ಸುರಪುರ : ಸುರಪುರ ನಗರದ ತಹಶೀಲ್ದಾರ್ ಕಛೇರಿ ರಸ್ತೆಯ ಕೆನರಾ ಬ್ಯಾಂಕ್ ಹತ್ತಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಎರಡನೇ ವರ್ಷದ ಹಿಂದೂ ಮಹಾಗಣಪತಿಯ ಭವ್ಯ ಶೋಭಾಯಾತ್ರೆ ಹಾಗೂ ಅದ್ಧೂರಿ ಗಣೇಶ ಮೆರವಣಿಗೆ ನಾಳೆ ಗುರುವಾರ ಸಾಯಂಕಾಲ 4 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಮುಖಂಡರಾದ ವೆಂಕಟೇಶ್ ನಾಯಕ ಬೈರಿಮರಡಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಯೊಂದಿಗೆ ಮಾತನಾಡಿದ ಅವರು ಹಿಂದೂ ಮಹಾ ಗಣಪತಿಯ ಭವ್ಯ ಶೋಭಾಯಾತ್ರೆಯಲ್ಲಿ ಜನರನ್ನು ರಂಜಿಸಲು ಸಾಗರದ ಸುಪ್ರಸಿದ್ಧ ಕಾಂತಾರ ತಂಡ, ಚಿತ್ರದುರ್ಗದ ಕಲಾತಂಡದ ಹನುಮಂತನ ವೇಷದಾರಿ, ಗೋರಿಲ್ಲ ವೇಷದಾರಿಗಳು ಹಾಗೂ ಗೊಂಬೆಗಳ ಕುಣಿತದ ವೇಷದಾರಿಗಳು ಭಾಗವಹಿಸಲಿದ್ದಾರೆ ಜೊತೆಗೆ ತುಳಜಾಪುರದ ಪ್ರಖ್ಯಾತ ನಾಶಿಕ್ ಡೋಲ್ ತಂಡ ಸೇರಿದಂತೆ ವಿವಿಧ ಸ್ಥಳೀಯ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಲಿವೆ ಎಂದರು.
ಶೋಭಾ ಯಾತ್ರೆಯಲ್ಲಿ ಸರಿ ಸುಮಾರು 10 ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆ ಇದ್ದು, ಕೆನರಾ ಬ್ಯಾಂಕ್ ರಸ್ತೆಯ ಮಾರ್ಗವಾಗಿ ಶೋಭಾಯಾತ್ರೆ ಪ್ರಾರಂಭವಾಗಿ ಪಟ್ಟಣದ ಹೃದಯ ಭಾಗವಾದ ಗಾಂಧಿ ಚೌಕ್ ನಿಂದ, ದರ್ಬಾರ್ ರಸ್ತೆಯ ಮೂಲಕ ಸಾಗಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಹತ್ತಿರ ಸಂಪನ್ನಗೊಳ್ಳಲಿದೆ.
ಜಿಲ್ಲೆಯ ಹಾಗೂ ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳ ಸಮಸ್ತ ಹಿಂದೂ ಬಾಂಧವರು ಈ ಭವ್ಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.