ಬೆಂಗಳೂರು: ಸಂಘಟನೆಗಳು ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ, ಕರ್ನಾಟಕದ ಸಾಂಸ್ಕೃತಿಕ ವಾತಾವರಣ ಹಾಳಾಗದಂತೆ ಕಣ್ಣಗಾವಲಾಗಿ ಸಮಾಜದ ಪರವಾಗಿ ಕೆಲಸ ಮಾಡಬೇಕು ಎಂದು ರಾಜ್ಯದ ಲೋಕಾಯುಕ್ತರಾಗಿ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಕರೆ ನೀಡಿದರು.
ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಸ್ವಯಂಸೇವಕರ ವೇದಿಕೆಯ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಘಟನೆಗಳು ಕೇವಲ ತಮ್ಮ ಸಂಘಟನೆಯ ಚಟುವಟಿಕೆಗಳಿಗೆ ಸೀಮಿತವಾಗದೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಕರ್ನಾಟಕದ ಸಾಂಸ್ಕೃತಿಕ ವಾತಾವರಣ ಮತ್ತು ಸಾಮಾಜಿಕ ಮೌಲ್ಯಗಳನ್ನು ಕಾಪಾಡುವಲ್ಲಿ ಸಂಘಟನೆಗಳು ಕಣ್ಣಗಾವಲಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಸಂಘಟಕರಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪರಮಪೂಜ್ಯ ಜಗದ್ಗುರು ಸಾಯಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಗುರುಮೂರ್ತಿ ಗುರೂಜಿ ಅವರು ಆಶೀರ್ವಚನ ನೀಡಿ, ಸಂಘಟನೆಗಳಲ್ಲಿ ಆರಂಭದಲ್ಲಿರುವ ಉತ್ಸಾಹವನ್ನು ನಂತರದ ದಿನಗಳಲ್ಲಿ ಕಡಿಮೆ ಮಾಡಿಕೊಳ್ಳಬಾರದು. ಸಂಘಟಕರ ಇಂದಿನ ಉತ್ಸಾಹ ಸದಾಕಾಲ ಇದೇ ರೀತಿಯಾಗಿ ನಿರಂತರವಾಗಿರಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ವಿಧಾನ ಪರಿಷತ್ ಮಾಜಿ ಸದಸ್ಯ ಆ. ದೇವೇಗೌಡ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಗೌರವಾಧ್ಯಕ್ಷ ಡಾ. ಆಂಜನಪ್ಪ ಅವರು ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕ ಸ್ವಯಂಸೇವಕರ ವೇದಿಕೆಯ ರಾಜ್ಯಾಧ್ಯಕ್ಷರಾದ ಎಮ್.ಸಿ.ಧನಂಜಯಗೌಡ ಅವರು ಹಲವು ವರ್ಷಗಳಿಂದ ಸಮಾಜಮುಖಿ ಹಾಗೂ ನಾಡು-ನುಡಿಯ ಪರವಾದ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ಇನ್ನಷ್ಟು ಸಮಾಜಸೇವೆ ಮಾಡಲು ಶಕ್ತಿ ದೊರೆಯಲಿ ಎಂದು ಗಣ್ಯರು ಹಾರೈಸಿ, ವೇದಿಕೆಯ 2ನೇ ವರ್ಷದ ವಾರ್ಷಿಕೋತ್ಸವಕ್ಕೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಕೆನಲಿ ಗೌಡ, ಅಧ್ಯಕ್ಷ ಮಂಚೇಗೌಡ, ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಕೋ. ಪು. ಗುಣಶೇಖರ್, ನಮ್ಮ ಕರ್ನಾಟಕ ಸೇನೆಯ ರಾಜ್ಯ ಉಪಾಧ್ಯಕ್ಷ ಅನಿಲ್ ಶೆಟ್ಟಿ, ಕರವೇ ಮುಖಂಡ ಜಗದೀಶ್ ಗೌಡ ಚಲನಚಿತ್ರ ನಟ ನಟಿಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಮಾಜಸೇವಕರಾದ ಹಾಗೂ ಬಿಎಸ್‌ಎನ್‌ಎಲ್ ನಿವೃತ್ತ ನೌಕರ ಶ್ರೀಧರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು.