್ಯೂಟರ್ ಆಪರೇಟರ್, ಪರ್ಸನಲ್ ಅಸಿಸ್ಟೆಂಟ್, ಆಫೀಸ್ ಬಾಯ್, ಅಟೆಂಡರ್, ಸ್ಟೋರ್ ಹೆಲ್ಪರ್, ಲಾರಿ ಚಾಲಕ, ಸ್ವೀಪರ್ ಹಾಗೂ ವಾಚ್‌ಮನ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಆಡಳಿತಾತ್ಮಕ ಕೆಲಸ, ಗ್ರಾಹಕರ ಸೇವೆ, ಬಿಲ್ಲಿಂಗ್, ದಾಖಲೆ ನಿರ್ವಹಣೆ, ಸ್ವಚ್ಛತೆ, ಭದ್ರತೆ ಸೇರಿದಂತೆ ಅಗತ್ಯ ಸೇವೆಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ವೆಚ್ಚ ಕಡಿತದ ಕ್ರಮದ ಭಾಗವಾಗಿ ಗುತ್ತಿಗೆ ನೌಕರರ ಸಂಖ್ಯೆಯನ್ನು ಶೇ.40ರಷ್ಟು ಕಡಿತಗೊಳಿಸಿ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿರುವುದು ನೌಕರರಿಗೆ ತೀವ್ರ ಆತಂಕ ಉಂಟುಮಾಡಿದೆ. ಪ್ರಸ್ತಾವನೆ ಜಾರಿಯಾದರೆ ಬಳ್ಳಾರಿ ವಲಯದಲ್ಲಿಯೇ 135ಕ್ಕೂ ಹೆಚ್ಚು ನೌಕರರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಸಂಘ ತಿಳಿಸಿದೆ.
ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರು ತಮ್ಮ ಕುಟುಂಬದ ಜೀವನೋಪಾಯಕ್ಕಾಗಿ ಈ ಉದ್ಯೋಗವನ್ನೇ ಅವಲಂಬಿಸಿದ್ದಾರೆ. ಕೋವಿಡ್ ಸೇರಿದಂತೆ ವಿವಿಧ ಸಂಕಷ್ಟದ ಸಂದರ್ಭಗಳಲ್ಲಿಯೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ನೌಕರರನ್ನು ಏಕಾಏಕಿ ಕೆಲಸದಿಂದ ಕಡಿತಗೊಳಿಸುವುದು ಸೂಕ್ತವಲ್ಲ ಎಂದು ಸಂಘದ ಮುಖಂಡರು ಹೇಳಿದ್ದಾರೆ.
ವೆಚ್ಚ ಕಡಿತಕ್ಕೆ ವಿದ್ಯುತ್ ಸೋರಿಕೆ ತಡೆ ಸೇರಿದಂತೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು. ನೌಕರರ ಉದ್ಯೋಗಕ್ಕೆ ಧಕ್ಕೆ ತರುವ ಕ್ರಮ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ಪ್ರಮುಖ ಬೇಡಿಕೆಗಳು: ಬಳ್ಳಾರಿ ಹಾಗೂ ಕಲಬುರ್ಗಿ ವಲಯಗಳಲ್ಲಿ ಶೇ.40ರಷ್ಟು ಗುತ್ತಿಗೆ ನೌಕರರನ್ನು ಕಡಿತಗೊಳಿಸುವ ಪ್ರಸ್ತಾವನೆಯನ್ನು ತಕ್ಷಣ ಕೈಬಿಡಬೇಕು. ಪ್ರಸ್ತುತ ಸೇವೆಯಲ್ಲಿರುವ ಎಲ್ಲ ನೌಕರರನ್ನು ಮುಂದುವರಿಸಬೇಕು. ಹಲವು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಿ, ಅವರನ್ನು ಖಾಯಂಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.