ಬೆಂಗಳೂರು: ಸ್ವಾತಂತ್ರ್ಯವು ನಮಗೆ ಯಾರೂ ಉಡುಗೊರೆಯಾಗಿ ನೀಡಿಲ್ಲ. ಅದು ಲಕ್ಷಾಂತರ ಜನರ ತ್ಯಾಗ, ಹೋರಾಟ, ನೋವು ಮತ್ತು ಬಲಿದಾನದ ಫಲ ಎಂದು ನಿವೃತ್ತ ಪ್ರಾಚಾರ್ಯೆ ಉಷಾರಾಣಿ ಅವರು ಹೇಳಿದರು.
ಕೆ.ನಾರಾಯಣಪುರದ ಬಿ.ಡಿ.ಎಸ್ ನಗರದಲ್ಲಿರುವ ಶ್ರೇಯಾನ್ ವರ್ಲ್ಡ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅನೇಕ ವೀರರು ತಮ್ಮ ಕುಟುಂಬ, ಸುಖ, ಬದುಕು ಎಲ್ಲವನ್ನೂ ದೇಶಕ್ಕಾಗಿ ತ್ಯಾಗ ಮಾಡಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ "ನನಗೆ ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ" ಎಂದು ಕರೆ ನೀಡಿದರು. ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು ಎಂದರು.
ನಾವು ಸಂವಿಧಾನವನ್ನು ಗೌರವಿಸಬೇಕು, ಕಾನೂನನ್ನು ಪಾಲಿಸಬೇಕು, ಮತದಾನದ ಹಕ್ಕನ್ನು ಚಲಾಯಿಸಬೇಕು, ತೆರಿಗೆಗಳನ್ನು ಪ್ರಾಮಾಣಿಕವಾಗಿ ಪಾವತಿಸಬೇಕು, ಪರಿಸರವನ್ನು ಕಾಪಾಡಬೇಕು ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸಬೇಕು ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ವಿಶ್ವವಾಣಿ ಹಿರಿಯ ಉಪಸಂಪಾದಕ ಪತ್ರಕರ್ತ ನವೀನ್ ಕುಮಾರ್ ಮಾತನಾಡಿ, ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಇಂದು ಭಾರತ ಮುಂಚೂಣಿಯಲ್ಲಿರಲು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವೇ ಮುಖ್ಯ ಕಾರಣ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ಜಗತ್ತಿಗೆ ಸಾರುತ್ತಿದೆ ಎಂದರು.
ಉತ್ತಮ ಶಿಕ್ಷಣ ಪಡೆಯಬೇಕು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಬೇಕು, ಪರಿಸರ ಸಂರಕ್ಷಣೆಯಲ್ಲಿ ಭಾಗವಹಿಸಬೇಕು, ಮರಗಳನ್ನು ನೆಡಬೇಕು, ನೀರನ್ನು ಉಳಿಸಬೇಕು, ಸ್ವಚ್ಛತೆಯನ್ನು ಕಾಪಾಡಬೇಕು ಮತ್ತು ರಾಷ್ಟ್ರದ ಅಭಿವೃದ್ಧಿಗೆ ನಮ್ಮದೇ ಆದ ಕೊಡುಗೆ ನೀಡಬೇಕು ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಪತ್ರಕರ್ತ ಕರಿಯಪ್ಪ ಮಾತನಾಡಿ, ದೇಶಕ್ಕೆ ಅಂಟಿರುವ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜವಾಬ್ದಾರಿ ಇಂದಿನ ಝೇನ್ ಜೀ ಹಾಗೂ ಅಲ್ಫಾ ಪೀಳಿಗೆ ಮೇಲಿದೆ ಎಂದರು.
ಈ ವೇಳೆ ಶಿಕ್ಷಕರಾದ ಶಶಿಕುಮಾರ್ ,ವಿದ್ಯಾ, ವೀಣಾ, ಭವ್ಯಶ್ರೀ, ಭವ್ಯರಾಣಿ, ಪುಷ್ಪಾವತಿ, ಚೈತ್ರ, ರಶೀದ, ಬಿನಿತ, ಶಂಶದ್, ಕೃಷ್ಣ, ದಾಹುದ್ ಸೇರಿ ಮಕ್ಕಳು, ಪೋಷಕರು ಇದ್ದರು.