ಕೂಡ್ಲಿಗಿ: ತಾಲೂಕಿನ ಗುಡೇಕೋಟೆ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕಾಲೋನಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯಿಂದ ಹಳೆಯ ಸಮುದಾಯ ಭವನ ತೆರವುಗೊಂಡಿರುವ ಹಿನ್ನೆಲೆಯಲ್ಲಿ, ಸಮುದಾಯದ ಸಭೆ-ಸಮಾರಂಭಗಳನ್ನು ನಡೆಸಲು ಅನುಕೂಲವಾಗುವಂತೆ ಹೊಸ ಸಮುದಾಯ ಭವನ ಮಂಜೂರು ಮಾಡಿಕೊಡುವಂತೆ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಶಾಸಕರಾದ ಡಾ. ಎನ್. ಟಿ. ಶ್ರೀನಿವಾಸ್ ಅವರಿಗೆ ನರಸಿಂಹನಗಿರಿ ಶಾಸಕರ ನಿವಾಸದಲ್ಲಿ ಬೇಟಿಯಾಗಿ ಮನವಿ ಮಾಡಿದ್ದಾರೆ.
ಗುಡೇಕೋಟೆ ಗ್ರಾಮದ ರಾಜ್ಯ ಹೆದ್ದಾರಿ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಅಂಬೇಡ್ಕರ್ ಕಾಲೋನಿಯಲ್ಲಿದ್ದ ಸಮುದಾಯ ಭವನವನ್ನು ತೆರವುಗೊಳಿಸಲಾಗಿದೆ. ಇದರಿಂದ ಸಮುದಾಯದ ಜನರು ಸಭೆ, ಸಮಾರಂಭ ಹಾಗೂ ಇತರ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಕ್ತ ಸ್ಥಳವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.
ಸಮುದಾಯದ ಜನರ ಅನುಕೂಲಕ್ಕಾಗಿ ಕಾಲೋನಿಯಲ್ಲಿ ಹೊಸ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡು, ಮಂಜೂರಾತಿ ನೀಡಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
ಸಮುದಾಯದ ಜನರ ಸಮಸ್ಯೆಯನ್ನು ಪರಿಗಣಿಸಿ, ಹೊಸ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಈ ವೇಳೆ ಗ್ರಾಪಂ ಮಾಜಿ ಅದ್ಯಕ್ಷರಾದ ಎಚ್. ನಾಗೇಂದ್ರಪ್ಪ, ಮಾಜಿ ಗ್ರಾಪಂ ಸದಸ್ಯ ಕೆ. ಮಂಜುನಾಥ್, ಗುತ್ತಿಗೆದಾರರಾದ ಜೖಯರಾಮ್, ಜಿಲಾನ್,ಇಂದ್ರೇಶ್,ಭಟ್ರಹಳ್ಳಿ ಪರಮೇಶ್,ಶಿವುಕುಮಾರ್,ನುಂಕೇಶ್, ತಿಪ್ಪೇಸ್ವಾಮಿ,ಇತರರಿದ್ದರು.