ಬಳ್ಳಾರಿ,: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಹಾಗೂ ತಮ್ಮ ಮಕ್ಕಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಪಿತೂರಿ ನಡೆಸಲಾಗುತ್ತಿದೆ ಎಂದು ಸಿರುಗುಪ್ಪ ಕ್ಷೇತ್ರದ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಆರೋಪಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪುತ್ರ ವೆಂಕಟಪ್ಪ ನಾಯಕ ಅವರು 2010ರ ಮೇ 4ರಂದು ಎನ್. ಮಂಜುಳಾ ಅವರಿಂದ ಸರ್ವೆ ನಂ.8/3ರಲ್ಲಿನ 3 ಎಕರೆ ಪೈಕಿ 75 ಸೆಂಟ್ ಜಮೀನನ್ನು ನೋಂದಾಯಿತ ಮಾರಾಟ ಪತ್ರದ ಮೂಲಕ ಖರೀದಿಸಿದ್ದು, ಅಂದಿನಿಂದಲೂ ಜಮೀನು ಪುತ್ರನ ಸ್ವಾಧೀನದಲ್ಲಿದೆ ಎಂದು ತಿಳಿಸಿದರು.
2022ರಲ್ಲಿ ಮಂಜುಳಾ ಅವರು ಜಮೀನಿನ ಸ್ವಾಧೀನ ತಮ್ಮಲ್ಲಿದೆ ಎಂದು ಹೇಳಿ ಸಿರುಗುಪ್ಪದ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಒ.ಎಸ್.ನಂ.13/2022ರ ಅಸಲು ದಾವೆ ದಾಖಲಿಸಿದ್ದರು. ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಜಾಗೊಳಿಸಿದೆ. ಈ ಆದೇಶ ಪ್ರಶ್ನಿಸಿ ಮಂಜುಳಾ ಅವರು ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣ ವಿಚಾರಣೆಯಲ್ಲಿದೆ ಎಂದು ಹೇಳಿದರು.
ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುವ ಸಂದರ್ಭದಲ್ಲೇ ತಮ್ಮ ಪುತ್ರನ ಜಮೀನಿನಲ್ಲಿ ಟ್ರ್ಯಾಕ್ಟರ್ ಓಡಿಸಿದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ತಮ್ಮ ಪುತ್ರನ ಕಡೆಯಿಂದಲೂ ದೂರು ನೀಡಲಾಗಿದೆ ಎಂದು ಸೋಮಲಿಂಗಪ್ಪ ತಿಳಿಸಿದರು.

ಇದಾದ ಬಳಿಕ ಸಿರುಗುಪ್ಪದ ಹಳೆ ತಾಲೂಕು ಕಚೇರಿ ಆವರಣದಲ್ಲಿ ತಮ್ಮ ಹಾಗೂ ಮಕ್ಕಳ ವಿರುದ್ಧ ಬ್ಯಾನರ್ ಅಳವಡಿಸಿ 10ರಿಂದ 15 ಮಂದಿಯನ್ನು ಕರೆತಂದು ಪ್ರತಿಭಟನೆ ನಡೆಸಲಾಗಿದೆ. ತಮ್ಮ ಕುಟುಂಬಕ್ಕೂ ಮಂಜುಳಾ ಅವರಿಗೂ ನೇರವಾಗಿ ಯಾವುದೇ ವ್ಯವಹಾರವಿಲ್ಲದಿದ್ದರೂ ತಮ್ಮನ್ನು ಗುರಿಯಾಗಿಸಲಾಗುತ್ತಿದೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ ಎಂಬುದು ತಮ್ಮ ಗಮನಕ್ಕೆ ಬಂದಿದೆ ಎಂದು ಆರೋಪಿಸಿದರು.
ವಿವಾದಿತ ಆಸ್ತಿಯ ದಾಖಲೆಗಳನ್ನು ಪರಿಶೀಲಿಸಿದಾಗ ಮೂಲ ಮಾಲೀಕತ್ವ ಎಲಕಮಾರಿ ನಾಗರತ್ನಮ್ಮ ಹಾಗೂ ಅವರ ಪತಿ ಚಲುವಯ್ಯ ಅವರ ಹೆಸರಿನಲ್ಲಿದ್ದದ್ದು ತಿಳಿದುಬಂದಿದೆ ಎಂದು ಹೇಳಿದರು.
ನಾಗರತ್ನಮ್ಮ ಅವರಿಂದ 2009ರ ಫೆಬ್ರವರಿ 3ರಂದು ಬಳ್ಳಾರಿ ನೋಂದಣಿ ಕಚೇರಿಯಲ್ಲಿ ಜಿಪಿಎ ನೋಂದಾಯಿಸಲಾಗಿದ್ದು, ಅದರ ಆಧಾರದ ಮೇಲೆ 2010ರ ಮಾರ್ಚ್ 5ರಂದು ಬೆಂಗಳೂರಿನ ದಾಸನಪುರ ನೋಂದಣಿ ಕಚೇರಿಯಲ್ಲಿ ಮಾರುತಿ ಶೆಟ್ಟಿ ಅವರು ಆಸ್ತಿಗೆ ಸಂಬಂಧಿಸಿದ ದಾಖಲೆ ಮಾಡಿಸಿಕೊಂಡಿದ್ದಾರೆ. ಬಳಿಕ ಮಾರುತಿ ಶೆಟ್ಟಿ ಅವರು ತಮ್ಮ ಸಹೋದರಿ ಎನ್. ಮಂಜುಳಾ ಅವರಿಗೆ 2010ರ ಡಿಸೆಂಬರ್ 19ರಂದು ಸಿರುಗುಪ್ಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಕೊಟ್ಟಿದ್ದು, ನಂತರ ಮಂಜುಳಾ ಅವರು ತಮ್ಮ ಪುತ್ರ ವೆಂಕಟಪ್ಪ ನಾಯಕ ಅವರಿಗೆ ಮಾರಾಟ ಪತ್ರದ ಮೂಲಕ ಜಮೀನು ನೋಂದಾಯಿಸಿದ್ದಾರೆ ಎಂದು ವಿವರಿಸಿದರು.
ಬಳ್ಳಾರಿಯ ಹಿರಿಯ ಶ್ರೇಣಿ ನ್ಯಾಯಾಲಯದ ಅಸಲು ದಾವೆ ಸಂಖ್ಯೆ 96/10ರಲ್ಲಿ ಬಳ್ಳಾರಿಯಲ್ಲಿ ಮಾಡಿಸಿಕೊಂಡ ಜಿಪಿಎ ಹಾಗೂ ಬೆಂಗಳೂರಿನಲ್ಲಿ 2010ರ ಮಾರ್ಚ್ 5ರಂದು ನೋಂದಾಯಿಸಲಾದ ಮಾರಾಟ ಪತ್ರ ಕಾನೂನುಬದ್ಧವಾಗಿಲ್ಲ ಎಂದು ಆದೇಶಿಸಲಾಗಿದೆ. ಈ ಆದೇಶ ಪ್ರಶ್ನಿಸಿ ಮಾರುತಿ ಶೆಟ್ಟಿ ಹಾಗೂ ಮಂಜುಳಾ ಅವರು ಬಳ್ಳಾರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿ ಸಂಖ್ಯೆ 58/16 ಸಲ್ಲಿಸಿದ್ದು, ಅಲ್ಲಿಯೂ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಲಾಗಿದೆ ಎಂದು ಸೋಮಲಿಂಗಪ್ಪ ತಿಳಿಸಿದರು.
ಪ್ರಸ್ತುತ ಈ ಆದೇಶದ ವಿರುದ್ಧ ಧಾರವಾಡದ ಉಚ್ಚ ನ್ಯಾಯಾಲಯದ ಸಂಚಾರಿ ಪೀಠದಲ್ಲಿ ಪ್ರಕರಣ ವಿಚಾರಣೆಗೆ ಬಾಕಿಯಿದೆ. ಸಿರುಗುಪ್ಪದ ಕೆಳ ನ್ಯಾಯಾಲಯ, ಬಳ್ಳಾರಿಯ ಹಿರಿಯ ಶ್ರೇಣಿ ನ್ಯಾಯಾಲಯ ಹಾಗೂ ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ಸಂಬಂಧಿಸಿದ ಪ್ರಕರಣಗಳು ವಿಚಾರಣೆಯಲ್ಲಿರುವುದರಿಂದ, ಕಾನೂನು ಪ್ರಕ್ರಿಯೆಯ ಮೂಲಕವೇ ವಿವಾದ ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿಯಿರುವ ನಡುವೆಯೇ ತಮ್ಮ ಹಾಗೂ ಮಕ್ಕಳ ಹೆಸರನ್ನು ಮಾಧ್ಯಮಗಳಲ್ಲಿ ಪ್ರಸ್ತಾಪಿಸಿ ಅವಮಾನ ಹಾಗೂ ಮಾನಹಾನಿ ಮಾಡಲಾಗುತ್ತಿದೆ. ಇದರಿಂದ ಕುಟುಂಬಕ್ಕೆ ನೋವು ಉಂಟಾಗಿದೆ ಎಂದು ಆರೋಪಿಸಿದ ಅವರು, ತಮ್ಮ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳ ಆಧಾರದ ಮೇಲೆ ವಾಸ್ತವಾಂಶವನ್ನು ಸಾರ್ವಜನಿಕರು ಹಾಗೂ ಪತ್ರಕರ್ತರ ಗಮನಕ್ಕೆ ತರಲು ಸುದ್ದಿಗೋಷ್ಠಿ ನಡೆಸಿರುವುದಾಗಿ ತಿಳಿಸಿದರು.