ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮದಿಂದ ದಲಿತರ ಭೂಮಿ ಕಬಳಿಕೆ, ಕೆರೆ-ರಾಜಕಾಲುವೆ ಒತ್ತುವರಿ ಆರೋಪಿಸಿ ಸಮತಾ ಸೈನಿಕ ದಳ ಹಾಗೂ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇದೇ ಆಗಸ್ಟ್ 17ರಂದು 'ವಿಧಾನಸೌಧ ಚಲೋ' ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮತಾ ಸೈನಿಕ ದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ.ಕೆ. ಗೋಪಾಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಂತರ ಮಾತನಾಡಿದ ಅವರು, ಕಳೆದ 30 ದಿನಗಳಿಂದ ಆರ್ಟ್ ಆಫ್ ಲಿವಿಂಗ್ ಆಶ್ರಮದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಸತ್ಯಾಗ್ರಹದ ಮುಂದುವರೆದ ಭಾಗವಾಗಿ ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಪಾದಯಾತ್ರೆಯ ವಿವರ:
ದಿನಾಂಕ:17.08.2026 ಸೋಮವಾರದಂದು ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಕನಕಪುರ ಮುಖ್ಯ ರಸ್ತೆಯ ಆರ್ಟ್ ಆಫ್ ಲಿವಿಂಗ್ ಆಶ್ರಮ ಗೇಟ್ ನಂ.5 ನಿಂದ ಮಾರ್ಗದ ಮೂಲಕ ಲಕ್ಷ್ಮಿಪುರ, ಕುಪ್ಪಾರೆಡ್ಡಿ ಕೆರೆ, ಸಿಲ್ಕ್ ಇನ್ಸ್ಟಿಟ್ಯೂಟ್, ತಲ್ಘಟ್ಟಪುರ, ಬನಶಂಕರಿ, ಯಡಿಯೂರು, ಬಸವನಗುಡಿ, ಸಿಟಿ ಮಾರ್ಕೆಟ್, ಟೌನ್ ಹಾಲ್, ಕಾರ್ಪೊರೇಷನ್ ವೃತ್ತದ ಮೂಲಕ ವಿಧಾನಸೌಧಕ್ಕೆ ನಡೆಯಲಿದೆ ಎಂದರು.
ಪ್ರಮುಖ ಬೇಡಿಕೆಗಳು:
ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳಿಂದ ಆಗಿರುವ ಕೆರೆ ಒತ್ತುವರಿ, ರಾಜಕಾಲುವೆಗಳ ಒತ್ತುವರಿ, ಅನಧಿಕೃತ ಕಟ್ಟಡಗಳ ನಿರ್ಮಾಣ, ಗೋಮಾಳ ಹಾಗೂ ಇತರೆ ಸರ್ಕಾರಿ ಜಾಗಗಳ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಬೇಕು.
ಕಬಳಿಕೆ ಮಾಡಿರುವ ದಲಿತರ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು, ಅರ್ಹ ಫಲಾನುಭವಿಗಳಿಗೆ ಸಂತಿಕೆ ಮಾಡಬೇಕು.
ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಇದೇ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಸಾರ್ವಜನಿಕ ಶಾಂತಿ ಮತ್ತು ಕಾನೂನು ವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ, ಪಾದಯಾತ್ರೆ ನಿರಾತಂಕವಾಗಿ ನಡೆಯಲು ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿಕೊಡುವಂತೆ ಬೆಂಗಳೂರು ದಕ್ಷಿಣ ಡಿವೈಎಸ್ಪಿ ಮತ್ತು ಸಂಬಂಧಿತ ಠಾಣೆಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.
'ದಲಿತರ ಭೂಮಿ ದಲಿತರಿಗೆ' 'ಒತ್ತುವರಿ ತೆರವುಗೊಳಿಸಿ' ಎಂಬ ಘೋಷಣೆಗಳೊಂದಿಗೆ ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮತಾ ಸೈನಿಕ ದಳ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸುವೆ ಎಂದರು.