LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Bellary

ಪ್ರಜಾಸೇವಾ ಆಂದೋಲನ ಸಭೆ ಇಡೀ ದೇಶಕ್ಕೆ ಮಾದರಿಯಾಗಲಿದೆ

ಬಳ್ಳಾರಿ ಶಾಸಕದ್ವಯರಿಂದ ಪ್ರಜಾಸೇವಾ ಇಲಾಖೆ ಕುರಿತು ಶ್ಲಾಘನೆ

ಬಳ್ಳಾರಿ :   ರಾಜ್ಯದಲ್ಲಿ ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆಯನ್ನು ತಲುಪಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತ್ವರಿತವಾಗಿ ಸ್ಪಂದಿಸುವ ಪರಿಕಲ್ಪನೆಯೊಂದಿಗೆ ಚಾಲನೆ ನೀಡಲಾಗಿರುವ ಪ್ರಜಾಸೇವಾ ಆಂದೋಲನ ಸಭೆ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ಶ್ಲಾಘಿಸಿದರು.

 

       ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪ್ರಜಾಸೇವಾ ಆಂದೋಲನ ಸಭೆಗೆ ಚಾಲನೆ ನೀಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

 

      ಶಾಸಕ ಬಿ. ನಾಗೇಂದ್ರ ಅವರು ಮಾತನಾಡಿ, ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜಿಲ್ಲಾ ಕೇಂದ್ರ ಹಾಗೂ ರಾಜಧಾನಿಗೆ ಅಲೆದಾಡುವ ಹಾಗೂ ತಮ್ಮ ಸರ್ಕಾರಿ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳು ಹಾಗೂ ಅಧಿಕಾರಿಗಳ ಬಳಿ ಪದೇ ಪದೇ ಅಲೆದಾಡುವ ಕಾಲ ಈಗ ಮುಗಿದಿದೆ. ಸರ್ಕಾರವೇ ನೇರವಾಗಿ ಜನರ ಮನೆಬಾಗಿಲಿಗೆ ತಲುಪಬೇಕು.  ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ನಿಗದಿತ ಕಾಲಮಿತಿಯಲ್ಲಿ ಕಾನೂನಿನ ಚೌಕಟ್ಟಿನೊಳಗೆ ಪರಿಹರಿಸಬೇಕು ಎನ್ನುವ ಸದುದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.  ಇದು ಈಗಿನ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಕನಸಿನ ಕೂಸು.  ಇದಕ್ಕಾಗಿಯೇ ಪ್ರತ್ಯೇಕ ಇಲಾಖೆ ಹಾಗೂ ಸಚಿವಾಲಯವನ್ನು ಪ್ರಾರಂಭಿಸಿ, ಅಗತ್ಯ ಹುದ್ದೆಗಳನ್ನು ಕೂಡ ಭರ್ತಿ ಮಾಡಿ, ಇಂದಿನಿAದಲೇ ಕಾರ್ಯರೂಪಕ್ಕೆ ತಂದಿದ್ದಾರೆ.     ರಾಜ್ಯದ ಕಟ್ಟಕಡೆಯ ಗ್ರಾಮದಲ್ಲಿರುವ ಜನರಿಗೂ ಸರ್ಕಾರದ ಸೇವೆಗಳು ತಲುಪಬೇಕು ಎಂಬ ಉದ್ದೇಶದಿಂದ, ಜನರಿಗೆ ಉತ್ತಮ ಆಡಳಿತ ಕೊಡಲು ಪ್ರಜಾಸೇವಾ ಆಂದೋಲನದAತಹ ಅದ್ಭುತ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದಾರೆ.  ಜನರ ಸೇವೆ ಮಾಡಲು ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಮುಖ್ಯಮಂತ್ರಿಗಳು ದಿನದ 24 ಗಂಟೆಯೂ ಜನರಿಗಾಗಿ ದುಡಿಯುತ್ತಿದ್ದು, ದೂರದೃಷ್ಟಿ ಯೋಜನೆಗಳನ್ನು ಹಾಕಿಕೊಂಡು ಜನರ ಮನೆಯ ಮಗನಂತೆ ಕೆಲಸ ಮಾಡುತ್ತಿದ್ದಾರೆ.  ತಿಂಗಳಿನಲ್ಲಿ ಪ್ರತಿ ಶನಿವಾರದಂದು ಅಧಿಕಾರಿಗಳು, ನಿಗದಿತ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಪಿಂಚಣಿ, ಭೂಮಿ ವ್ಯಾಜ್ಯ, ಮನೆ, ನಿವೇಶನ, ಪಂಚ ಗ್ಯಾರಂಟಿ ಯೋಜನೆಗಳು, ಸರ್ಕಾರದ ಸೌಲಭ್ಯಗಳು, ಖಾತೆ ಬದಲಾವಣೆ ಮುಂತಾದ ಸಮಸ್ಯೆಗಳಿಗೆ ಸಂಬಂಧಿಸಿದ ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಿ ನಿಗದಿತ ಕಾಲಮಿತಿಯೊಳಗೆ ಪರಿಹಾರ ಒದಗಿಸಲಾಗುವುದು. ಅರ್ಜಿ ತಿರಸ್ಕೃತಗೊಂಡರೆ ಅದಕ್ಕೆ ಕಾರಣವನ್ನು ಸ್ಪಷ್ಟಪಡಿಸಲಾಗುವುದು. ಅರ್ಜಿದಾರರಿಗೆ ಸಂಪೂರ್ಣ ಪರಿಹಾರ ಸಿಗುವವರೆಗೂ ಸರ್ಕಾರ ಅರ್ಜಿದಾರರ ಬೆನ್ನಿಗೆ ನಿಲ್ಲಲಿದೆ ಎಂದರು.  ಸಾರ್ವಜನಿಕರು 1902 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಐಪಿಜಿಆರ್‌ಎಸ್ (IPGRS) ಪೋರ್ಟಲ್ ಮೂಲಕ ತಮ್ಮ ಸಮಸ್ಯೆಗಳನ್ನು ದಾಖಲಿಸಿ ಪರಿಹಾರ ಪಡೆಯಬಹುದಾಗಿದೆ ಎಂದರು.

 news_1788610766_0_413.webp

 

10 ಸಾವಿರ ಭಾರತ್ ಜೋಡೋ ಸಂಘಗಳ ರಚನೆ :

 

      ಗ್ರಾಮೀಣ ಯುವಕರಿಗೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಕಿಕೊಳ್ಳುವಂತೆ ಮಾಡಿ, ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದ ಉದ್ದೇಶದಿಂದ ರಾಜ್ಯದ ಪ್ರತಿ ಪಂಚಾಯತಿಗೆ ಒಂದರAತೆ ಸುಮಾರು 10 ಸಾವಿರ ಭಾರತ್ ಜೋಡೋ ಸಂಘಗಳನ್ನು ಸ್ಥಾಪಿಸಿ, ಹಳ್ಳಿಗಳಲ್ಲಿ ಸಾಂಸ್ಕೃತಿಕ, ಕ್ರೀಡಾ ಹಾಗೂ ನಾಯಕತ್ವದ ಪ್ರತಿಭೆಗಳನ್ನು ಹೊರತರುವ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸಲು ಉದ್ದೇಶಿಸಲಾಗಿದೆ.  ಇದು ಕೂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿ ಯೋಜನೆಯಾಗಿದೆ.  ಪ್ರತಿ ಸಂಘಕ್ಕೂ ವಾರ್ಷಿಕ 10 ಲಕ್ಷ ರೂ. ಅನುದಾನ ಒದಗಿಸಲಾಗುವುದು.  ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ (ಪಿಪಿಪಿ) ಮಾದರಿಯಲ್ಲಿ, ಇಂತಹ ಅದ್ಭುತ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ರಾಜ್ಯದ ಯುವಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಶಾಸಕ ಬಿ. ನಾಗೇಂದ್ರ ಕರೆ ನೀಡಿದರು.

 

ಮತಪಟ್ಟಿಯಲ್ಲಿ ಅರ್ಹರು ಹೆಸರು ಸೇರಿಸಿ :

 ಇತ್ತೀಚೆಗೆ ನಡೆದ ಮತದಾರರ ವಿಶೇಷ ಸಮಗ್ರ ಪರಿಶೀಲನಾ ಕಾರ್ಯದ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದು, ಸ್ಥಳಾಂತರ ಅಥವಾ ಎರಡೆರಡು ಕಡೆ ಹೆಸರು ಇರುವುದು, ಈ ರೀತಿಯ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಅರ್ಹ ಮತದಾರರಿಗೆ ಅವಕಾಶ ಕಲ್ಪಿಸಿದ್ದು, ಯಾವುದೇ ಅರ್ಹ ಮತದಾರರು ಮತ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದರು.

 

      ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ, ರಾಜ್ಯದ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗಾಗಿ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ನುಡಿದಂತೆ ನಡೆದಿದೆ.  ಈ ಯೋಜನೆಗಳ ಜೊತೆಗೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೂ ಕೂಡ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.  ಬಳ್ಳಾರಿಗೆ ತುಂಗಭದ್ರಾದಿAದ 270 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಇದೇ ಸೆ. 11 ರಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಂದ ಚಾಲನೆ ಕೊಡಿಸಲಾಗುವುದು.  ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಮ್ಮ ಯುವಜನರು ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಬಳ್ಳಾರಿ ನಗರದ ಹಳೆಯ ಗ್ರಂಥಾಲಯ ಬಳಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಡಾ. ಅಂಬೇಡ್ಕರ್ ಹೆಸರಿನಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಯುವಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

 news_1788610767_4_112.webp

 

      ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ವಿ. ತ್ರಿಲೋಕ್ ಚಂದ್ರ ಅವರು ಮಾತನಾಡಿ, ಸಾರ್ವಜನಿಕರ ಯಾವುದೇ ಸಮಸ್ಯೆಗೆ ಕಾನೂನುಬದ್ಧವಾಗಿ ಪರಿಹಾರ ಕಲ್ಪಿಸಬೇಕು. ಕ್ರಮಬದ್ಧವಲ್ಲದ ಅಥವಾ ಕಾನೂನು ವ್ಯಾಪ್ತಿಗೆ ಬಾರದ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಾಧ್ಯಮಗಳು ಸಹ ಸಹಕಾರ ನೀಡಬೇಕು.  ಜನರ ಕುಂದುಕೊರತೆಗಳು ತಾತ್ವಿಕ ಅಂತ್ಯ ಕಾಣಬೇಕು.  ಜನರು ತಮ್ಮ ಕೆಲಸಗಳಿಗೆ ಪದೇ ಪದೇ ಕಚೇರಿಗಳಿಗೆ ಅಲೆದಾಡುವಂತಾಗಬಾರದು.  ಪ್ರತಿ ಶನಿವಾರ ನಡೆಯುವ ಪ್ರಜಾಸೇವಾ ಆಂದೋಲನ ಸಭೆಗಳ ಮೂಲಕ ಸ್ಥಳೀಯ ಸಮಸ್ಯೆಗಳು ಸ್ಥಳೀಯವಾಗಿಯೇ ಪರಿಹಾರ ಕಾಣಬೇಕು ಎಂದರು.

 

      ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಪ್ರಜಾಸೇವಾ ಆಂದೋಲನ ಸಭೆಯ ರೂಪುರೇಷೆಗಳನ್ನು ವಿವರಿಸಿ, ರಾಜ್ಯ ಸರ್ಕಾರದ ಆಶಯದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳು ಹಾಗೂ ಗ್ರಾಮಗಳ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಕಾರ್ಯಕ್ಕೆ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಸೂಚಿಸಿದರು.  ಪ್ರತಿ ತಿಂಗಳ ಮೊದಲ ಮತ್ತು ಮೂರನೆ ಶನಿವಾರದಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಎರಡನೆ ಮತ್ತು ನಾಲ್ಕನೆ ಶನಿವಾರ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಆಯಾ ಶಾಸಕರುಗಳ ನೇತೃತ್ವದಲ್ಲಿ ಪ್ರಜಾಸೇವಾ ಸಭೆ ನಡೆಯಲಿದೆ.  ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇಲಾಖೆಗಳ ಅಧಿಕಾರಿಗಳು ಪ್ರತಿ ಸೋಮವಾರ ಅಹವಾಲುಗಳ ಕುರಿತು ಮಾಹಿತಿ ಪಡೆದು, ಮಂಗಳವಾರ ಅವುಗಳ ಪರಿಶೀಲನೆ ನಡೆಸುವರು.  ಪ್ರತಿ ಬುಧವಾರ ಜಿಲ್ಲಾಧಿಕಾರಿಗಳು ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಪ್ರಜಾಸೇವಾ ಸಭೆಗಳನ್ನು ನಡೆಸುವ ಸ್ಥಳ ಹಾಗೂ ವೇಳಾಪಟ್ಟಿಯನ್ನು ಪ್ರಚುರಪಡಿಸಲಾಗುವುದು. ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಹಾಗೂ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

 news_1788610768_6_683.webp

 

       ಕಾರ್ಯಕ್ರಮದಲ್ಲಿ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ವಿ. ತ್ರಿಲೋಕ್ ಚಂದ್ರ, ಬಳ್ಳಾರಿ ಮಹಾನಗರಪಾಲಿಕೆ ಉಪ ಮೇಯರ್ ಮುಬೀನ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್, ಉಪವಿಭಾಗಾಧಿಕಾರಿ ರಾಜೇಶ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

 

ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿದ ಶಾಸಕರು :

 ಪ್ರಜಾಸೇವಾ ಆಂದೋಲನ ಸಭೆಯ ಅಂಗವಾಗಿ ವಿವಿಧ ಸಂಘಟನೆಗಳು, ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳನ್ನು ವೇದಿಕೆಯಲ್ಲಿಯೇ ಸ್ವೀಕರಿಸಿದ ಶಾಸಕರುಗಳಾದ ಬಿ. ನಾಗೇಂದ್ರ ಹಾಗೂ ನಾರಾ ಭರತ್ ರೆಡ್ಡಿಯವರು, ಸ್ಥಳದಲ್ಲಿಯೇ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.  ಬಗರ್ ಹುಕುಂ ಯೋಜನೆಯಡಿ ರೈತರಿಗೆ ಭೂಮಿಯ ಹಕ್ಕುಪತ್ರ ನೀಡುತ್ತಿಲ್ಲ ಎಂಬುದಾಗಿ ರೈತ ಸಂಘದವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಶಾಸಕ ನಾಗೇಂದ್ರ, ಬಗರ್ ಹುಕುಂ ನಡಿ ಸುಮಾರು 3 ಸಾವಿರ ಅರ್ಜಿಗಳಿವೆ.  ಶೀಘ್ರದಲ್ಲೇ ಬಗರ್ ಹುಕುಂ ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.  ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ನೇಮಕಗೊಂಡ 12 ಸಿಬ್ಬಂದಿಗಳಿಗೆ ವೇತನ ನೀಡುತ್ತಿಲ್ಲ ಎಂಬ ಅರ್ಜಿಗೆ ಸ್ಪಂದಿಸಿದ ಶಾಸಕರು, ಆರೋಗ್ಯ ಸಚಿವರಲ್ಲಿ ಚರ್ಚಿಸಿ, ತ್ವರಿತವಾಗಿ ಸಮಸ್ಯೆ ಪರಿಹರಿಸಲಾಗುವುದು ಎಂದರು.  ಕೊಳಗಲ್‌ನಲ್ಲಿ ಕೆರೆ ನಿರ್ಮಾಣ, ಹಾಗೂ ಕೆಎಂಎಫ್ ಮೆಗಾ ಡೈರಿಗಾಗಿ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಂಡು ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.  ವಣೆನೂರು ಗ್ರಾಮದಲ್ಲಿ ಒಬ್ಬ ವ್ಯಕ್ತಿಯಿಂದಾಗಿ ರಸ್ತೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, ಕೇವಲ ಒಬ್ಬರಿಂದ ಇಡೀ ಗ್ರಾಮದ ಅಭಿವೃದ್ಧಿಗೆ ಅಡ್ಡಿ ಆಗುವುದು ಸರಿಯಲ್ಲ,  ಹೀಗಾಗಿ ಪರಿಶೀಲಿಸಿ, ಇದನ್ನು ಸರಿಪಡಿಸಲು ಸೂಚನೆ ನೀಡಿದರು.  ಅಶೋಕ್ ನಗರದಲ್ಲಿನ ಮನೆ ತೆರವು ಪ್ರಕರಣಕ್ಕೆ ಸಂಬAಧಿಸಿದAತೆ ಸಲ್ಲಿಕೆಯಾದ ಅರ್ಜಿಗೆ ಪ್ರತಿಕ್ರಿಯಿಸಿದ ಶಾಸಕ ನಾರಾ ಭರತ್ ರೆಡ್ಡಿ, ಪ್ರತಿ ಜಿಲ್ಲೆಗೆ 50 ಸಾವಿರ ಮನೆ ನಿರ್ಮಿಸಲು, ಭೂಮಿ ಗುರುತಿಸಿ ಕೊಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.  ಆದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.  ಈಲ್ಲೆಯಲ್ಲಿ ಗೃಹಲಕ್ಷಿö್ಮ ಯೋಜನೆಯ ಸೌಲಭ್ಯ ಪಡೆಯದೇ ಉಳಿದಿರುವ ಮಹಿಳೆಯರನ್ನು ಗುರುತಿಸಿ, ಅಂತಹವರಿಗೆ ಗೃಹಲಕ್ಷಿö್ಮ ಯೋಜನೆ ಸೌಲಭ್ಯ ಮಂಜೂರು ಮಾಡಬೇಕು.  ವಿಧವಾ ವೇತನ, ವಿಕಲಚೇತನರಿಗೆ ಅಗತ್ಯ ಸೌಲಭ್ಯ, ಪಿಂಚಣಿ, ಸಾಧನ ಸಲಕರಣೆಗಳ ವಿತರಣೆಗೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕರುಗಳು ಸೂಚನೆ ನೀಡಿದರು.

 news_1788610767_2_503.webp

 

ಪ್ರಜಾಸೇವೆಯಡಿ ಅರ್ಜಿ ಪಡೆಯಲು ವಿಶೇಷ ಕೌಂಟರ್ :

 ನಗರದ ಮುನ್ಸಿಪಲ್ ಮೈದಾನದಲ್ಲಿ ಪ್ರಜಾಸೇವಾ ಸಭೆಯ ಅಂಗವಾಗಿ, ಸಾರ್ವಜನಿಕರಿಂದ ಅಹವಾಲು ಅರ್ಜಿಗಳನ್ನು ಪಡೆದು, ಅರ್ಜಿದಾರರಿಗೆ ಸ್ವೀಕೃತಿ ನೀಡುವ ಸಲುವಾಗಿ ವಿಶೇಷ ಕೌಂಟರ್‌ಗಳನ್ನು ಇಲಾಖಾವಾರು ತೆರೆದು ಅನುಕೂಲ ಕಲ್ಪಿಸಿಕೊಡಲಾಗಿತ್ತು.

 news_1788610767_3_636.webp

 

 

ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ರಾಧಾಕೃಷ್ಣನ್ ಅವರಿಗೆ ಗೌರವ ಸಮರ್ಪಣೆ:

 ಭಾರತದ ಮೊದಲ ಉಪರಾಷ್ಟçಪತಿ ಡಾ. ರಾಧಾಕೃಷ್ಣನ್ ಅವರ ಜನ್ಮ ದಿನವಾದ ಸೆ. 05 ರ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ನಗರದ ಮುನ್ಸಿಪಲ್ ಮೈದಾನದಲ್ಲಿ ಏರ್ಪಡಿಸಿದ ಪ್ರಜಾಸೇವಾ ಸಭೆಯ ಸಂದರ್ಭದಲ್ಲಿ ಡಾ. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ವೇದಿಕೆಯಲ್ಲಿದ್ದ ಎಲ್ಲ ಗಣ್ಯಮಾನ್ಯರು ಪುಷ್ಪನಮನ ಸಲ್ಲಿಸಿ, ಗೌರವ ಸಮರ್ಪಿಸಿದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST