ಬಳ್ಳಾರಿ: ತುಂಗಭದ್ರ ಜಲಾಶಯದಿಂದ ಹೆಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳ ವ್ಯಾಪ್ತಿಯ ರೈತರ ಬೆಳೆಗಳಿಗೆ ಸಂಪೂರ್ಣ ನೀರು ಒದಗಿಸಬೇಕು ಎಂದು ತುಂಗಭದ್ರ ರೈತ ಸಂಘ ಆಗ್ರಹಿಸಿದೆ.
ಈ ಕುರಿತು ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಪರವಾಗಿ ಮನವಿ ಸಲ್ಲಿಸಿರುವ ರೈತ ಸಂಘ, ಅ.4ರ ವೇಳೆಗೆ ತುಂಗಭದ್ರ ಜಲಾಶಯದಲ್ಲಿ 68 ಟಿಎಂಸಿ ನೀರು ಲಭ್ಯವಿದ್ದು, ಆವಿಯಾಗುವಿಕೆ ಹಾಗೂ ಡೆಡ್ ಸ್ಟೋರೇಜ್ ಪ್ರಮಾಣವನ್ನು ಹೊರತುಪಡಿಸಿದ ಬಳಿಕ ಸುಮಾರು 50 ಟಿಎಂಸಿ ನೀರು ಕೃಷಿ ಬಳಕೆಗೆ ಲಭ್ಯವಾಗಲಿದೆ ಎಂದು ತಿಳಿಸಿದೆ.
ಮುನಿರಾಬಾದ್‌ನಲ್ಲಿ ಆ.11ರಂದು ನಡೆದ ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಕಾಲುವೆಗಳಿಗೆ ಸೇರಿ ಪ್ರತಿದಿನ 9,500 ಕ್ಯೂಸೆಕ್ಸ್ ನೀರು ಬಳಕೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ನವೆಂಬರ್ 30ರವರೆಗೆ ಇದೇ ಪ್ರಮಾಣದಲ್ಲಿ ನೀರು ಬಳಕೆ ಮಾಡಿದರೂ ಸುಮಾರು 46 ಟಿಎಂಸಿ ನೀರು ಬಳಕೆಯಾಗಲಿದೆ.
ಡಿಸೆಂಬರ್‌ನಲ್ಲಿ ಹೆಚ್‌ಎಲ್‌ಸಿ ಕಾಲುವೆಗಳಿಗೆ ಒಂದು ಟಿಎಂಸಿ ನೀರು ಹರಿಸಿದರೂ ಮೆಣಸಿನಕಾಯಿ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯವಾಗಲಿದೆ ಎಂದು ರೈತ ಸಂಘ ತನ್ನ ಮನವಿಯಲ್ಲಿ ತಿಳಿಸಿದೆ.
ಆದ್ದರಿಂದ ಸಂಬಂಧಪಟ್ಟವರು ತಕ್ಷಣ ಕಂಪ್ಲಿ, ಸಿರುಗುಪ್ಪ, ಸಂಡೂರು ಹಾಗೂ ಬಳ್ಳಾರಿ ನಗರದ ಶಾಸಕರೊಂದಿಗೆ ತುಂಗಭದ್ರ ಜಲಾಶಯಕ್ಕೆ ಭೇಟಿ ನೀಡಿ ನೀರಿನ ಲಭ್ಯತೆ ಪರಿಶೀಲಿಸಬೇಕು. ಇಲ್ಲವೇ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುಂಗಭದ್ರ ಜಲಾಶಯದ ಮುಖ್ಯ ಅಭಿಯಂತರ ಮನೋಜ್ ಕುಮಾರ್ ಅವರೊಂದಿಗೆ ಸಭೆ ನಡೆಸಿ, ರೈತರ ಸಂಪೂರ್ಣ ಬೆಳೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ತುಂಗಭದ್ರ ರೈತ ಸಂಘ ಮನವಿ ಮಾಡಿದೆ.